Advertisement

ಸಯ್ಯದ್‌ ಮುಷ್ತಾಕ್‌ ಅಲಿ ಟಿ20: ಸರ್ವಿಸಸ್‌ಗೆ ಸೋಲುಣಿಸಿದ ಕರ್ನಾಟಕ

12:25 AM Nov 13, 2019 | Team Udayavani |

ವಿಜಯನಗರ (ಆಂಧ್ರಪ್ರದೇಶ): ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಕ್ರಿಕೆಟ್‌ ಕೂಟದಲ್ಲಿ ಕರ್ನಾಟಕ 3ನೇ ಗೆಲುವು ಕಂಡಿದೆ. ಸರ್ವಿಸಸ್‌ ವಿರುದ್ಧ ಮಂಗಳವಾರ ನಡೆದ ಪಂದ್ಯದಲ್ಲಿ ರಾಜ್ಯ ತಂಡವು 80 ರನ್‌ಗಳ ಭಾರೀ ಅಂತರದ ಜಯ ಸಾಧಿಸಿತು.

Advertisement

ನಾಯಕ ಮನೀಷ್‌ ಪಾಂಡೆ ಅವರ ಅಜೇಯ 129 ರನ್‌ ಹಾಗೂ ದೇವದತ್ತ ಪಡಿಕ್ಕಲ್‌ (75) ಅವರ ಅಮೋಘ ಬ್ಯಾಟಿಂಗ್‌ ಸಾಹಸದಿಂದ ಕರ್ನಾಟಕ 20 ಓವರ್‌ಗಳಲ್ಲಿ 3 ವಿಕೆಟಿಗೆ 250 ರನ್ನುಗಳ ಬೃಹತ್‌ ಮೊತ್ತ ಪೇರಿಸಿತು. ಈ ಗುರಿ ಬೆನ್ನಟ್ಟಿದ ಸರ್ವಿಸಸ್‌ ಸ್ಪಿನ್ನರ್‌ ಶ್ರೇಯಸ್‌ ಗೋಪಾಲ್‌ (19ಕ್ಕೆ 5) ಮಾರಕ ದಾಳಿಗೆ ಸಿಲುಕಿ 20 ಓವರ್‌ಗಳಲ್ಲಿ 7 ವಿಕೆಟಿಗೆ 170 ರನ್‌ ಗಳಿಸಿ ಶರಣಾಯಿತು.

ಈ ಗೆಲುವಿನೊಂದಿಗೆ ಕರ್ನಾಟಕ “ಎ’ ಗುಂಪಿನಲ್ಲಿ 12 ಅಂಕ ಗಳಿಸಿ ಅಗ್ರಸ್ಥಾನಕ್ಕೇರಿತು (4 ಪಂದ್ಯ, 3 ಗೆಲುವು, 1 ಸೋಲು). ಇಷ್ಟೇ ಅಂಕ ಗಳಿಸಿರುವ ಬರೋಡ 2ನೇ ಸ್ಥಾನದಲ್ಲಿದೆ. ನ. 15ರಂದು ಕೋಲ್ಕತಾದಲ್ಲಿ ನಡೆಯಲಿರುವ 5ನೇ ಪಂದ್ಯದಲ್ಲಿ ರಾಜ್ಯ ತಂಡ ಬಿಹಾರವನ್ನು ಎದುರಿಸಲಿದೆ.

ಸಿಡಿದ ಪಾಂಡೆ, ಪಡಿಕ್ಕಲ್‌ ಮೊದಲು ಬ್ಯಾಟಿಂಗಿಗೆ ಇಳಿದ ಕರ್ನಾಟಕ 5 ರನ್‌ ಗಳಿಸುವಷ್ಟರಲ್ಲಿ ರೋಹನ್‌ ಕದಮ್‌ (4 ರನ್‌) ವಿಕೆಟ್‌ ಕಳೆದುಕೊಂಡು ಆಘಾತ ಅನುಭವಿಸಿತು. ಆದರೆ 2ನೇ ವಿಕೆಟಿಗೆ ಜತೆಗೂಡಿದ ದೇವದತ್ತ ಪಡಿಕ್ಕಲ್‌-ಮನೀಷ್‌ ಪಾಂಡೆ ಸ್ಫೋಟಕ ಬ್ಯಾಟಿಂಗ್‌ ನಡೆಸಿದರು. ರನ್‌ ಪ್ರವಾಹವೇ ಹರಿದು ಬಂತು. 2ನೇ ವಿಕೆಟಿಗೆ 167 ರನ್‌ ರಾಶಿ ಬಿತ್ತು.

