Advertisement

ಸಯ್ಯದ್‌ ಮುಷ್ತಾಕ್‌ ಅಲಿ ಟಿ20: ಮುಂಬಯಿಗೆ ಶರಣಾದ ಕರ್ನಾಟಕ

01:23 AM Nov 26, 2019 | Team Udayavani |

ಸೂರತ್‌: ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಕ್ರಿಕೆಟ್‌ ಕೂಟದ ಕೊನೆಯ ಸೂಪರ್‌ ಲೀಗ್‌ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಕರ್ನಾಟಕ 7 ವಿಕೆಟ್‌ಗಳಿಂದ ಮುಂಬಯಿಗೆ ಶರಣಾಗಿದೆ. ಸೂರ್ಯಕುಮಾರ್‌ ಯಾದವ್‌ ಅವರ ಆರ್ಭಟಕ್ಕೆ ಕಡಿವಾಣ ಹಾಕಲು ವಿಫ‌ಲವಾದದ್ದು ಕರ್ನಾಟಕಕ್ಕೆ ಹಿನ್ನಡೆಯಾಗಿ ಪರಿಣಮಿಸಿತು.

Advertisement

“ಬಿ’ ವಿಭಾಗದ ಸೂಪರ್‌ ಲೀಗ್‌ನಲ್ಲಿ ಹ್ಯಾಟ್ರಿಕ್‌ ಜಯ ಸಾಧಿಸಿ ಮೆರೆಯುತ್ತಿದ್ದ ಕರ್ನಾಟಕ, ಕೂಟದಲ್ಲಿ ಸತತ 7 ಪಂದ್ಯಗಳನ್ನು ಗೆದ್ದು ಪ್ರಭುತ್ವ ಸಾಧಿಸಿತ್ತು. ಆದರೆ ಸೋಮವಾರದ ಪಂದ್ಯದಲ್ಲಿ ಮುಂಬಯಿ ಎದುರು ಪಾಂಡೆ ಪಡೆಯ ಆಟ ನಡೆಯಲಿಲ್ಲ.

ಕರ್ನಾಟಕ ಸೂಪರ್‌ ಲೀಗ್‌ ಹಂತದ ಎಲ್ಲ 4 ಪಂದ್ಯಗಳನ್ನು ಮುಗಿಸಿದ್ದು, 3 ಗೆಲುವು ಹಾಗೂ ಒಂದು ಸೋಲಿನೊಂದಿಗೆ ಒಟ್ಟು 12 ಅಂಕಗಳೊಂದಿಗೆ ಗುಂಪಿನ ಅಗ್ರಸ್ಥಾನಿಯಾಗಿದೆ. ಈ ಗುಂಪಿನಿಂದ ಅಗ್ರ 2 ತಂಡಗಳು ಸೆಮಿಫೈನಲ್‌ ಪ್ರವೇಶಿಸಲಿದ್ದು, 3 ತಂಡಗಳು ರೇಸ್‌ನಲ್ಲಿವೆ. ಸದ್ಯ ಕರ್ನಾಟಕ ಸುರಕ್ಷಿತವಾಗಿದೆ.

ಮುಂಬಯಿ ಭರ್ಜರಿ ಚೇಸಿಂಗ್‌
ಮೊದಲು ಬ್ಯಾಟಿಂಗ್‌ಗೆ ಇಳಿದ ಕರ್ನಾಟಕ ತಂಡ ಆರಂಭಿಕ ಬ್ಯಾಟ್ಸ್‌ಮನ್‌ ದೇವದತ್ತ ಪಡಿಕ್ಕಲ್‌ (57) ಮತ್ತು ಮಧ್ಯಮ ಕ್ರಮಾಂಕ ಬ್ಯಾಟ್ಸ್‌ಮನ್‌ ರೋಹನ್‌ ಕದಮ್‌ (71) ಅವರ ಅರ್ಧ ಶತಕಗಳ ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 171 ರನ್‌ ಗಳಿಸಿತು. ಈ ಗುರಿ ಬೆನ್ನಟ್ಟಿದ ಮುಂಬಯಿ ತಂಡ ಸೂರ್ಯಕುಮಾರ್‌ ಯಾದವ್‌ ಅವರ ಸ್ಫೋಟಕ ಬ್ಯಾಟಿಂಗ್‌ (ಅಜೇಯ 94 ರನ್‌) ಹಾಗೂ ಆರಂಭಕಾರ ಪೃಥ್ವಿ ಶಾ (30) ಅವರ ದಿಟ್ಟ ಹೋರಾಟ ನೆರವಿನಿಂದ 19 ಓವರ್‌ಗಳಲ್ಲಿ ಮೂರೇ ವಿಕೆಟ್‌ ನಷ್ಟಕ್ಕೆ 174 ರನ್‌ ಗಳಿಸಿ ವಿಜಯದ ನಗು ಹೊಮ್ಮಿಸಿತು.

ಸೂರ್ಯಕುಮಾರ್‌ ಯಾದವ್‌ 53 ಎಸೆತಗಳಿಂದ 11 ಬೌಂಡರಿ, 4 ಸಿಕ್ಸರ್‌ ನೆರವಿನಿಂದ ಅಜೇಯ 94 ರನ್‌ ಸಿಡಿಸಿದರು. ಇವರೊಂದಿಗೆ ಶಿವಂ ದುಬೆ 22 ರನ್‌ ಮಾಡಿ ಔಟಾಗದೆ ಉಳಿದರು (18 ಎಸೆತ, 2 ಸಿಕ್ಸರ್‌). ಈ ಜೋಡಿಯಿಂದ 4ನೇ ವಿಕೆಟಿಗೆ 8.1 ಓವರ್‌ಗಳಿಂದ 84 ರನ್‌ ಹರಿದು ಬಂತು.

