Advertisement

ಟಿಕೆಟ್‌ ನೀಡಲು ಸಿಟಿ ಬಸ್‌ ಕಂಡಕ್ಟರ್‌ ಕೈಗೂ ಬಂದಿದೆ ಟ್ಯಾಬ್‌!

10:55 AM Mar 26, 2019 | pallavi |

ಮಹಾನಗರ: ಸ್ಮಾರ್ಟ್‌ ಸಿಟಿ ಮಂಗಳೂರಿನ ಸಿಟಿ ಬಸ್‌ಗಳು ಕೂಡ ಸ್ಮಾರ್ಟ್‌ ಆಗುತ್ತಿದ್ದು, ಈಗ ಬಸ್‌ ನಿರ್ವಾಹಕರ ಕೈಗೆ ಮಾಮೂಲಿ ಇಟಿಎಂ ಟಿಕೆಟ್‌ ಮೆಶಿನ್‌ ಬದಲಿಗೆ ಟ್ಯಾಬ್‌ ಬಂದು ಬಿಟ್ಟಿದೆ!
ನಗರದಲ್ಲಿ ಒಟ್ಟು 350ಕ್ಕೂ ಹೆಚ್ಚು ಸಿಟಿ ಬಸ್‌ಗಳಿದ್ದು, ದಿನಂಪ್ರತಿ ಸುಮಾರು ಒಂದು ಲಕ್ಷ ಪ್ರಯಾಣಿಕರು ಸಂಚರಿಸುತ್ತಾರೆ. ಮೊದಲನೇ ಹಂತ ವಾಗಿ 9 ಬಸ್‌ಗಳಲ್ಲಿ ಟ್ಯಾಬ್‌ ಆಧಾರಿತ ನೂತನ ಟಿಕೆಟ್‌ ವ್ಯವಸ್ಥೆಯನ್ನು ಅಳವಡಿಸಲಾಗಿದೆ.

Advertisement

ಸ್ಟೇಟ್‌ಬ್ಯಾಂಕ್‌ ಬಸ್‌ ನಿಲ್ದಾಣದಿಂದ ಮಂಗಳಾದೇವಿ ಮಾರ್ಗದಲ್ಲಿ ತೆರಳುವ 5 ಬಸ್‌ ಮತ್ತು ಸ್ಟೇಟ್‌ಬ್ಯಾಂಕ್‌- ಕೊಣಾಜೆಗೆ ತೆರಳುವ 4 ಬಸ್‌ಗಳಲ್ಲಿ ಈ ತಂತ್ರಜ್ಞಾನವನ್ನು ಈಗಾಗಲೇ ಅಳವಡಿಸಲಾಗಿದ್ದು, ನಿರ್ವಾಹಕರು ಇದರ ಮುಖೇನವೇ ಪ್ರಯಾಣಿಕರಿಗೆ ಟಿಕೆಟ್‌ ನೀಡುತ್ತಿದ್ದಾರೆ.

ಟ್ಯಾಬ್‌ ಡಿಸ್‌ಪ್ಲೇ ಫುಲ್‌ ಟಚ್‌ ಸ್ಕ್ರೀನ್‌ ಆಧಾರಿತವಾಗಿದ್ದು, ಪ್ರಯಾಣಿಕರಿಗೆ ಪ್ರತಿಯೊಂದು ಸ್ಟೇಜ್‌ಗೆ ಎಷ್ಟು ಬೆಲೆ ಎಂದು ಮೊದಲೇ ನಮೂದು ಮಾಡಲಾಗಿರುತ್ತದೆ. ಆದ್ದರಿಂದ ನಿರ್ವಾಹಕ ಟಿಕೆಟ್‌ನಲ್ಲಿ ಯಾವುದೇ ತಿದ್ದುಪಡಿ ಮಾಡಲು ಸಾಧ್ಯವಿಲ್ಲ.

ಇವಿಷ್ಟೇ ಅಲ್ಲದೆ, ನೂತನ ಟಿಕೆಟ್‌ನಲ್ಲಿ ಬಸ್‌ ಹೆಸರು, ಸಂಖ್ಯೆ, ದರ, ಕಿಲೋ ಮೀ. ಪ್ರಯಾಣ, ದಿನಾಂಕ, ಸಮಯ ನಮೂದಾಗುತ್ತದೆ. ಬಸ್‌ ನಿರ್ವಾಹಕ, ಚಾಲಕನ ವಿರುದ್ಧ ಯಾವುದೇ ದೂರು ದಾಖಲಿಸಬೇಕಾಗಿದ್ದರೆ ದೂರವಾಣಿ ಸಂಖ್ಯೆ ಕೂಡ ಟಿಕೆಟ್‌ನಲ್ಲಿ ನಮೂದಾಗುತ್ತದೆ.

ನಗರದಲ್ಲಿ ಸಂಚರಿಸುವ ಸಿಟಿ ಬಸ್‌ಗಳಲ್ಲಿ ಸುಮಾರು ಶೇ.25ರಷ್ಟು ವಿದ್ಯಾರ್ಥಿಗಳು ಸಂಚರಿಸುತ್ತಾರೆ. ಈ ನೂತನ ಟ್ಯಾಬ್‌ ವ್ಯವಸ್ಥೆ ಮುಖೇನ ವಿದ್ಯಾರ್ಥಿಗಳಿಗೆ ಪ್ರತ್ಯೇಕ ದರದ ಟಿಕೆಟ್‌ ಕೂಡ ನೀಡಲು ಅವಕಾಶವಿದೆ.

