ಬೆಂಗಳೂರು: ತಿಂಡಿ–ತಿನಿಸುಗಳನ್ನು, ಊಟವನ್ನು ರೆಸ್ಟಾರೆಂಟ್‌ಗಳಿಂದ ಗ್ರಾಹಕರು ಇದ್ದಲ್ಲಿಗೆ ತಲುಪಿಸುವ ಸ್ವಿಗ್ಗಿ, ಕರ್ನಾಟಕದ ಏಳು ನಗರಗಳಿಗೆ ಹೊಸದಾಗಿ ತನ್ನ ಸೇವೆಗಳನ್ನು ವಿಸ್ತರಿಸುತ್ತಿರುವುದಾಗಿ ಪ್ರಕಟಿಸಿದೆ.
ರಾಜ್ಯದ ಜನರಲ್ಲಿ ತಿಂಡಿ–ತಿನಿಸುಗಳ ಬಗ್ಗೆ ಇರುವ ಪ್ರೀತಿ ಹಾಗೂ ಅಭಿರುಚಿಯಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗುರುತಿಸಿ ಸ್ವಿಗ್ಗಿ ಕಂಪನಿಯು ತನ್ನ ಸೇವೆಗಳನ್ನು ಬಳ್ಳಾರಿ, ವಿಜಯಪುರ, ಚಿಕ್ಕಮಗಳೂರು, ಕಲಬುರ್ಗಿ, ಹಾವೇರಿ, ಶಿರಸಿ, ಕುಂದಾಪುರ ಮತ್ತು ಕೋಟೇಶ್ವರಕ್ಕೆ ವಿಸ್ತರಿಸುತ್ತಿದೆ.
ಸ್ವಿಗ್ಗಿ ಕಂಪನಿಯು ಬೆಂಗಳೂರು, ಮಣಿಪಾಲ, ಮೈಸೂರು, ಹುಬ್ಬಳ್ಳಿ, ಬೆಳಗಾವಿ ನಗರಗಳಲ್ಲಿ ತಾನು ಈಗಾಗಲೇ ಹೊಂದಿರುವ ಅಸ್ತಿತ್ವವನ್ನು ಆಧಾರವಾಗಿ ಬಳಸಿಕೊಂಡು ಈ ವಿಸ್ತರಣಾ ಕಾರ್ಯಕ್ಕೆ ಮುಂದಾಗಿದೆ. ಈ ಕ್ರಮದ ಮೂಲಕ ಕಂಪನಿಯು ಸ್ಥಳೀಯ ಖಾದ್ಯಗಳನ್ನು ಮತ್ತು ಜನಪ್ರಿಯ ರೆಸ್ಟಾರೆಂಟ್‌ಗಳ ತಿನಿಸುಗಳನ್ನು ಇನ್ನಷ್ಟು ಗ್ರಾಹಕರ ಮನೆಬಾಗಿಲಿಗೆ ತಲುಪಿಸುವ ಗುರಿ ಹೊಂದಿದೆ.
ಹೊಸದಾಗಿ ಸೇವೆಯನ್ನು ಒದಗಿಸುತ್ತಿರುವ ನಗರಗಳಲ್ಲಿ ಸ್ವಿಗ್ಗಿ ಕಂಪನಿಯು ಒಟ್ಟು ಐದು ಸಾವಿರಕ್ಕೂ ಹೆಚ್ಚಿನ ರೆಸ್ಟಾರೆಂಟ್‌ಗಳ ಜೊತೆ ಒಪ್ಪಂದ ಮಾಡಿಕೊಂಡಿದೆ. ಕಾಸ್ವಾ ಹಿಲ್ಸ್, ನಬಿಸ್ ಎಂಪೋರಿಯೊ (ಕಲಬುರ್ಗಿ), ಹೆರಿಟೇಜ್ (ವಿಜಯಪುರ), ಅರೇಬಿಯನ್ ಕೆಫೆ ಮತ್ತು ಶೆಟ್ಟಿ ಲಂಚ್ ಹೋಮ್ (ಶಿರಸಿ), ಐಶ್ವರ್ಯ ಗಾರ್ಡನ್ ರೆಸ್ಟಾರೆಂಟ್ (ಹಾವೇರಿ), ಗ್ರಿಲ್ಯಾಂಡ್ ಆ್ಯಂಡ್ ಸಿಜ್ಲಿ ಚಿಕನ್ (ಹಾವೇರಿ), ಹೊಟೆಲ್ ಎಮಿರೇಟ್ಸ್ (ಬಳ್ಳಾರಿ) ಮತ್ತು ಅರೇಬಿಯನ್ ನೈಟ್ಸ್ (ಚಿಕ್ಕಮಗಳೂರು) ಒಪ್ಪಂದದ ಭಾಗವಾಗಿರುವ ಕೆಲವು ರೆಸ್ಟಾರೆಂಟ್‌ಗಳು.
ಹೊಸ ನಗರಗಳ ಗ್ರಾಹಕರು ಅರೇಬಿಯನ್, ದಕ್ಷಿಣ ಭಾರತ, ಉತ್ತರ ಕರ್ನಾಟಕದ ಖಾದ್ಯಗಳು ಸೇರಿದಂತೆ ಹತ್ತು ಹಲವು ರುಚಿಕರ ತಿನಿಸುಗಳನ್ನು ಸವಿಯಬಹುದು.