Advertisement

ಟಿ-20: ಕಾನ್ಪುರದಲ್ಲಿ ಇಂಗ್ಲೆಂಡ್‌ ಕಾರ್ಬಾರು

03:45 AM Jan 27, 2017 | Team Udayavani |

ಕಾನ್ಪುರ: ಟಿ-20 ಸರಣಿಯಲ್ಲಿ ಪ್ರವಾಸಿ ಇಂಗ್ಲೆಂಡ್‌ ಗೆಲುವಿನ ಆರಂಭ ಕಂಡುಕೊಂಡಿದೆ. ಕಾನ್ಪುರದ ಗ್ರೀನ್‌ಪಾರ್ಕ್‌ ಸ್ಟೇಡಿಯಂನಲ್ಲಿ ಗುರುವಾರ ನಡೆದ ಮೊದಲ ಮುಖಾಮುಖೀಯಲ್ಲಿ ಮಾರ್ಗನ್‌ ಬಳಗ 7 ವಿಕೆಟ್‌ಗಳ ಜಯ ಸಾಧಿಸಿದೆ. ಇದು ಕಾನ್ಪುರದಲ್ಲಿ ನಡೆದ ಮೊದಲ ಟಿ-20 ಅಂತಾರಾಷ್ಟ್ರೀಯ ಪಂದ್ಯವಾಗಿತ್ತು.

Advertisement

ಟೆಸ್ಟ್‌ ಹಾಗೂ ಏಕದಿನದಲ್ಲಿ ಸರಣಿ ಸೋಲನುಭವಿ ಸಿದ ಇಂಗ್ಲೆಂಡ್‌ ಚುಟುಕು ಕ್ರಿಕೆಟಿಗೆ ಸ್ಪೆಷಲಿಸ್ಟ್‌ ಆಟಗಾರರ ತಂಡವನ್ನೇ ಕಟ್ಟಿಕೊಂಡು ಕಣಕ್ಕಿಳಿದಿತ್ತು. ಇವರೆಲ್ಲರೂ ಸರ್ವಾಂಗೀಣ ಪ್ರದರ್ಶನ ನೀಡಿ ತಂಡದ ಗೆಲುವಿಗೆ ಕಾರಣರಾದರು. ಬ್ಯಾಟಿಂಗಿಗೆ ಇಳಿಸಲ್ಪಟ್ಟ ಭಾರತ 7 ವಿಕೆಟಿಗೆ 147ರನ್‌ ಪೇರಿಸಿದರೆ, ಮುನ್ನುಗ್ಗಿ ಬಾರಿಸತೊಡಗಿದ ಇಂಗ್ಲೆಂಡ್‌ 18.1 ಓವರ್‌ಗಳಲ್ಲಿ 3 ವಿಕೆಟಿಗೆ 148 ರನ್‌ ಮಾಡಿ ಗೆದ್ದು ಬಂದಿತು.

ಮಾರ್ಗನ್‌ ಕಪ್ತಾನನ ಆಟ
ಇಂಗ್ಲೆಂಡ್‌ ಪರ ನಾಯಕ ಎವೋನ್‌ ಮಾರ್ಗನ್‌ 51 ರನ್‌ ಬಾರಿಸಿ ಕಪ್ತಾನನ ಆಟವಾಡಿದರು. ಪಂದ್ಯದ ಈ ಏಕೈಕ ಅರ್ಧ ಶತಕ 38 ಎಸೆತಗಳಿಂದ ಬಂತು. ಸಿಡಿಸಿದ್ದು 4 ಸಿಕ್ಸರ್‌ ಹಾಗೂ ಒಂದು ಬೌಂಡರಿ. ಈ ಬ್ಯಾಟಿಂಗ್‌ ಅಬ್ಬರದ ವೇಳೆ ಅವರು ಟಿ-20ಯಲ್ಲಿ ಒಂದೂವರೆ ಸಾವಿರ ರನ್‌ ಪೂರ್ತಿಗೊಳಿಸಿದ ಇಂಗ್ಲೆಂಡಿನ ಮೊದಲ, ವಿಶ್ವದ 12ನೇ ಬ್ಯಾಟ್ಸ್‌ಮನ್‌ ಎನಿಸಿದರು.

