Advertisement

ಮತ್ತೆ ಸಿಡ್ನಿ ಸವಾಲು: ಸಿಡಿದೀತೇ ಟೀಮ್‌ ಇಂಡಿಯಾ?

10:10 PM Nov 28, 2020 | mahesh |

ಸಿಡ್ನಿ: ಟೀಮ್‌ ಇಂಡಿಯಾಕ್ಕೆ ಮತ್ತೆ ಸಿಡ್ನಿ ಸವಾಲು ಎದುರಾಗಿದೆ. ಶುಕ್ರವಾರದ ಮೊದಲ ಪಂದ್ಯದ ವೇಳೆ ಕಳಪೆ ಕ್ಷೇತ್ರರಕ್ಷಣೆ, ದುಬಾರಿ ಬೌಲಿಂಗ್‌, ಪ್ರಮುಖ ಬ್ಯಾಟ್ಸ್‌ಮನ್‌ಗಳ ವೈಫ‌ಲ್ಯಕ್ಕೆ ತಕ್ಕ ಬೆಲೆ ತೆತ್ತಿದ್ದ ಭಾರತ, ರವಿವಾರ ಈ ಸಮಸ್ಯೆಗಳನ್ನೆಲ್ಲ ಬಗೆಹರಿಸಿಕೊಂಡು ಗೆಲ್ಲಲು ಪ್ರಯತ್ನಿಸಬೇಕಿದೆ. ಇಲ್ಲವಾದರೆ ಸರಣಿ ಕೈಜಾರಲಿದೆ. ಇನ್ನೊಂದೆಡೆ ಆಸ್ಟ್ರೇಲಿಯ 2018-19ರ ಸರಣಿ ಸೋಲಿಗೆ ಸೇಡು ತೀರಿಸಿಕೊಳ್ಳಲು ಯೋಜನೆ ರೂಪಿಸುತ್ತಿದೆ. ಮೊದಲ ಪ್ರಯತ್ನದಲ್ಲಿ ಅದು ಯಶಸ್ಸು ಕಂಡಿದೆ. ಹೀಗಾಗಿ ತುಂಬು ಆತ್ಮವಿಶ್ವಾಸದಲ್ಲಿದೆ.

Advertisement

ಕಳೆದ ಸಲವೂ ಭಾರತ ಸಿಡ್ನಿಯ ಮೊದಲ ಪಂದ್ಯವನ್ನು ಕಳೆದುಕೊಂಡ ಬಳಿಕವೇ ಸರಣಿ ವಶಪಡಿಸಿಕೊಂಡಿತ್ತು ಎಂಬುದು ಉಲ್ಲೇಖನೀಯ. ಆದರೆ ಅನಂತರದ ಪಂದ್ಯಗಳು ಅಡಿಲೇಡ್‌ ಮತ್ತು ಮೆಲ್ಬರ್ನ್ನಲ್ಲಿ ನಡೆದಿದ್ದವು. ಎರಡರಲ್ಲೂ ಕೊಹ್ಲಿ ಪಡೆ ಯಶಸ್ವಿ ಚೇಸಿಂಗ್‌ ನಡೆಸಿ ಇತಿಹಾಸ ನಿರ್ಮಿಸಿತ್ತು.

ಆದರೆ ಈ ಬಾರಿ ಮತ್ತೆ ಸಿಡ್ನಿಯಲ್ಲೇ ಆಡಬೇಕಾದ ಪರಿಸ್ಥಿತಿ ಇದೆ. ಇಲ್ಲಿ ಕಳೆದ ಕೆಲವು ವರ್ಷಗಳಿಂದ ಆಸ್ಟ್ರೇಲಿಯ ಗೆಲುವಿನ ಬಾವುಟ ಹಾರಿಸುತ್ತಲೇ ಬಂದಿದೆ. ಹಿಂದಿನ 16 ಪಂದ್ಯಗಳಲ್ಲಿ 12 ಜಯ ಸಾಧಿಸಿದೆ. ಇನ್ನೊಂದೆಡೆ ಆಸೀಸ್‌ ಎದುರು ಇಲ್ಲಿ ಆಡಿದ 18 ಪಂದ್ಯಗಳಲ್ಲಿ 15 ಸೋಲನುಭವಿಸಿದ್ದು ಭಾರತಕ್ಕೆ ಭಾರೀ ಹಿನ್ನಡೆಯಾಗಿ ಪರಿಣಮಿಸಿದೆ.

