ಶಿವರಾಜಕುಮಾರ್ ಅಭಿನಯದ “ಟಗರು’ ಚಿತ್ರದ ಚಿತ್ರೀಕರಣ ಕೊನೆಯ ಹಂತ ತಲುಪಿದೆ. ಈಗಾಗಲೇ ಶೇ. 80ರಷ್ಟು ಚಿತ್ರೀಕರಣ ಮುಗಿದಿದ್ದು, ಇನ್ನು ಹಾಡು, ಫೈಟು ಮತ್ತು ಕೆಲವು ದೃಶ್ಯಗಳ ಚಿತ್ರೀಕರಣ ಮುಗಿದರೆ, ಚಿತ್ರ ಸಂಪೂರ್ಣವಾದಂತೆ. ಚಿತ್ರ ಕೊನೆಯ ಹಂತ ತಲುಪಿರುವುದರಿಂದ, ಬಿಡುಗಡೆ ಪ್ಲಾನ್ ಮಾಡುತ್ತಿದ್ದಾರೆ ನಿರ್ಮಾಪಕ ಕೆ.ಪಿ. ಶ್ರೀಕಾಂತ್.
ಚಿತ್ರದ ಹಾಡುಗಳು ನವೆಂಬರ್‌ನಲ್ಲಿ ಬಿಡುಗಡೆಯಾಗಲಿದ್ದು, ಚಿತ್ರವು ಡಿಸೆಂಬರ್‌ನಲ್ಲಿ ತೆರೆಕಾಣಲಿದೆ. ಹೌದು, “ಟಗರು’ ಚಿತ್ರವನ್ನು ಡಿಸೆಂಬರ್‌ನಲ್ಲಿ ಬಿಡುಗಡೆ ಮಾಡುವುದಕ್ಕೆ ಶ್ರೀಕಾಂತ್ ಸಿದ್ಧತೆ ನಡೆಸಿದ್ದಾರೆ. ಅದಕ್ಕೂ ಮುನ್ನ ಚರಣ್‌ರಾಜ್ ಸಂಯೋಜಿಸಿರುವ ಹಾಡುಗಳು ನವೆಂಬರ್ ತಿಂಗಳಲ್ಲಿ ಚಿತ್ರದುರ್ಗದಲ್ಲಿ ಬಿಡುಗಡೆಯಾಗಲಿದೆ.
ಈ ಹಿಂದೆ ಶಿವರಾಜಕುಮಾರ್ ಅಭಿನಯದ “ಜೋಗಯ್ಯ’ ಮತ್ತು “ಮೈಲಾರಿ’ ಚಿತ್ರದ ಹಾಡುಗಳು ಸಹ ಅಲ್ಲೇ ಬಿಡುಗಡೆಯಾಗಿತ್ತು. ಇದೀಗ “ಟಗರು’ ಚಿತ್ರದ ಹಾಡುಗಳು ಸಹ ಚಿತ್ರದುರ್ಗದಲ್ಲಿ ಬಿಡುಗಡೆಯಾಗಲಿದೆ. ಅದಾಗಿ ಒಂದು ತಿಂಗಳಿಗೆ ಚಿತ್ರ ಬರಲಿದೆ.
ಈ ಮಧ್ಯೆ “ಟಗರು’ ಹವಾ ಶುರುವಾಗಿದ್ದು, ಆಗಲೇ “ಟಗರು’ ಕಟಿಂಗ್, ದೋಸೆ ಎಲ್ಲವೂ ಶುರುವಾಗಿದೆ. “ಟಗರು’ ಚಿತ್ರವನ್ನು “ದುನಿಯಾ’ ಸೂರಿ ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆ ಅವರದ್ದೇ. ಮಹೇಂದ್ರ ಸಿಂಹ ಛಾಯಾಗ್ರಹಣ ಮಾಡಿದರೆ, “ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಖ್ಯಾತಿಯ ಚರಣ್‌ರಾಜ್ ಸಂಗೀತ ಸಂಯೋಜಿಸಿದ್ದಾರೆ.
ಇನ್ನು ಚಿತ್ರದಲ್ಲಿ ಶಿವರಾಜಕುಮಾರ್ ಅವರ ಜೊತೆಗೆ ಮಾನ್ವಿತಾ, ಭಾವನಾ ಮೆನನ್, ದೇವರಾಜ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ವಿಲನ್ ಆಗಿ ಧನಂಜಯ್ ಮತ್ತು ವಸಿಷ್ಠ ಸಿಂಹಾ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಬೆಂಗಳೂರು, ತುಮಕೂರು, ಉಡುಪಿ, ಗೋವಾ ಮುಂತಾದ ಕಡೆ ಚಿತ್ರೀಕರಣ ನಡೆದಿದೆ.