ಮುಂಬೈ: ಟಿ20 ವಿಶ್ವಕಪ್ ಕೂಟ ಆರಂಭವಾಗಿದೆ. ಭಾರತದ ಆಟಗಳು ಇನ್ನಷ್ಟೇ ಶುರುವಾಗಬೇಕಿದೆ. ಜೂನ್ 5ರಂದು ಭಾರತವು ಕೂಟದ ಮೊದಲ ಪಂದ್ಯ ಆಡಲಿದ್ದು, ಐರ್ಲೆಂಡ್ ವಿರುದ್ಧ ನ್ಯೂಯಾರ್ಕ್ ನಲ್ಲಿ ಪಂದ್ಯವಾಡಲಿದೆ. ಭಾರತೀಯ ಅಭಿಮಾನಿಗಳು ಈ ಪಂದ್ಯಕ್ಕಾಗಿ ಕಾದು ಕುಳಿತಿದ್ದಾರೆ. ಆದರೆ ರಾಜಸ್ಥಾನ ರಾಯಲ್ಸ್ ತಂಡದ ಪರವಾಗಿ ಆಡುವ ರಿಯಾನ್ ಪರಾಗ್ ಅವರು ಈ ಬಾರಿ ಟಿ20 ವಿಶ್ವಕಪ್ ಪಂದ್ಯಗಳನ್ನು ನೋಡುವುದಿಲ್ಲ ಎಂದು ಹೇಳಿದ್ದಾರೆ.
15 ಜನರ ತಂಡವನ್ನು ಪ್ರಕಟಿಸುವ ಮೊದಲು ಟಿ20 ವಿಶ್ವಕಪ್‌ಗೆ ಸಂಭವನೀಯರ ಪಟ್ಟಿಯಲ್ಲಿ ರಿಯಾನ್ ಪರಾಗ್ ಅವರ ಹೆಸರೂ ಕೇಳಿ ಬಂದಿತ್ತು, ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಉತ್ತಮ ಪ್ರದರ್ಶನ ತೋರಿದ್ದರು. ಆದರೆ, ಟಿ20 ವಿಶ್ವಕಪ್ ಗೆ ಭಾರತ ತಂಡದಲ್ಲಿ ಅಥವಾ ಮೀಸಲು ತಂಡದಲ್ಲೂ ಅವರಿಗೆ ಸ್ಥಾನ ಸಿಕ್ಕಿಲ್ಲ.
ಒಂದು ವೇಳೆ ಅವರು ಆಡುತ್ತಿದ್ದರೆ ಟಿ20 ವಿಶ್ವಕಪ್ ಬಗ್ಗೆ ಚಿಂತಿಸುತ್ತಿದ್ದರು. ಈ ವರ್ಷ ಅವರು ಹೆಚ್ಚು ಆಸಕ್ತಿ ಹೊಂದಿಲ್ಲ ಎಂದಿದ್ದಾರೆ.
“ಪ್ರಾಮಾಣಿಕವಾಗಿ ಹೇಳಬೇಕು ಎಂದರೆ ನಾನು ವಿಶ್ವಕಪ್ ಪಂದ್ಯಗಳನ್ನು ನೋಡಲು ಬಯಸುವುದಿಲ್ಲ. ನಾನು ಕೇವಲ ಯಾರು ಗೆಲ್ಲುತ್ತಿದ್ದಾರೆ ಎಂದಷ್ಟೇ ನೋಡಬಯಸುತ್ತೇನೆ. ನಾನು ಯಾವಾಗ ವಿಶ್ವಕಪ್ ಆಡುತ್ತೇನೆಯೋ ಆಗ ಯಾರು ಟಾಪ್ 4 ಗೆ ಬರುತ್ತಾರೆ ಎಂದೆಲ್ಲಾ ಯೋಚಿಸುತ್ತೇನೆ” ಎಂದು ಪರಾಗ್ ಹೇಳಿದರು.
ಟೀಂ ಇಂಡಿಯಾಗೆ ಆಯ್ಕೆಯಾಗುವ ಬಗ್ಗೆ ರಿಯಾನ್ ಪರಾಗ್ ಅವರು ಇತ್ತೀಚೆಗೆ ಹೇಳಿದ್ದರು. “ಒಂದಲ್ಲ ಒಂದು ಸಮಯದಲ್ಲಿ, ನೀವು ನನ್ನನ್ನು ಸೇರಿಸಿಕೊಳ್ಳಲೇ ಬೇಖು ಅಲ್ಲವೇ? ಹಾಗಾಗಿ ಅದು ನನ್ನ ನಂಬಿಕೆ, ನಾನು ಭಾರತಕ್ಕಾಗಿ ಆಡಲಿದ್ದೇನೆ. ಯಾವಾಗ ಎನ್ನುವುದಕ್ಕೆ ನಾನು ನಿಜವಾಗಿಯೂ ಕೇರ್ ಮಾಡುವುದಿಲ್ಲ” ಎಂದು ಪರಾಗ್ ಪಿಟಿಐಗೆ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.