Advertisement

ಆಸ್ಟ್ರೇಲಿಯ ವಿರುದ್ಧ ಇಂದು ಟಿ20 ಮುಖಾಮುಖಿ

12:30 AM Feb 24, 2019 | |

ವಿಶಾಖಪಟ್ಟಣ: ಮೊನ್ನೆ ಮೊನ್ನೆಯಷ್ಟೇ ಆಸ್ಟ್ರೇಲಿಯಕ್ಕೆ ತೆರಳಿ ಹೊಸ ಇತಿಹಾಸ ನಿರ್ಮಿಸಿ ಬಂದ ಭಾರತ ಕ್ರಿಕೆಟ್‌ ತಂಡ ಕಾಂಗರೂ ಪಡೆ ವಿರುದ್ಧ ಮತ್ತೂಂದು ಸುತ್ತಿನ ಮುಖಾಮುಖೀಗೆ ಅಣಿಯಾಗಿದೆ. “ಫಾರ್‌ ಎ ಚೇಂಜ್‌’ ಎಂಬಂತೆ ಈ ಮೇಲಾಟ ನಡೆಯುತ್ತಿರುವುದು ಭಾರತದಲ್ಲಿ. ಮುಂಬರುವ ಪ್ರತಿಷ್ಠಿತ ವಿಶ್ವಕಪ್‌ ಪಂದ್ಯಾವಳಿಯ ಹಿನ್ನೆಯಲ್ಲಿ ದಿಢೀರನೇ ಆಯೋಜಿಸಲ್ಪಟ್ಟ ಸರಣಿ ಇದಾಗಿದೆ.

Advertisement

ಭಾರತ-ಆಸ್ಟ್ರೇಲಿಯ ಈ ಸರಣಿಯಲ್ಲಿ 2 ಟಿ20 ಮತ್ತು 5 ಏಕದಿನ ಪಂದ್ಯಗಳನ್ನು ಆಡಲಿವೆ. ಯಾವುದೇ ಟೆಸ್ಟ್‌ ಪಂದ್ಯಗಳಿಲ್ಲ. ಮೊದಲ ಟಿ20 ಪಂದ್ಯ ರವಿವಾರ ವಿಶಾಖಪಟ್ಟಣದಲ್ಲಿ ನಡೆಯಲಿದ್ದು, ಇನ್ನೊಂದೇ ತಿಂಗಳಲ್ಲಿ ಆರಂಭವಾಗಲಿರುವ ಐಪಿಎಲ್‌ ಕನವರಿಕೆಯಲ್ಲಿರುವ ಭಾರತದ ಕ್ರಿಕೆಟ್‌ ಅಭಿಮಾನಿಗಳು ಅದೇ ಮೂಡ್‌ನ‌ಲ್ಲಿ ಈ ಪಂದ್ಯವನ್ನು ವೀಕ್ಷಿಸುವ ಕಾತರದಲ್ಲಿದ್ದಾರೆ.

ಕಾಡುತ್ತಿದೆ ಪಾಂಡ್ಯ ಗೈರು 
ಈ ಸರಣಿಗಾಗಿ ಎರಡೂ ತಂಡಗಳು ಪೂರ್ಣ ಸಾಮರ್ಥ್ಯದ ತಂಡಗಳನ್ನೇ ಆರಿಸಿವೆ. ಆದರೆ ಕೊನೆಯ ಗಳಿಗೆಯಲ್ಲಿ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಗಾಯಾಳಾಗಿ ಸರಣಿಯಿಂದಲೇಹೊರಗುಳಿಯುವಂತಾದದ್ದು ಆತಿಥೇಯರಿಗೆ ಎದುರಾದ ದೊಡ್ಡ ಹಿನ್ನಡೆ. ಟಿ20 ಸರಣಿಗಾಗಿ ಪಾಂಡ್ಯ ಸ್ಥಾನಕ್ಕೆ ಯಾರನ್ನೂ ಆರಿಸಿಲ್ಲ. ಹೀಗಾಗಿ ತಮಿಳುನಾಡಿನ ಯುವ ಆಲ್‌ರೌಂಡರ್‌ ವಿಜಯ್‌ ಶಂಕರ್‌ ಮೇಲೆ ಹೆಚ್ಚಿನ ಜವಾಬ್ದಾರಿ ಬಿದ್ದಿದೆ. ಇದನ್ನವರು ಎಷ್ಟರ ಮಟ್ಟಿಗೆ ನಿಭಾಯಿಸಬಹುದೆಂಬ ಕುತೂಹಲವಿದೆ. ಹಾಗೆಯೇ ಸ್ಪಿನ್‌ ಬೌಲಿಂಗ್‌ ಆಲ್‌ರೌಂಡರ್‌ ಕೃಣಾಲ್‌ ಪಾಂಡ್ಯ ಮೇಲೂ ಹೆಚ್ಚಿನ ನಿರೀಕ್ಷೆ ಇರಿಸಿಕೊಳ್ಳಲಾಗಿದೆ.

