ಡಮಾಸ್ಕಸ್ : ಹಮಾಸ್ ಉಗ್ರರ ವಿರುದ್ಧ ಭಾರಿ ಸಮರ ಸಾರಿರುವ ಇಸ್ರೇಲಿ ಪಡೆಗಳು ಗುರುವಾರ ಸಿರಿಯಾದ ಎರಡು ಪ್ರಮುಖ ವಿಮಾನ ನಿಲ್ದಾಣಗಳನ್ನು ಗುರಿಯಾಗಿರಿಸಿ ರಾಕೆಟ್ ದಾಳಿ ನಡೆಸಿವೆ.
ಇಸ್ರೇಲ್ ಮೇಲೆ ಹಮಾಸ್ ದಾಳಿಯ ನಂತರದ ಮೊದಲ ದಾಳಿ ಇದಾಗಿದ್ದು ಇಸ್ರೇಲ್ ಉಗ್ರ ಹೋರಾಟ ನಡೆಸುತ್ತಿದೆ ಎಂದು ಮಾಧ್ಯಮ ವರದಿಯಾಗಿದೆ.
ಇಸ್ರೇಲಿ ಏರ್ ಸ್ಟ್ರೈಕ್‌ಗಳು ರಾಜಧಾನಿ ಡಮಾಸ್ಕಸ್ ಮತ್ತು ಉತ್ತರ ನಗರ ಅಲೆಪ್ಪೊದಲ್ಲಿನ ವಿಮಾನ ನಿಲ್ದಾಣಗಳಲ್ಲಿ ಪದೇ ಪದೇ ವಿಮಾನಗಳನ್ನು ಸ್ಥಗಿತಗೊಳಿಸುವುದಕ್ಕೆ ಕಾರಣವಾಗಿವೆ, ಇವೆರಡನ್ನೂ ಯುದ್ಧ-ಹಾನಿಗೊಳಗಾದ ಸಿರಿಯಾ ಸರಕಾರವು ನಿಯಂತ್ರಿಸುತ್ತದೆ.
ಶನಿವಾರದಂದು ನೂರಾರು ಹಮಾಸ್ ಬಂದೂಕುಧಾರಿಗಳು ಗಾಜಾ ಗಡಿಯ ಮೂಲಕ ಇಸ್ರೇಲ್‌ಗೆ ನುಗ್ಗಿ 1,200ಕ್ಕೂ ಹೆಚ್ಚು ಜನರನ್ನು ಬಳಿ ಪಡೆದ ನಂತರ, ಹಮಾಸ್ ಮತ್ತು ಇಸ್ರೇಲ್ ಆರನೇ ದಿನ ಭಾರೀ ಗುಂಡಿನ ಕಾಳಗ ನಡೆಸುತ್ತಿರುವ ವೇಳೆ ಈ ದಾಳಿ ನಡೆದಿದೆ.
ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಸಿರಿಯಾದ ಸಹವರ್ತಿ ಬಶರ್ ಅಲ್-ಅಸ್ಸಾದ್ ಅವರೊಂದಿಗೆ ದೂರವಾಣಿಯಲ್ಲಿ, ಇಸ್ರೇಲ್ ಅನ್ನು ಎದುರಿಸಲು ಅರಬ್ ಮತ್ತು ಇಸ್ಲಾಮಿಕ್ ದೇಶಗಳಿಗೆ ಸಹಕರಿಸಲು ಕರೆ ನೀಡಿದ ಬೆನ್ನಲ್ಲೇ ಈ ದಾಳಿ ನಡೆದಿದೆ. ಇನ್ನೊಂದೆಡೆ ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಇಸ್ರೇಲ್ ಗೆ ಭೇಟಿ ನೀಡಿ ಸಂಪೂರ್ಣ ಬೆಂಬಲ ಘೋಷಿಸಿ ಶಸ್ತ್ರಾಸ್ತ್ರ ಗಳ ನೆರವು ಸಮೇತ ಸಂಪೂರ್ಣ ಬೆನ್ನಿಗೆ ನಿಲ್ಲುವುದಾಗಿ ಘೋಷಿಸಿದ್ದಾರೆ.