Advertisement
ಅವರೇ ಸೈಯ್ಯದ್ ಗುಲಾಬ್. ಎಲೆಮರೆಯ ಕಾಯಿಯಂತೆ ಅನ್ನ ದಾಸೋಹದಲ್ಲಿ ತೊಡಗಿರುವ ಇವರು, ನಿತ್ಯ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ, ರಾಜೀವ್ ಗಾಂಧಿ ಆಸ್ಪತ್ರೆ, ಸಂಜಯ್ ಗಾಂಧಿ ಆಸ್ಪತ್ರೆ ಮತ್ತು ನಿಮ್ಹಾನ್ಸ್ ಆಸ್ಪತ್ರೆಗೆ ಚಿಕಿತ್ಸೆ ಗೆಂದು ಬಂದಿರುವ 250 ರಿಂದ 260 ಬಡ ರೋಗಿ ಗಳು ಮತ್ತು ಅವರ ಪೋಷಕರ ಹಸಿವು ತಣಿಸುತ್ತಿದ್ದಾರೆ. ಕಳೆದ 8 ವರ್ಷಗಳಿಂದ ದಾನಿಗಳ ಸಹಾಯ ಹಾಗೂ ತಮ್ಮದೇ ರೋಟಿ ಟ್ರಸ್ಟ್ ಸ್ಥಾಪಿಸಿಕೊಂಡು ವ್ಯಾನ್‌ನಲ್ಲಿ ಆಸ್ಪತ್ರೆಗಳಿಗೆ ತೆರಳಿ ಆಹಾರದ ಪೊಟ್ಟಣ ಹಂಚುವ ಪುಣ್ಯ ಕಾರ್ಯದಲ್ಲಿ ನಿರತರಾಗಿದ್ದಾರೆ.
Related Articles
Advertisement
ನಿತ್ಯ 250-260 ಬಡ ಜನರಿಗೆ ಆಹಾರ ವಿತರಿಸಲಾಗುತ್ತದೆ ಎಂದು ರೋಟಿ ಟ್ರಸ್ಟ್ ಸಂಸ್ಥಾಪಕ ಸೈಯ್ಯದ್ ಗುಲಾಬ್ ಹೇಳುತ್ತಾರೆ.
ಆಸ್ಪತ್ರೆ ಬಳಿ ರೋಗಿಗಳಿಗೆ ಊಟದ ಪೊಟ್ಟಣ ನೀಡುತ್ತಿರುವ ಸೈಯ್ಯದ್. ಊಟದ ಪೊಟ್ಟಣ ಪಡೆಯಲು ರೋಗಿಗಳು ಕ್ಯೂ ನಿಂತಿರುವುದು.
ಮಹತ್ಕಾರ್ಯಕ್ಕೆ ಪ್ರೇರಣೆ ಏನು?: ಅದು 2016ರ ಸಂದರ್ಭ. ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ದಾಖಲಾಗಿದ್ದ ತನ್ನ ಸ್ನೇಹಿತನ ಮಗಳನ್ನು ನೋಡಲು ವಾರದಲ್ಲಿ ಎರಡ್ಮೂರು ಬಾರಿ ಆಸ್ಪತ್ರೆ ಬಳಿ ತೆರಳುತ್ತಿದ್ದೆ. ಆಗ ಮಕ್ಕಳನ್ನು ನೋಡಿಕೊಳ್ಳುತ್ತಿದ್ದ ಪೋಷಕರು ಊಟಕ್ಕಾಗಿ ಪರದಾಡುತ್ತಿದ್ದರು. ಅದರಲ್ಲೂ ಭಾನುವಾರ ಆಸ್ಪತ್ರೆ ಕ್ಯಾಂಟೀನ್ ಕೂಡ ಮುಚ್ಚಿರುತ್ತಿತ್ತು. ಊಟಕ್ಕಾಗಿ ದೂರದ ಹೋಟೆಲ್‌ಗಳಿಗೆ ನಡೆದುಕೊಂಡು ಹೋಗಬೇಕಿತ್ತು. ಇದನ್ನು ಕಂಡ ನಂತರ, ಪ್ರತಿ ಭಾನುವಾರದಂದು ಕೈಲಾದಷ್ಟು ಜನರಿಗೆ ಉಚಿತ ಊಟ ವಿತರಿಸಬೇಕು ಎಂದು ನಿರ್ಧರಿಸಿದೆ. ಮೊದಲ 6 ತಿಂಗಳುಗಳ ಕಾಲ ಪ್ರತಿ ಭಾನುವಾರ ಮಧ್ಯಾಹ್ನದ ಊಟ ವಿತರಿಸಿದೆ. ಬಳಿಕ ಇದನ್ನು ಫೇಸ್‌ಬುಕ್ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದೆ. ಇದರಿಂದಾಗಿ ಅನೇಕ ಮಂದಿ ತಮ್ಮ ಜನ್ಮದಿನ, ವಿವಾಹ ವಾರ್ಷಿಕೋತ್ಸವ, ಮಕ್ಕಳ ಹುಟ್ಟುಹಬ್ಬ ಸೇರಿದಂತೆ ಶುಭ ಸಮಾರಂಭಗಳ ಸಂದರ್ಭದಲ್ಲಿ ನನ್ನ ಜತೆ ಕೈಜೋಡಿಸುತ್ತಿದ್ದರು. ಕೆಲ ದಾನಿಗಳು ನನ್ನ ಬೆನ್ನು ತಟ್ಟಿ, ವಾರಕ್ಕೊಮ್ಮೆ ಬದಲು ಪ್ರತಿದಿನ ಆಹಾರ ವಿತರಿಸುವ ಎಂದು ಭರವಸೆ ನೀಡಿದರು. ಬಳಿಕ “ರೋಟಿ ಟ್ರಸ್ಟ್’ ಎಂಬ ಟ್ರಸ್ಟ್‌ವೊಂದನ್ನು ಪ್ರಾರಂಭಿಸಿ, ಇದರ ಹೆಸರಿನಲ್ಲಿ ನಿತ್ಯ ಅನ್ನ, ತರಕಾರಿ ಸಾಂಬಾರು ಜತೆಗೆ ಮಕ್ಕಳಿಗೆ ಬಿಸ್ಕತ್ ವಿತರಿಸಲಾಗುತ್ತಿದೆ ಎನ್ನುತ್ತಾರೆ ಸೈಯ್ಯದ್ ಗುಲಾಬ್.
–ಭಾರತಿ ಸಜ್ಜನ್