Advertisement

ಸ್ವಿಸ್‌ ಬ್ಯಾಂಕ್‌: ಕುತೂಹಲಕ್ಕೆ ಕಾರಣಗಳೇನು?

06:15 AM Apr 30, 2018 | |

ಸ್ವಿಸ್‌ ಬ್ಯಾಂಕಿನಲ್ಲಿ ಖಾತೆ ತೆರೆಯುವವರೆಲ್ಲಾ ಕೋಟ್ಯಧಿಪತಿಗಳು ಎಂಬ ನಂಬಿಕೆ ಇದೆ. ಹಾಗೆಯೇ, ಸ್ವಿಸ್‌ ಬ್ಯಾಂಕಿನಲ್ಲಿ ಇಡುವ ಹಣ ತುಂಬಾ ಸುರಕ್ಷಿತ ಅನ್ನೋ ಭಾವನೆಯೂ ಇದೆ. ಸ್ವಿಸ್‌ ಬ್ಯಾಂಕ್‌ ಖಾತೆಗೆ ಅಷ್ಟೊಂದು ಮಹತ್ವ ಏಕೆ?ಇಲ್ಲಿದೆ ಉತ್ತರ. 

Advertisement

ಸ್ವಿಜರ್‌ಲ್ಯಾಂಡ್‌ಗೆ  ಹೋಗುತ್ತೇನೆ ಎಂದರೆ ಸಾಕು, ಎಲ್ಲರೂ ಹುಬ್ಬೇರಿಸುತ್ತಾರೆ. ಪ್ರಶ್ನಾರ್ಥಕವಾಗಿ ನೋಡುತ್ತಾರೆ. ಜಗತ್ತಿನ 195 ರಾಷ್ಟ್ರಗಳಲ್ಲಿ ಯಾವ ದೇಶದ ಹೆಸರನ್ನು ಹೇಳಿದರೂ ಇಂಥ  ಪ್ರತಿಕ್ರಿಯೆ ಬರುವುದಿಲ್ಲ. ಈಚಲು ಗಿಡದ ಕೆಳಗೆ ಕುಳಿತು ಮಜ್ಜಿಗೆ ಕುಡಿದರೂ, ಹೆಂಡ ಎನ್ನುವಂತೆ ಈ ಸ್ವಿಜರ್‌ಲ್ಯಾಂಡ್‌ ಕತೆ.  ಇದಕ್ಕೆ ಕಾರಣ,  ತಮ್ಮ ದೇಶದಲ್ಲಿ ತೆರಿಗೆ ತಪ್ಪಿಸಿದ ಹಣವನ್ನು ಸ್ವಿಜರ್‌ಲ್ಯಾಂಡ್‌ನ‌ ಬ್ಯಾಂಕುಗಳಲ್ಲಿ ಗೌಪ್ಯವಾಗಿ ಇಡಲು ಅನುಕೂಲ ಕಲ್ಪಿಸುವ ಅಲ್ಲಿನ ಗೌಪ್ಯ ಕಾಯ್ದೆಗಳು, ನೀತಿ ನಿಯಮಾವಳಿಗಳು, ಕಾನೂನು ವ್ಯವಸ್ಥೆಗಳಿವೆ ಎನ್ನುವ ಕಲ್ಪನೆಯೇ ಕಾರಣ. 

ನಿಜ ಹೇಳಬೇಕೆಂದರೆ, ಸ್ವಿಸ್‌ ಬ್ಯಾಂಕ್‌ಗಳಲ್ಲೂ ನಮ್ಮಷ್ಟೇ ಕಾನೂನು ಪಾಲನೆ ಆಗುತ್ತದೆ.  ಅಧಿಕೃತ ಆದಾಯದ  ಮೂಲದ ಹೊರತಾಗಿ,  ಗಳಿಸಿದ ಹಣ, ಲೆಕ್ಕಕ್ಕೆ  ತೆಗೆದುಕೊಳ್ಳದ, ತೆರಿಗೆ ತಪ್ಪಿಸಿ ದೇಶದ ಹೊರಗೆ ಕಳುಹಿಸಿದ ಹಣವನ್ನು ಸ್ವಿಟ್ಜರ್‌ಲ್ಯಾಂಡ್‌ ಬ್ಯಾಂಕುಗಳು ಜತನದಿಂದ ಮತ್ತು ಗೌಪ್ಯದಿಂದ ಇಟ್ಟು ಕೊಳ್ಳುತ್ತವೆ ಎನ್ನುವುದಕ್ಕೆ ಆಧಾರಗಳು ಇಲ್ಲ.  

