Advertisement

ಸಯ್ಯದ್‌ ಮುಷ್ತಾಕ್‌ ಅಲಿ ಟಿ20: ಕರ್ನಾಟಕಕ್ಕೆ 9 ವಿಕೆಟ್‌ ಜಯ

11:42 PM Nov 08, 2019 | Team Udayavani |

ವಿಶಾಖಪಟ್ಟಣ: ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಕ್ರಿಕೆಟ್‌ ಕೂಟದ ಗುಂಪು “ಎ’ ವಿಭಾಗದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಉತ್ತರಾಖಂಡ ವಿರುದ್ಧ ಕರ್ನಾಟಕ 9 ವಿಕೆಟ್‌ಗಳ ಪ್ರಚಂಡ ಗೆಲುವು ಸಾಧಿಸಿದೆ. ಇದರೊಂದಿಗೆ ಕರ್ನಾಟಕ ಕೂಟದಲ್ಲಿ ಶುಭಾರಂಭ ಮಾಡಿದೆ.

Advertisement

ಶುಕ್ರವಾರ ಮೊದಲು ಬ್ಯಾಟಿಂಗಿಗೆ ಇಳಿದ ಉತ್ತರಾಖಂಡಕ್ಕೆ ಶುಭವಾಗಲಿಲ್ಲ. ಕರ್ನಾಟಕ ಬೌಲರ್‌ಗಳು ಫಾತಕವಾಗಿ ಅಪ್ಪಳಿಸಿದರು. ಪರಿಣಾಮ ಉತ್ತರಾಖಂಡದ ವಿಕೆಟ್‌ ಪಟಪಟನೆ ಉದುರಿಕೊಂಡಿತು. 20 ಓವರ್‌ಗಳಲ್ಲಿ 6 ವಿಕೆಟಿಗೆ 132 ರನ್‌ ಗಳಿಸಲಷ್ಟೇ ಶಕ್ತವಾಯಿತು. ಇದಕ್ಕೆ ಉತ್ತರವಾಗಿ ಕರ್ನಾಟಕ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ರೋಹನ್‌ ಕದಮ್‌ (ಅಜೇಯ 67 ರನ್‌) ಹಾಗೂ ದೇವದತ್ತ ಪಡಿಕ್ಕಲ್‌ (ಅಜೇಯ 53 ರನ್‌) ಅವರ ಅರ್ಧಶತಕಗಳ ನೆರವಿನಿಂದ ಕೇವಲ 15.4 ಓವರ್‌ಗಳಲ್ಲಿ 1 ವಿಕೆಟಿಗೆ 133 ರನ್‌ ಗಳಿಸಿ ಗೆಲುವು ಸಾಧಿಸಿತು. ಕರ್ನಾಟಕ ಶನಿವಾರ ನಡೆಯಲಿರುವ ತನ್ನ ಗುಂಪಿನ ಎರಡನೇ ಪಂದ್ಯದಲ್ಲಿ ಬರೋಡ ತಂಡವನ್ನು ಎದುರಿಸಲಿದೆ.

ರಾಜ್ಯದ ಅಬ್ಬರದ ಬ್ಯಾಟಿಂಗ್‌
ಸುಲಭ ಗುರಿಯನ್ನು ಬೆನ್ನಟ್ಟಿದ ಕರ್ನಾಟಕ ತಂಡವು ಒಟ್ಟು 25 ರನ್‌ಗಳಿಸುವಷ್ಟರಲ್ಲಿ ಆಘಾತ ಅನುಭವಿಸಿತು. ಆರ್‌.ಸಮರ್ಥ್ (7 ರನ್‌, 8 ಎಸೆತ, 1 ಬೌಂಡರಿ) ವಿಕೆಟ್‌ ಕಳೆದುಕೊಂಡರು. ಆದರೆ ಮತ್ತೋರ್ವ ಆರಂಭಿಕ ಬ್ಯಾಟ್ಸ್‌ಮನ್‌ ರೋಹನ್‌ ಕದಮ್‌ ಹಾಗೂ ಎರಡನೇ ವಿಕೆಟಿಗೆ ಕ್ರೀಸ್‌ಗೆ ಬಂದ ದೇವದತ್ತ ಪಡಿಕ್ಕಲ್‌ ಬಿರುಸಿನ ಬ್ಯಾಟಿಂಗ್‌ ನಡೆಸಿದರು. ಇವರಿಬ್ಬರು ಎರಡನೇ ವಿಕೆಟಿಗೆ ಒಟ್ಟಾರೆ 108 ರನ್‌ ಜತೆಯಾಟವಾಡಿದರು. ತಂಡವನ್ನು ಗೆಲುವಿನ ದಡ ಸೇರಿಸಿದರು. ರೋಹನ್‌ ಕದಮ್‌ 55 ಎಸೆತದಿಂದ 6 ಬೌಂಡರಿ, 3 ಸಿಕ್ಸರ್‌ಗಳಿಂದ ಅರ್ಧಶತಕ ಬಾರಿಸಿದರು. ದೇವದತ್‌ ಪಡಿಕ್ಕಲ್‌ ಕೂಡ ಅಷ್ಟೇ ಉತ್ತಮವಾಗಿ ಬ್ಯಾಟಿಂಗ್‌ ನಡೆಸಿದರು.

ಸತತ 15 ಗೆಲುವು
ಉತ್ತರಾಖಂಡ ವಿರುದ್ಧ ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಕೂಟದಲ್ಲಿ 9 ವಿಕೆಟ್‌ಗಳಿಂದ ಗೆದ್ದ ಬೆನ್ನಲ್ಲೇ ಕರ್ನಾಟಕ ತಂಡವು ಅವಧಿಯೊಂದರಲ್ಲಿ ಸತತ 15 ಪಂದ್ಯ ಗೆದ್ದ ದಾಖಲೆ ನಿರ್ಮಿಸಿದೆ. ಭಾರತದ ಮಟ್ಟಿಗೆ ಇದು ಮೊದಲ ದಾಖಲೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next