Advertisement

ಆರೋಗ್ಯ ಸಮೀಕ್ಷೆಗೆ ಟ್ಯಾಬ್‌, ತಂತ್ರಾಂಶ ಅರ್ಪಣೆ

09:03 AM Aug 07, 2020 | Suhan S |

ಬೆಂಗಳೂರು: ನಗರದಲ್ಲಿ ಕೋವಿಡ್ ಸೋಂಕು ನಿಯಂತ್ರಣದಲ್ಲಿ ಮಹತ್ವದ ಪಾತ್ರ ವಹಿಸಿರುವ ಆಶಾ ಕಾರ್ಯಕರ್ತರು ಹಾಗೂ ವೈದ್ಯಕೀಯ ಸಹಾಯಕ ಸಿಬ್ಬಂದಿಗೆ (ಲಿಂಕ್‌ ವರ್ಕ್ ಗಳಿಗೆ ) ಟ್ಯಾಬ್‌ ನೀಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್‌. ಅಶ್ವತ್ಥನಾರಾಯಣ ತಿಳಿಸಿದರು.

Advertisement

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಗುರುವಾರ ನಡೆದ ಕೋವಿಡ್‌ ಹಾಸಿಗೆಗಳ ನಿರ್ವಹಣಾ ವ್ಯವಸ್ಥೆ (ಸಿಎಚ್‌ ಬಿಎಂಎಸ್‌) ಮತ್ತು ಕೋವಿಡ್‌ ಸಿಯುಪಿಎಚ್‌ಸಿ ತಂತ್ರಾಂಶವನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಆಶಾ ಕಾರ್ಯಕರ್ತೆಯರು ಕೊರೊನಾ ತುರ್ತು ಸಂದರ್ಭದಲ್ಲಿ ಮನೆ-ಮನೆ ಆರೋಗ್ಯ ಸಮೀಕ್ಷೆ ಮಾಡುತ್ತಿದ್ದಾರೆ. ಪಾಲಿಕೆ ವ್ಯಾಪ್ತಿಯ 1,200 ಆಶಾ ಕಾರ್ಯಕರ್ತರು ಹಾಗೂ ಲಿಂಕ್‌ ವರ್ಕ್ ಗಳಿಗೆ ಟ್ಯಾಬ್‌ ನೀಡಲಾಗುವುದು. ಪ್ರಸ್ತುತ ಇವರೆಲ್ಲಾ ನಿತ್ಯ ಪುಸ್ತಕಗಳಲ್ಲಿ ಮಾಹಿತಿ ಸಂಗ್ರಹಿಸಿ ಅದನ್ನು ಆನ್‌ಲೈನ್‌ಗೆ ದಾಖಲಾತಿ ಮಾಡುತ್ತಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 141 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಆದ್ಯತೆ ಮೇರೆಗೆ ಅಭಿವೃದ್ಧಿಪಡಿಸಲಾಗುವುದು ಎಂದ ಅವರು, ಇವುಗಳಲ್ಲಿ ಆಕ್ಸಿಜನ್‌ ವ್ಯವಸ್ಥೆ ಕಲ್ಪಿಸಲಾಗುವುದು. ಅಲ್ಲದೆ, ಕೇಂದ್ರಗಳಿಗೆ ಬರುವ ರೋಗಿಗಳ ಆರೋಗ್ಯದ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಲಿದ್ದು, ಇದಕ್ಕಾಗಿ ಕಂಪ್ಯೂಟರ್‌ಗಳನ್ನು ಒದಗಿಸಲಾಗುವುದು. ಉಳಿದ 57 ವಾರ್ಡ್‌ಗಳಲ್ಲಿ ಸಹ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು. ನಗರದ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 50 ಸಾವಿರ ರೂ.ವರೆಗೆ ಔಷಧಿಗಳನ್ನು ಸರಬರಾಜು ಮಾಡಲಾಗುತ್ತಿದೆ. ಒಟ್ಟಾರೆ ಸುಮಾರು 5 ಲಕ್ಷ ರೂ.ವರೆಗೆ ಔಷಧಗಳನ್ನು ಸರಬರಾಜು ಮಾಡು ನಿರ್ಧರಿಸಲಾಗಿದೆ ಎಂದರು.

ಮೇಯರ್‌ ಎಂ. ಗೌತಮ್‌ ಕುಮಾರ್‌, ಉಪಮೇಯರ್‌ ರಾಮಮೋಹನ್‌ ರಾಜ್‌, ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್‌, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಜಿ. ಮಂಜುನಾಥ್‌ ರಾಜು, ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ್‌ ಪ್ರಸಾದ್‌, ವಿಶೇಷ ಆಯುಕ್ತ (ಘನತ್ಯಾಜ್ಯ ನಿರ್ವಹಣೆ ಹಾಗೂ ಆರೋಗ್ಯ) ಡಿ. ರಂದೀಪ್‌ ಹಾಗೂ ಆರೋಗ್ಯಾಧಿಕಾರಿಗಳಿದ್ದರು.

ಸಿಯುಪಿಎಚ್‌ಸಿ ತಂತ್ರಾಂಶ :  ನಗರ ಪ್ರಾಥಮಿಕ ಆರೋಗ್ಯ ಕೇಂದ್ರ (ಸಿಯುಪಿಎಚ್‌ಸಿ) ತಂತ್ರಾಂಶವನ್ನು (ಆ್ಯಪ್‌) ಕೋವಿಡ್ ಸೋಂಕು ನಿಯಂತ್ರಣ ಕಾರ್ಯಕ್ಕೆ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ. ಕೋವಿಡ್ ಸೋಂಕಿತರ ಸಂಪರ್ಕಿತರ ಪತ್ತೆ ಹಚ್ಚುವಿಕೆ, ಆರೋಗ್ಯ ಸಮೀಕ್ಷೆ, ಕಂಟೈನ್ಮೆಂಟ್‌ ಪ್ರದೇಶ, ಜ್ವರ ತಪಾಸಣಾ ಕೇಂದ್ರಗಳು ಮತ್ತು ಕೋವಿಡ್‌ ಪರೀಕ್ಷೆಗಳ ನಿರ್ವಹಣೆ ಇದರ ಮೂಲಕ ಆಗಲಿದೆ.

Advertisement

ಹಾಸಿಗೆ ನಿರ್ವಹಣೆ ತಂತ್ರಾಂಶ :  ಅದೇ ರೀತಿ, ಹಾಸಿಗೆ ಲಭ್ಯತೆ ತಿಳಿದುಕೊಂಡು ಸೋಂಕು ದೃಢಪಟ್ಟವರನ್ನು ತುರ್ತಾಗಿ ಆಸ್ಪತ್ರೆಗಳಿಗೆ ದಾಖಲಿಸಲು ಕೋವಿಡ್‌ ಆಸ್ಪತ್ರೆಗಳ ಹಾಸಿಗೆ ನಿರ್ವಹಣಾ ವ್ಯವಸ್ಥೆ (ಸಿಎಚ್‌ಬಿಎಂಎಸ್‌) ತಂತ್ರಾಂಶ ನೆರವಾಗಲಿದೆ ಎಂದು ಬಿಬಿಎಂಪಿಯ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next