ಬ್ಯಾಟಿಂಗ್‌ ಪ್ಯಾರಡೈಸ್‌
ಸಿಡ್ನಿ ಅಂದರೆ ಬ್ಯಾಟಿಂಗ್‌ ಸ್ವರ್ಗ. ಮೊದಲು ಬ್ಯಾಟಿಂಗ್‌ ನಡೆಸಿದ ತಂಡಕ್ಕೆ ಕನಿಷ್ಠ 300 ರನ್‌ ಕಟ್ಟಿಟ್ಟ ಬುತ್ತಿ. ಅಂದಮಾತ್ರಕ್ಕೆ ಶುಕ್ರವಾರ ಆಸ್ಟ್ರೇಲಿಯಕ್ಕೆ 374 ರನ್‌ ಬಿಟ್ಟು ಕೊಟ್ಟದ್ದು ಮಾತ್ರ ಭಾರತದ ಧಾರಾಳತನವೆನ್ನದೆ ವಿಧಿಯಿಲ್ಲ! ದೊಡ್ಡ ಮಟ್ಟದ ಮಿಸ್‌ ಫೀಲ್ಡಿಂಗ್‌ ಜತೆಗೆ ಕೆಲವು ಕ್ಯಾಚ್‌ಗಳನ್ನು ಕೈಚೆಲ್ಲಿದ್ದು ಭಾರತಕ್ಕೆ ಹಿನ್ನಡೆಯಾಗಿ ಪರಿಣಮಿಸಿತು. ಕನಿಷ್ಠ 40 ರನ್ನುಗಳನ್ನು ಭಾರತ ಬೋನಸ್‌ ರೂಪದಲ್ಲಿ ನೀಡಿ ಸೋಲನ್ನು ತಾನಾಗಿಯೇ ಆಹ್ವಾನಿಸಿಕೊಂಡಿತು.

ಆಸ್ಟ್ರೇಲಿಯವನ್ನು 330-340ರ ಗಡಿಯಲ್ಲಿ ನಿಲ್ಲಿಸಿದರೆ ಭಾರತಕ್ಕೆ ಖಂಡಿತ ವಾಗಿಯೂ ಚಾನ್ಸ್‌ ಇತ್ತು. ಏಕೆಂದರೆ ಸಿಡ್ನಿಯಲ್ಲಿ ಬೌಲಿಂಗ್‌ ಮ್ಯಾಜಿಕ್‌ ನಡೆಯುವ ಯಾವುದೇ ಸಾಧ್ಯತೆ ಇರಲಿಲ್ಲ. ಆದರೆ 375 ರನ್‌ ಟಾರ್ಗೆಟ್‌ ಎಂದಾಗಲೇ ಅರ್ಧ ಶಕ್ತಿ ಉಡುಗಿ ಹೋದ ಅನುಭವವಾಗುತ್ತದೆ. ಶುಕ್ರವಾರ ಆದದ್ದೂ ಇದೇ.

Advertisement

ಇಲ್ಲಿ ಬಿಂದಾಸ್‌ ಆಗಿ ಬ್ಯಾಟ್‌ ಬೀಸಬಹುದು ಎಂಬುದನ್ನು ಪಾಂಡ್ಯ ತೋರಿಸಿ ಕೊಟ್ಟಿದ್ದಾರೆ. ಧವನ್‌ ಕೂಡ ತಂಡವನ್ನು ಆಧರಿಸುವ ಕೆಲಸ ಮಾಡಿದ್ದಾರೆ. ಇವರಿಬ್ಬರ ಹೋರಾಟದ ವೇಳೆ 375 ರನ್‌ ಕೂಡ ಭಾರತಕ್ಕೆ ಎಟಕುವ ಸಾಧ್ಯತೆ ಇತ್ತು. ಆದರೆ ಅಗರ್ವಾಲ್‌, ಕೊಹ್ಲಿ, ಅಯ್ಯರ್‌, ರಾಹುಲ್‌ ಅವರ ವೈಫ‌ಲ್ಯ ಮುಳುವಾಯಿತು. ಇವರಲ್ಲಿ ಇಬ್ಬರಾದರೂ ಕ್ರೀಸ್‌ ಆಕ್ರಮಿಸಿಕೊಂಡಿದ್ದರೆ ಪಂದ್ಯದ ಕತೆಯೇ ಬೇರೆ ಇರುತ್ತಿತ್ತು. ರವಿವಾರ ಇವರೆಲ್ಲರ ಬ್ಯಾಟುಗಳೂ ಮಾತಾಡಬೇಕಿವೆ.

