Advertisement
ಆಗ ಉಪಪ್ರಧಾನಿ ಮತ್ತು ವಿತ್ತ ಸಚಿವರಾಗಿದ್ದ ಮೊರಾರ್ಜಿ ದೇಸಾಯಿ ಅವರು ಸೌತ್ ಬ್ಲಾಕ್‌ನಲ್ಲಿದ್ದ ತಮ್ಮ ಕಚೇರಿಗೆ ನನ್ನನ್ನು ಕರೆಸಿಕೊಂಡು ಬ್ಯಾಂಕ್‌ಗಳ ಸಾಮಾಜಿಕ ನಿಯಂತ್ರಣ ಸಂಬಂಧ ಏಕಸದಸ್ಯ ಆಯೋಗವನ್ನಾಗಿ ನೇಮಿಸಿದರು. ಅದಕ್ಕೂ ಹಿಂದೆ ಮುನ್ನ ಒಂದನೇ ಆಡಳಿತಾತ್ಮಕ ಸುಧಾರಣ ಆಯೋಗದಲ್ಲಿ ನಾನು ದೇಸಾಯಿ ಅವರೊಂದಿಗೆ ಕೆಲಸ ಮಾಡಿದ್ದೆ. ಆಗಿನ ವಿತ್ತ ಕಾರ್ಯದರ್ಶಿ ಡಾ| ಐ.ಜಿ. ಪಟೇಲ್ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್‌ನ ಗವರ್ನರ್ ಎಲ್.ಕೆ. ಝಾ ಜತೆ ನಿಕಟವಾಗಿ ಕೆಲಸ ಮಾಡಿದೆ.
ಪೈಗಳು ಸಣ್ಣ ರೈತರು, ಮೀನುಗಾರರು, ಮಹಿಳೆಯರು ಮುಂತಾದವರಿಗೆ ಸಾಲ ನೀಡುತ್ತಿದ್ದರು. ಆಗ ಬಾಂಬೆಯ ಬ್ಯಾಂಕರ್‌ಗಳು ಅದನ್ನು “ಅನಪೇಕ್ಷಿತ’ ಬ್ಯಾಂಕಿಂಗ್ ಎಂಬುದಾಗಿ ಪರಿಗಣಿಸಿದ್ದರು. ನಾವು ಅದನ್ನು “ಸಾಮಾಜಿಕ ಬ್ಯಾಂಕಿಂಗ್’ ಎಂದು ವ್ಯಾಖ್ಯಾನಿಸಿದ್ದೆವು.
Related Articles
Advertisement
ನನ್ನ ವರದಿಯನ್ನು ತಯಾರಿಸಿ ಮೊರಾರ್ಜಿ ದೇಸಾಯಿ ಅವರಿಗೆ ಸಲ್ಲಿಸಿದಾಗ ಅದು ಸ್ವೀಕೃತ ವಾಯಿತು. ಪ್ರಧಾನಿ ಇಂದಿರಾ ಗಾಂಧಿ 1969ರಲ್ಲಿ 14 ಖಾಸಗಿ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣಗೊಳಿಸುವವರೆಗೆ ಅನುಸರಣೆಯಾಯಿತು.“ಸಾಲವನ್ನು ಅಭಿವೃದ್ಧಿಯ ಪ್ರಧಾನ ಸಾಧನವನ್ನಾಗಿ ಮಾಡಬೇಕು’ ಎಂಬುದು ನನ್ನ ವರದಿಯ ಬಹುಮುಖ್ಯ ಶಿಫಾರಸು ಆಗಿತ್ತು. ಇದರಿಂದಾಗಿ ನ್ಯಾಶನಲ್ ಕ್ರೆಡಿಟ್ ಕೌನ್ಸಿಲ್ ಸ್ಥಾಪನೆಯಾಯಿತು. “ಬ್ಯಾಂಕ್ ಸಾಲ ವಿತರಣೆಯಲ್ಲಿ ರಾಜಕೀಯ ಹಸ್ತಕ್ಷೇಪ ನುಸುಳುವುದು ನಿಶ್ಚಿತ’ ಎಂಬ ಕಳವಳದಿಂದಾಗಿ ಬ್ಯಾಂಕ್ ರಾಷ್ಟ್ರೀಕರಣದ ಬಗ್ಗೆ ನಾನು ಗಂಭೀರ ತಕರಾರು ಎತ್ತಿದ್ದೆ. 