ಲೆಗ್‌ ಬ್ರೇಕ್‌ ಬೌಲರ್‌ ಮಾಯಾಂಕ್‌ ಮಾರ್ಕಂಡೆ ಈ ತಂಡದ ಹೊಸ ಮುಖ. ಲೆಗ್ಗಿ ಯಜುವೇಂದ್ರ ಚಾಹಲ್‌ಗೆ ಇವರು ಜತೆ ನೀಡುವರೇ ಎಂಬುದನ್ನು ಕಾದು ನೋಡಬೇಕು. ವೇಗದ ಬೌಲಿಂಗ್‌ ವಿಭಾಗದಲ್ಲಿ ಉಮೇಶ್‌ ಯಾದವ್‌ ಕಾಣಿಸಿಕೊಂಡಿರುವುದೊಂದು ಅಚ್ಚರಿ. ಆದರೆ ವಿಶ್ರಾಂತಿ ಯಲ್ಲಿದ್ದ ಜಸ್‌ಪ್ರೀತ್‌ ಬುಮ್ರಾ ಮರಳಿರುವುದರಿಂದ ಭಾರತದ ಬೌಲಿಂಗ್‌ನಲ್ಲಿ ವೈವಿಧ್ಯವನ್ನು ಕಾಣಬಹುದು.

ಅಗ್ರ ಕ್ರಮಾಂಕ ಬಲಿಷ್ಠ 
ಆಸೀಸ್‌ ಪ್ರವಾಸದ ನಡುವಲ್ಲಿ ವಿಶ್ರಾಂತಿಗೆ ತೆರಳಿದ್ದ ವಿರಾಟ್‌ ಕೊಹ್ಲಿ ಮರಳಿ ತಂಡದ ಸಾರಥ್ಯ ವಹಿಸಲಿದ್ದಾರೆ. ಹೀಗಾಗಿ ಭಾರತದ ಅಗ್ರ ಕ್ರಮಾಂಕದ ಬ್ಯಾಟಿಂಗ್‌ ಬಗ್ಗೆ ಚಿಂತೆ ಇಲ್ಲ. 2018ರ 38 ಅಂತಾರಾಷ್ಟ್ರೀಯ ಪಂದ್ಯಗಳಿಂದ 2,735 ರನ್‌ ಪೇರಿಸಿರುವ ದಾಖಲೆ ಕೊಹ್ಲಿ ಹೆಸರಲ್ಲಿದೆ. ಆದರೆ ಮಧ್ಯಮ ಕ್ರಮಾಂಕದಲ್ಲಿ ಯಾರನ್ನು ಆಡಿಸಬೇಕು ಎಂಬ ಪ್ರಶ್ನೆ ತುಸು ಜಟಿಲಗೊಂಡಿದೆ. ಇಲ್ಲಿ ರೇಸ್‌ನಲ್ಲಿರುವವರೆಂದರೆ ಏಕದಿನದಿಂದ ಬೇರ್ಪಟ್ಟಿರುವ ದಿನೇಶ್‌ ಕಾರ್ತಿಕ್‌ ಮತ್ತು ತಂಡಕ್ಕೆ ವಾಪಸಾದ ಕೆ.ಎಲ್‌. ರಾಹುಲ್‌.

