Advertisement
ಈ ಸಲದ ದೀಪಾವಳಿಗೆ ಮನೇಲಿ ಏನು ಸ್ಪೆಷಲ್ ಸಿಹಿ ಮಾಡ್ತೀರಿ ಅಂತ ಯಾರಾದರೂ ಹೆಣ್ಮಕ್ಕಳಿಗೆ ಕೇಳಿ ನೋಡಿ. ಖಂಡಿತವಾಗಿಯೂ ಒಂದರೆಕ್ಷಣ ಅವರು ಗಲಿಬಿಲಿ ಆಗುತ್ತಾರೆ. ಏಕೆಂದರೆ, ನಮ್ಮನೇಗಳಲ್ಲಿ ಗಣಪತಿ ಹಬ್ಬ ಹೊರತುಪಡಿಸಿ ಮಿಕ್ಕ ಹಬ್ಬಗಳಲ್ಲಿ ಸಿಹಿ ಅಡುಗೆ ಅಂದ್ರೆ ಸಾಕು ಮೊದಲಿಗೆ ನೆನಪಾಗೋದು ಹೋಳಿಗೆ, ಒಬ್ಬಟ್ಟು ಅಥವಾ ಪಾಯಸ. ಇವೆಲ್ಲವನ್ನೂ ಸಲೀಸಾಗಿ ತಯಾರಿಸಬಲ್ಲರು ಅವರು. ಆದರೆ, ಹೊಸ ವಿಧದ, ಡಿಫರೆಂಟ್ ಆಗಿರುವ ಸಿಹಿ ಯಾವುದು ಮಾಡ್ತೀರಿ ಅಂದರೆ ಕೊಂಚ ಯೋಚಿಸುತ್ತಾರೆ.
Related Articles
Advertisement
ಒಣ ಹಣ್ಣು (ಡ್ರೈ ಫೂಟ್ಸ್), ಕಾಯಿಗಳನ್ನು ಸಿಹಿತಿಂಡಿಗಳಲ್ಲಿ ಯಥೇತ್ಛವಾಗಿ ಬಳಸುವುದು ಮತ್ತು ಹಬ್ಬಗಳಿಗೆ ಒಣಹಣ್ಣುಗಳು ಮತ್ತು ಸಿಹಿ ತಿಂಡಿ ನೀಡಿ ಶುಭಾಶಯ ವಿನಿಮಯ ಮಾಡುವ ಪದ್ಧತಿ ಬೆಂಗಳೂರಿಗೆ ಕಾಲಿಟ್ಟಿದ್ದೇ ಉತ್ತರ ಭಾರತೀಯರಿಂದ. ಅದರಲ್ಲೂ ರಾಜಸ್ಥಾನಿ ಮತ್ತು ಗುಜರಾತಿಗಳಿಂದ. ಈಗ ಇಲ್ಲಿ ಸಿಗುವ ಕಾಜು ಬರ್ಫಿ, ಬಾದಾಮ್ ಹಲ್ವಾ, ಮೋತಿ ಚೂರ್ ಲಡ್ಡು ಇವೆಲ್ಲಾ ಅಪ್ಪಟ ಉತ್ತರ ಭಾರತೀಯ ಸಿಹಿಗಳೇ. ಇಲ್ಲಿರುವ ಆನಂದ್ ಸ್ವೀಟ್ಸ್, ಆಶಾ ಸ್ವೀಟ್ಸ್‌ನಂಥ ಬಹುತೇಕ ಜನಪ್ರಿಯ ಸ್ವೀಟ್ ಸ್ಟಾಲ್‌ಗಳು ಉತ್ತರ ಭಾರತೀಯರದ್ದೇ.
