“ನಾವು ಚಿತ್ರ ನೋಡಿದಾಗ, ಅಲ್ಲಿ ಶಿವರಾಜಕುಮಾರ್ ಕಾಣಲಿಲ್ಲ. ಒಬ್ಬ ಕಾಪ್ ಕಂಡ …’ ಹಾಗಂತ ಹಲವು ಅಭಿಮಾನಿಗಳು, ಶಿವರಾಜಕುಮಾರ್ ಬಳಿ ಹೇಳಿಕೊಂಡರಂತೆ. ತಮಗೆ ಸಿಕ್ಕೆ ಅದ್ಭುತ ಕಾಂಪ್ಲಿಮೆಂಟ್ ಅದೇ ಎನ್ನುತ್ತಾರೆ ಶಿವರಾಜಕುಮಾರ್. “ಟಗರು’ ಹವಾ ಜೋರಾಗಿರುತ್ತದೆ ಎಂದು ಬಿಡುಗಡೆಯ ಮುಂಚೆಯೇ ಅವರಿಗೆ ಪಕ್ಕಾ ಆಗಿದ್ದರೂ, ಅದೂ ಈ ಲೆವೆಲ್‌ಗೆ ಹೋಗಬಹುದು ಎಂದು ಗೊತ್ತಿರಲಿಲ್ಲವಂತೆ.
“ನಾನು ಒಬ್ಬ ಸಾಮಾನ್ಯ ಪ್ರೇಕ್ಷಕನಾಗಿ ಚಿತ್ರ ನೋಡಿದೆ. ದ್ವಿತೀಯಾರ್ಧ ಬಹಳ ಚೆನ್ನಾಗಿದೆ. ನಿರೂಪಣೆ ಬಹಳ ಚೆನ್ನಾಗಿ ಮಾಡಿದ್ದಾರೆ ಸೂರಿ. Confuse or Convince ಅಂತಾರಲ್ಲ. ಅವರು ಎರಡೂ ಮಾಡಿದ್ದಾರೆ. ಮೊದಲು Confuse ಮಾಡಿ, ನಂತರ Convince ಮಾಡಿದ್ದಾರೆ. ನನಗೆ ಭಾವನಾ ಮತ್ತು ದೇವರಾಜ್ ಅವರ ಎಪಿಸೋಡ್‌ಗಳು ಬಹಳ ಖುಷಿಯಾಯಿತು. ಎಲ್ಲೂ ಎಳೆಯದೆ, ಎಷ್ಟು ಬೇಕೋ ಅಷ್ಟು ಚೆನ್ನಾಗಿ ಮಾಡಿದ್ದಾರೆ’ ಎಂದು ಸೂರಿಗೆ ಶಹಬ್ಭಾಸ್‌ಗಿರಿ ನೀಡುತ್ತಾರೆ ಶಿವರಾಜಕುಮಾರ್.
ಇನ್ನು ಬೇರೆ ಪಾತ್ರಗಳನ್ನು ಜನ ಗುರುತಿಸುತ್ತಿರುವ ಬಗ್ಗೆಯೂ ಅವರಿಗೆ ಖುಷಿ ಇದೆಯಂತೆ. “ಡಾಲಿ ಪಾತ್ರ ಯಾವಾಗಲೂ ನನ್ನ ಮನಸ್ಸಿನಲ್ಲಿತ್ತು. ಆ ಪಾತ್ರಕ್ಕೂ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಜನ ಆ ಪಾತ್ರದ ಬಗ್ಗೆ ಮಾತಾಡುತ್ತಿರೋದು ಬಹಳ ಖುಷಿ ಆಗುತ್ತೆ. ಬರೀ ಅದೊಂದೇ ಅಲ್ಲ, ಸಣ್ಣ ಪಾತ್ರಗಳ ಬಗ್ಗೆಯೂ ಜನ ಮಾತಾಡುತ್ತಿದ್ದಾರೆ. ಚಿಟ್ಟೆ, ಕಾಕ್ರೋಚ್, ಸರೋಜ ಪಾತ್ರಗಳ ಬಗ್ಗೆ ಜನ ಖುಷಿಪಟ್ಟಿದ್ದಾರೆ. “ಓಂ’ನಲ್ಲೂ ಇದೇ ತರಹ ಆಗಿತ್ತು. ಹರೀಶ್ ರೈ, ದಿಲೀಪ್ ಮುಂತಾದವರಿಗೂ ಒಳ್ಳೆಯ ಗುರುತು ಸಿಕ್ಕಿತ್ತು.
