Advertisement

T20 WC; ಕೆನಡಾ ಎದುರಾಳಿ, ಮಳೆ ಭೀತಿ: ಭಾರತಕ್ಕೆ ಪ್ರಾಯೋಗಿಕ ಪಂದ್ಯ

12:11 AM Jun 15, 2024 | Team Udayavani |

ಲಾಡರ್‌ಹಿಲ್‌ (ಯುಎಸ್‌ಎ): ಕೆಲವು ಪ್ರಮುಖ ಆಟಗಾರರ ಕಳಪೆ ಫಾರ್ಮ್ ಹೊರತಾಗಿಯೂ ಮೂರಕ್ಕೆ ಮೂರೂ ಪಂದ್ಯಗಳನ್ನು ಗೆದ್ದು ಈಗಾಗಲೇ ಸೂಪರ್‌-8 ಹಂತ ಪ್ರವೇಶಿಸಿರುವ ಭಾರತ, ಶನಿವಾರದ ಕೊನೆಯ ಲೀಗ್‌ ಸೆಣಸಾಟದಲ್ಲಿ ಕೆನಡಾವನ್ನು ಎದುರಿಸಲಿದೆ. ಟೀಮ್‌ ಇಂಡಿಯಾ ಪಾಲಿಗೆ ಇದು ಪ್ರಾಯೋಗಿಕ ಹಾಗೂ ಮುಂದಿನ ಸುತ್ತಿನ ಅಭ್ಯಾಸ ಪಂದ್ಯ. ಹಾಗೆಯೇ ಭಾರತ-ಕೆನಡಾ ನಡುವಿನ ಮೊದಲ ಟಿ20 ಪಂದ್ಯವೂ ಇದಾಗಿದೆ.
ನ್ಯೂಯಾರ್ಕ್‌ನಲ್ಲಿ ಈಗಾಗಲೇ ಭಾರತದ ಆಟ ಮುಗಿದಿದೆ. ಇಲ್ಲಿಂದ 1,850 ಕಿ.ಮೀ. ದೂರದ ಫ್ಲೋರಿಡಾದಲ್ಲಿ ಕೆನಡಾ ಎದುರಿನ ಮುಖಾಮುಖಿ ಸಾಗಲಿದೆ. ಆದರೆ ಇಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದ ಈ ಪಂದ್ಯಕ್ಕೆ ಅಡ್ಡಿಯಾಗುವ ಸಾಧ್ಯತೆ ಹೆಚ್ಚು ಎನ್ನುತ್ತದೆ ಹವಾಮಾನ ವರದಿ.

Advertisement

ಮೀಸಲು ಸಾಮರ್ಥ್ಯ
ಭಾರತದ ಮೀಸಲು ಸಾಮರ್ಥ್ಯವನ್ನು ತೋರ್ಪಡಿಸಲು ಕೆನಡಾ ಎದುರಿನ ಪಂದ್ಯ ವೇದಿಕೆ ಆಗಬೇಕಿದೆ. ಆಗ ಯಶಸ್ವಿ ಜೈಸ್ವಾಲ್‌, ಸಂಜು ಸ್ಯಾಮ್ಸನ್‌, ಕುಲದೀಪ್‌ ಯಾದವ್‌, ಯಜುವೇಂದ್ರ ಚಹಲ್‌ ಅವರಲ್ಲಿ ಒಂದಿಬ್ಬರಾದರೂ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆ ಇರಿಸಿಕೊಳ್ಳಬಹುದು. ಆದರೆ ಇದಕ್ಕೂ ಮಿಗಿಲಾಗಿ ಈವರೆಗಿನ ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫ‌ಲರಾದ ಆಟಗಾರರ ಸಾಮರ್ಥ್ಯವನ್ನು ಮತ್ತೂಮ್ಮೆ ಒರೆಗೆ ಹಚ್ಚಬೇಕಾದ ಜರೂರತು ಕೂಡ ಇದೆ.