ಜಾಸನ್‌ ರಾಯ್‌-ಸ್ಯಾಮ್‌ ಬಿಲ್ಲಿಂಗ್ಸ್‌ ಜೋಡಿಯ ಪ್ರಚಂಡ ಆರಂಭ ಇಂಗ್ಲೆಂಡ್‌ ಹಾದಿಯನ್ನು ಸುಗಮಗೊಳಿಸಿತು. ಇವರು ಕೇವಲ 3.2 ಓವರ್‌ಗಳಿಂದ 42 ರನ್‌ ಚಚ್ಚಿದರು. ಚಾಹಲ್‌ ಒಂದೇ ಓವರಿನಲ್ಲಿ ಇವರಿಬ್ಬರನ್ನೂ ಪೆವಿಲಿಯನ್ನಿಗೆ ಅಟ್ಟಿದರೂ ಲಾಭವೇನೂ ಆಗಲಿಲ್ಲ. ಮಾರ್ಗನ್‌ ಕ್ರೀಸ್‌ ಆಕ್ರಮಿಸಿ ಕೊಂಡರು. ಜೋ ರೂಟ್‌ ಕೊನೆಯ ವರೆಗೂ ನಿಂತು ಎಸೆತಕ್ಕೊಂದರಂತೆ 45 ರನ್‌ ಬಾರಿಸಿದರು (4 ಬೌಂಡರಿ). ಗೆಲುವಿನ ರನ್‌ ಕೂಡ ರೂಟ್‌ ಬ್ಯಾಟಿನಿಂದಲೇ ಬಂತು.

ಇಂಗ್ಲೆಂಡ್‌ ಶಿಸ್ತಿನ ಬೌಲಿಂಗ್‌
ಭಾರತಕ್ಕೆ ಹೋಲಿಸಿದರೆ ಇಂಗ್ಲೆಂಡಿನ ಬೌಲಿಂಗ್‌ ದಾಳಿ ಹೆಚ್ಚು ಶಿಸ್ತಿನಿಂದ ಕೂಡಿತ್ತು. ಅಷ್ಟೇ ನಿಯಂತ್ರಣದಲ್ಲಿತ್ತು. ಎಲ್ಲ 5 ಮಂದಿ ವಿಕೆಟ್‌ ಬೇಟೆಯಾಡಿ ತಂಡದ ಸಾಂ ಕ ಬೌಲಿಂಗಿಗೆ ಸಾಕ್ಷಿಯಾದರು. ಅದರಲ್ಲೂ ಸ್ಪಿನ್ನರ್‌ ಮೊಯಿನ್‌ ಅಲಿ ಎಸೆತಗಳು ಭಾರತದ ಆಟಗಾರರಿಗೆ ಭಾರೀ ಸವಾಲೊಡ್ಡಿದವು. ಅಲಿ 4 ಓವರ್‌ಗಳಲ್ಲಿ ಕೇವಲ 21 ರನ್‌ ನೀಡಿ 2 ವಿಕೆಟ್‌ ಕಿತ್ತರು. ಅವರು ಟಿ-20 ಪಂದ್ಯವೊಂದರಲ್ಲಿ 2 ವಿಕೆಟ್‌ ಉರುಳಿಸುತ್ತಿರುವುದು ಇದು 3ನೇ ಸಲ. ಇದು ಜೀವನಶ್ರೇಷ್ಠ ಸಾಧನೆ.

Advertisement

ಉಳಿದಂತೆ ಮಿಲ್ಸ್‌, ಜೋರ್ಡನ್‌, ಪ್ಲಂಕೆಟ್‌ ಮತ್ತು ಸ್ಟೋಕ್ಸ್‌ ಒಂದೊಂದು ವಿಕೆಟ್‌ ಕೆಡವಿದರು. ಒಟ್ಟಾರೆ, ಭಾರತಕ್ಕೆ 20-25 ರನ್ನುಗಳ ಕೊರತೆ ಎದುರಾಗುವಂತೆ ನೋಡಿಕೊಳ್ಳುವಲ್ಲಿ ಆಂಗ್ಲ ಬೌಲರ್‌ಗಳು ಯಶಸ್ವಿಯಾಗಿದ್ದರು.

ಭಾರತದ ಸರದಿಯಲ್ಲಿ ಸಿಡಿದದ್ದು ಕೇವಲ 13 ಬೌಂಡರಿ ಹಾಗೂ ಒಂದು ಸಿಕ್ಸರ್‌ ಮಾತ್ರ. ಅದರಲ್ಲೂ ಕೊನೆಯ 10 ಓವರ್‌ಗಳಲ್ಲಿ ಬೌಂಡರಿ ಹೊಡೆತಗಳ ಮೂಲಕ ಬಂದದ್ದು ಬರೀ 22 ರನ್‌ (4 ಬೌಂಡರಿ, 1 ಸಿಕ್ಸರ್‌). ಭಾರತೀಯ ಇನ್ನಿಂಗ್ಸಿನ ಈ ಏಕೈಕ ಸಿಕ್ಸರ್‌ ಬಾರಿಸಿದವರು ಸುರೇಶ್‌ ರೈನಾ. ಇದಕ್ಕೆ ವ್ಯತಿರಿಕ್ತವೆಂಬಂತೆ, ಇಂಗ್ಲೆಂಡ್‌ ಆರಂಭಿಕರು ಮೊದಲ 3.1 ಓವರ್‌ಗಳಲ್ಲೇ 3 ಸಿಕ್ಸರ್‌ ಹಾಗೂ 3 ಬೌಂಡರಿ ಬಾರಿಸಿ ಭಾರತವನ್ನು ಬೆಚ್ಚಿ ಬೀಳಿಸಿದರು!

