Advertisement

ಕಾಲೇಜು ವಿದ್ಯಾರ್ಥಿಗಳಿಗೆ ಟ್ಯಾಬ್‌: ಸರಕಾರದ ಹಂತದಲ್ಲೇ ಬಾಕಿ

10:17 AM Sep 03, 2022 | Team Udayavani |

ಉಡುಪಿ: ರಾಜ್ಯದ ಸರಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ಬದಲಿಗೆ ಟ್ಯಾಬ್ಲೆಟ್‌ ವಿತರಿಸಲು ಕಾಲೇಜು ಶಿಕ್ಷಣ ಇಲಾಖೆಯಿಂದ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ಆದರೆ ರಾಜ್ಯ ಸರಕಾರದಿಂದ ಹಣಕಾಸಿನ ಅನುಮೋದನೆ ಸಿಕ್ಕಿಲ್ಲ.

Advertisement

ಕಾಲೇಜು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ನೀಡಲಾಗುತ್ತಿತ್ತು. ವೆಚ್ಚ ಹೆಚ್ಚಾಗುವ ಜತೆಗೆ ವಿದ್ಯಾರ್ಥಿಗಳಿಗೆ ಬಹುಉಪಯೋಗ ಸಾಧ್ಯವಾಗದ ಹಿನ್ನೆಲೆಯಲ್ಲಿ ಲ್ಯಾಪ್‌ಟಾಪ್‌ ಬದಲಿಗೆ ಟ್ಯಾಬ್ಲೆಟ್‌ ನೀಡಲು ನಿರ್ಧರಿಸಲಾಗಿತ್ತು. ಕಳೆದ ವರ್ಷ ಸುಮಾರು 1.60 ಲಕ್ಷ ವಿದ್ಯಾರ್ಥಿಗಳಿಗೆ ಟ್ಯಾಬ್‌ ವಿತರಣೆ ಮಾಡಲಾಗಿತ್ತು. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕಾಗಿ ಈ ವರ್ಷವೂ ಟ್ಯಾಬ್‌ ವಿತರಣೆಗೆ ಪ್ರಸ್ತಾವನೆಯನ್ನು ಇಲಾಖೆಯಿಂದ ಸರಕಾರಕ್ಕೆ ಕಳುಹಿಸಿಕೊಡಲಾಗಿದೆ. ಆದರೆ ಸರಕಾರದಿಂದ ಇನ್ನೂ ಅನುಮೋದನೆ ಸಿಗದೇ ಇರುವುದರಿಂದ ಸದ್ಯಕ್ಕೆ ವಿದ್ಯಾರ್ಥಿಗಳಿಗೆ ಟ್ಯಾಬ್‌ ಸಿಗುವುದಿಲ್ಲ.

ಕಳೆದ ವರ್ಷ ಒಂದು ಟ್ಯಾಬ್‌ ಗೆ 10,600ರೂ.ಗಳಂತೆ ಖರೀದಿ ಮಾಡಲಾಗಿತ್ತು. ಈ ವರ್ಷವೂ ಅದೇ ಮೌಲ್ಯದ ಅಥವಾ 11 ಸಾವಿರ ರೂ. ಮೌಲ್ಯಗಳಲ್ಲಿ ಟ್ಯಾಬ್‌ ಖರೀದಿ ಮಾಡಲಾಗುತ್ತದೆ. ಲ್ಯಾಪ್‌ಟಾಪ್‌ ವೆಚ್ಚಕ್ಕಿಂತ ಇದು ಕಡಿಮೆಯಾಗಲಿದೆ. ಅಲ್ಲದೆ ವಿದ್ಯಾರ್ಥಿಗಳಿಗೆ ಬಹುವಿಧದಲ್ಲಿ ಅನುಕೂಲವಾಗಲಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಸ್ಮಾರ್ಟ್‌ಕ್ಲಾಸ್‌: ಸರಕಾರಿ ಪದವಿ ಕಾಲೇಜುಗಳ ಕ್ಲಾಸ್‌ರೂಂಗಳನ್ನು ಸ್ಮಾರ್ಟ್‌ ಕ್ಲಾಸ್‌ರೂಂ ಆಗಿ ಪರಿವರ್ತಿಸುವ ಕಾರ್ಯ ನಡೆಯುತ್ತಿದೆ. ಈಗಾಗಲೇ ಶೇ. 50ಕ್ಕೂ ಅಧಿಕ ಕ್ಲಾಸ್‌ರೂಂಗಳನ್ನು ಸ್ಮಾರ್ಟ್‌ ಕ್ಲಾಸ್‌ರೂಂಗಳಾಗಿ ಪರಿವರ್ತಿಸಲಾಗಿದೆ. ವಿದ್ಯಾರ್ಥಿಗಳಿಗೆ ಟ್ಯಾಬ್‌ ನೀಡುವುದರಿಂದ ಸ್ಮಾರ್ಟ್‌ ಕ್ಲಾಸ್‌ರೂಂನಲ್ಲಿ ಟ್ಯಾಬ್‌ ಮೂಲಕ ಕಲಿಕೆಗೂ ಅನುಕೂಲವಾಗಲಿದೆ. ಲರ್ನಿಂಗ್‌ ಮ್ಯಾನೇಜ್‌ಮೆಂಟ್‌ ಸಿಸ್ಟಂನಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ವೀಡಿಯೋಗಳನ್ನು ಅಪ್‌ಲೋಡ್‌ ಮಾಡಲಾಗಿದೆ. ಒಂದು ಗಂಟೆಗೆ ಸಮನಾದ ಕ್ಲಾಸ್‌ರೂಂ ಕಲಿಕೆಯ ವೀಡಿಯೋಗಳು ವಿಷಯವಾರು ಅದರಲ್ಲಿ ಸಿಗಲಿದೆ. ಹೀಗಾಗಿ ವಿದ್ಯಾರ್ಥಿಗಳು ಟ್ಯಾಬ್‌ ಮೂಲಕ ಅದನ್ನು ಪಡೆಯಲು ಅವಕಾಶ ಮಾಡಿಕೊಡಲಾಗಿದೆ.

