Advertisement

ಹೈಕೋರ್ಟ್‌ನಿಂದ ಚಿಹ್ನೆ ವಿವಾದ ಇತ್ಯರ್ಥ

09:01 AM Mar 30, 2019 | Vishnu Das |

ಬೆಂಗಳೂರು: ಹಂಚಲು ಮುಕ್ತವಾಗಿರುವ ಚುನಾವಣಾ ಚಿಹ್ನೆಗಳ ಪಟ್ಟಿಯಲ್ಲಿ ಲಭ್ಯವಿರುವ ಉಚಿತ ಚಿಹ್ನೆಗಳ ಪೈಕಿ ಕರ್ನಾಟಕ ಜನತಾ ಪಕ್ಷದ ರಾಜ್ಯಾಧ್ಯಕ್ಷ ಪದ್ಮನಾಭ ಪ್ರಸನ್ನ
ಕುಮಾರ್‌ ಅವರು ಆಯ್ಕೆ ಮಾಡಿಕೊಳ್ಳುವ ಚಿಹ್ನೆಯನ್ನು ಅವರಿಗೆ ಮಂಜೂರು ಮಾಡುವಂತೆ ಹೈಕೋರ್ಟ್‌ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ.

Advertisement

ಪಕ್ಷದ ಚಿಹ್ನೆ ವಿಚಾರವಾಗಿ ಪದ್ಮನಾಭ ಪ್ರಸನ್ನ ಕುಮಾರ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಅಲೋಕ್‌ ಆರಾಧೆ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿದಾರರು
ಆಯ್ಕೆ ಮಾಡಿಕೊಳ್ಳುವ ಚಿಹ್ನೆಯನ್ನು ಸಂಬಂಧಪಟ್ಟ ಚುನಾವಣಾಧಿಕಾರಿ ಮಂಜೂರು ಮಾಡಬೇಕು ಎಂದು ಆದೇಶಿಸಿ, ಅರ್ಜಿಯನ್ನು ಇತ್ಯರ್ಥಪಡಿಸಿತು.

ಪಕ್ಷಕ್ಕೆ “ತೆಂಗಿನ ಕಾಯಿ’ ಚಿಹ್ನೆ ಮಂಜೂರು ಮಾಡುವಂತೆ ಪದ್ಮನಾಭ ಪ್ರಸನ್ನ ಕುಮಾರ್‌ ಚುನಾವಣಾ ಆಯೋಗಕ್ಕೆ 2014ರ ಜೂ.6, 2018ರ ಏ.14 ಹಾಗೂ 25ರಂದು ಮನವಿ
ಸಲ್ಲಿಸಿದ್ದರು. ಆದರೆ, ಆಯೋಗ ಯಾವುದೇ ಕ್ರಮ ಕೈಗೊಳ್ಳದ ಕಾರಣ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ವೇಳೆ ಚುನಾವಣಾ ಆಯೋಗದ ಪರ ವಕೀಲರು, ಅರ್ಜಿದಾರರು ಕೋರಿದ ಚಿಹ್ನೆ ಮಂಜೂರು ಮಾಡಲು ನಿರಾಕರಿಸಿ ಚುನಾವಣಾ ಆಯೋಗ 2019ರ ಮಾ.24ರಂದು ಹೊರಡಿಸಿದ ಆದೇಶದ ಪ್ರತಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.

