Advertisement

ಲಕ್ಷಾಂತರ ರೂ.ಮೌಲ್ಯದ ತಂಬಾಕು ಉತ್ಪನ್ನ ಪತ್ತೆ

06:51 PM Oct 04, 2021 | Team Udayavani |

ಮಂಡ್ಯ: ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಣೆ ಮಾಡಲಾಗುತ್ತಿದೆ ಎಂಬ ಮಾಹಿತಿ ಹಾಗೂ ಕೆಲ ದಿನಗಳ ಹಿಂದೆ ಪಡಿತರ ಅಕ್ಕಿ ತುಂಬಿದ್ದ ಲಾರಿ ಪತ್ತೆಯಾದ ಜಾಡು ಹಿಡಿದು ಹೊರಟ ಅಧಿಕಾರಿಗಳಿಗೆ ಲಕ್ಷಾಂತರ ರೂ. ಮೌಲ್ಯದ ಲೋಡ್‌ಗಟ್ಟಲೇ ತಂಬಾಕು ಉತ್ಪನ್ನಗಳು ಪತ್ತೆಯಾಗಿವೆ.

Advertisement

ನೂರಾರು ಚೀಲಗಳು ಪತ್ತೆ: ಕೆಲ ದಿನಗಳ ಹಿಂದೆ ಮಂಡ್ಯ ಹೊರ ವಲಯದ ಸ್ಯಾಂಜೋ ಆಸ್ಪತ್ರೆ ಬಳಿಯ ಬ್ಯಾಂಕ್‌ ಕಾಲೋನಿಯ ಬಳಿ ಪಡಿತರ ಅಕ್ಕಿ ತುಂಬಿದ್ದ ಲಾರಿ ಪತ್ತೆಯಾಗಿತ್ತು. ಅದರಲ್ಲಿ ಕ್ವಿಂಟಲ್‌ ಗಟ್ಟಲೇ ಪಡಿತರ ಅಕ್ಕಿಯನ್ನು ಬೇರೆಡೆಗೆ ಸಾಗಿಸಲಾಗುತ್ತಿತ್ತು ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಇದರ ಬಗ್ಗೆ ತನಿಖೆ ನಡೆಸುವಾಗ ಲೋಡ್‌ಗಟ್ಟಲೇ ತಂಬಾಕು ಉತ್ಪನ್ನವಿದ್ದ ನೂರಾರು ಚೀಲಗಳು ಪತ್ತೆಯಾಗಿವೆ. ಜತೆಗೆ ಕೇರಳ, ತಮಿಳುನಾಡಿಗೆ ಇವುಗಳನ್ನು ಸಾಗಾಟ ಮಾಡಲಾಗುತ್ತಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

ಗೋದಾಮು ಸೀಜ್‌: ತಾಲೂಕಿನ ಗಾಣದಾಳು ಗ್ರಾಮದ ರೈಸ್‌ಮಿಲ್‌ ಆವರಣದಲ್ಲಿನ ಗೋದಾಮಿನಲ್ಲಿ ಲಕ್ಷಾಂತರ ರೂ. ಮೌಲ್ಯದ ತಂಬಾಕು ಉತ್ಪನ್ನ ಸಿಕ್ಕಿವೆ. ಅಧಿಕೃತವಾಗಿ ಇದರ ಒಟ್ಟು ಮೌಲ್ಯ ದೃಢೀಕರಣವಾಗಿಲ್ಲ. ಆದರೆ ಹನ್ಸ್‌, ಪಾನ್‌ಪರಾಗ್‌, ವಿಮಲ್‌, ಚೈನಿಖೈನಿ ಉತ್ಪನ್ನ ಪತ್ತೆಯಾಗಿವೆ. ಇನ್ನು ಈ ಉತ್ಪನ್ನಗಳು ಯಾರಿಗೆ ಸೇರಿದ್ದು ಎಂಬುದೂ ಕೂಡ ಸ್ಪಷ್ಟವಾಗಿಲ್ಲ. ಅಂತೆಯೇ ರೈಸ್‌ಮಿಲ್‌ ಮಾಲೀಕ ಶಂಕರಲಿಂಗೇಗೌಡ ಅವರಿಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನೋಟಿಸ್‌ ನೀಡಿದ್ದಾರೆ. ಅಗತ್ಯ ದಾಖಲೆ ಸಲ್ಲಿಸುವಂತೆ ಸೂಚನೆ ನೀಡುವುದರ ಜತೆಗೆ ಗೋದಾಮನ್ನು ಸೀಜ್‌ ಮಾಡಲಾಗಿದೆ.

ಪ್ರಕರಣ ಹಿನ್ನೆಲೆ?: ನಗರದ ಹೊರ ವಲಯದ ಸ್ಯಾಂಜೋ ಆಸ್ಪತ್ರೆ ಹಿಂಭಾಗ ಸೆ.25ರಂದು ಅನುಮಾನಾಸ್ಪದವಾಗಿ ನಿಂತಿದ್ದ ಲಾರಿ ಬಗ್ಗೆ ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ತಹಶೀಲ್ದಾರ್‌ ಚಂದ್ರಶೇಖರ್‌ ಶಂ.ಗಾಳಿ, ಆಹಾರ ಇಲಾಖೆ ಅಧಿಕಾರಿಗಳು, ಪೊಲೀಸ್‌ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಆ ವೇಳೆ ಬೇರೆ ರಾಜ್ಯಗಳಿಗೆ ಸೇರಿದ ಚೀಲಗಳಲ್ಲಿ ಪಡಿತರ ಅಕ್ಕಿ ತುಂಬಿದ್ದ ಮೂಟೆಗಳಿದ್ದವು.ಬಳಿಕ ಮಂಡ್ಯ ಗ್ರಾಮಾಂತರ ಪೊಲೀಸ್‌ ಠಾಣೆಗೆ ತೆಗೆದುಕೊಂಡು ಬರಲಾಗಿತ್ತು. ಮರುದಿನ ಪರಿಶೀಲಿಸಿದಾಗ ಸುಮಾರು 250 ಕ್ವಿಂಟಲ್‌ ಪಡಿತರ ಅಕ್ಕಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ದೂರು ಕೂಡ ದಾಖಲಾಗಿತ್ತು.

