ಸಿಡ್ನಿ: ಮೊದಲ ದಿನದ ಹಿನ್ನಡೆಯ ಹೊರತಾಗಿಯೂ ವೇಗಿಗಳು ಉರಿದಾಳಿ ನಡೆಸಿ ಭಾರತಕ್ಕೆ ಅಲ್ಪ ಮುನ್ನಡೆ ಒದಗಿಸಿದ್ದಾರೆ. ಆಸ್ಟ್ರೇಲಿಯಾ ತಂಡವು 181 ರನ್ ಗಳಿಗೆ ಆಲೌಟಾಗಿದ್ದು, ಭಾರತ ತಂಡವು ಮೊದಲ ಇನ್ನಿಂಗ್ಸ್ ನಲ್ಲಿ ನಾಲ್ಕು ರನ್ ಗಳ ಮುನ್ನಡೆ ಸಾಧಿಸಿದೆ.
ಒಂದು ವಿಕೆಟ್ ನಷ್ಟಕ್ಕೆ 9 ವಿಕೆಟ್ ಕಳೆದುಕೊಂಡಲ್ಲಿಂದ ಎರಡನೇ ದಿನದಾಟ ಆರಂಭಿಸಿದ ಆಸ್ಟ್ರೇಲಿಯಾ ತಂಡವು ಮಾರ್ನಸ್ ಲಬುಶೇನ್ ರೂಪದಲ್ಲಿ ಎರಡನೇ ವಿಕೆಟ್ ಕಳೆದುಕೊಂಡಿತು. ಎರಡು ರನ್ ಗಳಿಸಿದ ಲಬುಶೇನ್ ಕೀಪರ್ ಕ್ಯಾಚಿತ್ತು ಮರಳಿದರು. ಸ್ಯಾಮ್ ಕಾಂನ್ಸ್ಟಾಸ್ 23 ರನ್ ಗಳಿಸಿ ಸಿರಾಜ್ ಗೆ ವಿಕೆಟ್ ನೀಡಿದರು. ಟ್ರಾವಿಸ್ ಹೆಡ್ ನಾಲ್ಕು ರನ್ ಗೆ ಔಟಾದರು.
ಅನುಭವಿ ಸ್ಟೀವ್ ಸ್ಮಿತ್ ಮತ್ತು ಮೊದಲ ಪಂದ್ಯವಾಡುತ್ತಿರುವ ವೆಬ್ಸ್ಟರ್ ಹೋರಾಟ ನಡೆಸಿದರು. ಸ್ಮಿತ್ 33 ರನ್ ಗಳಿಸಿದರೆ, ವೆಬ್ ಸ್ಟರ್ ಅರ್ಧಶತಕ ಸಿಡಿಸಿ 57 ರನ್ ಮಾಡಿದರು. ಕೀಪರ್ ಅಲೆಕ್ಸ್ ಕ್ಯಾರಿ 21 ರನ್ ಮಾಡಿದರು. ಈ ಮೂರು ವಿಕೆಟ್ ಕನ್ನಡಿಗ ಪ್ರಸಿಧ್ ಕೃಷ್ಣ ಪಾಲಾಯಿತು.
ಭಾರತದ ಪರ ಪ್ರಸಿಧ್ ಕೃಷ್ಣ ಮತ್ತು ಮೊಹಮ್ಮದ್ ಸಿರಾಜ್ ತಲಾ ಮೂರು ವಿಕೆಟ್ ಪಡೆದರೆ, ಜಸ್ಪ್ರೀತ್ ಬುಮ್ರಾ ಮತ್ತು ನಿತೀಶ್ ಕುಮಾರ್ ರೆಡ್ಡಿ ತಲಾ ಎರಡು ವಿಕೆಟ್ ಪಡೆದರು.
ಮೊದಲ ಇನ್ನಿಂಗ್ಸ್ ನಲ್ಲಿ ಭಾರತವು 185 ರನ್ ಗಳಿಸಿತ್ತು.