ಇವರಲ್ಲಿ ಮುಖ್ಯವಾದವರು ವಿರಾಟ್‌ ಕೊಹ್ಲಿ. ಐಪಿಎಲ್‌ನಲ್ಲಿ 700 ಪ್ಲಸ್‌ ರನ್‌ ಹಾಗೂ 150 ಪ್ಲಸ್‌ ಸ್ಟ್ರೈಕ್‌ರೇಟ್‌ನೊಂದಿಗೆ ಅಬ್ಬರಿಸಿದ ಕೊಹ್ಲಿ, ವಿಶ್ವಕಪ್‌ನಲ್ಲಿ ಫ‌ುಲ್‌ ಫ್ಲಾಪ್‌ ಆಗಿದ್ದಾರೆ. ಇಲ್ಲಿ ಅವರ ಗಳಿಕೆ ಬರೀ 5 ರನ್‌. ಅಮೆರಿಕ ವಿರುದ್ಧ ಗೋಲ್ಡನ್‌ ಡಕ್‌. ಸ್ಟ್ರೈಕ್‌ರೇಟ್‌ 1.66. ಇದೇ ಮೊದಲ ಸಲ ವಿಶ್ವಕಪ್‌ ಆಡಲಿಳಿದಿರುವ ಕೆನಡಾ ವಿರುದ್ಧ ಕೊಹ್ಲಿ ಬ್ಯಾಟಿಂಗ್‌ ಬರಗಾಲ ನೀಗಿಸಿಕೊಳ್ಳಬೇಕಿದೆ. ಇದರಿಂದ ವೆಸ್ಟ್‌ ಇಂಡೀಸ್‌ನಲ್ಲಿ ನಡೆಯುವ ಸೂಪರ್‌-8 ಸುತ್ತಿನಲ್ಲಿ ಭಾರತಕ್ಕೆ ಹೆಚ್ಚಿನ ಪ್ರಯೋಜನವಾಗಲಿದೆ.

ವಿರಾಟ್‌ ಕೊಹ್ಲಿ ಇನ್ನಿಂಗ್ಸ್‌ ಆರಂಭಿಸುವ ಕುರಿತು ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರೋಹಿತ್‌ ಜತೆ ಜೈಸ್ವಾಲ್‌ ಬಂದು, ಕೊಹ್ಲಿ ಒನ್‌ಡೌನ್‌ಲ್ಲಿ ಆಡುವುದು ಒಳ್ಳೆಯದು ಎಂಬುದು ಇವರೆಲ್ಲರ ಅಪೇಕ್ಷೆ.

ಕೊಹ್ಲಿ ವಿಫ‌ಲರಾದಾಗಲೆಲ್ಲ ರಿಷಭ್‌ ಪಂತ್‌ ಕೈ ಹಿಡಿದಿದ್ದಾರೆ. ಪಾಕ್‌ ವಿರುದ್ಧ 42, ಐರ್ಲೆಂಡ್‌ ವಿರುದ್ಧ 36 ರನ್‌ ಬಾರಿಸಿದ್ದಾರೆ. ಸೂರ್ಯಕುಮಾರ್‌ ಯಾದವ್‌ ಯುಎಸ್‌ಎ ವಿರುದ್ಧ ಅರ್ಧ ಶತಕ ಬಾರಿಸಿ ಫಾರ್ಮ್ ಪ್ರದರ್ಶಿಸಿದ್ದಾರೆ. ಆದರೆ ಶಿವಂ ದುಬೆ ಪ್ರಯತ್ನ ಸಾಲದು. ಅಮೆರಿಕ ವಿರುದ್ಧ 35 ಎಸೆತಗಳಿಂದ 31 ರನ್‌ ಹೊಡೆದರೂ ಫೀಲ್ಡಿಂಗ್‌ ಕೈಕೊಟ್ಟಿದೆ. ಐಪಿಎಲ್‌ನಲ್ಲಿ ಇಂಪ್ಯಾಕ್ಟ್ ಆಟಗಾರನಾಗಿಯೇ ಆಡಿದ ದುಬೆ, ಬಹುಶಃ ಕೆನಡಾ ವಿರುದ್ಧ ಜಾಗ ಖಾಲಿ ಮಾಡಲಿದ್ದಾರೆ.

