Advertisement

ವ್ಯವಸ್ಥಿತವಾಗಿ ಸಂವಿಧಾನ ಕಾರ್ಯರೂಪಕ್ಕೆ ಬರಲಿ

05:55 PM Aug 27, 2018 | |

ದಾವಣಗೆರೆ: ದೇಶದಲ್ಲಿ ಸಂವಿಧಾನ ವ್ಯವಸ್ಥಿತ ರೀತಿಯಲ್ಲಿ ಕಾರ್ಯರೂಪಕ್ಕೆ ಬಂದಾಗ ಮಾತ್ರ ಸಮಾಜದಲ್ಲಿನ ಮೌಡ್ಯ, ಅನಕ್ಷರತೆ, ಬಡತನ ನಿರ್ಮೂಲನೆ ಆಗಲು ಸಾಧ್ಯ ಎಂದು ಸಾಹಿತಿ ಬಿ.ಟಿ. ಲಲಿತಾನಾಯ್ಕ ಹೇಳಿದರು.

Advertisement

ಜಿಲ್ಲಾ ಬಂಜಾರಾ (ಲಂಬಾಣಿ) ಸೇವಾ ಸಂಘದಿಂದ ಭಾನುವಾರ ಕುವೆಂಪು ಕನ್ನಡ ಭವನದಲ್ಲಿ ನಿವೃತ್ತ ನೌಕರರಿಗೆ ಸನ್ಮಾನ ಹಾಗೂ ಎಸ್ಸೆಸ್ಸೆಲ್ಸಿ, ಪಿಯುಸಿ ಮಕ್ಕಳಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ನಮ್ಮಲ್ಲಿ ಕೆಲವು ಲೋಪದೋಷ ಹಾಗೂ ಒಳ್ಳೆಯ ಸಂಸ್ಕೃತಿ ಇದೆ. ಅದನ್ನು ವ್ಯವಸ್ಥಿತವಾಗಿ ಉಳಿಸಿಕೊಳ್ಳಬೇಕಿದೆ. ಹಾಗೆಯೇ ಸಮಾಜ ಬಾಂಧವರು ಶೈಕ್ಷಣಿಕ, ರಾಜಕೀಯವಾಗಿ ಮುಂದುವರೆಯುವ ನಿಟ್ಟಿನಲ್ಲಿ
ಆಲೋಚಿಸಬೇಕಾಗಿದೆ ಎಂದರು. 

ಇಂದು ಸಮಾಜದ ಒಬ್ಬ ಸಂಸದರೂ ಇಲ್ಲದ ಕಾರಣ ಕೇಂದ್ರ ಸರ್ಕಾರದಲ್ಲಿ ಬಂಜಾರಾ (ಲಂಬಾಣಿ) ಬುಡಕಟ್ಟು ಜನಾಂಗದ ಬಗ್ಗೆ ಧ್ವನಿ ಎತ್ತುವವರೇ ಇಲ್ಲದಂತಾಗಿದೆ. ನಿರ್ಲಕ್ಷಕ್ಕೆ ತುತ್ತಾಗಿದ್ದೇವೆ. ಸಂಸದರಾಗಿ ಆಯ್ಕೆಗೊಳ್ಳುವ ಜನಪ್ರತಿನಿಧಿಗಳು ತಮ್ಮ ಕ್ಷೇತ್ರದ ಬಗ್ಗೆ ಮಾಹಿತಿ ಇಲ್ಲದೇ, ಅಭಿವೃದ್ಧಿಗೊಳಿಸುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದರಲ್ಲದೇ ಇನ್ನೂ ದೇಶದಲ್ಲಿ ಸಂವಿಧಾನಬದ್ಧವಾಗಿ ಸಮಾಜದ ಜನರಿಗೆ ನ್ಯಾಯ ದೊರಕಬೇಕಿದೆ ಎಂದರು.

ಈ ಹಿಂದಿದ್ದ ರಾಜ್ಯ ಸರ್ಕಾರ ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿದೆ. ಆದರೆ, ಈಗಿನ ಸರ್ಕಾರ ಈ ಗ್ರಾಮಗಳ ಕಡೆ ಸರಿಯಾಗಿ ಗಮನ ನೀಡುತ್ತಿಲ್ಲ. ಕೆಲವು ತಾಂಡಾಗಳ ಜನರು ಶ್ರೀಮಂತರ ಸ್ಥಳದಲ್ಲಿಯೇ
ವಾಸಿಸುತ್ತಿದ್ದರೂ ಕೂಡ ಅವರಿಗೆ ಸರಿಯಾದ ಸೌಲಭ್ಯ ಸಿಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಕರ್ನಾಟಕ ಪ್ರದೇಶ ಬಂಜಾರಾ ಸಮಾಜದಿಂದ ಬಂಜಾರಾ ಭವನ ನಿರ್ಮಿಸಲು ಸಾಕಷ್ಟು ಪ್ರಯತ್ನ ನಡೆಸಲಾಗುತ್ತಿದೆ. ಇದಕ್ಕಾಗಿ ಈ ಹಿಂದಿನ ಸರ್ಕಾರದಿಂದ 2 ಕೋಟಿ ಅನುದಾನ ಕೇಳಿದ್ದರೂ ಕೂಡ ದೊರಕಿಲ್ಲ. ಈಗ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಸರ್ಕಾರವಿದ್ದು, ಸರ್ಕಾರ ಬಂಜಾರಾ ಭವನ ಪೂರ್ಣಗೊಳಿಸುವುದಕ್ಕೆ ಅಗತ್ಯ ನೆರವು ನೀಡಬೇಕು. ಇಲ್ಲವೇ ಸಮಾಜ ಬಾಂಧವರೇ ಒಟ್ಟಾಗಿ ಹಣ ಸಂಗ್ರಹಿಸುವ ಮೂಲಕ ಭವನ ಪೂರ್ಣಗೊಳಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.

