ಹೊಸದಿಲ್ಲಿ : ವರ್ಷಾಂತ್ಯ ಭಾರತದಲ್ಲಿ ನಡೆಯಬೇಕಿರುವ ಐಸಿಸಿ ಟಿ20 ವಿಶ್ವಕಪ್ ಆತಿಥ್ಯದ ಕುರಿತ ಗೊಂದಲ, ಆತಂಕ ಮುಂದುವರಿದಿದೆ.
ಕೊರೊನಾ ಭೀತಿಯಿಂದಾಗಿ ಈ ಪಂದ್ಯಾವಳಿಗೆ ಯುಎಇ ಬದಲಿ ತಾಣವಾಗಿರಲಿದೆ ಎಂದು ಐಸಿಸಿ ಈಗಾಗಲೇ ಪ್ರಕಟಿಸಿದೆ. ಬಿಸಿಸಿಐ ಕೂಡ ಇದನ್ನು ಒಪ್ಪಿಕೊಂಡಿದೆ. ಆದರೆ ವಿಶ್ವಕಪ್ ಆತಿಥ್ಯದ ಹಕ್ಕು ಭಾರತದ ಬಳಿಯಲ್ಲೇ ಇರಲಿದೆ, ಯುಎಇ ಕೇವಲ ಮೀಸಲು ತಾಣ ಎಂಬುದಾಗಿ ಬಿಸಿಸಿಐ ಜಿಎಂ (ಗೇಮ್ ಡೆವಲಪ್‌ಮೆಂಟ್) ಧೀರಜ್ ಮಲ್ಹೋತ್ರಾ ಹೇಳಿದ್ದಾರೆ.
ಅನಂತರದ ಬೆಳವಣಿಗೆಯೊಂದರಲ್ಲಿ, ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಈ ಪಂದ್ಯಾವಳಿ ಭಾರತದಲ್ಲೇ ನಡೆಯುವ ಬಗ್ಗೆ ಆಶಾವಾದ ವ್ಯಕ್ತಪಡಿಸಿದ್ದಾರೆ.
“ಈ ಕೂಟಕ್ಕೆ ಇನ್ನೂ 5 ತಿಂಗಳಿದೆ. ಅಷ್ಟರಲ್ಲಿ ಏನೂ ಸಂಭವಿಸಬಹುದು. ದೇಶದ ಬಹುತೇಕ ಜನರು ಲಸಿಕೆ ಹಾಕಿಕೊಂಡಿರುತ್ತಾರೆ. ಸೋಂಕು ನಿಯಂತ್ರಣಕ್ಕೆ ಬರುವ ಎಲ್ಲ ಸಾಧ್ಯತೆ ಇದೆ. ಹೀಗಾಗಿ ಪಂದ್ಯಾವಳಿ ಭಾರತದಲ್ಲೇ ನಡೆಯುವ ಬಗ್ಗೆ ಆಶಾವಾದದಿಂದ ಇರಬಹುದು. ಕೂಟದ ಹಿತದೃಷ್ಟಿಯಿಂದ ಪಂದ್ಯಗಳ ತಾಣಗಳನ್ನು 9ರಿಂದ 4 ಅಥವಾ 5ಕ್ಕೆ ಇಳಿಸುವ ಮಾರ್ಗವೊಂದಿದೆ…’ ಎಂದು ಬಿಸಿಸಿಐ ಅಧಿಕಾರಿ ಪಿಟಿಐಗೆ ತಿಳಿಸಿದರು.
ಇದನ್ನೂ ಓದಿ :ಆರ್‌ಸಿಬಿ ವಿರುದ್ಧ ರಾಹುಲ್, ಬ್ರಾರ್ ದರ್ಬಾರ್ ; ಪಂಜಾಬ್ ಗೆ 34 ರನ್‌ಗಳ ಜಯ
ಟಿ20 ವಿಶ್ವಕಪ್‌ಗೆ ಪೂರಕವಾಗಿ ಐಸಿಸಿ ವಿಚಕ್ಷಣ ದಳವೊಂದು ಐಪಿಎಲ್ ಜೈವಿಕ ಸುರಕ್ಷಾ ವಲಯವನ್ನು ಪರಿಶೀಲಿಸಲು ಈಗಾಗಲೇ ಹೊಸದಿಲ್ಲಿಗೆ ಆಗಮಿಸಬೇಕಿತ್ತು. ಆದರೆ ಅದೀಗ ತನ್ನ ಪ್ರವಾಸವನ್ನು ಮುಂದೂಡಿದೆ.