Advertisement

ಇಂದು ಕರ್ನಾಟಕಕ್ಕೆ ಮಹಾರಾಷ್ಟ್ರ ಎದುರಾಳಿ

12:30 AM Mar 14, 2019 | Team Udayavani |

ಇಂದೋರ್‌: ಲೀಗ್‌ನಲ್ಲಿ ಪ್ರಚಂಡ ಪ್ರದರ್ಶನ ನೀಡಿ, ಸೂಪರ್‌ ಲೀಗ್‌ನಲ್ಲಿ ಮೆರೆದಾಡಿ, 11 ಸತತ ಗೆಲುವಿನ ಸರದಾರನಾಗಿ ಮೆರೆದ ಕರ್ನಾಟಕ ತಂಡ “ಸಯ್ಯದ್‌ ಮುಷ್ತಾಕ್‌ ಅಲಿ ಟಿ20′ ಕೂಟದ ಫೈನಲ್‌ ಹಣಾಹಣಿಯಲ್ಲಿ ಗುರುವಾರ ಮಹಾರಾಷ್ಟ್ರ ತಂಡವನ್ನು ಎದುರಿಸಲಿದೆ.

Advertisement

ಕರ್ನಾಟಕ ಮೊದಲ ಬಾರಿಗೆ ಕಪ್‌ ಗೆಲ್ಲುವ ಕನಸು ಕಾಣುತ್ತಿದ್ದರೆ, ರಾಜ್ಯದ ಆಸೆಗೆ ತಣ್ಣೀರೆರಚಲು ಮಹಾರಾಷ್ಟ್ರ ಕಾದು ಕುಳಿತಿದೆ. ಸೂಪರ್‌ ಲೀಗ್‌ನಲ್ಲಿ ಮಹಾರಾಷ್ಟ್ರ ಕೂಡ ನಾಲ್ಕೂ ಪಂದ್ಯ ಗೆದ್ದು ತಾನು ಕೂಡ ಬಲಿಷ್ಠ ಎನ್ನುವುದನ್ನು ಸಾರಿದೆ. ಹಾಗಾಗಿ ಎರಡೂ ತಂಡಗಳ ಸೆಣಸಾಟ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

ಸೋಲಿಲ್ಲದ ಸರದಾರ
ಲೀಗ್‌ ಹಂತದಲ್ಲಿ ಕರ್ನಾಟಕ “ಡಿ’ ಗುಂಪಿನಲ್ಲಿ ಆಡಿತ್ತು. ಅಲ್ಲಿ ಏಳೂ ಪಂದ್ಯ ಜಯಿಸಿñ 28 ಅಂಕದೊಂದಿಗೆ ಅಗ್ರಸ್ಥಾನ ಅಲಂಕರಿಸಿತ್ತು. ಇದೇ ಓಟವನ್ನು ಸೂಪರ್‌ ಲೀಗ್‌ನಲ್ಲೂ ಮುಂದುವರಿಸಿತ್ತು. ಸೂಪರ್‌ ಲೀಗ್‌ನ “ಬಿ’ ಗುಂಪಿನಲ್ಲಿ ನಾಲ್ಕೂ ಪಂದ್ಯವನ್ನು ಜಯಿಸಿ ಮೆರೆದಿತ್ತು. ಅಜೇಯವಾಗಿರುವ ಕರ್ನಾಟಕ ಪ್ರಸಕ್ತ ಕೂಟದಲ್ಲಿ ಸೋಲನ್ನೇ ಕಂಡಿಲ್ಲ. ಇದು ರಾಜ್ಯ ತಂಡದ ಸ್ಥಿರ ಪ್ರದರ್ಶನಕ್ಕೆ ಸಾಕ್ಷಿ. ಬ್ಯಾಟಿಂಗ್‌, ಬೌಲಿಂಗ್‌ ಎರಡರಲ್ಲೂ ರಾಜ್ಯ ಆಟಗಾರರು ಪ್ರಬುದ್ಧ ಆಟ ಪ್ರದರ್ಶಿಸುತ್ತಿದ್ದಾರೆ.

ರಾಜ್ಯದ ಬಿ.ಆರ್‌. ಶರತ್‌ ಹಾಗೂ ರೋಹನ್‌ ಕದಮ್‌ ಆರಂಭಿಕರಾಗಿ ಯಶಸ್ವಿಯಾಗಿದ್ದಾರೆ. ಮನೀಷ್‌ ಪಾಂಡೆ ನಾಯಕನ ಆಟವಾಡುತ್ತ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸುತ್ತಿದ್ದಾರೆ. ಆದರೆ ಕರುಣ್‌ ನಾಯರ್‌ ಹಾಗೂ ಮಾಯಾಂಕ್‌ ಅಗರ್ವಾಲ್‌ ಸಿಡಿದಿಲ್ಲ. ಇದು ತುಸು ಹಿನ್ನಡೆಯಾದೀತು.