ಸ್ವಿಸ್‌ ಬ್ಯಾಂಕ್‌ಖಾತೆ ಎಂದರೇನು?
ಇದು, ಯಾವುದೇ ಬ್ಯಾಂಕ್‌ ಖಾತೆಯಂತೆಯೇ. ಒಂದು ಬ್ಯಾಂಕ್‌ ಖಾತೆ. ಆದರೆ, ಇದರಲ್ಲಿ ವಾಮಮಾರ್ಗದಿಂದ ಗಳಿಸಿದ ಹಣವನ್ನು ಠೇವಣಿ ಇಡುತ್ತಾರೆನ್ನುವ  ಗುಮಾನಿಯ ಮೇಲೆ ಈ ಬ್ಯಾಂಕ್‌ ಖಾತೆಗಳಿಗೆ  ಕುಖ್ಯಾತಿ ಬಂದಿದೆ. ಸ್ವಿಸ್‌ ಬ್ಯಾಂಕ್‌ನ್ನು ಜಾಗತಿಕ ಹಣಕಾಸು ವ್ಯವಹಾರದ  ಶಕ್ತಿ ಕೇಂದ್ರವೆಂತಲೂ ಕರೆಯುತ್ತಾರೆ. ಸ್ವಿಜರ್‌ಲ್ಯಾಂಡ್‌ನ‌ ಬ್ಯಾಂಕಿಂಗ್‌ ರೆಗ್ಯುಲೇಷನ್‌ ಆಕ್ಟ್ 1934 ರ ಪ್ರಕಾರ, ತನ್ನಲ್ಲಿರುವ ಇಂಥ ಖಾತೆ, ಖಾತೆದಾರರ ಬಗೆಗೆ ಯಾವುದೇ ಮಾಹಿತಿಯನ್ನು ಹೊರಗೆ ನೀಡುವುದು  ಕ್ರಿಮಿನಲ್‌ ಅಪರಾಧ. ಅದರೆ, ಈ ನಿರ್ಬಂಧ secrecy shield ಅಗಿರದೇ

ಕೆಲವು ಇತಿಮಿತಿಗಳಿಗೆ  ಒಳಪಟ್ಟಿರುತ್ತದೆ.  
ತೆರಿಗೆ ಮತ್ತು ಕ್ರಿಮಿನಲ್‌ ಅಪರಾಧಕ್ಕೆ ಸಂಬಂಧಪಟ್ಟ ಯಾವುದೇ ತನಿಖಾ ಪ್ರಕರಣಗಳಲ್ಲಿ, ಅವು ಈ  secrecy shield ಅನ್ನು ಬಳಸದೇ ತನಿಖಾ ಸಂಸ್ಥೆಗಳಿಗೆ  ಮಾಹಿತಿಯನ್ನು ನೀಡುತ್ತವೆ. ಇತ್ತೀಚಿಗಿನ ದಿನಗಳಲ್ಲಿ ಜಾಗತಿಕವಾಗಿ ಹೆಚ್ಚುತ್ತಿರುವ  ಅರ್ಥಿಕ ಅಪರಾಧ ಚಟುವಟಿಕೆಗಳ ನಿಟ್ಟಿನಲ್ಲಿ ಸ್ವಿಸ್‌ಬ್ಕಾಂಕ್‌ಗಳು ತಮ್ಮ ಬಿಗು ನೀತಿಯನ್ನು ಕ್ರಮೇಣ ಸಡಿಲಿಸುತ್ತಿವೆ ಎಂದು ಹೇಳಲಾಗುತ್ತಿದೆ. ಸ್ವಿಸ್‌ಬ್ಯಾಂಕ್‌ ಖಾತೆಗಳ ಮೂಲಕ  ಕಪ್ಪು ಹಣವನ್ನು ಬಿಳಿ ಮಾಡುವ ಅಥವಾ  ಮುಖ್ಯವಾಹಿನಿಗೆ ತರುವ ರಹದಾರಿ ಯಾಗಿಸಲು   ಅವಕಾಶ ಕೊಡದೇ 2018-19 ರಿಂದ ತನ್ನಲ್ಲಿರುವ ಮಾಹಿತಿಯನ್ನು ನೀಡಲು ಸ್ವಿಸ್‌ ಬ್ಯಾಂಕುಗಳು ಮುಂದಾಗಿವೆ. ಈ ಮೂಲಕ, ಜಗತ್ತಿನಾದ್ಯಂತ ಕಪ್ಪು ಹಣ ಮಾಡುವ ಆರ್ಥಿಕ ವಿಪ್ಲವದ ಕಪ್ಪು ಚುಕ್ಕೆಯಿಂದ  ಕಳಚಿಕೊಳ್ಳಲು ಕ್ರಮ ತೆಗೆದುಕೊಳ್ಳುತ್ತಿವೆ. ಸತ್ಯಾಸತ್ಯತೆ ಏನೇ ಇರಲಿ,  ಜಗತ್ತಿನಾದ‌Âಂತ, ಆರ್ಥಿಕ ಅಪರಾಧ ಎಸಗುವವರಿಗೆ  ಸ್ವಿಸ್‌ಬ್ಯಾಂಕ್‌ ಖಾತೆ ನಂಟು ಜೋಡಿಸುವುದು ತೀರಾ ಸಾಮಾನ್ಯ.