ಜೊತೆಗೆ ಕೆ ಸಿ ದಾಸ್‌ನಂಥ ಸ್ವೀಟ್ ಮಳಿಗೆಗಳಿಂದ ಕೂಡ ಬಂಗಾಳಿ ಸ್ವೀಟ್‌ಗಳು ಬೆಂಗಳೂರಿನ ಸಿಹಿ ತಿನಿಸೇ ಎಂಬಂತಾಗಿದೆ.ಬೆಂಗಳೂರಿನಲ್ಲಿ ಕೈಗಾರಿಕೆಗಳ ಸ್ಥಾಪನೆಯಾದ ಬಳಿಕ ಬೆಂಗಳೂರಿನ ಹಲಸೂರಿಗೆ ಬಂದು ನೆಲೆಸಿದ ಬಂಗಾಳಿಗಳು ನಮಗೆ ಹಾಲು ಒಡೆಸಿ ತಯಾರಿಸುವ ರಸಗುಲ್ಲಾ, ರಸ್‌ಮ ಲೈ, ಸಂದೇಶ್, ರಾಜ್‌ಭೋಗ್, ಚಂಪಾಕಲಿಯಂಥ ಬಗೆ ಬಗೆಯ ಸಿಹಿಗಳನ್ನು ಪರಿಚಯಿಸಿದರು.ದೀಪಾವಳಿ ಹಬ್ಬದಂಥ ವಿಶೇಷ ಸಂದರ್ಭಗಳಲ್ಲಿ ಉತ್ತರ ಭಾರತೀಯ ತಿನಿಸುಗಳ ಮಾರಾಟದ ಭರಾಟೆ ಜೋರಿರುತ್ತದೆ. ಆದರೆ ನಮ್ಮ ನೆಲದ ಮೈಸೂರು ಪಾಕ, ಪೇಡಾದಂಥ ತಿನಿಸುಗಳೂ ಈ ಸ್ಪರ್ಧೆಯನ್ನು ಎದುರಿಸಿ ದೊಡ್ಡ ಸಂಖ್ಯೆಯ ಗ್ರಾಹಕರನ್ನು ಈಗಲೂ ಸೆಳೆಯುತ್ತಿದೆ.
“ಧಾರವಾಡ ಪೇಡಾ’ದಲ್ಲಿ ಅಪ್ಪಟ ಕನ್ನಡದ ಸೊಬಗುಬೇರೆಲ್ಲಾ ಸ್ವೀಟ್ ಅಂಗಡಿಗಳದ್ದು ಒಂದು ಕಥೆಯಾದರೆ “ಮಿಶ್ರಾ ಪೇಡಾ’ದ್ದೇ ಮತ್ತೂಂದು ಕಥೆ. ಮಿಶ್ರಾ ಪೇಡದಲ್ಲಿ ಕರ್ನಾಟಕ ಸಾಂಪ್ರದಾಯಕ ಸಿಹಿ ತಿನಿಸುಗಳಿಗೇ ಹೆಚ್ಚಿನ ಬೇಡಿಕೆ. ಅದರಲ್ಲೂ ಉತ್ತರ ಕರ್ನಾಟಕ ವಿಶೇಷಗಳಾದ ಕರದಂಟು, ಧಾರವಾಡ ಪೇಡ ಇಲ್ಲಿ ಈ ಮಳಿಗೆಗಳಲ್ಲಿ ದಿನವೊಂದಕ್ಕೆ 100 ಕೆಜಿಗಳಷ್ಟು ಮಾರಾಟವಾಗುತ್ತವೆ. ಬಹುತೇಕ ತಿನಿಸುಗಳು ಧಾರವಾಡದಲ್ಲಿ ತಯಾರಾಗಿ ಬೆಂಗಳೂರಿಗೆ ಸರಬರಾಜಾಗುತ್ತದೆ. ಆದರೆ ಇಲ್ಲಿ ಬೆಂಗಾಲಿ, ಇತರ ಉತ್ತರ ಭಾರತೀಯ ಸ್ವೀಟ್‌ಗಳ ಮಾರಾಟ ಕಡಿಮೆ. ಇಲ್ಲಿಗೆ ಬರುವ ಉತ್ತರ ಭಾರತೀಯ ಗ್ರಾಹಕರೂ ಕರದಂಟು ಮತ್ತು ಧಾರವಾಡ ಪೇಡಗಳನ್ನೇ ಕೊಂಡೊಯ್ಯುವಷ್ಟು