Advertisement

ನ್ಯೂಯಾರ್ಕ್‌ನ “ಡ್ರಾಪ್‌-ಇನ್‌ ಪಿಚ್‌’ಗಳಲ್ಲಿ ಅರ್ಷದೀಪ್‌, ಪಾಂಡ್ಯ (ತಲಾ 7 ವಿಕೆಟ್‌), ಬುಮ್ರಾ (5 ವಿಕೆಟ್‌) ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಅಕ್ಷರ್‌ ಪಟೇಲ್‌ ಓಕೆ. ಆದರೆ ಸಿರಾಜ್‌ (1 ವಿಕೆಟ್‌), ಜಡೇಜ (ಯಾವುದೇ ವಿಕೆಟ್‌ ಇಲ್ಲ) ಬೌಲಿಂಗ್‌ ಟ್ರ್ಯಾಕ್‌ನಲ್ಲೂ ವಿಫ‌ಲರಾಗಿದ್ದಾರೆ. ಸೂಪರ್‌-8 ಪಂದ್ಯಗಳು ವೆಸ್ಟ್‌ ಇಂಡೀಸ್‌ನಲ್ಲಿ ನಡೆಯಲಿದ್ದು, ಇಲ್ಲಿನ ಪಿಚ್‌ಗಳು ಸ್ಪಿನ್‌ ಫ್ರೆಂಡ್ಲಿ ಆಗಿವೆ.

ಕೆನಡಾ ಒಂದು ಜಯ
ಕೆನಡಾವನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಅದು ಐರ್ಲೆಂಡ್‌ಗೆ 12 ರನ್‌ ಸೋಲುಣಿಸುವಲ್ಲಿ ಯಶಸ್ವಿಯಾಗಿದೆ. ಆರಂಭಕಾರ ಆರನ್‌ ಜಾನ್ಸನ್‌ ಮೇಲೆ ತಂಡ ಹೆಚ್ಚಿನ ನಿರೀಕ್ಷೆ ಇರಿಸಿದೆ.

ಕಿವೀಸ್‌-ಉಗಾಂಡ:ಲೆಕ್ಕ ಭರ್ತಿಯ ಪಂದ್ಯ
ಟರೂಬ: ಶನಿವಾರದ ಟಿ20 ವಿಶ್ವಕಪ್‌ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ಮತ್ತು ಉಗಾಂಡ ತಂಡಗಳು ಸೆಣಸಲಿವೆ. ಇದು ಎರಡೂ ತಂಡಗಳಿಗೂ ಆಟಕ್ಕುಂಟು ಲೆಕ್ಕಕ್ಕಿಲ್ಲದ ಪಂದ್ಯವಾಗಿರಲಿದೆ. ಕಾರಣ, ಗ್ರೂಪ್‌ “ಸಿ’ಯಲ್ಲಿರುವ ಈ ಎರಡೂ ತಂಡಗಳು ಈಗಾಗಲೇ ಹೊರಬಿದ್ದಿವೆ.

ಉಗಾಂಡ 3 ಪಂದ್ಯಗಳಲ್ಲಿ ಒಂದನ್ನು ಗೆದ್ದು 2 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ. ಆದರೆ ಬಲಿಷ್ಠ ತಂಡಗಳ ಸಾಲಿನಲ್ಲಿದ್ದ ನ್ಯೂಜಿಲ್ಯಾಂಡ್‌ 2 ಪಂದ್ಯಗಳನ್ನು ಸೋತು ಕೊನೆಯ ಸ್ಥಾನಕ್ಕೆ ಕುಸಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next