ಇದನ್ನೂ ಓದಿ : ಜಮ್ಮು-ಕಾಶ್ಮೀರದ 370ನೇ ವಿಧಿ ರದ್ದು ಪರ ಆಜಾದ್ ಮತ ಚಲಾಯಿಸಿದ್ದರು: ಅಲ್ತಾಫ್ ಬುಖಾರಿ

Advertisement

ಆನ್‌ಲೈನ್‌ ಕಲಿಕೆಗೆ ಒತ್ತು
ಲ್ಯಾಪ್‌ಟಾಪ್‌ ವಿತರಣೆ ಸಂದರ್ಭದಲ್ಲಿ ಅವ್ಯವಹಾರದ ಆರೋಪವೂ ಕೇಳಿಬಂದಿತ್ತು. ಅಲ್ಲದೆ ಇದಕ್ಕಾಗಿ ಸದನ ಸಮಿತಿಯನ್ನು ರಚನೆ ಮಾಡಲಾಗಿತ್ತು. ಇದಾದ ಅನಂತರದಲ್ಲಿ ಟ್ಯಾಬ್‌ ವಿತರಣೆ ಆರಂಭವಾಗಿತ್ತು. ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಭೌತಿಕ ತರಗತಿಗಳ ಜತೆ ಜತೆಗೆ ಆನ್‌ಲೈನ್‌ ತರಗತಿಗೂ ಆದ್ಯತೆ ನೀಡಲಾಗುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಟ್ಯಾಬ್‌ ಹೆಚ್ಚು ಅನುಕೂಲವೂ ಆಗಲಿದೆ.

ಪದವಿ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಮೂಲಕ ಕಲಿಕೆಗೆ ಅನುಕೂಲವಾಗುವಂತೆ ಟ್ಯಾಬ್‌ಗಳನ್ನು ವಿತರಣೆ ಮಾಡಲಿದ್ದೇವೆ. ಈ ಹಿಂದೆ ಲ್ಯಾಪ್‌ಟಾಪ್‌ಗ್ಳನ್ನು ವಿತರಣೆ ಮಾಡಲಾಗುತ್ತಿತ್ತು. ಟ್ಯಾಬ್‌ ಬಹುಉಪಯೋಗಿ ಮತ್ತು ಕಡಿಮೆ ವೆಚ್ಚದಲ್ಲಿ ವಿದ್ಯಾರ್ಥಿಗಳಿಗೆ ನೀಡಬಹುದು. ಪ್ರಸಕ್ತ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಟ್ಯಾಬ್‌ ವಿತರಣೆಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
– ಪಿ. ಪ್ರದೀಪ್‌, ಆಯುಕ್ತ ಕಾಲೇಜು ಶಿಕ್ಷಣ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next