ಆಳಂದ: ಪಟ್ಟಣದಲ್ಲಿನ ಗಾಣಿಗರ ಸಮಾಜದ ಸ್ಮಶಾನ ಭೂಮಿಗೆ ರಕ್ಷಣೆ ನೀಡಬೇಕು ಎಂದು ಸಮಾಜದ ಮುಖಂಡರು ತಾಲೂಕು ಆಡಳಿತವನ್ನು ಆಗ್ರಹಿಸಿದರು.
ಪಟ್ಟಣದಲ್ಲಿ ತಹಶೀಲ್ದಾರ್ ಯಲ್ಲಪ್ಪ ಸುಬೇದಾರ ಅವರಿಗೆ ಗಾಣಿಗರ ಸಮಾಜದ ಅಧ್ಯಕ್ಷ ಬಸವರಾಜ ಸಿ. ಕಲಶೆಟ್ಟಿ ನೇತೃತ್ವದಲ್ಲಿ ಸಮಾಜ ಬಾಂಧವರು ಬೇಡಿಕೆಗಳ ಮನವಿ ಸಲ್ಲಿಸಿದರು. ಪಟ್ಟಣದಲ್ಲಿ ದಾನಿಗಳು ನೀಡಿದ ಸ್ಮಶಾನ ಭೂಮಿಯಲ್ಲಿ ಸುಮಾರು 400 ವರ್ಷಗಳಿಂದಲೂ ಶವ ಸಂಸ್ಕಾರ ಕೈಗೊಳ್ಳುತ್ತಾ ಬರಲಾಗಿದೆ. ಈಗಲೂ ಶವ ಸಂಸ್ಕಾರ ಕೈಗೊಳ್ಳಲಾಗುತ್ತಿದೆ. ಆದರೆ ಈಗ ಹಠಾತಾಗಿ ಪೂರ್ವಜರ ಸಮಾಜದಿಗಳನ್ನು ತೆರವುಗೊಳಿಸಿ ಶವ ಸಂಸ್ಕಾರಕ್ಕೆ ಅಡ್ಡಿಪಡಿಸುವ ಕಾರ್ಯ ನಡೆಯುತ್ತಿದೆ. ಕೂಡಲೇ ಸ್ಮಶಾನಭೂಮಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.
ಉದಯ ಸಕಾರಾಮ ಜೋಶಿ ಅವರು ಗಾಣಿಗರ ಸಮಾಜಕ್ಕೆ ಶವ ಸಂಸ್ಕಾರ ನೀಡಲು ಜಾಗ ಕೊಟ್ಟಿದ್ದು, 400 ವರ್ಷಗಳಿಂದಲೂ ಶವ ಸಂಸ್ಕಾರ ಮಾಡುತ್ತಾ ಬರಲಾಗಿದೆ. ಆದರೆ ಬೇರೊಬ್ಬರು ಈ ಜಾಗ ನನ್ನದು ಎಂದು ಜೆಸಿಬಿ ಮೂಲಕ ಸಮಾಧಿಗಳನ್ನು ತೆರವುಗೊಳಿಸುತ್ತಿದ್ದಾರೆ. ಸಮಾಜದವರ ಶವ ಸಂಸ್ಕಾರಕ್ಕೆ ಅಡಿಯಾಗುತ್ತಿದೆ. ಇದನ್ನು ಕೂಡಲೇ ಪರಿಶೀಲಿಸಿ ಜಾಗದ ಪಂಚನಾಮೆ, ಸರ್ವೇ ಕೈಗೊಂಡು ರಕ್ಷಣೆ ನೀಡಬೇಕು. ಹಿಂದಿನಿಂದಲೇ ಶವ ಸಂಸ್ಕಾರ ಕೈಗೊಂಡ ಈ ಜಾಗವನ್ನು ನಮಗೆ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ತಹಶೀಲ್ದಾರರು ಈ ಕುರಿತು ಎರಡ್ಮೂರು ದಿನಗಳ ಕಾಲಾವಕಾಶ ನೀಡಬೇಕು. ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಮುಖಂಡರು ಹೇಳಿದರು.
ಸಮಾಜದ ಮುಖಂಡ ಸೂರ್ಯಕಾಂತ ಕಲಶೆಟ್ಟಿ, ರಾಜಶೇಖರ ಎಸ್. ಸಜ್ಜನ್, ಸಿದ್ರಾಮಪ್ಪ ಎಚ್. ಕಲಶೆಟ್ಟಿ, ಶಿವಪುತ್ರ ಮುನ್ನೊಳ್ಳಿ, ಸಂಗಮೇಶ ಸಜ್ಜನ್, ಸೋಮಶೇಖರ ಸಜ್ಜನ್, ಶರಣಪ್ಪ ಮುನೋಳ್ಳಿ, ಮಹಾಂತೇಶ ಡೊಳ್ಳೆ ಮತ್ತಿತರರು ಇದ್ದರು.