Advertisement

ಮೆಲ್ಬರ್ನ್ ರೆನೆಗೇಡ್ಸ್‌ ತಂಡ 
ಆರನ್‌ ಫಿಂಚ್‌ ನೇತೃತ್ವದಲ್ಲಿ ಕಣಕ್ಕಿಳಿಯಲಿರುವ ಆಸ್ಟ್ರೇಲಿಯ ತಂಡ ಎಂದಿಗಿಂತ ಹೆಚ್ಚಿನ ಉತ್ಸಾಹ ದಲ್ಲಿದೆ. ಕಾರಣ, ಕಳೆದ ವಾರವಷ್ಟೇ “ಬಿಗ್‌ ಬಾಶ್‌ ಲೀಗ್‌’ ಚಾಂಪಿಯನ್‌ ಎನಿಸಿಕೊಂಡ ಮೆಲ್ಬರ್ನ್ ರೆನೆಗೇಡ್ಸ್‌ ತಂಡಕ್ಕೆ ಫಿಂಚ್‌ ಅವರೇ ನಾಯಕರಾಗಿದ್ದರು. ಈ ತಂಡದ 6 ಮಂದಿ ಕ್ರಿಕೆಟಿಗರು ಆಸೀಸ್‌ ಟಿ20 ತಂಡದಲ್ಲಿದ್ದಾರೆ. 

ಸರಣಿಶ್ರೇಷ್ಠ ಆಟಗಾರ ಡಿ’ಆರ್ಸಿ ಶಾರ್ಟ್‌ ತಂಡದ ಅತ್ಯಂತ ಅಪಾಯಕಾರಿ ಆಟಗಾರ. ಹೋಬರ್ಟ್‌ ಹರಿಕೇನ್ಸ್‌ ಪರ ಆಡಿದ ಈ ಎಡಗೈ ಓಪನರ್‌, 140.67ರ ಸ್ಟ್ರೈಕ್‌ರೇಟ್‌ನಲ್ಲಿ 637 ರನ್‌ ಪೇರಿಸಿದ್ದಾರೆ. ಬಿಗ್‌ ಬಾಶ್‌ನಲ್ಲಿ ಅತ್ಯಧಿಕ 24 ವಿಕೆಟ್‌ ಕಿತ್ತ ಕೇನ್‌ ರಿಚರ್ಡ್‌ಸನ್‌ ಆಸೀಸ್‌ ತಂಡದ ಪ್ರಧಾನ ಬೌಲಿಂಗ್‌ ಅಸ್ತ್ರವಾಗಿದ್ದಾರೆ.

ಭಾರತ: ಶಿಖರ್‌ ಧವನ್‌, ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ (ನಾಯಕ), ದಿನೇಶ್‌ ಕಾರ್ತಿಕ್‌/ಕೆ.ಎಲ್‌. ರಾಹುಲ್‌, ಮಹೇಂದ್ರ ಸಿಂಗ್‌ ಧೋನಿ, ರಿಷಭ್‌ ಪಂತ್‌, ವಿಜಯ್‌ ಶಂಕರ್‌, ಕೃಣಾಲ್‌ ಪಾಂಡ್ಯ, ಉಮೇಶ್‌ ಯಾದವ್‌, ಯಜುವೇಂದ್ರ ಚಾಹಲ್‌, ಜಸ್‌ಪ್ರೀತ್‌ ಬುಮ್ರಾ.

ಆಸ್ಟ್ರೇಲಿಯ: ಆರನ್‌ ಫಿಂಚ್‌ (ನಾಯಕ), ಡಿ’ಆರ್ಸಿ ಶಾರ್ಟ್‌, ಪೀಟರ್‌ ಹ್ಯಾಂಡ್ಸ್‌ಕಾಂಬ್‌, 
ಮಾರ್ಕಸ್‌ ಸ್ಟೋಯಿನಿಸ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಆ್ಯಶrನ್‌ ಟರ್ನರ್‌, ಅಲೆಕ್ಸ್‌ ಕ್ಯಾರಿ, ನಥನ್‌ ಕೋಲ್ಟರ್‌ ನೈಲ್‌, ಪ್ಯಾಟ್‌ ಕಮಿನ್ಸ್‌, ಆ್ಯಡಂ ಝಂಪ, ಕೇನ್‌ ರಿಚರ್ಡ್‌ಸನ್‌

 ಆರಂಭ: ಸಂಜೆ 7.00
 ಪ್ರಸಾರ: ಸ್ಟಾರ್‌ ನ್ಪೋರ್ಟ್ಸ್

Advertisement

Udayavani is now on Telegram. Click here to join our channel and stay updated with the latest news.

Next