ಬೆಂಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಚಲಿಸುವ ವಾಹನಗಳು ಟೋಲ್‌ಗಳ ಬಳಿ ದೊಡ್ಡ ಕ್ಯೂನಲ್ಲಿ ನಿಂತು ಸಮಯ ವ್ಯರ್ಥ ಮಾಡಿಕೊಳ್ಳುವ ಸಮಸ್ಯೆಗೆ ಪರಿಹಆರವಾಗಿ ಸಿಂಡಿಕೇಟ್ ಬ್ಯಾಂಕ್, “ಸಿಂಡ್‌ಫಾಸ್ಟಾಗ್’ ಎಂಬ ಹೊಸ ಪದ್ಧತಿಯನ್ನು ಪರಿಚಯಿಸಿದೆ.
ನ್ಯಾಷನಲ್ ಪೇಮೆಂಟ್ಸ್ ಕೌನ್ಸಿಲ್ ಆಫ್ ಇಂಡಿಯಾ (ಎನ್‌ಪಿಸಿಎಲ್) ಪಾಲುದಾರಿಕೆಯಲ್ಲಿ ಅಳವಡಿಸಿರುವ ಸ್ವಯಂಚಾಲಿತ, ನಗದುರಹಿತ, ಸಮಯ ಉಳಿತಾಯದ ಹಾಗೂ ವಾಹನದಟ್ಟಣೆ ತಪ್ಪಿಸಬಲ್ಲ ಮುಂಗಡ ಪಾವತಿಯ (ಪೈಡ್‌ಅಪ್) ಸರಳ ಪದ್ಧತಿ ಇದಾಗಿದೆ.
ಕಾರ್ಯ ನಿರ್ವಹಣೆ ಹೇಗೆ?: ಸಿಂಡ್‌ಫಾಸ್ಟಾಗ್ ಚಿಪ್ ಆಂಡ್ ಬೇಸ್ಡ್ ಪರಿಹಾರವಾಗಿದ್ದು, ಒಂದು ರೀತಿ ರೇಡಿಯೋ ಫ್ರಿಕ್ವೆನ್ಸಿ ಐಡೆಂಟಿಫಿಕೇಷನ್ (ಆರ್‌ಎಫ್‌ಐಡಿ) ತಂತ್ರಜ್ಞಾನದ ಕ್ಯಾಷ್‌ಲೆಸ್ ಟೋಲ್ ಫ್ರೀ ಪಾವತಿ ಪದ್ಧತಿಯಾಗಿದ್ದು, ಇದನ್ನು ಪ್ರಿ-ಪೇಯಿಡ್ ಅಕೌಂಟ್ (ಪೂರ್ಣ ಪಾವತಿಸಿದ ಖಾತೆ)ಗೆ ಲಿಂಕ್ ಮಾಡಲಾಗಿದೆ.
ವಾಹನದ ವಿಂಡ್‌ಸ್ಕ್ರೀನ್‌ಗೆ ಸಿಂಡ್‌ಫಾಸ್ಟಾಗ್ ಸ್ಟಿಕ್ಕರ್ ಅನ್ನು ಅಂಟಿಸಿಕೊಂಡಲ್ಲಿ ಟೋಲ್ ಪ್ಲಾಜಾದ ಬಳಿ ಹೋದ ತಕ್ಷಣ ಅಲ್ಲಿನ ಕಂಪ್ಯೂಟರ್ ಪರದೆಯ ಮೇಲೆ ಪ್ರೀಪೆಯ್ಡ ಮಾಹಿತಿ ಡಿಸ್‌ಪ್ಲೇ ಆಗಿ ತಡೆಗಂಬ ತೆರೆದುಕೊಂಡು ವಾಹನ ಮುಂದುವರಿಯಲು ಅನುಕೂಲ ಮಾಡಿಕೊಡುತ್ತದೆ.
ದೊಡ್ಡ ಸಂಸ್ಥೆಗಳ, ಕಾರ್ಪೊರೇಟ್ ವಾಹನಗಳ, ಹಾಗೂ ಖಾಸಗಿ ವಾಹನ ಮಾಲೀಕರ ಅನುಕೂಲಕ್ಕೆ ತಕ್ಕಂತೆ ಸಿಂಡ್‌ಫಾಸ್ಟಾಗ್ ಅನ್ನು ಒದಗಿಸಲಾಗುತ್ತದೆ. ಡೆಬಿಟ್, ಕ್ರೆಡಿಟ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಫಾಸ್ಟಾಗ್‌ಗೆ ಮುಂಗಡ ಹಣ ತುಂಬಿಸಬಹುದಾಗಿದೆ. ಪ್ರಸ್ತುತ ಈ ಟ್ಯಾಗ್ ಅನ್ನು ಸೀಮಿತ ಶಾಖೆಗಳಲ್ಲಿ ಹಾಗೂ ವಲಯ ಕಚೇರಿಯಲ್ಲಿ ಮಾತ್ರ ದೊರೆಯುತ್ತಿದೆ ಎಂದು ಬ್ಯಾಂಕ್ ತಿಳಿಸಿದೆ.