ಮನುಷ್ಯನಿಗೆ ಕಣ್ಣುಗಳು ತುಂಬ ಮುಖ್ಯ. ನೇತ್ರಗಳಿಲ್ಲದ ಬದುಕು ಊಹಿಸಿಕೊಂಡರೆ ಭಯ ಆಗುತ್ತದೆ. ನಮ್ಮ ದೇಹದಲ್ಲಿರುವ ಅತೀ ಸೂಕ್ಷ್ಮ ಭಾಗಗಳಲ್ಲಿ ಕಣ್ಣುಗಳು ಹೌದು. ಇವುಗಳನ್ನು ಎಚ್ಚರಿಕೆಯಿಂದ ಬಹು ಜೋಪಾನವಾಗಿ ಕಾಯ್ದುಕೊಂಡು ಹೋಗುವುದು ಅತೀ ಅಗತ್ಯ.
ನಮ್ಮ ಕಣ್ಣುಗಳು ಆಗಾಗ ಹಲವು ಕಾಯಿಲೆಗಳಿಗೆ ತುತ್ತಾಗುತ್ತಿರುತ್ತವೆ. ‘ಮದ್ರಾಸ್ ಐ’ ಸೋಂಕು, ಕಣ್ಣುಗಳಲ್ಲಿ ನಿರಂತರ ನೀರು ಸುರಿಯುವುದು, ಊದಿಕೊಳ್ಳುವುದು ಹೀಗೆ ಹಲವು ತೊಂದರೆ ಕಾಣಿಸಿಕೊಳ್ಳುತ್ತವೆ. ಇಂದು ನಾವು ಕಣ್ಣುಗಳು ಊದಿಕೊಳ್ಳುಲು ಕಾರಣ ಹಾಗೂ ಅದನ್ನು ಶಮನಗೊಳಿಸುವ ವಿಧಾನದ ಬಗ್ಗೆ ತಿಳಿದುಕೊಳ್ಳೋಣ.
ಕೆಲವರ ಕಣ್ಣು ಉಬ್ಬಿಕೊಂಡು ಕೆಂಪಾಗಿರುತ್ತದೆ. ಕೆಲವು ಬಾರಿ ಲಿಂಫಾಟಿಕ್ ಗ್ರಂಥಿಗಳಲ್ಲಿ ನೀರು (ಫ್ಲ್ಯುಯ್ಡ್) ಶೇಖರಗೊಂಡು ಹೀಗಾಗುತ್ತದೆ. ನಿದ್ರಾಹೀನತೆ, ನೀರು ಸಾಕಷ್ಟು ಕುಡಿಯದಿರುವುದು, ಆಗಾಗ ಕಣ್ಣುಗಳನ್ನು ಉಜ್ಜಿಕೊಳ್ಳುವುದು, ಕಣ್ಣುಗಳಿಗೆ ಪೆಟ್ಟು ಬಿದ್ದಾಗ ಹಾಗೂ ಕಣ್ಣೀರಿನ ನಾಳಗಳಿಗೆ ತೊಂದರೆಯಾದಾಗ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಕಣ್ಣಿನ ಊತ ಕಡಿಮೆ ಮಾಡಿಕೊಳ್ಳುವುದು ಹೇಗೆ ?
ಕಣ್ಣಿನ ಊತ ಕಡಿಮೆ ಪ್ರಮಾಣದಲ್ಲಿದ್ದರೆ ಅಥವಾ ಯಾವಾಗಲಾದರೂ ಒಮ್ಮೆ ಕಾಣಿಸಿಕೊಂಡರೆ ಭಯ ಪಡುವ ಅಗತ್ಯ ಇಲ್ಲ. ನೀವು ವೈದ್ಯರ ಬಳಿ ಹೋಗುವುದು ಬೇಡ. ಮನೆಯಲ್ಲಿಯೇ ಕೆಲವೊಂದು ಕ್ರಮ ಕೈಗೊಳ್ಳುವುದರಿಂದ ಊದಿಕೊಂಡಿರುವ
ಕಣ್ಣಿನ ಊತ ಕಡಿಮೆ ಮಾಡಿಕೊಳ್ಳಬಹುದು.
ಮೊದಲನೇಯದಾಗಿ ಅತೀ ಹೆಚ್ಚು ನೀರಿನ ಪ್ರಮಾಣ ಹೊಂದಿರುವ ತರಕಾರಿ ಹಾಗೂ ಹಣ್ಣುಗಳನ್ನು ಸೇವಿಸಬೇಕು. ಇದರಿಂದ ನಿರ್ಜಲಿಕರಣ ದೂರವಾಗುತ್ತದೆ. ಪರಿಣಾಮ ಕಣ್ಣುಗಳು ಆರಾಮದಾಯಕವಾಗುತ್ತವೆ. ಟೀ, ಕಾಫಿ, ಎನರ್ಜಿ ಡ್ರಿಂಕ್ಸ್ ಹಾಗೂ ಮದ್ಯ ಸೇವನೆ ಕಡಿಮೆ ಮಾಡಬೇಕು.
ಈ ಮೇಲಿನ ಕ್ರಮಗಳನ್ನು ಅನುಸರಿಸುವುದರ ಜತೆಗೆ ತರಕಾರಿ ಜ್ಯೂಸ್ ಸೇವನೆಯಿಂದ ಕಣ್ಣಿನ ಊತ ಕಡಿಮೆ ಮಾಡಿಕೊಳ್ಳಬಹುದು. ಹಾಗಾದರೆ ಜ್ಯೂಸ್ ತಯಾರಿಸುವುದು ಹೇಗೆ ? ಅದಕ್ಕೆ ಬೇಕಾಗುವ ಪದಾರ್ಥಗಳು ಯಾವುದು ?
- ಸೌತೆ ಕಾಯಿ
- ಸೆಲರಿ ಸೊಪ್ಪು
- ಒಂದು ಟೊಮೆಟೊ
- ನಿಂಬೆ ರಸ
ಈ ಮೇಲಿನ ಪದಾರ್ಥಗಳನ್ನು ಚೆನ್ನಾಗಿ ತೊಳೆದು ಮಿಕ್ಸರ್ ಸಹಾಯದಿಂದ ಜ್ಯೂಸ್ ತಯಾರಿಸಿ ಸೇವನೆ ಮಾಡುವುದರಿಂದ ಕಣ್ಣಿನ ಊತ ( ಊದಿಕೊಳ್ಳುವುದು) ಕಡಿಮೆ ಮಾಡಿಕೊಳ್ಳಬಹುದು.