ತೆಂಗಿನ ಕಾಯಿ ಚಿಹ್ನೆಯನ್ನು ಈಗಾಗಲೇ 2017ರಿಂದ ಗೋವಾ ಫಾರ್ವರ್ಡ್‌ ಪಕ್ಷಕ್ಕೆ ಮೀಸಲಿಡಲಾಗಿದೆ. ಹಾಗಾಗಿ, ಆ ಚಿಹ್ನೆಯನ್ನು ಕೆಜೆಪಿಗೆ ಮಂಜೂರು ಮಾಡಲು ಸಾಧ್ಯವಿಲ್ಲಎಂದು ಚುನಾವಣಾ ಆಯೋಗ ಆದೇಶದಲ್ಲಿ ಹೇಳಿತ್ತು. ಅದರಂತೆ, ಹಂಚಲು ಮುಕ್ತವಾಗಿರುವ ಉಚಿತ ಚಿಹ್ನೆಗಳ ಪೈಕಿ ಯಾವುದಾದರೂ ಚಿಹ್ನೆಯನ್ನು ಆಯ್ಕೆ ಮಾಡಿಕೊಳ್ಳಲು ಅರ್ಜಿದಾರರು ಸ್ವತಂತ್ರರಿದ್ದಾರೆ. ಹಾಗೊಂದು ವೇಳೆ ಅವರು
ಮನವಿ ಸಲ್ಲಿಸಿದರೆ ಆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಚುನಾವಣಾ ಆಯೋಗದ ಪರ ವಕೀಲರು ಮೇಮೋ ಸಹ ಸಲ್ಲಿಸಿದರು. ಇದನ್ನು ದಾಖಲಿಸಿಕೊಂಡ ನ್ಯಾಯಪೀಠ, ಅರ್ಜಿದಾರರು ಆಯ್ಕೆ ಮಾಡಿಕೊಳ್ಳುವ ಚಿಹ್ನೆಯನ್ನು ಮಂಜೂರು ಮಾಡುವಂತೆ ನಿರ್ದೇಶನ ನೀಡಿ ಅರ್ಜಿಯನ್ನು ಇತ್ಯರ್ಥಪಡಿಸಿತು. ಅರ್ಜಿದಾರರ ಪರ ವಕೀಲ ಕೆ.ಎಸ್‌. ರಂಜಿತ್‌ ವಕಾಲತ್ತು ವಹಿಸಿದ್ದರು.

ಪ್ರಕರಣವೇನು?: ಪದ್ಮನಾಭ ಪ್ರಸನ್ನ ಕುಮಾರ್‌ ಅವರ ಕರ್ನಾಟಕ ಜನತಾ ಪಕ್ಷವನ್ನು (ಕೆಜೆಪಿ) ಕೇಂದ್ರ ಚುನಾವಣಾ ಆಯೋಗ 2011ರ ಏ.28ರಂದು ನೋಂದಣಿ ಮಾಡಿ
ಕೊಂಡಿತ್ತು. ಬಳಿಕ ಅವರು ತೆಂಗಿನ ಕಾಯಿ ಚಿಹ್ನೆಯಡಿ ಹಲವು ಚುನಾವಣೆಗಳನ್ನು ಎದುರಿಸಿದ್ದರು. 2013ರ ವಿಧಾನಸಭಾ ಚುನಾವಣೆಯಲ್ಲಿ ಈ ಪಕ್ಷದಿಂದ 6 ಮಂದಿ
ಶಾಸಕರು ಆಯ್ಕೆಯಾಗಿದ್ದರು. ಆಗ ತೆಂಗಿನ ಕಾಯಿ ಚಿಹ್ನೆಯನ್ನು “ಇನ್ನೂ ಮಂಜೂರು ಮಾಡಲು ಬಾಕಿ ಇರುವ ಚಿಹ್ನೆ’ ಎಂದು ಚುನಾವಣಾ ಆಯೋಗ ಹೇಳಿತ್ತು. ಈ ಮಧ್ಯೆ,
ಪಕ್ಷದ ಕೆಲವರು ಪ್ರತ್ಯೇಕಗೊಂಡು ಕೆಜೆಪಿಯನ್ನು ಬಿಜೆಪಿಯೊಂದಿಗೆ ವಿಲೀನಗೊ ಳಿಸಿದರು. ಇದನ್ನು ಆಕ್ಷೇಪಿಸಿ ಪದ್ಮನಾಭ ಪ್ರಸನ್ನ ಕುಮಾರ್‌ ಸಾಕಷ್ಟು ಹೋರಾಟ
ಮಾಡಿದ್ದಾರೆ. ಈ ಮಧ್ಯೆ, ತೆಂಗಿನ ಕಾಯಿ ಚಿಹ್ನೆಯನ್ನು ತಮಗೇ ಮಂಜೂರು ಮಾಡಬೇಕು ಎಂದು ಪದ್ಮನಾಭ ಪ್ರಸನ್ನ ಕುಮಾರ್‌ ಚುನಾವಣಾ ಆಯೋಗಕ್ಕೆ ಮೂರು
ಮನವಿಗಳನ್ನು ಸಲ್ಲಿಸಿದ್ದರು. ಯಾವುದೇ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.