Advertisement

ಯಾರು ಈ ಖಾತೆಗಳನ್ನು ತೆರೆಯಬಹುದು?
ಹದಿನೆಂಟು ವರ್ಷ ತುಂಬಿರುವವರು ಈ ಖಾತೆಗಳನ್ನು ತೆರೆಯಬಹುದು. ಆದರೆ, ಇಂಥ ಖಾತೆಯನ್ನು ತಿರಸ್ಕರಿಸುವ ಅಧಿಕಾರವನ್ನು ಬ್ಯಾಂಕ್‌ ಇಟ್ಟುಕೊಂಡಿರುತ್ತದೆ. 

ಯಾವುದಾದರೂ ರಾಜಕೀಯ ಕಾರಣಗಳಿಗಾಗಿ ಅಥವಾ ವ್ಯಕ್ತಿಯ  ಆದಾಯದ ಮೂಲದ ಬಗೆಗೆ ಸಂದೇಹ ಇದ್ದರೆ ಅಂಥ ಖಾತೆಗಳನ್ನು ತೆರೆಯಲು ಅದು ತಿರಸ್ಕರಿಸಬಹುದು.  ಭಾರತೀಯರು  ಕೂಡ ಇಂಥ ಖಾತೆಗಳನ್ನು ತೆರೆಯಬಹುದು. ಆದರೆ, ಇದು ಒಂದು ಹಣಕಾಸು ವರ್ಷಕ್ಕೆ ಮಾತ್ರ ಸೀಮಿತವಾಗಿರುತ್ತದೆ.  ಸ್ವಿಜರ್‌ಲ್ಯಾಂಡ್‌ನ‌ಲ್ಲಿ 500 ಕ್ಕಿಂತ ಹೆಚ್ಚು  ಬ್ಯಾಂಕುಗಳಿದ್ದು, ಯೂನಿಯನ್‌ ಬ್ಯಾಂಕ್‌ಆಫ್ ಸ್ವಿಜರ್‌ಲ್ಯಾಂಡ್‌ ಮತ್ತು   ಕ್ರೆಡಿಟ್‌ ಸ್ವಿಸ್‌ ಬ್ಯಾಂಕುಗಳು ನಮ್ಮ ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾದಂತೆ  ಎರಡು ಅತಿ ದೊಡ್ಡ ಬ್ಯಾಂಕುಗಳಾಗಿವೆ. 

 ಆ ದೇಶದ  ಅರ್ಧಕ್ಕಿಂತ ಹೆಚ್ಚು  ಬ್ಯಾಂಕಿಂಗ್‌ ವ್ಯವಹಾರಗಳು ಈ ಬ್ಯಾಂಕ್‌ಗಳಲ್ಲಿ ಆಗುತ್ತವೆ.  ಸ್ವಿಸ್‌ ಬ್ಯಾಂಕ್‌ಗಳಲ್ಲಿ  ಖಾತೆ ತೆರೆಯುವ ಭಾರತೀಯರು. ತಮ್ಮ ಖಾತೆಗಳ  ಗೌಪ್ಯತೆ ಉಳಿಸಿಕೊಳ್ಳಲು, ಭಾರತದಲ್ಲಿ ಶಾಖೆಗಳಿರದ  ಸ್ವಿಸ್‌ ಬ್ಯಾಂಕುಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇಂಥ ಖಾತೆದಾರರರು,ಈ ಬ್ಯಾಂಕುಗಳು ನೀಡುವ    ಕ್ರೆಡಿಟ್‌, ಡೆಬಿಟ್‌ ಕಾರ್ಡ್‌, ಚೆಕ್‌ ಮತ್ತು ಹಣ ವರ್ಗಾವರ್ಗಿ ಸೌಲಭ್ಯಗಳನ್ನು , ತಮ್ಮ ಖಾತೆಯ ಬಗೆಗಿನ  ಮಾಹಿತಿ ಸೋರಬಹುದು ಎನ್ನುವ  ಭಯದಲ್ಲಿ ಮತ್ತು ಮುಂಜಾರೂಕತೆಯ  ನಿಟ್ಟಿನಲ್ಲಿ ಬಳಸುವುದಿಲ್ಲ. ಈ ಸೌಲಭ್ಯಗಳನ್ನು ಉಪಯೋಗಿಸಿಕೊಂಡರೆ, ತಮ್ಮ ಬ್ಯಾಂಕ್‌ ಖಾತೆಯ  ಮಾಹಿತಿ ಹೊರಬೀಳಬಹುದು ಎನ್ನುವ ಭೀತಿ ಅವರನ್ನು ಕಾಡುತ್ತದೆ. ಈ ಸಾಧ್ಯತೆಯನ್ನು ಅಲ್ಲಗೆಳೆಯಲಾಗದು.

