ಅನಿತಾಭಟ್ ಮತ್ತೆ ಸುದ್ದಿಯಲ್ಲಿದ್ದಾರೆ! ತುಳು ಭಾಷೆಯ “ಶಟರ್ ದುಲಾಯಿ’ ಚಿತ್ರದಲ್ಲಿ ನಟಿಸಿದ್ದ ಅನಿತಾಭಟ್, ಆ ಬಳಿಕ ಏನು ಮಾಡುತ್ತಾರೆ ಎಂಬ ಬಗ್ಗೆ ಎಲ್ಲೂ ಸುಳಿವಿರಲಿಲ್ಲ. ಈಗ ಅನಿತಾಭಟ್, ಶಿವರಾಜ್ಕುಮಾರ್ ಅಭಿನಯದ “ಟಗರು’ ಚಿತ್ರದಲ್ಲೊಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ನಿರ್ದೇಶಕ ಸೂರಿ ಅವರಿಗೊಂದು ಮೇಜರ್ ಎನ್ನುವಂತಹ ಪಾತ್ರವನ್ನೇ ನೀಡಿದ್ದಾರಂತೆ. ಅಲ್ಲಿಗೆ ಸೂರಿ ಜತೆ ಇದು ಅವರಿಗೆ ಎರಡನೇ ಸಿನಿಮಾ.
ಈ ಹಿಂದೆ “ದೊಡ್ಮನೆ ಹುಡುಗ’ ಚಿತ್ರದಲ್ಲಿ ಅವರು ನಟಿಸಿದ್ದರು. ಈ ಬಾರಿ ಸೂರಿ ಅನಿತಾಭಟ್ಗೆ ಕೊಟ್ಟಿರುವ ಪಾತ್ರ ಎಂಥದ್ದು ಗೊತ್ತಾ? ಅದೊಂದು ನೆಗೆಟಿವ್ ಶೇಡ್ ಇರುವಂತಹ ಪಾತ್ರವಂತೆ. ಹಾಗಾದರೆ, ಅದು “ಲೇಡಿ ಡಾನ್’ ಪಾತ್ರ ಇರಬಹುದಾ ಎಂದರೆ, ಅದಕ್ಕೆ ಸರಿಯಾದ ಉತ್ತರ ಕೊಡದ ಅನಿತಾಭಟ್, ಒಂದೊಳ್ಳೆಯ ಪಾತ್ರವದು. ಆದರೆ, ನೆಗೆಟಿವ್ ಶೇಡ್ ಇದೆ. ಇದೇ ಮೊದಲ ಸಲ ನಾನು ನೆಗೆಟಿವ್ ಶೇಡ್ ಇರುವಂತಹ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ.
ಶ್ರೀಮಂತ ಹುಡುಗಿಯಾಗಿದ್ದು, ನೆಗೆಟಿವ್ ಆಗಿ ಕಾಣಿಸಿಕೊಳ್ಳುತ್ತಿದ್ದೇನಷ್ಟೇ. ಉಳಿದಂತೆ ಏನನ್ನೂ ಹೇಳುವಂತಿಲ್ಲ. ಆ ಪಾತ್ರ ಇಡೀ ಸಿನಿಮಾಗೊಂದು ಟ್ವಿಸ್ಟ್ ಕೊಡುವಂಥದ್ದು ಎನ್ನುವುದನ್ನು ಮಾತ್ರ ಹೇಳಬಲ್ಲೆ’ ಎನ್ನುತ್ತಾರೆ ಅನಿತಾಭಟ್. ಈ ನಡುವೆಯೇ ಅನಿತಾಭಟ್ ಸದ್ದಿಲ್ಲದೆಯೇ ಎರಡು ಸಿನಿಮಾಗಳನ್ನು ಮಾಡಿದ್ದಾರೆ. ಆದಿತ್ಯ ಎಂಬ ಹೊಸ ಪ್ರತಿಭೆ ನಿರ್ದೇಶಿಸಿರುವ “ಡೇಸ್ ಆಫ್ ಬೋರಾಪುರ’ ಸಿನಿಮಾದಲ್ಲಿ ಅನಿತಾಭಟ್ ನಟಿಸಿದ್ದಾರೆ.
ಈಗಾಗಲೇ ಅದು ಡಬ್ಬಿಂಗ್ ನಡೆಯುತ್ತಿದ್ದು, ಮೇ ಹೊತ್ತಿಗೆ ರಿಲೀಸ್ ಆಗುವ ಸಾಧ್ಯತೆ ಇದೆಯಂತೆ. ಇನ್ನೊಂದು ವಿರಾಟ್ ಎಂಬ ಹೊಸ ಪ್ರತಿಭೆ ನಿರ್ದೇಶನ ಮಾಡಿರುವ “ಪ್ರೀತ್ಸೋರು’ ಎಂಬ ಒಂದು ಸಿನಿಮಾ ಕೂಡ ಇದೆ. ಈ ಸಿನಿಮಾದ ಕಥೆ ಕೂಡ ಅನಿತಾಭಟ್ ಅವರ ಪಾತ್ರದ ಸುತ್ತವೇ ಸುತ್ತಲಿದೆಯಂತೆ. ಇಡೀ ಸಿನಿಮಾದಲ್ಲೇ ಆ ಪಾತ್ರ ಹೈಲೆಟ್ ಆಗಿದ್ದು, ಅದು ಕೂಡ ವೃತ್ತಿಜೀವನದಲ್ಲೊಂದು ಹೊಸ ಪಾತ್ರವಾಗಿ ಕಾಣಸಿಗುತ್ತದೆ ಎಂಬುದು ಅನಿತಾಭಟ್ ಮಾತು.
“ಪ್ರೀತ್ಸೋರು’ ಸಿನಿಮಾದಲ್ಲಿ ಎರಡು ಲವ್ಸ್ಟೋರಿಗಳು ಟ್ರಾವೆಲ್ ಮಾಡಲಿದ್ದು, ಹಳೆಯ ಲವ್ಸ್ಟೋರಿಯಲ್ಲಿ ಅನಿತಾಭಟ್ ಕಾಣಿಸಿಕೊಂಡರೆ, ಈಗಿನ ಕಾಲೇಜ್ ಲವ್ಸ್ಟೋರಿಯಲ್ಲಿ ಹೊಸ ಪ್ರತಿಭೆಗಳು ಕಾಣಿಸಿಕೊಂಡಿವೆಯಂತೆ. ಇದೊಂದು ತ್ರಿಕೋನ ಪ್ರೇಮಕಥೆ ಇರುವ ಸಿನಿಮಾ ಎನ್ನುವ ಅನಿತಾಭಟ್, ಈ ಚಿತ್ರದಲ್ಲಿ ಅಚ್ಯುತ್ರಾವ್, ಸುಮನ್ರಂಗನಾಥ್ ಇತರರು ನಟಿಸಿದ್ದಾರೆ ಎನ್ನುತ್ತಾರೆ.