ಸಿಡ್ನಿ: ಆಸ್ಟ್ರೇಲಿಯದ ಸ್ಪಿನ್ನರ್ ನಥನ್ ಲಿಯಾನ್ ಮಹತ್ವದ ದಾಖಲೆಯೊಂದರ ಸನಿಹದಲ್ಲಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 400 ವಿಕೆಟ್ ಗಳಿಸಿದ ಆಟಗಾರರ ಪಟ್ಟಿಗೆ ಸೇರಲು ಲಿಯಾನ್‌ಗೆ ಕೇವಲ 6 ವಿಕೆಟ್‌ಗಳ ಆವಶ್ಯಕತೆಯಿದೆ.
ಡೇವಿಡ್ ವಾರ್ನರ್ ಮೂರನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವುದು ಬಹುತೇಕ ನಿಶ್ಚಿತ. ಸಿಡ್ನಿ ಅಂಗಳ ಡೇವಿಡ್ ವಾರ್ನರ್ ಗೆ ನೆಚ್ಚಿನ ಕ್ರೀಡಾಂಗಣವಾಗಿದ್ದು ಆಡಿರುವ 8 ಪಂದ್ಯಗಳಲ್ಲಿ 732 ರನ್ ದಾಖಲಿಸಿದ್ದಾರೆ. 66.54ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿರುವ ವಾರ್ನರ್ 4 ಶತಕ ದಾಖಲಿಸಿದ್ದಾರೆ.
ಮುಂದಿನ ಪಂದ್ಯದಲ್ಲಿ ಒಂದು ಶತಕವನ್ನು ದಾಖಲಿಸಿದರೆ ಡೇವಿಡ್ ಬೂನ್ ಹಾಗೂ ಗ್ರೆಗ್ ಚಾಪೆಲ್ ಹೆಸರಿನಲ್ಲಿರುವ ಒಂದೇ ಅಂಗಳದಲ್ಲಿ ಅತಿ ಹೆಚ್ಚು ಶತಕ ದಾಖಲಿಸಿದ ಸಾಧನೆಯನ್ನು ವಾರ್ನರ್ ಮೀರಿ ನಿಲ್ಲಲಿದ್ದಾರೆ.
ಟೀಮ್ ಇಂಡಿಯಾದ ಅನುಭವಿ ಆಟಗಾರ ರೋಹಿತ್ ಶರ್ಮ ಮೂರನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವ ನಿರೀಕ್ಷೆಯಿದೆ. ಈ ಪಂದ್ಯದಲ್ಲಿ ರೋಹಿತ್ ಶರ್ಮ ಟೆಸ್ಟ್ ಕ್ರಿಕೆಟ್‌ನಲ್ಲಿ ಅಪರೂಪದ ಮೈಲಿಗಲ್ಲೊಂದನ್ನು ಸ್ಥಾಪಿಸುವ ಸಾಧ್ಯತೆಯಿದೆ. ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಸ್ಟ್ರೇಲಿಯ ವಿರುದ್ಧ 100 ಸಿಕ್ಸರ್ (ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ) ಸಿಡಿಸುವ ಅವಕಾಶ ರೋಹಿತ್ ಶರ್ಮಾ ಮುಂದಿದೆ. ಆಸಿಸ್ ವಿರುದ್ಧ 64 ಪಂದ್ಯಗಳನ್ನು ಆಡಿರುವ ರೋಹಿತ್ 99 ಸಿಕ್ಸರ್ ಬಾರಿಸಿದ್ದಾರೆ.