ಮನೀಷ್‌ ಪಾಂಡೆ ಕೇವಲ 54 ಎಸೆತಗಳಿಂದ 12 ಬೌಂಡರಿ, 10 ಸಿಕ್ಸರ್‌ ನೆರವಿನಿಂದ 129 ರನ್‌ ಬಾರಿಸಿ ಸರ್ವಿಸಸ್‌ ದಾಳಿಯನ್ನು ಪುಡಿಗಟ್ಟಿದರು. ಪಡಿಕ್ಕಲ್‌ ಅವರ 75 ರನ್‌ 43 ಎಸೆತಗಳಿಂದ ಬಂತು. ಸಿಡಿಸಿದ್ದು 8 ಬೌಂಡರಿ, 4 ಸಿಕ್ಸರ್‌. ಪಡಿಕ್ಕಲ್‌ ಆಂಧ್ರಪ್ರದೇಶ ವಿರುದ್ಧ ಸೋಮವಾರವಷ್ಟೇ ಅಜೇಯ 122 ರನ್‌ ಸಿಡಿಸಿದ್ದರು. ಕೆ. ಗೌತಮ್‌ (23) ಹಾಗೂ ಪ್ರವೀಣ್‌ ದುಬೆ (ಅಜೇಯ 9) ತಂಡದ ಮೊತ್ತವನ್ನು 250 ರನ್‌ ತನಕ ಕೊಂಡೊಯ್ದರು.

Advertisement

ಸ್ಪಿನ್‌ ಬಲೆಗೆ ಬಿದ್ದ ಸರ್ವಿಸಸ್‌
ಸರ್ವಿಸಸ್‌ ಶ್ರೇಯಸ್‌ ಗೋಪಾಲ್‌ ಸ್ಪಿನ್‌ ದಾಳಿಗೆ ತತ್ತರಿಸಿತು. ಅಪಾಯಕಾರಿಯಾಗಿ ಪರಿಣಮಿಸಿದ್ದ ರವಿ ಚೌಹಾಣ್‌ (54) ಅವರನ್ನು ಔಟ್‌ ಮಾಡಿದ ಗೋಪಾಲ್‌, ಬಳಿಕ ವಿಕಾಸ್‌ ಹತ್ವಾಲ (11), ನಕುಲ್‌ ಶರ್ಮ (5), ದಿವೇಶ್‌ ಪಠಾಣಿಯ (0) ಮತ್ತು ಮೋಹಿತ್‌ ಕುಮಾರ್‌ (0) ಅವರನ್ನು ಪೆವಿಲಿಯನ್ನಿಗೆ ಅಟ್ಟಿದರು. ರಜತ್‌ ಪಾಲಿವಾಲ್‌ ಅಜೇಯ 46 ರನ್‌ ಹೊಡೆದರು.

ಸಂಕ್ಷಿಪ್ತ ಸ್ಕೋರ್‌: ಕರ್ನಾಟಕ-3 ವಿಕೆಟಿಗೆ 250 (ಪಾಂಡೆ ಅಜೇಯ 129, ಪಡಿಕ್ಕಲ್‌ 75). ಸರ್ವಿಸಸ್‌-7 ವಿಕೆಟಿಗೆ 170 (ರವಿ ಚೌಹಾಣ್‌ 54, ಪಾಲಿವಾಲ್‌ ಔಟಾಗದೆ 46, ಶ್ರೇಯಸ್‌ ಗೋಪಾಲ್‌ 19ಕ್ಕೆ 5).

ಮುಂಬಯಿಗೆ 4ನೇ ಜಯ
ಮಂಗಳವಾರ ಇಲ್ಲಿ ನಡೆದ ಮುಖಾಮುಖೀಯಲ್ಲಿ ಪುದುಚೇರಿಯನ್ನು 27 ರನ್ನುಗಳಿಂದ ಮಣಿಸಿದ ಮುಂಬಯಿ, ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಕೂಟದಲ್ಲಿ ಸತತ 4ನೇ ಜಯ ದಾಖಲಿಸಿತು. ಇದಕ್ಕೂ ಹಿಂದಿನ ಪಂದ್ಯಗಳಲ್ಲಿ ಮಿಜೋರಂ, ಹರ್ಯಾಣ ಮತ್ತು ಮಧ್ಯಪ್ರದೇಶವನ್ನು ಸೋಲಿಸಿತ್ತು.
ಬ್ಯಾಟಿಂಗಿಗೆ ಇಳಿಸಲ್ಪಟ್ಟ ಮುಂಬಯಿ 6 ವಿಕೆಟಿಗೆ 171 ರನ್‌ ಪೇರಿಸಿದರೆ, ಪುದುಚೇರಿ 7 ವಿಕೆಟಿಗೆ 144 ರನ್‌ ಮಾಡಿತು. ಮುಂಬಯಿ ಪರ ಸೂರ್ಯಕುಮಾರ್‌ ಯಾದವ್‌ 57 ರನ್‌ ಬಾರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next