Advertisement

ಕೊಹ್ಲಿ ಪಡೆಗೆ ಗುದ್ದಿದ ಕಾಂಗರೂ

12:44 AM Feb 25, 2019 | |

ವಿಶಾಖಟ್ಟಣ: ಮ್ಯಾಕ್ಸ್‌ವೆಲ್‌ (56 ರನ್‌) ಅರ್ಧಶತಕ ಹಾಗೂ ನಥನ್‌ ಕಲ್ಟರ್‌ ನೈಲ್‌ ಭರ್ಜರಿ ಬೌಲಿಂಗ್‌ ಪ್ರದರ್ಶನದಿಂದ ಭಾರತ ವಿರುದ್ಧ ಪ್ರವಾಸಿ ಆಸ್ಟ್ರೇಲಿಯ ಎರಡು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ರೋಚಕ 3 ವಿಕೆಟ್‌ ಗೆಲುವು ಸಾಧಿಸಿದೆ.

Advertisement

ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ಕೆ.ಎಲ್‌.ರಾಹುಲ್‌ (50 ರನ್‌) ಏಕಾಂಗಿ ಅರ್ಧಶತಕ ನೆರವಿನಿಂದ ನೂರು ರನ್‌ ಗಡಿ ದಾಟಿತು. ಈ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯ ಆರಂಭದಲ್ಲೇ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಬೌಲರ್‌ ಗಳಾದ ಜಸ್‌ಪ್ರೀತ್‌ ಬುಮ್ರಾ, ಯಜುವೇಂದ್ರ ಚಾಹಲ್‌ ಹಾಗೂ ಕೃಣಾಲ್‌ ಪಾಂಡ್ಯ ಆಸೀಸ್‌ ಬ್ಯಾಟ್ಸ್‌ಮನ್‌ಗಳಿಗೆ ಅಪಾಯಕಾರಿಯಾದರು. ಕೊನೆಯ ಎರಡು ಓವರ್‌ಗಳ ವೇಳೆ ಗೆಲುವು ಭಾರತದ ಕಡೆ ವಾಲಿತ್ತು. ಆಸೀಸ್‌ಗೆ 6 ಎಸೆತಗಳ ಮುಂದೆ 14 ರನ್‌ ಅವಶ್ಯಕತೆ ಇತ್ತು. ಈ ವೇಳೆ ಉಮೇಶ್‌ ಯಾದವ್‌ ಎರಡು ಬೌಂಡರಿ ಬಿಟ್ಟುಕೊಟ್ಟರು, ಇದರಿಂದಾಗಿ ಭಾರತ ಸೋಲು ಅನುಭವಿಸುವಂತಾಯಿತು. ಕೊನೆಯ ಹಂತದಲ್ಲಿಪ್ಯಾಟ್‌ ಕಮಿನ್ಸ್‌ (ಅಜೇಯ 7 ರನ್‌) ಹಾಗೂ ರಿಚರ್ಡ್‌ಸನ್‌ (ಅಜೇಯ 4 ರನ್‌) ಸಾಹಸಮಯ ಆಟ ಪ್ರದರ್ಶಿಸಿ ರೋಚಕ ಗೆಲುವಿನ ರೂವಾರಿಗಳಾದರು. ಆಸೀಸ್‌ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಮುಂದಿನ ಪಂದ್ಯ ಗೆದ್ದರಷ್ಟೇ ಭಾರತ ಸರಣಿ ಸಮ ಸಾಧಿಸಲಿದೆ.

ಭಾರತೀಯರ ರನ್‌ ಬರಗಾಲ: ಭಾರೀ ನಿರೀಕ್ಷೆ ಮೂಡಿಸಿದ ಈ ಟಿ20 ಪಂದ್ಯದಲ್ಲಿ ಭಾರತದ ಬ್ಯಾಟಿಂಗ್‌ ನಿರೀಕ್ಷಿತ ಮಟ್ಟದಲ್ಲಿ ಕ್ಲಿಕ್‌ ಆಗಲಿಲ್ಲ. ಆರಂಭದ 10 ಓವರ್‌ಗಳಲ್ಲಿ ರನ್‌ ಹರಿದು ಬಂದರೂ ಕೊನೆಯ 10 ಓವರ್‌ಗಳಲ್ಲಿ ತೀವ್ರ ರನ್‌ ಬರಗಾಲ ಕಾಡಿತು.

ಮೊದಲ 10 ಓವರ್‌ ಮುಗಿದಾಗ ಭಾರತ 3 ವಿಕೆಟಿಗೆ 80 ರನ್‌ ಮಾಡಿತ್ತು. ಇದೇ ಲಯದಲ್ಲಿ ಸಾಗಿದರೆ 160 ರನ್ನಿಗೇನೂ ಕೊರತೆ ಇರಲಿಲ್ಲ. ಆದರೆ ದ್ವಿತೀಯಾರ್ಧದಲ್ಲಿ ಆಸೀಸ್‌ ಬೌಲಿಂಗ್‌ ದಾಳಿ ತೀವ್ರ ಗೊಂಡಿತು; ಭಾರತದ ಬ್ಯಾಟಿಂಗ್‌ ಕುಂಠಿತಗೊಂಡಿತು. ಈ ಅವಧಿಯಲ್ಲಿ ಅನುಭವಿ ಧೋನಿ ಕ್ರೀಸಿನಲ್ಲಿದ್ದರೂ ರನ್‌ ಹರಿದು ಬರಲಿಲ್ಲ. ಅಂತಿಮ 10 ಓವರ್‌ಗಳಲ್ಲಿ ಭಾರತ ಗಳಿಸಿದ್ದು 4 ವಿಕೆಟಿಗೆ 46 ರನ್‌ ಮಾತ್ರ!