ರನ್‌ ನೀಡಲು ಪೈಪೋಟಿ!
ಬೌಲಿಂಗ್‌ನಲ್ಲಿ ಶಮಿ ಹೊರತುಪಡಿಸಿ ಉಳಿದವರೆಲ್ಲರದೂ ಘೋರ ವೈಫ‌ಲ್ಯ. ಬುಮ್ರಾ, ಚಹಲ್‌, ಸೈನಿ, ಜಡೇಜ… ಎಲ್ಲರೂ ರನ್‌ ಕೊಡಲು ಪೈಪೋಟಿ ನಡೆಸಿದಂತಿತ್ತು. ಯಾರಿಂದಲೂ ಆಸೀಸ್‌ ಸರದಿಯ ಮೇಲೆ ಒತ್ತಡ ಹೇರಲು ಸಾಧ್ಯವಾಗಲಿಲ್ಲ. ಆರಂಭಿಕ ಜೋಡಿಯನ್ನು ಬೇರ್ಪಡಿಸಲಿಕ್ಕೇ 28 ಓವರ್‌ ತೆಗೆದುಕೊಂಡದ್ದು ಪ್ರವಾಸಿಗರ ಬೌಲಿಂಗ್‌ ವೈಫ‌ಲ್ಯಕ್ಕೆ ಉತ್ತಮ ನಿದರ್ಶನ.

ದ್ವಿತೀಯ ಪಂದ್ಯಕ್ಕಾಗಿ ಭಾರತದ ಬೌಲಿಂಗ್‌ ಸರದಿಯಲ್ಲಿ 2 ಬದಲಾವಣೆ ಸಂಭವಿಸುವ ಸಾಧ್ಯತೆ ಇದೆ. ನವದೀಪ್‌ ಸೈನಿ ಮತ್ತು ಯಜುವೇಂದ್ರ ಚಹಲ್‌ ಬದಲು ಶಾರ್ದೂಲ್‌ ಹಾಗೂ ಕುಲದೀಪ್‌ಅವಕಾಶ ಪಡೆಯಬಹುದು.

ಆಸೀಸ್‌ ಒತ್ತಡದಲ್ಲಿಲ್ಲ
ಆಸ್ಟ್ರೇಲಿಯ ಯಾವುದೇ ಒತ್ತಡದಲ್ಲಿಲ್ಲ. ಫಿಂಚ್‌, ಸ್ಮಿತ್‌, ವಾರ್ನರ್‌, ಮ್ಯಾಕ್ಸ್‌ ವೆಲ್‌ ಪ್ರಚಂಡ ಬ್ಯಾಟಿಂಗ್‌ ಫಾರ್ಮ್ ತೋರ್ಪಡಿಸಿದ್ದಾರೆ. ಗಾಯಾಳು ಸ್ಟೋಯಿನಿಸ್‌ ಬದಲು ಕ್ಯಾಮರೂನ್‌ ಗ್ರೀನ್‌ ಒನ್‌ಡೇ ಕ್ಯಾಪ್‌ ಧರಿಸಬಹುದು. ಕಾಂಗರೂ ಬೌಲಿಂಗ್‌ ಘಾತಕವಾಗೇನೂ ಪರಿಣಮಿಸಿಲ್ಲ. 375ರಷ್ಟು ದೊಡ್ಡ ಟಾರ್ಗೆಟ್‌ ಇದ್ದುದರಿಂದ ಬೌಲರ್‌ಗಳ ಕೆಲಸ ಸುಲಭವಾಗಿದೆ, ಅಷ್ಟೇ. ಒಮ್ಮೆ ಈ ಎಸೆತಗಳನ್ನು ಪುಡಿಗಟ್ಟತೊಡಗಿದರೆ ಇವರೂ ದಿಕ್ಕು ತಪ್ಪುತ್ತಾರೆ. ಆ ಕೆಲಸ ಭಾರತದಿಂದಾಗಬೇಕು.

Advertisement

Udayavani is now on Telegram. Click here to join our channel and stay updated with the latest news.

Next