Advertisement

T20 World Cup ಇಂದು 3 ಪಂದ್ಯ: ಚಾಂಪಿಯನ್‌ ಇಂಗ್ಲೆಂಡ್‌ಗೆ ಸ್ಕಾಟ್ಲೆಂಡ್‌ ಸವಾಲು

10:59 PM Jun 03, 2024 | Team Udayavani |

ಬ್ರಿಜ್‌ಟೌನ್‌ (ಬಾರ್ಬಡಾಸ್‌): ಟಿ20 ವಿಶ್ವಕಪ್‌ ಮುಖಾಮುಖೀಯಲ್ಲಿ ಮಂಗಳವಾರ 3 ಪಂದ್ಯಗಳ ಮಹಾಮೇಳ. ಇದರಲ್ಲಿ ಪ್ರಮುಖವಾದದ್ದು ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ಮತ್ತು ಸ್ಕಾಟ್ಲೆಂಡ್‌ ತಂಡಗಳ ಮುಖಾಮುಖೀ. ಉಳಿದಂತೆ ಗಯಾನಾದಲ್ಲಿ ಅಫ್ಘಾನಿಸ್ಥಾನ- ಉಗಾಂಡ, ಡಲ್ಲಾಸ್‌ನಲ್ಲಿ ನೆದರ್ಲೆಂಡ್ಸ್‌- ನೇಪಾಲ ಎದುರಾಗಲಿವೆ.

Advertisement

ಪಾಕಿಸ್ಥಾನ ವಿರುದ್ಧ ತವರಲ್ಲಿ ವಿಶ್ವಕಪ್‌ ತಯಾರಿಗೆ ಇಳಿದಿದ್ದ ಇಂಗ್ಲೆಂಡ್‌ಗೆ ಮಳೆಯಿಂದ ಅಡಚಣೆ ಎದುರಾಗಿತ್ತು. ನಾಲ್ಕರಲ್ಲಿ ಎರಡು ಪಂದ್ಯ ರದ್ದುಗೊಂಡಿತ್ತು. ಆದರೂ 2-0 ಅಂತರದಿಂದ ಸರಣಿ ಗೆದ್ದ ಸಂತಸ ಇಂಗ್ಲೆಂಡ್‌ ಪಾಳೆಯದಲ್ಲಿದೆ. ಇದು ಇಂಗ್ಲೆಂಡ್‌-ಸ್ಕಾಟ್ಲೆಂಡ್‌ ನಡುವಿನ ಮೊದಲ ಟಿ20 ಪಂದ್ಯ ಎಂಬ ಕಾರಣಕ್ಕಾಗಿಯೂ ನಿರೀಕ್ಷೆ ಮೂಡಿಸಿದೆ.

ಐಪಿಎಲ್‌ನಲ್ಲಿ ಪ್ರಚಂಡ ಫಾರ್ಮ್ ಪ್ರದರ್ಶಿಸಿದ್ದ ಆರಂಭಕಾರ ಫಿಲ್‌ ಸಾಲ್ಟ್, ಬಹಳ ಸಮಯದ ಬಳಿಕ ಮರಳಿದ ವೇಗಿ ಜೋಫ್ರಾ ಆರ್ಚರ್‌ ಅವರು ತಂಡಕ್ಕೆ “ಫೈರ್‌ ಪವರ್‌’ ತರಬಲ್ಲರೆಂಬ ನಂಬಿಕೆ ಇದೆ. ಆದರೆ ಬ್ರಿಜ್‌ಟೌನ್‌ ಟ್ರ್ಯಾಕ್‌ನಲ್ಲಿ ರನ್‌ ಹರಿದು ಬರುವ ಸಂಭವ ಕಡಿಮೆ. ಇಲ್ಲಿ ಬೌಲರ್‌ಗಳೇ ಮೇಲುಗೈ ಸಾಧಿಸಲಿದ್ದಾರೆ ಎಂಬುದಕ್ಕೆ ನಮೀಬಿಯಾ-ಒಮಾನ್‌ ಪಂದ್ಯವೇ ಸಾಕ್ಷಿ.

ಇಲ್ಲೇ ಕಪ್‌ ಎತ್ತಿತ್ತು ಇಂಗ್ಲೆಂಡ್‌: ಬ್ರಿಜ್‌ಟೌನ್‌ ಇಂಗ್ಲೆಂಡ್‌ ಪಾಲಿಗೆ ಅದೃಷ್ಟದ ತಾಣ ಎಂಬುದನ್ನು ಮರೆಯುವಂತಿಲ್ಲ. 2010ರಲ್ಲಿ, ಪಾಲ್‌ ಕಾಲಿಂಗ್‌ವುಡ್‌ ನೇತೃತ್ವದಲ್ಲಿ ಇಂಗ್ಲೆಂಡ್‌ ಇಲ್ಲಿಯೇ ತನ್ನ ಮೊದಲ ಟಿ20 ವಿಶ್ವಕಪ್‌ ಜಯಿಸಿತ್ತು. ಫೈನಲ್‌ನಲ್ಲಿ ಆಸ್ಟ್ರೇಲಿಯವನ್ನು ಕೆಡವಿತ್ತು. ಈ 14 ವರ್ಷಗಳ ಅವಧಿಯಲ್ಲಿ ಇಂಗ್ಲೆಂಡ್‌ 2019ರ ಏಕದಿನ ವಿಶ್ವಕಪ್‌ ಚಾಂಪಿಯನ್‌ ಕೂಡ ಆಗಿತ್ತು.

ವಿಶ್ವಕಪ್‌ ಉಳಿಸಿಕೊಳ್ಳಲು ಹೊರಟಿರುವ ಇಂಗ್ಲೆಂಡ್‌, ಅನುಭವಿ ಹಾಗೂ ಸ್ಟಾರ್‌ ಆಟಗಾರರ ಪಡೆಯನ್ನು ಕಟ್ಟಿಕೊಂಡು ಬಂದಿದೆ. ನಾಯಕ ಬಟ್ಲರ್‌, ಬೇರ್‌ಸ್ಟೊ, ಕರನ್‌, ಬ್ರೂಕ್‌, ಜಾಕ್ಸ್‌, ಲಿವಿಂಗ್‌ಸ್ಟೋನ್‌, ಅಲಿ… ಎಲ್ಲರೂ ಟಿ20 ಸ್ಪೆಷಲಿಸ್ಟ್‌ಗಳೇ.

Advertisement

ಇದೇ ವೇಳೆ ಸತತ 3ನೇ ವಿಶ್ವಕಪ್‌ನಲ್ಲಿ ಆಡುತ್ತಿರುವ ಸ್ಕಾಟ್ಲೆಂಡ್‌ ಸಾಮರ್ಥ್ಯವೇನೂ ಕಡಿಮೆಯಲ್ಲ. ರಿಚಿ ಬೆರ್ರಿಂಗ್ಟನ್‌ ಬಳಗ ಅರ್ಹತಾ ಸುತ್ತಿನ ಎಲ್ಲ 6 ಪಂದ್ಯಗಳನ್ನು ಗೆದ್ದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next