ತಮ್ಮ ಖಾತೆಗಳ ಬಗೆಗೆ ವಿಶೇಷ  ಗೌಪ್ಯತೆ ಬೇಕಾದವರಿಗಾಗಿ ಈ ಬ್ಯಾಂಕುಗಳು  ನಂಬರ್ಡ್‌ (numbered  account) ಖಾತೆಗಳ ಸೌಲಭ್ಯವನ್ನು ಕೊಡುತ್ತವೆ. ಖಾತೆಯಲ್ಲಿನ ಎಲ್ಲಾ ವ್ಯವಹಾರಗಳು ಈ ನಂಬರ್‌ ಮೂಲಕವೇ ನಡೆಯುತ್ತವೆ.  ಈ ನಂಬರ್ಡ್‌ ಖಾತೆಯ ಹಿಂದಿರುವ ವ್ಯಕ್ತಿಯನ್ನು  ಬ್ಯಾಂಕಿನ  ಕೆಲವು ಉನ್ನತ ಅಧಿಕಾರಿಗಳು ಮಾತ್ರ ತಿಳಿದಿರುತ್ತಾರೆ.  ಈ ಖಾತೆಯನ್ನು ತೆರೆಯಲು ಒಂದು ಲಕ್ಷ ಅಮೇರಿಕನ್‌ ಡಾಲರ್‌ಗಳ  ಪ್ರಾರಂಭಿಕ ಠೇವಣಿ ನೀಡಬೇಕಾಗುತ್ತದೆ. ಇಂಥ ಖಾತೆಯನ್ನು ತೆರೆಯಲು ಗ್ರಾಹಕ ಸ್ವತಃ ಸ್ವಿಜರ್‌ಲ್ಯಾಂಡ್‌ನ‌ಲ್ಲಿರುವ  ಬ್ಯಾಂಕಿಗೆ ಭೇಟಿ ನೀಡಬೇಕಾಗುತ್ತದೆ.  ಈ ಖಾತೆಗಳ ನಿರ್ವಹಣೆಗಾಗಿ ಬ್ಯಾಂಕು ಗ್ರಾಹಕನಿಗೆ ವಾರ್ಷಿಕ 300 ಡಾಲರ್‌ ಶುಲ್ಕವನ್ನು ವಿಧಿಸುತ್ತದೆ.

