Advertisement

ಉತ್ಸವ ವಿವಾದ: 50 ಸಾವಿರ ರೂ.ದಂಡ ವಾಪಸ್‌

02:57 PM Oct 20, 2020 | Suhan S |

ಯಳಂದೂರು: ತಾಲೂಕಿನ ಹೊನ್ನುರು ಗ್ರಾಮದಲ್ಲಿ ದಲಿತರ ಬೀದಿಗೆ ಉತ್ಸವ ಮೂರ್ತಿಯನ್ನು ತರಬೇಕು ಎಂದು ಹೇಳಿದ್ದಕ್ಕೆ ಕೂಲಿ ಕಾರ್ಮಿಕರೊಬ್ಬರಿಗೆ 50 ಸಾವಿರ ರೂ. ದಂಡ ವಿಧಿಸಿ, ಹಣ ವಸೂಲಿ ಮಾಡಿರುವ ಪ್ರಕರಣ ಸಂಬಂಧ ತಹಶೀಲ್ದಾರ್‌ ಸುದರ್ಶನ್‌ ಗ್ರಾಮಸ್ಥರೊಂದಿಗೆ ಸಭೆ ನಡೆಸಿದರು.

Advertisement

ತಹಶೀಲ್ದಾರ್‌ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಗ್ರಾಮದ ಯಜಮಾನರು ದಂಡದ ರೂಪದಲ್ಲಿ ವಸೂಲಿ ಮಾಡಿದ್ದ 50 ಸಾವಿರ ರೂ.ಗಳನ್ನು ರಾಜೀ ಸಂಧಾನದ ಮೂಲಕ ಕೂಲಿ ಕಾರ್ಮಿಕ ನಿಂಗರಾಜುಗೆ ವಾಪಸ್‌ ನೀಡುವ ಮೂಲಕ ಈ ಪ್ರಕರಣ ಸುಖಾಂತ್ಯಗೊಂಡಿತು. ಹೊನ್ನೂರು ಗ್ರಾಮದಲ್ಲಿರುವ ಐತಿಹಾಸಿಕ ಚಾಮುಂಡೇಶ್ವರಿ ದೇಗುಲವು ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುತ್ತದೆ. ಈ ವರ್ಷ ನವರಾತ್ರಿ ವೇಳೆ ಉತ್ಸವವನ್ನು ದಲಿತರ ಬೀದಿಗೂ ತರಬೇಕು ಎಂದು ತಹಶೀಲ್ದಾರ್‌ಗೆ ದಲಿತರ ಬೀದಿಯ ನಿವಾಸಿ ನಿಂಗರಾಜು ಮನವಿ ಸಲ್ಲಿಸಿದ್ದರು. ಇದರಿಂದಕುಪಿತರಾದ ಗ್ರಾಮದ 13 ಕೋಮಿನ ಯಜನಮಾನರು ಹಾಗೂ ಮುಖಂಡರು ಸಭೆ ಸೇರಿ ಈತನಿಗೆ 50 ಸಾವಿರ ರೂ. ದಂಡ ವಿಧಿಸಿ, ಹಣವನ್ನೂ ವಸೂಲಿ ಮಾಡಿದ್ದರು. ಬಳಿಕ ನಿಂಗರಾಜು ಈ ಕುರಿತು ತಹಶೀಲ್ದಾರ್‌ಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರೊಂದಿಗೆ ತಹಶೀಲ್ದಾರ್‌ ಸಭೆ ನಡೆಸಿ, ಪ್ರಕರಣವನ್ನು ಇತ್ಯರ್ಥಪಡಿಸಿದರು.

ದೇಗುಲ ಮುಜರಾಯಿ ಇಲಾಖೆಗೆ ಸೇರಿದೆ. ಇದಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಅಧಿಕಾರಿಗಳೇ ತೆಗೆದುಕೊಳ್ಳುತ್ತಾರೆ. ಗ್ರಾಮದಲ್ಲಿ ಈ ಬಗ್ಗೆ ನ್ಯಾಯ ಪಂಚಾಯಿತಿ ಮಾಡಬಾರದು ಎಂದು ಗ್ರಾಮದ ಮುಖಂಡರಿಗೆ ತಹಶೀಲ್ದಾರ್‌ ತಾಕೀತು ಮಾಡಿದರು. ಸಿಪಿಐ ಶೇಖರ್‌ ಮಾತನಾಡಿ, ದಂಡ ವಿಧಿಸುವ ಹಕ್ಕು ನ್ಯಾಯಾಲಯಕ್ಕೆ ಮಾತ್ರ ಇದೆ. ಕಾನೂನು ಸುವ್ಯವಸ್ಥೆಗೆ ಅಡ್ಡಿಪಡಿಸಿದ್ದಲ್ಲಿ ಅವರ ವಿರುದ್ಧ  ಕ್ರಮ ವಹಿಸಲಾಗುವುದು. ಈ ವಿಷಯವು ಗಂಭೀರವಾಗಿದ್ದು, ಗ್ರಾಮಸ್ಥರು ಸೌಹಾರ್ದಯುತವಾಗಿರಬೇಕು ಎಂದು ಸಲಹೆ ನೀಡಿದರು.

ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಭಾಗೀರಥಿ, ಸಹಾಯಕ ನಿರ್ದೇಶಕಿಜಯಕಾಂತಮಣಿ, ಪಿಎಸ್‌ಐ ಲೊಕೇಶ್‌, ರೈತ ಸಂಘದ ಕಾರ್ಯದರ್ಶಿ ಡಾ. ಗುರುಪ್ರಸಾದ್‌, ತಾಪಂ ಸದಸ್ಯ ನಿರಂಜನ್‌ ಇತರರು ಹಾಜರಿದ್ದರು.

ಕೋವಿಡ್‌ ಚಿಕಿತ್ಸೆಗೆ 50 ಹಾಸಿಗೆ ಸಿದ್ಧ  :

Advertisement

ಕೊಳ್ಳೇಗಾಲ: ಪಟ್ಟಣದ ಉಪ ವಿಭಾಗ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್‌ 19 ಚಿಕಿತ್ಸೆಗಾಗಿ 50 ಹಾಸಿಗೆ ಸಿದ್ಧಗೊಂಡಿರುವುದಾಗಿ ಉಪ ವಿಭಾಗಾಧಿಕಾರಿ ಡಾ. ಗಿರೀಶ್‌ ಹೇಳಿದರು.

ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ವೈರಸ್‌ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದ್ದು, ಜಿಲ್ಲಾ ಕೇಂದ್ರದಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಅದನ್ನು ನಿಯಂತ್ರಿಸುವ ಸಲುವಾಗಿ ಈಗಾಗಲೇ

ಸಂತೇಮರಹಳ್ಳಿಯಲ್ಲಿಕೋವಿಡ್‌-19 ಚಿಕಿತ್ಸಾಕೇಂದ್ರ ತೆರೆಯಲಾಗಿದೆ. ಅದೇ ರೀತಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ 50 ಹಾಸಿಗೆಯ ಕೋವಿಡ್‌ ಚಿಕಿತ್ಸಾ ಘಟಕ ಸಿದ್ಧಗೊಂಡಿದೆ ಎಂದರು.

ಆಸ್ಪತ್ರೆಯಲ್ಲಿ ಕೋವಿಡ್‌ ಚಿಕಿತ್ಸೆಗೆ ಒಳಗಾಗುವ ರೋಗಿಗಳಿಗೆ ಸೂಕ್ತ ತಪಾಸಣೆ ಮತ್ತು ಅವರಿಗೆ ಬೇಕಾದ ತುರ್ತು ನಿಗಾ ಘಟಕಗಳನ್ನು ಸಿದ್ಧಪಡಿಸಲಾಗಿದೆ. ಯಾವುದೇ ಕ್ಷಣದಲ್ಲಿ ಆಸ್ಪತ್ರೆ ರೋಗಿಗಳಿಗೆ ಲಭ್ಯವಾಗಲಿದೆ. ವೈದ್ಯರೊಂದಿಗೆ ಸಾರ್ವಜನಿಕರು ಸಹ ಕರಿಸಬೇಕು ಎಂದು ಮನವಿ ಮಾಡಿದರು.

ರಾತ್ರಿ ಹೊತ್ತು ಸರ್ಕಾರಿ ಆಸ್ಪತ್ರೆಯಲ್ಲಿ ಮತ್ತುಖಾಸಗಿ ಅಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆಗಳು ದೊರೆಯುತ್ತಿಲ್ಲ ಎಂದು ದೂರುಗಳ ಬಗ್ಗೆ ಪ್ರಶ್ನಿಸಿದಾಗ ಉತ್ತರಿಸಿದ ಅವರು, ಸರ್ಕಾರಿ ಆಸ್ಪತ್ರೆಯಲ್ಲಿ 24×7 ಚಿಕಿತ್ಸೆ ದೊರೆಯಲಿದೆ. ಕೋವಿಡ್‌ 19 ತಪಾಸಣೆ ಸಹ ನಡೆಸಲಾಗುವುದು. ಇದೇ ರೀತಿಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆದೊರೆಯುವಂತೆ ಸೂಕ್ತ ನಿರ್ದೇಶನ ನೀಡುವುದಾಗಿ ಹೇಳಿದರು.

ಆಸ್ಪತ್ರೆಯಲ್ಲಿ ಕೋವಿಡ್‌ 19 ಘಟಕ ನಿರ್ಮಿಸಲಾಗಿದ್ದು, ಹೊರ ಹೋಗುವ ಮತ್ತು ಒಳ ಬರುವ ದ್ವಾರಗಳ ನಿರ್ಮಾಣಕ್ಕೆ ದಾನಿಗಳು ಸಹಕರಿಸಬೇಕು. ಆಸ್ಪತ್ರೆಗೆ ಬೇಕಾಗಿರುವ ಸಾಮಗ್ರಿಗಳನ್ನು ನೀಡಲು ದಾನಿಗಳು ಮುಂದೆ ಬರಬೇಕು. ಎಂದು ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಗಣೇಶ್‌ ಮನವಿ ಮಾಡಿದರು.

ಭೇಟಿಯ ವೇಳೆ ತಹಶೀಲ್ದಾರ್‌ ಕುನಾಲ್‌ ಮತ್ತು ಆಸ್ಪತ್ರೆ ಸಿಬ್ಬಂದಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next