ಬೌಲಿಂಗ್‌ನಲ್ಲಿ ರಾಜ್ಯ ಆಟಗಾರ ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ವಿನಯ್‌ ಕುಮಾರ್‌ ತನ್ನಲ್ಲಿ ಇನ್ನೂ ಬೌಲಿಂಗ್‌ ಶಕ್ತಿ ಜೀವಂತವಾಗಿದೆ ಎನ್ನುವುದನ್ನು ಸಾರಿದ್ದಾರೆ. ಮತ್ತೋರ್ವ ವೇಗಿ ಅಭಿಮನ್ಯು ಮಿಥುನ್‌ ಕೂಡ ಪರಿಣಾಮಕಾರಿ ದಾಳಿ ಸಂಘಟಿಸುತ್ತಿದ್ದಾರೆ. ಜತೆಗೆ ಸ್ಪಿನ್ನರ್‌ಗಳಾದ ಜೆ. ಸುಚಿತ್‌, ಶ್ರೇಯಸ್‌ ಗೋಪಾಲ್‌, ವಿ. ಕೌಶಿಕ್‌, ಕೆ.ಸಿ. ಕಾರಿಯಪ್ಪ ತಂಡಕ್ಕೆ ನೆರವಾಗುತ್ತಿದ್ದಾರೆ.

Advertisement

ಅಪಾಯಕಾರಿ ಮಹಾರಾಷ್ಟ್ರ
ಎರಡನೇ ಸಲ ಟ್ರೋಫಿಯ ಮೇಲೆ ಮಹಾರಾಷ್ಟ್ರ ತಂಡ ಕಣ್ಣು ನೆಟ್ಟಿದೆ. 2009-10ರ ಫೈನಲ್‌ನಲ್ಲಿ ಮಹಾರಾಷ್ಟ್ರ ತಂಡ ಹೈದರಾಬಾದ್‌ ವಿರುದ್ಧ ಗೆಲುವು ಸಾಧಿಸಿ ಮೊದಲ ಸಲ ಟ್ರೋಫಿ ಗೆದ್ದಿತ್ತು. ಲೀಗ್‌ನಲ್ಲಿ “ಇ’ ಗುಂಪಿನಲ್ಲಿ ಸ್ಥಾನ ಪಡೆದಿದ್ದ ಮಹಾರಾಷ್ಟ್ರ 7 ಪಂದ್ಯಗಳಲ್ಲಿ 5 ಗೆಲುವು, ಒಂದು ಸೋಲು ಕಂಡಿತ್ತು. ಒಂದು ಪಂದ್ಯ ರದ್ದಾಗಿತ್ತು. ಸೂಪರ್‌ ಲೀಗ್‌ನಲ್ಲೂ ಮಹಾರಾಷ್ಟ್ರ ಅದೇ ಜೋಶ್‌ನಲ್ಲಿ ಆಡಿ ನಾಲ್ಕೂ ಪಂದ್ಯದಲ್ಲಿ ಅರ್ಹ ಜಯ ಸಾಧಿಸಿತ್ತು.

ನಿಖೀಲ್‌ ನಾಯ್ಕ, ನೌಷಾದ್‌ ಶೇಖ್‌ ಬ್ಯಾಟಿಂಗ್‌ ವಿಭಾಗದ ಪ್ರಮುಖರು. ಬೌಲಿಂಗ್‌ನಲ್ಲಿ ಸಮದ್‌ ಫ‌ಲ್ಹಾ, ಸತ್ಯಜಿತ್‌ ಬಚಾಬ್‌, ದಿವ್ಯಾಂಗ್‌ ಎದುರಾಳಿಯ ನಿದ್ದೆಗೆಡಿಸಬಲ್ಲರು. ಹೀಗಾಗಿ ಕರ್ನಾಟಕ ಆಟಗಾರರು ಫೈನಲ್‌ನಲ್ಲಿ ಮಹಾರಾಷ್ಟ್ರವನ್ನು ಗಂಭೀರವಾಗಿ ಪರಿಗಣಿಸಿ ಕಣಕ್ಕೆ ಇಳಿಯಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next