Advertisement

ಕರ್ನಾಟಕ ಕೆ.ಎಲ್‌. ರಾಹುಲ್‌ ಅವರನ್ನು ಶೂನ್ಯಕ್ಕೆ ಕಳೆದುಕೊಂಡಿತು. ನಾಯಕ ಮನೀಷ್‌ ಪಾಂಡೆ (4), ಕರುಣ್‌ ನಾಯರ್‌ (8) ಕೂಡ ಅಗ್ಗಕ್ಕೆ ಔಟಾದರು. 19 ರನ್ನಿಗೆ 3 ವಿಕೆಟ್‌ ಬಿದ್ದಾಗ ಜತೆಗೂಡಿದ ಪಡಿಕ್ಕಲ್‌-ಕದಮ್‌ 80 ರನ್‌ ಪೇರಿಸಿದರು.

ಸಂಕ್ಷಿಪ್ತ ಸ್ಕೋರ್‌
ಕರ್ನಾಟಕ-20 ಓವರ್‌ಗಳಲ್ಲಿ 6 ವಿಕೆಟಿಗೆ 171 (ಕದಮ್‌ 71, ಪಡಿಕ್ಕಲ್‌ 57, ಠಾಕೂರ್‌ 29ಕ್ಕೆ 2, ದುಬೆ 39ಕ್ಕೆ 2). ಮುಂಬಯಿ-19 ಓವರ್‌ಗಳಲ್ಲಿ 3 ವಿಕೆಟಿಗೆ 174 (ಸೂರ್ಯಕುಮಾರ್‌ ಔಟಾಗದೆ 94, ಶಾ 30, ದುಬೆ ಔಟಾಗದೆ 22).

ಸೆಮಿಫೈನಲ್‌ಗೆ ಪೈಪೋಟಿ
ಸೋಮವಾರದ ಫ‌ಲಿತಾಂಶದ ಬಳಿಕ “ಬಿ’ ವಿಭಾಗದಲ್ಲಿ ಜಾರ್ಖಂಡ್‌ ಹೊರತುಪಡಿಸಿ ಉಳಿದ ತಂಡಗಳು ಸೆಮಿಫೈನಲ್‌ ರೇಸ್‌ನಲ್ಲಿ ಉಳಿದುಕೊಂಡಿರುವ ಚಿತ್ರಣ ಲಭಿಸಿದೆ.
ಕರ್ನಾಟಕದೊಂದಿಗೆ ಪೈಪೋಟಿಯಲ್ಲಿರುವ ತಂಡಗಳೆಂದರೆ ತಮಿಳುನಾಡು (3 ಪಂದ್ಯ, 8 ಅಂಕ) ಮತ್ತು ಮುಂಬಯಿ (3 ಪಂದ್ಯ, 8 ಅಂಕ). ರನ್‌ರೇಟ್‌ನಲ್ಲಿ ಕರ್ನಾಟಕವೇ ಮುಂದಿದೆ (+0.762). ತಮಿಳುನಾಡು (+0.413) ಮತ್ತು ಮುಂಬಯಿ (-0.589) ಅನಂತರದ ಸ್ಥಾನದಲ್ಲಿವೆ. ಮುಂಬಯಿಯನ್ನು ಮಣಿಸಿದ್ದೇ ಆದಲ್ಲಿ ಕರ್ನಾಟಕ ಸೋಮವಾರವೇ ಸೆಮಿಫೈನಲ್‌ಗೆ ಲಗ್ಗೆ ಇರಿಸುತ್ತಿತ್ತು.

ದಿನದ ಇನ್ನೊಂದು ಪಂದ್ಯದಲ್ಲಿ ತಮಿಳುನಾಡು 4 ವಿಕೆಟ್‌ಗಳಿಂದ ಪಂಜಾಬ್‌ಗ ಸೋಲುಣಿಸಿತು. ತಮಿಳುನಾಡು ಬುಧವಾರದ ಕೊನೆಯ ಲೀಗ್‌ ಪಂದ್ಯದಲ್ಲಿ ಜಾರ್ಖಂಡ್‌ ವಿರುದ್ಧ ಆಡಲಿದೆ. ಮುಂಬಯಿ ತಂಡ ಪಂಜಾಬನ್ನು ಎದುರಿಸಲಿದೆ. ಪಂಜಾಬ್‌ 4 ಅಂಕ ಹೊಂದಿದ್ದು, +1.426ರಷ್ಟು ಅತ್ಯುತ್ತಮ ರನ್‌ರೇಟ್‌ ಹೊಂದಿದೆ. ಮುಂಬಯಿ ಎದುರು ಬೃಹತ್‌ ಗೆಲುವು ಸಾಧಿಸಿದರೆ ಪಂಜಾಬ್‌ಗೂ ಅವಕಾಶವಿದೆ. ಆದರೆ ತಮಿಳುನಾಡು ವಿರುದ್ಧ ಜಾರ್ಖಂಡ್‌ ಗೆಲ್ಲಬೇಕು!

Advertisement

Udayavani is now on Telegram. Click here to join our channel and stay updated with the latest news.

Next