 ವಿರಾಟ್‌ ಕೊಹ್ಲಿ ಓಪನಿಂಗ್‌
ಬುಧವಾರ ನೀಡಿದ ಸುಳಿವಿನಂತೆ ನಾಯಕ ವಿರಾಟ್‌ ಕೊಹ್ಲಿ ಭಾರತದ ಇನ್ನಿಂಗ್ಸ್‌ ಆರಂಭಿಸಲು ಬಂದರು. ಕೊಹ್ಲಿ ಟಿ-20ಯಲ್ಲಿ ಓಪನಿಂಗ್‌ ಜವಾಬ್ದಾರಿ ನಿಭಾಯಿಸುತ್ತಿರುವುದು ಇದು ಕೇವಲ 3ನೇ ಸಲ, 2012ರ ಬಳಿಕ ಮೊದಲ ಸಲ. ಜತೆಯಲ್ಲಿದ್ದವರು ಕೆ.ಎಲ್‌. ರಾಹುಲ್‌. 4.3 ಓವರ್‌ ತನಕ ನಿಂತ ಕೊಹ್ಲಿ-ರಾಹುಲ್‌ 34 ರನ್‌ ಪೇರಿಸಿದರು. ಏಕದಿನ ದಂತೆ ಇಲ್ಲಿಯೂ ಬ್ಯಾಟಿಂಗ್‌ ವೈಫ‌ಲ್ಯ ಅನುಭವಿಸಿದ ರಾಹುಲ್‌ ಕೇವಲ 8 ರನ್‌ ಮಾಡಿ ನಿರ್ಗಮಿಸಿದರು.

ರೈನಾ ಆಕರ್ಷಕ ಆಟ
ಆರಂಭಿಕನ ಜವಾಬ್ದಾರಿಯನ್ನು ಉತ್ತಮ ರೀತಿ ಯಲ್ಲೇ ನಿಭಾಯಿಸಿದ ಕೊಹ್ಲಿ 26 ಎಸೆತಗಳಿಂದ 29 ರನ್‌ ಹೊಡೆದರು. ಇದರಲ್ಲಿ 4 ಬೌಂಡರಿ ಸೇರಿತ್ತು. ವನ್‌ಡೌನ್‌ನಲ್ಲಿ ಬಂದ ಸುರೇಶ್‌ ರೈನಾ ಆಕರ್ಷಕ ಆಟವನ್ನೇ ಆಡಿದರು. 23 ಎಸೆತಗಳಿಂದ 34 ರನ್‌ ಬಾರಿಸಿದರು (4 ಬೌಂಡರಿ, 1 ಸಿಕ್ಸರ್‌). ಆದರೆ ಯುವರಾಜ್‌ ಸಿಂಗ್‌ ಬ್ಯಾಟಿಂಗ್‌ ವಿಸ್ತರಿಸಲಿಲ್ಲ (13 ಎಸೆತ, 12 ರನ್‌, 1 ಬೌಂಡರಿ). ಮನೀಷ್‌ ಪಾಂಡೆ (3), ಹಾರ್ದಿಕ್‌ ಪಾಂಡ್ಯ (9) ಮತ್ತು ಮೊದಲ ಟಿ-20 ಅಂತಾರಾಷ್ಟ್ರೀಯ ಪಂದ್ಯವಾಡಿದ ಪರ್ವೇಜ್‌ ರಸೂಲ್‌ (5) ಬ್ಯಾಟಿಂಗ್‌ ವೈಫ‌ಲ್ಯ ಅನುಭವಿಸಿದರು. 

ಧೋನಿ ಟಾಪ್‌ ಸ್ಕೋರರ್‌
ಒಂದೆಡೆ ವಿಕೆಟ್‌ಗಳು ಉದುರುತ್ತಿದ್ದರೂ ಗಟ್ಟಿಯಾಗಿ ನಿಂತ ಮಹೇಂದ್ರ ಸಿಂಗ್‌ ಧೋನಿ 27 ಎಸೆತಗಳಿಂದ ಅಜೇಯ 36 ರನ್‌ ಮಾಡಿ ಭಾರತದ ಟಾಪ್‌ ಸ್ಕೋರರ್‌ ಎನಿಸಿದರು. ಆದರೆ ಹೊಡೆದದ್ದು 3 ಬೌಂಡರಿ ಮಾತ್ರ. ಇದರಲ್ಲಿ 2 ಬೌಂಡರಿ ಜೋರ್ಡನ್‌ ಎಸೆದ ಇನ್ನಿಂಗ್ಸಿನ ಕೊನೆಯ ಓವರಿನ ಸತತ ಎಸೆತಗಳಲ್ಲಿ ಬಂದಿತ್ತು. 

