ಜೈಪುರ: ಬಾಲಿವುಡ್ ನಟಿ ತಾಪ್ಸಿ ಪನ್ನು ತನ್ನ ದೀರ್ಘಕಾಲದ ಗೆಳೆಯ ಮಥಿಯಾಸ್ ಬೋ ಅವರೊಂದಿಗೆ ವಿವಾಹವಾಗಿದ್ದಾರೆ ಎಂದು ವರದಿ ಆಗಿದೆ.
ಖ್ಯಾತ ನಟಿ ತಾಪ್ಸಿ ಪನ್ನು ಅವರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಶೀಘ್ರವೇ ಅವರು ಬ್ಯಾಡ್ಮಿಂಟನ್ ಆಟಗಾರ ಮಥಾಯಸ್ ಬೋ ಅವರೊಂದಿಗೆ ವಿವಾಹವಾಗಲಿದ್ದಾರೆ ಎನ್ನುವ ವಿಚಾರ ಇತ್ತೀಚೆಗೆ ಹರಿದಾಡಿತ್ತು. 10 ವರ್ಷಗಳಿಂದ ಇಬ್ಬರು ರಿಲೇಷನ್ಶಿಪ್ನಲ್ಲಿದ್ದರು. ಇದೀಗ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ ಎಂದು ವರದಿ ಆಗಿದೆ.
ತಾಪ್ಸಿ – ಮಥಿಯಾಸ್ ಅವರ ವಿವಾಹವು ರಾಜಸ್ಥಾನದ ಉದಯ್ ಪುರದಲ್ಲಿ ನಡೆದಿದೆ. ವಿವಾಹ ಸಮಾರಂಭ ಕೆಲವೇ ಕೆಲ ಆತ್ಮೀಯರ ಸಮ್ಮುಖದಲ್ಲಿ ನೆರವೇರಿದೆ. ಮಾರ್ಚ್ 20 ರಂದು ಮದುವೆಯ ಪೂರ್ವ ಸಂಭ್ರಮಗಳು ಪ್ರಾರಂಭವಾಗಿದ್ದವು ಎಂದು ʼನ್ಯೂಸ್ 10ʼ ವರದಿ ಮಾಡಿದೆ.
ಈ ಮದುವೆಗೆ ಖ್ಯಾತ ಬಾಲಿವುಡ್ ಮಂದಿಗೆ ಆಹ್ವಾನ ನೀಡಿಲ್ಲ ಎನ್ನಲಾಗಿದೆ. ನಿರ್ಮಾಪಕಿ ಕನಿಕಾ ಧಿಲ್ಲೋನ್, ನಟಿ ಪಾವೈಲ್ ಗುಲಾಟಿ, ನಿರ್ದೇಶಕ ಅನುರಾಗ್ ಕಶ್ಯಪ್ ಅವರು ಮದುವೆಯಲ್ಲಿ ಭಾಗಿಯಾಗಿದ್ದಾರೆ ಎಂದು ವರದಿ ತಿಳಿಸಿದೆ.
ತಾಪ್ಸಿ ಪನ್ನು ಮತ್ತು ಡೆನ್ಮಾರ್ಕ್ ಬ್ಯಾಡ್ಮಿಂಟನ್ ಕೋಚ್ ಮಥಿಯಾಸ್ ಬೋ 2013 ರಲ್ಲಿ ಇಂಡಿಯನ್ ಬ್ಯಾಡ್ಮಿಂಟನ್ ನ ಉದ್ಘಾಟನಾ ಲೀಗ್‌ನ ಕಾರ್ಯಕ್ರಮದಲ್ಲಿ ಮೊದಲ ಬಾರಿ ಭೇಟಿ ಆಗಿದ್ದರು. ಮೊದಲಿಗೆ ತಾಪ್ಸಿ ತಮ್ಮ ಸಂಬಂಧವನ್ನು ಗೌಪ್ಯವಾಗಿಟ್ಟಿದ್ದರು. 10 ವರ್ಷ ಡೇಟ್ ಮಾಡಿದ ಬಳಿಕ ಇದೀಗ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ.
ವಿವಾಹದ ಫೋಟೋಗಳು ಇನ್ನಷ್ಟೇ ಹೊರಬೀಳಬೇಕಿದೆ.