ಬೆಂಗಳೂರು: ಭಾರತ ಮಾಜಿ ಕ್ರಿಕೆಟಿಗ ರಾಜ್ಯದ ಸೈಯದ್ ಕಿರ್ಮಾನಿ ಈಗ ಹೊಸ ವಿವಾದವೊಂದಕ್ಕೆ ಸಿಲುಕಿದ್ದಾರೆ. ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಸಾವಿನ ಬಳಿಕ ನೇತ್ರದಾನ ಮಾಡುವೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದ ಅವರು ಬೆನ್ನಲ್ಲೇ ತಮ್ಮ ಹೇಳಿಕೆಯಿಂದ ದಿಢೀರ್ ಹಿಂದಕ್ಕೆ ಸರಿದಿದ್ದಾರೆ. ಧಾರ್ಮಿಕ ನಂಬಿಕೆಗಳಿಗೆ ಕಟ್ಟು ಬಿದ್ದು ಅವರು ಇಂತಹದೊಂದು ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಆಂಗ್ಲ ಮಾಧ್ಯಮ ವರದಿ ಮಾಡಿದೆ.
ಮೊದಲು “ಯಸ್’ ಆಮೇಲೆ “ನೋ’ ಏಕೆ?: ಬೆಂಗಳೂರಿನಲ್ಲಿ ಇತ್ತೀಚೆಗೆ ರೋಟರಿ ರಾಜನ್ ಐ ಬ್ಯಾಂಕ್ ಹಾಗೂ ರೋಟರಿ ಕ್ಲಬ್ ಮದ್ರಾಸ್ ಏರ್ಪಡಿಸಿದ್ದ ಜಾಗೃತಿ ಕಾರ್ಯಕ್ರಮವೊಂದರಲ್ಲಿ ಕಿರ್ಮಾನಿ ಭಾಗವಹಿಸಿದ್ದರು. ಈ ವೇಳೆ ಅವರು ನೇತ್ರದಾನ ಹಾಗೂ ಅದರ ಮಹತ್ವದ ಬಗ್ಗೆ
ತಮ್ಮ ಭಾಷಣದಲ್ಲಿ ಮಾತನಾಡಿದ್ದರು. ಕಣ್ಣು ದಾನ ಶ್ರೇಷ್ಠ ದಾನ. ಇನ್ನೊಬ್ಬರ ಬಾಳಿಗೆ ನಾವು ಬೆಳಕಾಗಬೇಕು. ಭಾರತ ಅಂಧರ ಕ್ರಿಕೆಟ್ ತಂಡದ ಸದಸ್ಯರನ್ನು ನೋಡಿದ ಬಳಿಕ ನಾನು ನನ್ನ ಮರಣ ನಂತರ ಕಣ್ಣುಗಳನ್ನು ದಾನ ಮಾಡಲು ನಿರ್ಧರಿಸಿದ್ದೇನೆ. ನೀವೂ ಕೂಡ ದಾನ ಮಾಡಿ ಎಂದು ಕಿವಿಮಾತು ಹೇಳಿದ್ದರು.
ಇದಾದ ಬಳಿಕ ಅವರು ದಿಢೀರ್ ತಮ್ಮ ನಿರ್ಧಾರದಿಂದ ಹಿಂದೆ ಸರಿದರು. “ನಾನು ಕಣ್ಣು ದಾನ ಮಾಡುವುದರಿಂದ ನನ್ನ ಧಾರ್ಮಿಕ ಭಾವನೆಗಳಿಗೆ ದಕ್ಕೆಯಾಗುತ್ತದೆ. ನಾನೊಬ್ಬ ಭಾವನಾತ್ಮಕ ವ್ಯಕ್ತಿ. ರಾಜನ್ಸ್ ಅವರ ಉತ್ತಮ ಕಾರ್ಯದಿಂದ ಪ್ರೇರಿತನಾಗಿ ಇಂತಹದೊಂದು ನಿರ್ಧಾರಕ್ಕೆ ಬಂದಿದ್ದೆ. ಧಾರ್ಮಿಕ ಭಾವನೆಗಳಿಗೆ ದಕ್ಕೆಯಾಗುವುದರಿಂದ ಮಾತನ್ನು ಹಿಂದಕ್ಕೆ ತೆಗೆದುಕೊಳ್ಳುತ್ತಿರುವುದಾಗಿ ತಿಳಿಸಿದರು. ಕಿರ್ಮಾನಿ ಭಾರತ ತಂಡದ ಮಾಜಿ ವಿಕೆಟ್ ಕೀಪರ್. 1983ರಲ್ಲಿ ಕಪಿಲ್ ಪಡೆ ಮೊದಲ ವಿಶ್ವಕಪ್ ಗೆದ್ದ ತಂಡದ ಸದಸ್ಯರಾಗಿದ್ದರು.