ಸರಣಿಯ 2ನೇ ಪಂದ್ಯ ಜ. 29ರಂದು ನಾಗ್ಪುರದಲ್ಲಿ ನಡೆಯಲಿದೆ.

ಸ್ಕೋರ್‌ ಪಟ್ಟಿ
ಭಾರತ

ವಿರಾಟ್‌ ಕೊಹ್ಲಿ    ಸಿ ಮಾರ್ಗನ್‌ ಬಿ ಅಲಿ    29
ಕೆ.ಎಲ್‌. ರಾಹುಲ್‌    ಸಿ ರಶೀದ್‌ ಬಿ ಜೋರ್ಡನ್‌    8
ಸುರೇಶ್‌ ರೈನಾ    ಬಿ ಸ್ಟೋಕ್ಸ್‌    34
ಯುವರಾಜ್‌ ಸಿಂಗ್‌    ಸಿ ರಶೀದ್‌ ಬಿ ಪ್ಲಂಕೆಟ್‌    12
ಎಂ.ಎಸ್‌. ಧೋನಿ    ಔಟಾಗದೆ    36
ಮನೀಷ್‌ ಪಾಂಡೆ    ಎಲ್‌ಬಿಡಬ್ಲ್ಯು ಅಲಿ    3
ಹಾರ್ದಿಕ್‌ ಪಾಂಡ್ಯ    ಸಿ ಬಿಲ್ಲಿಂಗ್ಸ್‌ ಬಿ ಮಿಲ್ಸ್‌    9
ಪರ್ವೇಜ್‌ ರಸೂಲ್‌    ರನೌಟ್‌    5
ಜಸ್‌ಪ್ರೀತ್‌ ಬುಮ್ರಾ    ಔಟಾಗದೆ    0

ಇತರ        11
ಒಟ್ಟು  (20 ಓವರ್‌ಗಳಲ್ಲಿ 7 ವಿಕೆಟಿಗೆ)    147

ವಿಕೆಟ್‌ ಪತನ: 1-34, 2-55, 3-75, 4-95, 5-98, 6-118, 7-145.
ಬೌಲಿಂಗ್‌:
ಟೈಮಲ್‌ ಮಿಲ್ಸ್‌    4-0-27-1
ಕ್ರಿಸ್‌ ಜೋರ್ಡನ್‌        4-0-27-1
ಲಿಯಮ್‌ ಪ್ಲಂಕೆಟ್‌        4-0-32-1
ಬೆನ್‌ ಸ್ಟೋಕ್ಸ್‌        4-0-37-1
ಮೊಯಿನ್‌ ಆಲಿ        4-0-21-2

ಇಂಗ್ಲೆಂಡ್‌
ಜಾಸನ್‌ ರಾಯ್‌    ಬಿ ಚಾಹಲ್‌    19
ಸ್ಯಾಮ್‌ ಬಿಲ್ಲಿಂಗ್ಸ್‌    ಬಿ ಚಾಹಲ್‌    22
ಜೋ ರೂಟ್‌    ಔಟಾಗದೆ    46
ಎವೋನ್‌ ಮಾರ್ಗನ್‌    ಸಿ ರೈನಾ ಬಿ ರಸೂಲ್‌    51
ಬೆನ್‌ ಸ್ಟೋಕ್ಸ್‌    ಔಟಾಗದೆ    2

ಇತರ        8
ಒಟ್ಟು  (18.1 ಓವರ್‌ಗಳಲ್ಲಿ 3 ವಿಕೆಟಿಗೆ)    148
ವಿಕೆಟ್‌ ಪತನ: 1-42, 2-43, 3-126.

ಬೌಲಿಂಗ್‌: ಆಶಿಷ್‌ ನೆಹ್ರಾ    3-0-31-0
ಜಸ್‌ಪ್ರೀತ್‌ ಬುಮ್ರಾ        3.1-0-26-0
ಯಜ್ವೇಂದ್ರ ಚಾಹಲ್‌        4-0-27-2
ಪರ್ವೇಜ್‌ ರಸೂಲ್‌        4-0-32-1
ಸುರೇಶ್‌ ರೈನಾ        2-0-17-0
ಹಾರ್ದಿಕ್‌ ಪಾಂಡ್ಯ        2-0-12-0
ಪಂದ್ಯಶ್ರೇಷ್ಠ: ಮೊಯಿನ್‌ ಅಲಿ

Advertisement

Udayavani is now on Telegram. Click here to join our channel and stay updated with the latest news.

Next