1969ರ ಬಳಿಕ ಭಾರತೀಯ ಬ್ಯಾಂಕಿಂಗ್ ಇತಿಹಾಸದಲ್ಲಿ ನಡೆದದ್ದು ನಿಸ್ಸಂಶಯವಾಗಿ ಇದುವೇ-ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲ ವಿತರಣೆ ಚಟುವಟಿಕೆಯಲ್ಲಿ ರಾಜಕೀಯ ಹಸ್ತಕ್ಷೇಪದ ಪ್ರವೇಶವಾಯಿತು. 1977ರಲ್ಲಿ ಆಗಿನ ಪ್ರಧಾನಿ ಮೊರಾರ್ಜಿ ದೇಸಾಯಿಯವರುನನ್ನನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸೆಂಟ್ರಲ್ ಬೋರ್ಡ್‌ಗೆ ನಾಮನಿರ್ದೇಶನ ಮಾಡಿದರು. 1981ರಲ್ಲಿ ಇಂದಿರಾ ಗಾಂಧಿ ಮತ್ತೆ ಪ್ರಧಾನಿಯಾದರು. ಆಗ ಪ್ರಧಾನಮಂತ್ರಿಗಳ ಕಚೇರಿಯಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮೇಲೆ ಸಾಲ ವಿತರಣೆಯ ವಿಚಾರವಾಗಿ ಎಷ್ಟರ ಮಟ್ಟಿನ ಒತ್ತಡ ಇತ್ತು ಎಂಬುದನ್ನು ಪ್ರತ್ಯಕ್ಷವಾಗಿ ಕಂಡಿದ್ದೇನೆ. ಅದನ್ನು “ರಾಜಕೀಯ ಹಸ್ತಕ್ಷೇಪವುಳ್ಳ ಸಾಲ ವಿತರಣೆ’ ಎಂಬುದಾಗಿ ವ್ಯಾಖ್ಯಾನಿಸುತ್ತೇನೆ. ಹಲವು ಬ್ಯಾಂಕ್‌ಗಳಲ್ಲಿ ಇಂದಿಗೂ ಇದು ನಡೆಯುತ್ತಿದೆ. ದೇಶದ ಪ್ರಧಾನಿ ಹುದ್ದೆಗೇರಿದ ಓರ್ವ ನಾಯಕರು ನನ್ನಬಳಿ ಖಾಸಗಿಯಾಗಿ ಬ್ಯಾಂಕ್‌ಗಳ ರಾಷ್ಟ್ರೀಕರಣ “ಒಂದು ಮಹಾ ಪ್ರಮಾದ’ ಎಂದು ಹೇಳಿಕೊಂಡಿದ್ದರು. ಸಿಂಡಿಕೇಟ್ ಬ್ಯಾಂಕಿನ ಸಹಿತ ಬ್ಯಾಂಕ್‌ಗಳ ರಾಷ್ಟ್ರೀಕರಣದ ಬಳಿಕ ಟಿ.ಎ. ಪೈ ಅವರನ್ನು 1970ರಲ್ಲಿ ಭಾರತೀಯ ಜೀವವಿಮಾ ನಿಗಮದ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಅಲ್ಲಿ ಅವರು ಅನೇಕ ಹೊಸ ಪ್ರಾಮುಖ್ಯ ಚಟುವಟಿಕೆ ಗಳನ್ನು ಆರಂಭಿಸಿದರು. 1972ರಲ್ಲಿ ಅವರು ರಾಜ್ಯಸಭೆಗೆ ಚುನಾಯಿತರಾಗಿ ರೈಲ್ವೇ ಸಚಿವರಾದರು. ತನಗೊದಗಿದ ಈ ಹೊಸ ಅವಕಾಶವನ್ನು ಸದುಪ ಯೋಗಪಡಿಸಿಕೊಂಡು ಕೇರಳ, ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ಗಳನ್ನು ದಿಲ್ಲಿಯ ಜತೆಗೆ ಸಂಪರ್ಕಿಸುವ ರೈಲು ಮಾರ್ಗ ಆರಂಭಿಸಲು ಪೂರ್ವಭಾವಿ ಚಿಂತನೆ ನಡೆಸಿದ್ದರು. ವ್ಯೂಹಾತ್ಮಕ ಮತ್ತು ಸಾಮಾಜಿಕವಾಗಿ ಈ ಮಾರ್ಗ ಅತ್ಯಂತ ಉಪಯುಕ್ತ ಎಂದಿದ್ದರು. ಟಿ.