ರಾಹುಲ್‌ ಅರ್ಧಶತಕ: ರೋಹಿತ್‌ ಶರ್ಮ ಕೇವಲ 5 ರನ್‌ ಮಾಡಿ ನಿರ್ಗಮಿಸಿದರೂ ಕೆ.ಎಲ್‌. ರಾಹುಲ್‌ ಒಂದೆಡೆ ಕ್ರೀಸ್‌ ಆಕ್ರಮಿಸಿಕೊಂಡು ಮುನ್ನುಗ್ಗತೊಡಗಿದರು. ಸಣ್ಣದೊಂದು ನಿಷೇಧದ ಬಳಿಕ ಟೀಮ್‌ ಇಂಡಿಯಾಕ್ಕೆ ಮರಳಿದ ಅವರು ಭರ್ತಿ 50 ರನ್‌ ಹೊಡೆದರು. ಇದು 26ನೇ ಟಿ20 ಪಂದ್ಯದಲ್ಲಿ ರಾಹುಲ್‌ ಬಾರಿಸಿದ 5ನೇ ಅರ್ಧಶತಕ, 36 ಎಸೆತ ಎದುರಿಸಿದ ರಾಹುಲ್‌ 6 ಬೌಂಡರಿ ಮತ್ತು ಒಂದು ಸಿಕ್ಸರ್‌ ಬಾರಿಸಿ ರಂಜಿಸಿದರು. ರಾಹುಲ್‌ 13ನೇ ಓವರ್‌ ತನಕ ಕ್ರೀಸಿನಲ್ಲಿದ್ದರು.

Advertisement

ಈ ನಡುವೆ ನಾಯಕ ವಿರಾಟ್‌ ಕೊಹ್ಲಿ ಭರವಸೆಯ ಆಟದ ಸೂಚನೆಯಿತ್ತರು. ಆದರೆ 24ರ ಆಚೆ ಅವರಿಗೆ ಇನ್ನಿಂಗ್ಸ್‌ ಬೆಳೆಸಲಾಗಲಿಲ್ಲ. 17 ಎಸೆತಗಳ ಈ ಇನ್ನಿಂಗ್ಸ್‌ನಲ್ಲಿ 3 ಬೌಂಡರಿ ಒಳಗೊಂಡಿತ್ತು. ರಿಷಭ್‌ ಪಂತ್‌ ಮೂರಕ್ಕೆ ರನೌಟಾದುದರಿಂದ ಭಾರತದ ರನ್‌ಗತಿಗೆ ಬ್ರೇಕ್‌ ಬಿತ್ತು. ದಿನೇಶ್‌ ಕಾರ್ತಿಕ್‌ ಮತ್ತು ಕೃಣಾಲ್‌ ಪಾಂಡ್ಯ ಅವರ ಕ್ಷಿಪ್ರ ಪತನ ಕೂಡ ಟೀಮ್‌ ಇಂಡಿಯಾಕ್ಕೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿತು. ಇವರಿಬ್ಬರೂ ಒಂದೇ ರನ್ನಿಗೆ ಆಟ ಮುಗಿಸಿದರು.

ಈ ಅವಧಿಯಲ್ಲಿ ಕ್ರೀಸಿನಲ್ಲಿದ್ದ ಮಹೇಂದ್ರ ಸಿಂಗ್‌ ಧೋನಿ ಅವರಿಗೆ ಬಿರುಸಿನ ಆಟಕ್ಕೆ ಕುದುರಿಕೊಳ್ಳಲಾಗಲಿಲ್ಲ. 37 ಎಸೆತಗಳ ಅಜೇಯ ಬ್ಯಾಟಿಂಗಿನಲ್ಲಿ ಧೋನಿಗೆ ಗಳಿಸಲು ಸಾಧ್ಯವಾದದ್ದು 29 ರನ್‌ ಮಾತ್ರ. ಇದರಲ್ಲಿ ಒಂದು ಸಿಕ್ಸರ್‌ ಮಾತ್ರ ಸೇರಿತ್ತು. ಇದು ಸಿಡಿದದ್ದು ಕೊನೆಯ ಓವರಿನಲ್ಲಿ. ವೇಗಿ ನಥನ್‌ ಕೋಲ್ಟರ್‌ ನೈಲ್‌ 26 ರನ್ನಿತ್ತು 3 ವಿಕೆಟ್‌ ಉರುಳಿಸಿ ಭಾರತಕ್ಕೆ ಕಡಿವಾಣ ಹಾಕಿದರು.

ಸರಣಿಯ 2ನೇ ಪಂದ್ಯ ಬುಧವಾರ ಬೆಂಗಳೂರಿನಲ್ಲಿ ನಡೆಯಲಿದೆ.

ಭಾರತ 20 ಓವರ್‌ಗೆ 126/7
ಆಸೀಸ್‌ 20 ಓವರ್‌ಗೆ 127/7

Advertisement

Udayavani is now on Telegram. Click here to join our channel and stay updated with the latest news.

Next