Advertisement

ಹೂವಿನಹಡಗಲಿ ಶಾಸಕ ಪಿ.ಟಿ. ಪರಮೇಶ್ವರನಾಯ್ಕ ಮಾತನಾಡಿ, ಸಮಾಜದ ಹಿಂದುಳಿದ, ಬಡ ಮಕ್ಕಳ ಶಿಕ್ಷಣಕ್ಕೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯವಾಗಿ ವಿಶೇಷ ಒತ್ತು ನೀಡಿದಾಗ ಮಾತ್ರ ಸಮಾಜ ಅಭಿವೃದ್ಧಿಯಾಗಲು
ಸಾಧ್ಯ ಎಂದರು. 

ಸಮಾಜದಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ನೀಡುವ ಮೂಲಕ ಅವರಲ್ಲಿ ಸ್ಫೂರ್ತಿ ತುಂಬುವ ಕೆಲಸ ಮಾಡುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಸಮಾಜದ ಎಲ್ಲಾ ಸಮಸ್ಯೆಗಳ ಪರಿಹರಿಸಲು ಸಂಘದ ಪದಾಧಿಕಾರಿಗಳು, ಅಧಿಕಾರಿ ವರ್ಗ ಬದ್ಧವಿದೆ ಎಂದು ಹೇಳಿದರು.

ಹಿರಿಯ ವಕೀಲ ಜಯದೇವನಾಯ್ಕ ಮಾತನಾಡಿ, ಸಮಾಜಕ್ಕಿರುವ ಮೀಸಲಾತಿ ಶಾಶ್ವತವಲ್ಲ. ಯಾವಾಗ ಬೇಕಾದರೂ ಕುತ್ತು ಬರಬಹುದು. ಈಗಾಗಲೇ ಎರಡು ಬಾರಿ ಆ ರೀತಿ ಆಗಿದೆ ಎಂದರು. ಅಂಬೇಡ್ಕರ್‌, ನೆಲ್ಸನ್‌ ಮಂಡೇಲಾ ಮುಂತಾದವರು ಪ್ರಪಂಚದಲ್ಲಿ ಶೋಷಿತರ ಧ್ವನಿಯಾಗಿ ಹೋರಾಡಿದ್ದಾರೆ. ಮೀಸಲಾತಿಗೆ ಸಂಬಂಧಿಸಿದಂತೆ ಅಂದು ಕುತ್ತು ಬಂದಾಗ ಅಂಬೇಡ್ಕರ್‌ ಅವರು ಪಾರ್ಲಿಮೆಂಟಿನಲ್ಲಿ ಸಂವಿಧಾನ ತಿದ್ದುಪಡಿ ಮಾಡಿ ಶೋಷಿತ ಸಮಾಜದ ಜನರಿಗೆ ಓದಲು ಶಿಕ್ಷಣ, ಬದುಕಲು ಉದ್ಯೋಗ ಕಲ್ಪಿಸಿ ನೆಮ್ಮದಿಯ ಜೀವನ ನಡೆಸಲು ಅನುಕೂಲ ಮಾಡಿಕೊಟ್ಟಿದ್ದಾರೆ. ಅವರನ್ನಿಂದು ತಳ ಸಮುದಾಯಗಳು ಸದಾ ಸ್ಮರಿಸಬೇಕಾಗಿದೆ ಎಂದು ಹೇಳಿದರು.

ಮಾಜಿ ಶಾಸಕ ಎಂ. ಬಸವರಾಜನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಕೆ. ಶಿವಮೂರ್ತಿ, ನಿವೃತ್ತ ಕೆಎಸ್‌ಎಸ್‌ ಅಧಿಕಾರಿ ಹೀರಾನಾಯ್ಕ, ತಾಂಡಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹೀರಾಲಾಲ್‌, ರಾಜಾನಾಯ್ಕ, ಭೋಜ್ಯಾನಾಯ್ಕ, ಜಿಪಂ ಮಾಜಿ ಉಪಾಧ್ಯಕ್ಷೆ ಗೀತಾ ಗಂಗಾನಾಯ್ಕ, ಸಾಕಮ್ಮ, ಬಾಂಬೆ ಕುಮಾರನಾಯ್ಕ, ಹಾಲೇಶನಾಯ್ಕ, ಬಿ.ವಿ. ದೀಪಕ್‌, ತಾವರ್ಯನಾಯ್ಕ, ಮಹೇಶ್‌ ನಾಯ್ಕ, ಜೆ.ಆರ್‌. ಮೋಹನ್‌ಕುಮಾರ್‌, ಎಸ್‌.
ನಂಜ್ಯಾನಾಯ್ಕ ಇತರರು ಇದ್ದರು.

ಇದೇ ವೇಳೆ ನಿವೃತ್ತ ನೌಕರರಿಗೆ ಸನ್ಮಾನ ಮತ್ತು ಹೆಚ್ಚು ಅಂಕಗಳಿಸಿದ ಸಮಾಜದ ವಿದ್ಯಾಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next