ಎ. ಪೈ ಅವರು ಘನ ಉದ್ದಿಮೆಗಳ ಕ್ಯಾಬಿನೆಟ್ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. 1974ರಲ್ಲಿ ಉದ್ದಿಮೆಗಳು ಮತ್ತು ನಾಗರಿಕ ಸರಬರಾಜು ಸಚಿವರಾದರು. ಪ್ರತೀ ಖಾತೆಯಲ್ಲೂ ಅವರು ಭಾರತವನ್ನು ಹೊಸ ದಿಕ್ಕಿನೆಡೆಗೆ ಮುನ್ನಡೆಸಬಲ್ಲ ಮತ್ತು ಜನತೆಗೆ ಉತ್ಕೃಷ್ಣ ಸೇವೆಗಳು ಲಭ್ಯವಾಗಬಲ್ಲಂತಹ ಚಟುವಟಿಕೆಗಳನ್ನು ನಡೆಸಿದ್ದು ವಿಶೇಷ. ಟಿ.ಎ. ಪೈ ಅವರು ಓರ್ವ ಸೃಜನಶೀಲ ಮುತ್ಸದ್ದಿಯಷ್ಟೇ ಅಲ್ಲ; ನಿರ್ವಹಿಸಿದ ಎಲ್ಲ ಜವಾಬ್ದಾರಿಗಳಲ್ಲೂ ಕ್ರಿಯಾಶೀಲತೆಯ ಹೆಜ್ಜೆ ಗುರುತು ಮೂಡಿಸಿದವರು. ಹಲವು ಸಂಸ್ಥೆಗಳ ಸ್ಥಾಪನೆಯಲ್ಲಿ ಅವರ ಪ್ರತ್ಯಕ್ಷ ಮತ್ತು ಪರೋಕ್ಷ ಪಾತ್ರವಿದೆ. ಉದಾಹರಣೆಗೆ, ಮಣಿಪಾಲ ಮತ್ತು ಕರ್ನಾಟಕದಲ್ಲಿ ಆರಂಭಿಸಿದ ಸಂಸ್ಥೆಗಳನ್ನು ಹೊರತು
ಪಡಿಸಿ ಹೇಳುವುದಾದರೆ, ಹೊಸದಿಲ್ಲಿಯಲ್ಲಿ ಸೆಂಟರ್ ಫಾರ್ ಪಾಲಿಸಿ ರಿಸರ್ಚ್ (ಸಿಪಿಆರ್) ಆರಂಭಿಸುವಂತೆ ನಾನು ಅವರನ್ನು ಸಂಪರ್ಕಿಸಿದಾಗ ನನ್ನನ್ನು ಅದರ ಸ್ಥಾಪಕ ಅಧ್ಯಕ್ಷನನ್ನಾಗಿಸಿ, ತಾವು ಮಂಡಳಿಯ ಅಧ್ಯಕ್ಷರಾದರು. ಅವರ ನೀತಿ ಸಂಬಂಧಿ ಹೊಳಹು ಮತ್ತು ಆಲೋಚನೆಗಳಿಂದ ಸಿಪಿಆರ್‌ಗೆ ಪ್ರಯೋಜನವಾಗಿದೆ. ಟಿ.ಎ. ಪೈ ಅವರು ಎಲ್ಲ ಆಯಾಮಗಳಲ್ಲಿ ಭಾರತದ ಅತ್ಯಂತ ಕ್ರಿಯಾಶೀಲ ನಾಗರಿಕರಾಗಿದ್ದರು. ದೇಶದ ಒಬ್ಬ ನೈಜ ದೈತ್ಯ ಪ್ರತಿಭೆ. ಒಬ್ಬ ವ್ಯಕ್ತಿ ಒಂದು ಶಕ್ತಿಯಾಗಿ ರೂಪುಗೊಂಡಿದ್ದು ಹೇಗೆ ಎಂಬ ನೆಲೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಅಧ್ಯಯನಕ್ಕೆ ಒಳಗಾಗಬೇಕಾದ ವ್ಯಕ್ತಿ ಅವರು ಎಂದರೆ ಅತಿಶಯೋಕ್ತಿ ಅಲ್ಲ. -ಡಾ| ವಿಶ್ವನಾಥ ಎ. ಪೈ ಪಣಂದಿಕರ್
(ಮ್ಯಾನೇಜ್‌ಮೆಂಟ್
ತಜ್ಞರು, ಮಾಹೆ ಟ್ರಸ್ಟ್‌ನ ಮಾಜಿ ಟ್ರಸ್ಟಿ)