ಸ್ವಿಸ್‌ಬ್ಯಾಂಕ್‌ ಖಾತೆಗಳನ್ನು ತೆರೆಯುವುದು ಅಷ್ಟು ಸುಲಭವಲ್ಲ.  ಬ್ಯಾಂಕ್‌ ಖಾತೆ ತೆರೆಯಲು ಅವಶ್ಯ ಇರುವ ಪ್ರತಿಯೊಂದು ನೀತಿ ನಿಯಮಾವಳಿಗಳನ್ನು ಅವು  ಅನುಸರಿಸುತ್ತವೆ. ನೀವೇ ಗ್ರಾಹಕರು ಅಂತ ಗುರುತಿಸಲು ಪಾಸ್‌ ಪೋರ್ಟ್‌ ಸಲ್ಲಿಸಬೇಕಾಗುತ್ತದೆ. ಬ್ಯಾಂಕಿನಲ್ಲಿ  ಠೇವಣಿ ಇಡುವ ಹಣದ ಮೂಲವನ್ನು ತೋರಿಸುವ ದಾಖಲೆಗಳನ್ನು ಕೊಡಬೇಕಾಗುತ್ತದೆ. ಉದಾಹರಣೆಗೆ- ಆಸ್ತಿ ಅಥವಾ ಶೇರುಗಳನ್ನು ಮಾರಿ ಹಣಗಳಿಸಿದ್ದರೆ ಅದಕ್ಕೆ ಸಂಬಂಧಪಟ್ಟ  ಅಧಿಕೃತ ದಾಖಲೆಗಳನ್ನು ಸಲ್ಲಿಸಬೇಕು. ಗ್ರಾಹಕ ನೀಡಿದ ವಿಳಾಸವನ್ನು ದೃಢೀಕರಿಸಲು, ಅ ವಿಳಾಸಕ್ಕೆ ಪತ್ರ ಬರೆದು ಚೆಕ್‌ ಮಾಡುತ್ತಾರೆ. ತೆರಿಗೆಗಳ್ಳರಿಂಧ ರಕ್ಷಿಸಿಕೊಳ್ಳಲು,ಅಂತಾರಾಷ್ಟ್ರೀಯ ಒತ್ತಡದ ಮೇರೆಗೆ, ಸುಮಾರು ನೂರು ಪುಟದಷ್ಟು ನಿಯಮಗಳು ಖಾತೆ ತೆರೆಯುವಾಗ ಎದುರಾಗುತ್ತದೆ.ವಿದೇಶಿಗರಿಗಂತೂ ಈ ಪ್ರಕ್ರಿಯೆ ಇನ್ನೂ ಕ್ಲಿಷ್ಟಕರ.  ಅವರು  ಅಂಚೆ ಮೂಲಕ ದಾಖಲೆಗಳನ್ನು ಕಳಿಸಬಹುದು. ಆದರೆ, ಎಲ್ಲಾ ದಾಖಲೆಗಳನ್ನು notarized ಮಾಡಿ ಕಳಿಸಬೇಕಾಗುತ್ತದೆ ಅಥವಾ ಆ  ಬ್ಯಾಂಕಿನ ಸ್ಥಳೀಯ ಸಿಬ್ಬಂದಿ ದೃಢೀಕರಿಸಬೇಕಾಗುತ್ತದೆ. ಆ ಬ್ಯಾಂಕಿನ ಶಾಖೆ ಇರದಿದ್ದರೆ, ಆ ಬ್ಯಾಂಕಿನ correspondendant bank  ent ಸಿಬ್ಬಂದಿಗಳು ದೃಢೀಕರಿಸಬಹುದು. 

ನಿಯಮಾವಳಿಗಳು ನಮ್ಮ KYC  norms ಗಿಂತಲೂ ಹೆಚ್ಚು ಕಠಿಣವಾಗಿರುತ್ತವೆ. ಹಾಗೆಯೇ, ಕನಿಷ್ಠ ಬ್ಯಾಲೆನ್ಸ್‌ ಹೆಸರಿನಲ್ಲಿ  2.50 ಲಕ್ಷ  ಠೇವಣಿ ಇಡಬೇಕಾಗುತ್ತದೆ. ಈ ಖಾತೆಗಳನ್ನು ಯಾವುದೇ ಕಾಲಕ್ಕೆ, ಯಾವುದೇ ಅಡೆತಡೆ, ಶುಲ್ಕ ಇಲ್ಲದೇ ಸ್ಥಗಿತಗೊಳಿಸಬಹುದು. ಗ್ರಾಹಕನ ಮತ್ತು ಅವನ ಖಾತೆಯ ಬಗೆಗೆ  ಗೌಪ್ಯತೆ ಕಾಪಾಡಿಕೊಳ್ಳುವ ಆ ಬ್ಯಾಂಕ್‌ಗಳ ಕಠಿಣ  ನೀತಿ ನಿಯಮಾವಳಿಗಳಿಂದಾಗಿ, ಆ ಖಾತೆಗಳ ಬಗೆಗೆ ಹುಬ್ಬೇರಿಸುತ್ತಾರೆ ವಿನಃ, ಅವುಗಳ ಕಾರ್ಯನಿರ್ವಹಣೆಯಲ್ಲಿ  ಅಂಥ ಯಾವುದೇ ಪ್ರಶ್ನಾರ್ಹ ಹೆಜ್ಜೆಗಳಿಲ್ಲ.

– ರಮಾನಂದ ಶರ್ಮಾ

Advertisement

Udayavani is now on Telegram. Click here to join our channel and stay updated with the latest news.

Next