Advertisement

T20; ಆಸ್ಟ್ರೇಲಿಯ ಎದುರು ಭಾರತಕ್ಕೆ ಭರ್ಜರಿ ಗೆಲುವು:ಸಾಧು, ಮಂಧನಾ, ಶಫಾಲಿ ಸಾಹಸ

11:24 PM Jan 05, 2024 | Team Udayavani |

ಮುಂಬಯಿ: ಬೌಲರ್‌ ತಿತಾಸ್‌ ಸಾಧು, ಆರಂಭಿಕರಾದ ಸ್ಮತಿ ಮಂಧನಾ ಮತ್ತು ಶಫಾಲಿ ವರ್ಮ ಅವರ ಅಮೋಘ ಸಾಹಸದಿಂದ ಆಸ್ಟ್ರೇಲಿಯ ಎದುರಿನ ಮೊದಲ ಟಿ20 ಪಂದ್ಯದಲ್ಲಿ ಭಾರತ 9 ವಿಕೆಟ್‌ಗಳ ಪ್ರಚಂಡ ಗೆಲುವು ಸಾಧಿಸಿದೆ. ಏಕದಿನದಲ್ಲಿ ಅನುಭವಿಸಿದ ವೈಟ್‌ವಾಶ್‌ಗೆ ಸೇಡು ತೀರಿಸಿಕೊಳ್ಳುವ ಸೂಚನೆ ನೀಡಿದೆ.
ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆಸ್ಟ್ರೇಲಿಯ 19.2 ಓವರ್‌ಗಳಲ್ಲಿ 141 ರನ್‌ ಗಳಿಸಿದರೆ, ಭಾರತ 17.4 ಓವರ್‌ಗಳಲ್ಲಿ ಒಂದೇ ವಿಕೆಟಿಗೆ 145 ರನ್‌ ಬಾರಿಸಿ ಜಯಭೇರಿ ಮೊಳಗಿಸಿತು.

Advertisement

ಸ್ಮತಿ ಮಂಧನಾ ಮತ್ತು ಶಫಾಲಿ ವರ್ಮ 15.2 ಓವರ್‌ಗಳಲ್ಲಿ 137 ರನ್‌ ಪೇರಿಸಿ ಭಾರತದ ಗೆಲುವನ್ನು ಸುಲಭಗೊಳಿಸಿದರು. ಮಂಧನಾ 52 ಎಸೆತಗಳಿಂದ 54 ರನ್‌ ಹೊಡೆದರೆ (7 ಬೌಂಡರಿ, 1 ಸಿಕ್ಸರ್‌), ಶಫಾಲಿ 64 ರನ್‌ ಬಾರಿಸಿ ಅಜೇಯರಾಗಿ ಉಳಿದರು. 44 ಎಸೆತಗಳ ಈ ಬಿರುಸಿನ ಆಟದ ವೇಳೆ 6 ಬೌಂಡರಿ ಹಾಗೂ 3 ಸಿಕ್ಸರ್‌ ಸಿಡಿಸಿದರು.

ಸಾಧು ಶ್ರೇಷ್ಠ ಬೌಲಿಂಗ್‌
ಆಸ್ಟ್ರೇಲಿಯದ ಆಲೌಟ್‌ನಲ್ಲಿ ತಿತಾಸ್‌ ಸಾಧು ಅವರ ಜೀವನಶ್ರೇಷ್ಠ ಬೌಲಿಂಗ್‌ ಪಾತ್ರ ಪ್ರಮುಖವಾಗಿತ್ತು. 19 ವರ್ಷದ, ಬಲಗೈ ಪೇಸ್‌ ಬೌಲರ್‌ ಆಗಿರುವ ಸಾಧು 17 ರನ್‌ ವೆಚ್ಚದಲ್ಲಿ 4 ವಿಕೆಟ್‌ ಉಡಾಯಿಸಿದರು. ಉಳಿದಂತೆ ಶ್ರೇಯಾಂಕಾ ಪಾಟೀಲ್‌ ಮತ್ತು ದೀಪ್ತಿ ಶರ್ಮ ತಲಾ 2, ರೇಣುಕಾ ಸಿಂಗ್‌ ಮತ್ತು ಅಮಮನ್‌ಜೋತ್‌ ಕೌರ್‌ ಒಂದೊಂದು ವಿಕೆಟ್‌ ಕೆಡವಿದರು.

ಸಾಧು ಬೌಲಿಂಗ್‌ ಮೋಡಿಗೆ ಸಿಲುಕಿದವರೆಂದರೆ ಬೆತ್‌ ಮೂನಿ (17), ಟಹ್ಲಿಯಾ ಮೆಕ್‌ಗ್ರಾತ್‌ (0), ಆ್ಯಶ್ಲಿ ಗಾರ್ಡನರ್‌ (0) ಮತ್ತು ಸದರ್‌ಲ್ಯಾಂಡ್‌ (12).ಎಂದಿನಂತೆ ಫೋಬ್‌ ಲಿಚ್‌ಫೀಲ್ಡ್‌ ಮತ್ತು ಎಲ್ಲಿಸ್‌ ಪೆರ್ರಿ ಆಸ್ಟ್ರೇಲಿಯದ ರಕ್ಷಣೆಗೆ ನಿಂತರು. 32 ಎಸೆತಗಳಿಂದ 49 ರನ್‌ ಬಾರಿಸಿದ ಲಿಚ್‌ಫೀಲ್ಡ್‌ ಆಸೀಸ್‌ ಸರದಿಯ ಟಾಪ್‌ ಸ್ಕೋರರ್‌. ಸಿಡಿಸಿದ್ದು 4 ಬೌಂಡರಿ ಹಾಗೂ 3 ಸಿಕ್ಸರ್‌. ಆದರೆ ಲಿಚ್‌ಫೀಲ್ಡ್‌ ಇಲ್ಲಿ ಓಪನಿಂಗ್‌ ಬದಲು 6ನೇ ಕ್ರಮಾಂಕದಲ್ಲಿ ಆಡಲಿಳಿದಿದ್ದರು.ಪೆರ್ರಿ 30 ಎಸೆತಗಳಿಂದ 37 ರನ್‌ ಹೊಡೆದರು. ಇದರಲ್ಲಿ 2 ಫೋರ್‌, 2 ಸಿಕ್ಸರ್‌ ಸೇರಿತ್ತು.

ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯ-19.2 ಓವರ್‌ಗಳಲ್ಲಿ 141 (ಲಿಚ್‌ಫೀಲ್ಡ್‌ 49, ಪೆರ್ರಿ 37, ಮೂನಿ 17, ಸಾಧು 17ಕ್ಕೆ 4, ಶ್ರೇಯಾಂಕಾ 19ಕ್ಕೆ 2, ದೀಪ್ತಿ 24ಕ್ಕೆ 2). ಭಾರತ-17.4 ಓವರ್‌ಗಳಲ್ಲಿ ಒಂದು ವಿಕೆಟಿಗೆ 145 (ಶಫಾಲಿ ಔಟಾಗದೆ 64, ಮಂಧನಾ 54, ವೇರ್‌ಹ್ಯಾಮ್‌ 20ಕ್ಕೆ 1).

Advertisement
Advertisement

Udayavani is now on Telegram. Click here to join our channel and stay updated with the latest news.

Next