ಆಳಂದ: ಸಣ್ಣ ನೀರಾವರಿ ಇಲಾಖೆಯಿಂದ ತಾಲೂಕಿನ ತಡಕಲ್ ಗ್ರಾಮದ ರುದ್ರವಾಡಿ ಮಾರ್ಗ ಮಧ್ಯದಲ್ಲಿ ಏಳು ಎಕರೆ ಪ್ರದೇಶದಲ್ಲಿ ಸ್ಥಳೀಯ ಹಳ್ಳಕ್ಕೆ 3.50 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡ ಅಣೆಕಟ್ಟೆ ನಿರ್ಮಾಣ ಕಾಮಗಾರಿಗೆ ಶಾಸಕ ಸುಭಾಷ ಗುತ್ತೇದಾರ ಗುದ್ದಲಿ ಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಶಾಸಕರು, ಬಹುತೇಕವಾಗಿ ತಡಕಲ್ ವಲಯದ ಜಮೀನುಗಳು ಸಮತಟ್ಟಾಗಿದ್ದು, ಕೃಷಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಅಣೆಕಟ್ಟೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇದರಿಂದ 150 ಎಕರೆ ಪ್ರದೇಶಕ್ಕೆ ಅಂತರ್ಜಲ ವೃದ್ಧಿಯಾಗಿ ನೀರಾವರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಏಳು ಎಕರೆ ಪ್ರದೇಶದಲ್ಲಿ ಅಣೆಕಟ್ಟೆ ಕಾಮಗಾರಿ ಸೇರಿ ಭೂಸ್ವಾಧಿಧೀನ ಮತ್ತು ಕಾಮಗಾರಿಗೆ 3.50 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಅಣೆಕಟ್ಟೆಯಿಂದ ನೀರು ಸಂಗ್ರಹವಾಗಿ ಜನ, ಜಾನುವಾರು ಮತ್ತು ಕೃಷಿ ನೀರಾವರಿಗೆ ಅನುಕೂಲವಾಗಲಿದೆ. ಈ ರೀತಿ ಅನೇಕ ಕಡೆ ಕೆರೆ, ಅಣೆಕಟ್ಟೆ, ಕೃಷಿ ಹೂಂಡ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗುತ್ತಿದೆ. ತಾಲೂಕಿನಲ್ಲಿ ಕೆರೆ ನಿರ್ಮಾಣಕ್ಕೆ ಪೂರಕ ವಾತಾವರಣ ಇದ್ದರೂ ರೈತರು ಭೂಮಿ ನೀಡಲು ಮುಂದೆ ಬರುತ್ತಿಲ್ಲ. ಭೂಮಿ ನೀಡಿದ ಕಡೆ ಕೆರೆ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ ಎಂದರು.
ಗಂಡೋರಿ ನಾಲಾ ಮೂಲಕ ಪ್ರತಿ ಹಳ್ಳಿಗೆ ಕುಡಿಯುವ ನೀರು ತರುವ ಯೋಜನೆ, ಆಳಂದನಲ್ಲಿ ಒಳಚರಂಡಿ ನಿರ್ಮಾಣ ಮತ್ತು ಎಲ್ಲ ಕಡೆ ರಸ್ತೆಗಳ ನಿರ್ಮಾಣ ಕಾಮಗಾರಿಗಳ ಕುರಿತು ಮುಖ್ಯಮಂತ್ರಿಗೆ ಕೋರಲಾಗಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದರಿಂದ ಈ ಕಾಮಗಾರಿಗಳು ನೆರವೇರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಣ್ಣ ನೀರಾವರಿ ಇಲಾಖೆ ಎಇಇ ಶಾಂತಪ್ಪ ಜಾಧವ, ಎಇ ಆನಂದಕುಮಾರ, ಜೆಇ ಚಂದ್ರಕಾಂತ ಮಲ್ಕೆ, ಸದಾನಂದ ಹುಗ್ಗಿಕರ್, ಉದ್ಯಮಿ ಸಂತೋಷ ಎಸ್. ಗುತ್ತೇದಾರ, ರಾಜಶೇಖರ ಮಲಶೆಟ್ಟಿ, ಶ್ರೀಮಂತ ನಾಮಣೆ, ಅಪ್ಪಾಸಾಬ್ ಗುಂಡೆ, ಅರುಣಕುಮಾರ ಹುಂಡೇಕರ್, ಗ್ರಾಪಂ ಮಾಜಿ ಉಪಾಧ್ಯಕ್ಷ ತಿಪ್ಪಯ್ನಾ ಗುತ್ತೇದಾರ ಮತ್ತಿತರರು ಪಾಲ್ಗೊಂಡಿದ್ದರು.