ಗಾಣದಾಳು ಗ್ರಾಮದ ರೈಸ್‌ಮಿಲ್‌ಗೆ: ನಂತರ ತನಿಖೆ ಆರಂಭಿಸಿದಾಗ ಲಾರಿ ಗಾಣದಾಳು ಗ್ರಾಮದ ರೈಸ್‌ಮಿಲ್‌ಗೆ ಹೋಗುತ್ತಿತ್ತು ಎನ್ನುವ ಮಾಹಿತಿ ಮೇರೆಗೆ ಮೂರು ಇಲಾಖೆಗಳ ಅಧಿಕಾರಿಗಳು ಜಂಟಿಯಾಗಿ ದಾಳಿ ಮಾಡಿ ಕಾರ್ಯಾಚರಣೆನಡೆಸಿದಾಗ ಅಲ್ಲಿಯು ಸುಮಾರು 130ಕ್ಕೂ ಹೆಚ್ಚು  ಚೀಲಗಳಲ್ಲಿ ತುಂಬಿದ್ದ ಅಕ್ಕಿ ಪತ್ತೆಯಾಗಿದೆ.ಪರಿಶೀಲನೆ ವೇಳೆ ಭತ್ತವನ್ನು ಅಕ್ಕಿ ಮಾಡಿ ಚೀಲಗಳಿಗೆ ತುಂಬಲಾಗಿದೆ ಎಂದು ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

Advertisement

ಆದರೆ, ಭತ್ತವನ್ನು ಅಕ್ಕಿಯಾಗಿ ಪರಿವರ್ತಿಸುವ ವೇಳೆ ಬರುವ ಕ್ಯಾಸೆತೌಡು ಅಲ್ಲಿರಲಿಲ್ಲ. ಇದರಿಂದ ಅನುಮಾನಗೊಂಡ ತಹಶೀಲ್ದಾರ್‌ ಚಂದ್ರಶೇಖರ್‌ ಶಂ. ಗಾಳಿ, ಆಹಾರ ಇಲಾಖೆ ಉಪ ನಿರ್ದೇಶಕಿ ಸೌಮ್ಯಾ ರೈಸ್‌ ಮಿಲ್‌ ಮತ್ತೂಮ್ಮೆ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ರೈಸ್‌ಮಿಲ್‌ ಆವರಣದಲ್ಲಿದ್ದ ಗೋದಾಮಿನಲ್ಲಿ ತಂಬಾಕು ಉತ್ಪನ್ನಗಳನ್ನು ತುಂಬಿದ್ದ ಚೀಲಗಳು ಪತ್ತೆಯಾಗಿವೆ. ಆಗ ಅಧಿಕಾರಿಗಳು  ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಅದರಂತೆ ಸೆ.26 ಮತ್ತು 27ರಂದು ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತ ಎಂ.ಶಿವಣ್ಣ, ವಾಣಿಜ್ಯ ತೆರಿಗೆ ಅಧಿಕಾರಿ ಎಚ್‌.ಎಸ್‌. ಶಾಂತಲಕ್ಷ್ಮೀ ಅವರು ಪೊಲೀಸರು, ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ತಪಾಸಣೆ ನಡೆಸಿ ಗೋದಾಮನ್ನು ಸೀಜ್‌ ಮಾಡಿದ್ದಾರೆ. ಮಂಡ್ಯ ಗ್ರಾಮಾಂತರ ಸರ್ಕಲ್‌ ಇನ್ಸ್‌ಪೆಕ್ಟರ್‌ ಆನಂದೇಗೌಡ, ಕಂದಾಯ ನಿರೀಕ್ಷಕರಾದ ಪ್ರಭು, ಜಗದೀಶ್‌, ಗಾಮ ಲೆಕ್ಕಾಧಿಕಾರಿಗಳಾದ ಲೋಹಿತ್‌, ಕಿಶೋರ್‌, ತೇಜಸ್‌, ಶಿವಳ್ಳಿ ಠಾಣೆಯ ಎಸ್‌ಐ ಜಯಲಕ್ಷ್ಮಿ ಇತರರಿದ್ದರು.

ಹೊರ ರಾಜ್ಯಕ್ಕೆ ಸಾಗಾಟ?

ತಮಿಳುನಾಡು ಮತ್ತು ಕೇರಳದಲ್ಲಿ ತಂಬಾಕು ಉತ್ಪನ್ನಗಳಿಗೆ ನಿಷೇಧ ಹೇರಲಾಗಿದೆ. ಈ ಹಿನ್ನೆಲೆಯಲ್ಲಿ ಇಲ್ಲಿಖರೀದಿಸಿ ಅಲ್ಲಿಗೆ ಕಳುಹಿಸಲಾಗುತ್ತಿದೆ ಎಂದು ಸಂಶಯ ವ್ಯಕ್ತವಾಗಿದೆ. ಆದರೆ ತನಿಖೆ ಪೂರ್ಣಗೊಂಡ ಬಳಿಕವಷ್ಟೇ ಸತ್ಯ ಹೊರಗೆ ಬರಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next