Advertisement

ಈ ಹಿಂದೆ ಬಸ್‌ ನಿರ್ವಾಹಕರು ಪ್ರಯಾಣಿಕರಿಗೆ ಸಮರ್ಪಕವಾಗಿ ಟಿಕೆಟ್‌ ನೀಡುವುದಿಲ್ಲ ಎಂಬ ದೂರುಗಳು ಆಗಿಂದಾಗ್ಗೆ ಕೇಳಿಬರುತ್ತಿದ್ದವು. ಈ ಕಪ್ಪು ಚುಕ್ಕೆಯನ್ನು ತಪ್ಪಿಸಲು ಸಿಟಿ ಬಸ್‌ ಮಾಲಕರ ಸಂಘ  ಈಗ ಹೊಸ ವ್ಯವಸ್ಥೆಯ ಮೊರೆ ಹೋಗಿದೆ. ಅಲ್ಲದೆ, ಸಿಟಿ ಬಸ್‌ ಮಾಲಕರು ಈ ಹಿಂದೆ ಇಟಿಎಂ ಮೆಶಿನ್‌ ಖರೀದಿಸುವ ಸಮಯದಲ್ಲಿ ವಿವಿಧ ಕಂಪೆನಿಗಳ ಮೆಶಿನ್‌ಗಳನ್ನು ಖರೀದಿ ಮಾಡಿದ್ದರು. ಅದರಲ್ಲಿ ಅನೇಕ ಇಟಿಎಂ ಮೆಶಿನ್‌ ದುರಸ್ತಿಗೊಂಡಿದ್ದು, ಅದರ ನಿರ್ವಹಣೆಗೆ ಮಂಗಳೂರಿನಲ್ಲಿ ಯಾವುದೇ ಸರ್ವಿಸ್‌ ಸೆಂಟರ್‌ಗಳಿಲ್ಲ. ಇದೇ ಕಾರಣಕ್ಕೆ ಹೊಸ ಇಟಿಎಂ ಮೆಶಿನ್‌ ಖರೀದಿ ಮಾಡಬೇಕಾದ ಅನಿವಾರ್ಯ ಬಂದಿತ್ತು. ಈಗ ಹಂತ ಹಂತವಾಗಿ ಸಿಟಿ ಬಸ್‌ಗಳಲ್ಲಿ ಟ್ಯಾಬ್‌ ಆಧಾರಿತ ಟಿಕೆಟ್‌ ನೀಡಲು ತೀರ್ಮಾನಿಸಲಾಗಿದೆ.

ಆ್ಯಪ್‌ನಲ್ಲೇ ಟಿಕೆಟ್‌ ಬುಕ್‌
ನಗರ ಸಿಟಿ ಬಸ್‌ಗಳಿಗೆ ಆಧಾರಿತವಾಗಿ ಈಗಾಗಲೇ “ಚಲೋ’ ಆ್ಯಪ್‌ ಪ್ರಚಲಿತದಲ್ಲಿದ್ದು, ಮುಂದಿನ ದಿನಗಳಲ್ಲಿ ಈ ಆ್ಯಪ್‌ ಮುಖೇನವೇ ಟಿಕೆಟ್‌ ಬುಕ್ಕಿಂಗ್‌ ಮಾಡುವ ವ್ಯವಸ್ಥೆಯೂ ಜಾರಿಗೆ ಬರಲಿದೆ. ಇದರ ಮುಖೇನ ಸಿಟಿ ಬಸ್‌ ಮತ್ತಷ್ಟು ಸ್ಮಾರ್ಟ್‌ ಆಗುವತ್ತ ಹೊರಟಿದೆ.

ಒಂದು ಟ್ಯಾಬ್‌ಗ 25 ಸಾವಿರ
ಖಾಸಗಿ ಕಂಪೆನಿಯ ಈ ಟ್ಯಾಬ್‌ ಬೆಲೆ ಸುಮಾರು 25 ಸಾವಿರ ರೂ. ಈಗಾಗಲೇ 9 ಸಿಟಿ ಬಸ್‌ಗಳಲ್ಲಿ ನಿರ್ವಾಹಕರಿಗೆ ಈ ಟ್ಯಾಬ್‌ ವ್ಯವಸ್ಥೆ ಪರಿಚಯಿಸಿದ್ದು, ಪ್ರಯಾಣಿಕರಿಂದಲೂ ಉತ್ತಮ ಪ್ರಶಂಸೆ ಕೇಳಿಬರುತ್ತಿದೆ. ಸದ್ಯದಲ್ಲಿಯೇ ಹಂತ ಹಂತವಾಗಿ ಉಳಿದ ಸಿಟಿ ಬಸ್‌ಗಳಿಗೂ ಈ ತಂತ್ರಜ್ಞಾನ ಅಳವಡಿಸಲಾಗುತ್ತಿದೆ. ಈ ಟ್ಯಾಬ್‌ಗ ರಾತ್ರಿಯಿಂದ ಬೆಳಗ್ಗೆ ವರೆಗೆ ಚಾರ್ಜ್‌ ಮಾಡಿದರೆ ಸುಮಾರು 10 ಗಂಟೆಯವರೆಗೆ ಕೆಲಸ ಮಾಡಬಹುದು.

ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next