Advertisement

Taekwondo; 37 ನೇ ನ್ಯಾಶನಲ್ ಗೇಮ್ಸ್ ಗೆ ಧಾರವಾಡದ ಇಬ್ಬರು ಆಯ್ಕೆ

05:05 PM Sep 15, 2023 | Team Udayavani |

ಧಾರವಾಡ : ಪ್ರತಿ 4 ವರ್ಷಕ್ಕೊಮ್ಮೆ ನಡೆಯುವ 37ನೇ ನ್ಯಾಶನಲ್ ಗೇಮ್ಸ್ ಗೋವಾ-2023ಕ್ಕೆ ಕರ್ನಾಟಕದಿಂದ ಟೇಕ್ವಾಂಡೋ ಕ್ರಿಡೆಯಲ್ಲಿ ನಾಲ್ಕು ಕ್ರೀಡಾಪಟುಗಳ ಪೈಕಿ ಇಬ್ಬರು ಧಾರವಾಡ ಜಿಲ್ಲೆಯವರು ಆಯ್ಕೆಯಾಗಿದ್ದಾರೆ.

Advertisement

ಧಾರವಾಡ ಜಿಲ್ಲಾ ಟೇಕ್ವಾಂಡೋ ಸಂಸ್ಥೆಯ ಅದಿತಿ ಪರಪ್ಪ ಕ್ಷಾತ್ರತೇಜ್ ಹಾಗೂ ದಿತೀಷ ಶೆಟ್ಟಿ ಕ್ರೀಡಾಪಟುಗಳೇ ಆಯ್ಕೆಯಾದವರು. ಸೆ.9 ರಿಂದ ಸೆ.11 ರವರೆಗೆ ಅಸ್ಸಾಂನ ಗುವಾಹಟಿಯಲ್ಲಿ ನಡೆದ 39 ನೇ ರಾಷ್ಟ್ರಮಟ್ಟದ ಸೀನಿಯರ್ ಟೇಕ್ವಾಂಡೋ ಕ್ರೀಡಾಕೂಟದಲ್ಲಿ ಈ ಕ್ರೀಡಾಪಟುಗಳಿಬ್ಬರು ಪಾಲ್ಗೊಂಡಿದ್ದರು. ಈ ಪೈಕಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಅದಿತಿ ಬೆಳ್ಳಿ ಪದಕ ಪಡೆದಿದ್ದು, ಪುರುಷರ 80 ಕೆಜಿ ವಿಭಾಗದಲ್ಲಿ ದಿತೀಷ ಶೆಟ್ಟಿ ಪಾಲ್ಗೊಂಡು ಕ್ವಾಟರ್ ಫೈನಲ್‌ವರೆಗೂ ತಲುಪಿದ್ದರು. ಈ ಹಿನ್ನಲೆಯಲ್ಲಿ ಕ್ರೀಡಾಪಟುಗಳಿಬ್ಬರು ಈಗ ಮುಂಬರುವ (ಅಕ್ಟೋಬರ್ ತಿಂಗಳಲ್ಲಿ) 37 ನೇ ನ್ಯಾಶನಲ್ ಗೇಮ್ಸ್ ಗೋವಾ-2023 ಕ್ಕೆ ಕರ್ನಾಟಕ ರಾಜ್ಯವನ್ನು ಪ್ರತಿನಿಽಸಲು ಆಯ್ಕೆಯಾಗಿದ್ದಾರೆ. ಇನ್ನು ಗುವಾಹಟಿಗೆ ಕರ್ನಾಟಕ ತಂಡದ ತರಬೇತುದಾರರಾಗಿ ಅಂಜಲಿ ಪರಪ್ಪ ಕ್ಷಾತ್ರತೇಜ್ ಹಾಗೂ ತಂಡದ ವ್ಯವಸ್ಥಾಪಕರಾಗಿ ಶೋಭಾ ರಸಾಳಕರ್ ತೆರಳಿದ್ದರು.

ತರಬೇತುದಾರ ಪರಪ್ಪ ಹಾಗೂ ನಿರ್ಣಾಯಕಿ ಆಗಿರುವ ಅಂಜಲಿ ದಂಪತಿಯ ಪುತ್ರಿಯೇ ಅದಿತಿ ಕ್ಷಾತ್ರತೇಜ್. ಪುತ್ರಿಯ ಈ ಸಾಧನೆಗೆ ಪೋಷಕರೇ ಬೆನ್ನಲೆಬಾಗಿ ನಿಂತಿದ್ದು, ಅದಿತಿಯ ಶ್ರಮಕ್ಕೆ ಅಗತ್ಯ ಸಹಕಾರ ನೀಡುತ್ತಿದ್ದಾರೆ. ಇದಲ್ಲದೇ ಜಿಲ್ಲಾ ಟೇಕ್ವಾಂಡೋ ಸಂಸ್ಥೆಯಲ್ಲಿ ಅದಿತಿ ಅಗತ್ಯ ತರಬೇತಿ ಪಡೆಯುತ್ತಿರುವುದು ವಿಶೇಷತೆ. ಇನ್ನು ಪಾನ್‌ಶಾಪ್ ಮಾಲಕ ದಿನಕರ್ ಶೆಟ್ಟಿ ಹಾಗೂ ಶ್ರೀಮತಿ ದಂಪತಿಯ ಮಗನೇ ದಿತೀಷ ಶೆಟ್ಟಿ ಆಗಿದ್ದು, ಈ ಸಾಧನೆ ಪೋಷಕರಲ್ಲಿ ಸಂತಸ ಇಮ್ಮಡಿಗೊಳಿಸಿದೆ.

ಇನ್ನು ಈ ಸಾಧನೆ ಮಾಡಿದ ಕ್ರೀಡಾಪಟುಗಳಿಬ್ಬರನ್ನು ಹೊರತುಪಡಿಸಿ ಜಿಲ್ಲಾ ಟೇಕ್ವಾಂಡೋ ಸಂಸ್ಥೆಯಿಂದ ಸುಪ್ರಿತ ಥಿಟೆ (58 ಕೆಜಿ ವಿಭಾಗ), ಸ್ಪೂರ್ತಿ ನಿಕ್ಕಂ (49 ಕೆಜಿ ವಿಭಾಗ), ಸಹನಾ ಗೋಕಾವಿ (67 ಕೆಜಿ ವಿಭಾಗ), ನಿರಂಜನ್ ಆನಿಕಿವಿ (87 ಕೆಜಿ ವಿಭಾಗ), ನಮಿತಕುಮಾರ್ ಸುಣಗಾರ (63 ಕೆಜಿ ವಿಭಾಗ) ಕೂಡ 39ನೇ ರಾಷ್ಟ್ರಮಟ್ಟದ ಸೀನಿಯರ್ ಟೇಕ್ವಾಂಡೋ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಉತ್ತಮ ಪ್ರದರ್ಶನ ನೀಡಿದ್ದಾರೆ.
ಈ ಎಲ್ಲ ಕ್ರೀಡಾಪಟುಗಳಿಗೆ ಜಿಲ್ಲಾ ಟೇಕ್ವಾಂಡೋ ಸಂಸ್ಥೆಯ ಅಧ್ಯಕ್ಷ ಆನಂದ ಕುಲಕರ್ಣಿ, ಉಪಾಧ್ಯಕ್ಷ ಬಿ.ಎಸ್.ತಾಳಿಕೋಟಿ, ಹಿರಿಯ ತರಬೇತುದಾರ ಸಂಸ್ಥಾಪಕ ಪರಪ್ಪ ಎಸ್.ಕೆ. ಸೇರಿದಂತೆ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next