“ಜೋಗಿ’ಯಲ್ಲೂ ಬಿಡ್ಡ ಪಾತ್ರ ಹಿಟ್ ಆಗಿತ್ತು. ಈಗ ಪುನಃ “ಟಗರು’ ಚಿತ್ರದಲ್ಲೂ ಹಾಗಾಗುತ್ತಿದೆ’ ಎನ್ನುತ್ತಾರೆ ಶಿವರಾಜಕುಮಾರ್. ಶಿವರಾಜಕುಮಾರ್ ಅವರಿಗೆ ಒಂದು ಹಂತದಲ್ಲಿ ಭಯವೂ ಆಗಿತ್ತಂತೆ. “ಈ ತರಹ ನಿರೂಪಣೆ ಸ್ವಲ್ಪ ರಿಸ್ಕಿ ಅನಿಸಿದ್ದು ಹೌದು. ಹಾಡುಗಳು ಹಿಟ್ ಆಗಿ ಚಿತ್ರದ ಬಗ್ಗೆ ಒಂದು ಲೆವೆಲ್ ನಿರೀಕ್ಷೆ ಇತ್ತು. ಹೀಗಿರುವಾಗ, ಸ್ವಲ್ಪ ಮಿಸ್ ಆದರೂ ಕಷ್ಟ. ಚಿತ್ರ ನೋಡಿದ ಜನ, ಏನು ಹೀಗೆ ಮಾಡಿºಟ್ರಾ ಅಂತ ಮಾತಾಡಿಕೊಳ್ಳಬಾರದು.
ಹಾಗಾಗಿ ಸ್ವಲ್ಪ ಭಯ ಇತ್ತು. ಆದರೆ, ಚಿತ್ರವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಚಿತ್ರದಲ್ಲಿನ ನನ್ನ ವರ್ತನೆ, ಕೊಬ್ಬು, ಸಂಭಾಷಣೆ ಎಲ್ಲದರ ಬಗ್ಗೆ ಖುಷಿಪಟ್ಟಿದ್ದಾರೆ. ಅದರಲ್ಲೂ ಮಂಜು ಬರೆದ ಸಂಭಾಷಣೆಗಳು ಚೆನ್ನಾಗಿವೆ. “ರೈಲಿನೊಳಗೆ ನೀನು ಹೋದರೆ ಅದು ಜರ್ನಿ, ಅದೇ ನಿನ್ನ ಮೇಲೆ ರೈಲು ಹೋದರೆ ಅದು ಲಾಸ್ಟ್ ಜರ್ನಿ …’ ಎನ್ನುವ ಮಾತುಗಳನ್ನು ಜನ ಖುಷಿಡುತ್ತಿದ್ದಾರೆ’ ಎನ್ನುತ್ತಾರೆ ಶಿವರಾಜಕುಮಾರ್.
ಇನ್ನು “ಕಡ್ಡಿಪುಡಿ’ ಸೂರಿಗೂ, “ಟಗರು’ ಸೂರಿಗೂ ಏನು ವ್ಯತ್ಯಾಸ ಕಂಡಿರಿ ಎಂದರೆ, “ಮೇಕಿಂಗ್ ವೈಸ್ ಬಹಳ ರಿಚ್ ಆಗಿ ಮಾಡಿದ್ದಾರೆ. ಎರಡೂ ಚಿತ್ರಗಳಲ್ಲಿನ ಇನ್ನೊಂದು ವಿಷಯ ಎಂದರೆ, ಇಲ್ಲಿ ನಾಯಕ ಮತ್ತು ವಿಲನ್ ಇಬ್ಬರಿಗೂ ಹೃದಯ ಇದೆ ಮತ್ತು ಅವರಿಬ್ಬರೂ ತಮ್ಮ ಮನಸ್ಸು ಹೇಳಿದ ಮಾತುಗಳನ್ನು ಕೇಳುತ್ತಾರೆ.
ಇನ್ನೂ ಒಂದು ವಿಶೇಷತೆ ಎಂದರೆ, ಇಲ್ಲಿ ನಾಯಕ ಪೊಲೀಸ್ ಆಗಿದ್ದುಕೊಂಡು ಅಂಡರ್‌ವರ್ಲ್ಡ್ನ ಮಟ್ಟಹಾಕಿದರೆ, “ಕಡ್ಡಿಪುಡಿ’ಯಲ್ಲಿ ನಾಯಕ ಅಂಡರ್‌ವರ್ಲ್ಡ್ನಲ್ಲಿದ್ದುಕೊಂಡೇ ರೌಡಿಗಳನ್ನು ಮಟ್ಟಹಾಕುವ ಪ್ರಯತ್ನ ಮಾಡುತ್ತಾನೆ. “ಕಡ್ಡಿಪುಡಿ’ ಚಿತ್ರವನ್ನು ಸೂರಿ ಹೇಗೆ ರೂಪಿಸಿದ್ದರೋ, ಅದಕ್ಕೆ ಉಲ್ಟಾ ಆಗಿ ಈ ಚಿತ್ರ ಮಾಡಿದ್ದಾರೆ. ಬಹಳ ಚೆನ್ನಾಗಿ ಇಡೀ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ’ ಎಂದು ಮೆಚ್ಚಿಕೊಳ್ಳುತ್ತಾರೆ ಶಿವರಾಜಕುಮಾರ್.
* ಚೇತನ್ ನಾಡಿಗೇರ್