ಇಲ್ಲಿ ಕನ್ನಡದ ಸಿಹಿ ಫೇಮಸ್ಸು. ಅದರಲ್ಲೂ ದೇಸಿ ಬೆಲ್ಲ ಬಳಸಿ ತಯಾರಿಸುವ ಧಾರವಾಡ ಪೇಡಕ್ಕೆ ಹೆಚ್ಚು ಡಿಮ್ಯಾಂಡ್ ಎನ್ನುತ್ತಾರೆ ಜಯನಗರದ ಮಿಶ್ರಾ ಪೇಡ ವ್ಯವಸ್ಥಾಪಕರು. ಶುಗರ್ ಲೆಸ್ ಸ್ವೀಟ್ಸ್‌ಗೆ ಡಿಮ್ಯಾಂಡಪ್ಪೊ ಡಿಮ್ಯಾಂಡು
ಶುಗರ್‌ಲೆಸ್ ಸ್ವೀಟ್ಸ್ ಪರಿಚಯವಾಗಿ 10 ವರ್ಷಗಳಾಗಿರಬಹುದು. ಮೊದಲೆಲ್ಲಾ ಮಧುಮೇಹಿಗಳು ಮಾತ್ರ ಶುಗರ್‌ಲೆಸ್ ಸ್ವೀಟ್‌ಗಳನ್ನು ಕೊಂಡೊಯ್ಯುತ್ತಿದ್ದರು. ಆದರೆ ಈಗ ಇಡೀ ಕುಟುಂಬಕ್ಕೇ ಶುಗರ್ ಲೆಸ್ ಸ್ವೀಟ್ ಕೊಂಡೊಯ್ಯುತ್ತಾರೆ. ಈಗ ನೈಸರ್ಗಿಕ ಸಿಹಿಗಳನ್ನು ಬಳಸಿ ಶುಗರ್‌ಲೆಸ್ ಸ್ವೀಟ್ ತಯಾರಿಸಲಾಗುತ್ತಿದೆ. ಹಣ್ಣುಗಳ ಸಾರ ಬಳಸಿ ಲೆವುಲೋಸ್ ಸಕ್ಕರೆಯಲ್ಲಿ ಸ್ವೀಟ್ ತಯಾರಿಸಲಾಗುತ್ತದೆ. ಮಧುಮೇಹಿಗಳೂ ದಿನಕ್ಕೆ 3 ಸ್ವೀಟ್‌ಗಳನ್ನು ತಿನ್ನಬಹುದು. ಹಬ್ಬದ ಸಮಯದಲ್ಲಿ ಈ ಸ್ವೀಟ್‌ಗಳಿಗೆ ಬೇಡಿಕೆ ಹೆಚ್ಚು ಎನ್ನುತ್ತಾರೆ ಡಿಜೈರ್ ಗುಡ್ ಲೈಫ್ ಶುಗರ್‌ಲೆಸ್ ಸ್ವೀಟ್ ಸ್ಟಾಲ್‌ನ ವ್ಯವಸ್ಥಾಪಕರು. ಆನ್‌ಲೈನ್‌ನಲ್ಲೂ ಭರ್ಜರಿ ವ್ಯಾಪಾರ!
ಅಂದಹಾಗೆ, ಸಿಹಿ ಮಾರಾಟದ ಭರಾಟೆ ಆನ್‌ಲೈನ್‌ನಲ್ಲೂ ಜೋರಾಗಿದೆ. ಆರ್ಡರ್‌ಯುವರ್ ಚಾಯ್ಸ ಡಾಟ್ ಕಾಂ, ಕಾಂತಿ ಸ್ವೀಟ್ಸ್ ಡಾಟ್ ಕಾಂ, ಆಶಾ ಸ್ವೀಟ್ಸ್ ಡಾಟ್ ಕಾಂ ಸೇರಿದಂತೆ ಅನೇಕ ಜಾಲತಾಣಗಳು ಸಿಹಿ ತಿನಿಸು ಬಿಕರಿ ಮಾಡುತ್ತಿವೆ. ಇವುಗಳ ಜತೆಗೆ, ಹಲ್ದೀರಾಮ್ಸ್ ಮುಂತಾದ ಪ್ರತಿಷ್ಠಿತ ಬ್ರಾಂಡ್‌ಗಳೂ ತಮ್ಮ ಜಾಲತಾಣದ ಮೂಲಕ ತಮ್ಮ ಗ್ರಾಹಕರಿಗೆ ಅವರ ಆಯ್ಕೆಯ ಸಿಹಿಯನ್ನು ಮುಟ್ಟಿಸುತ್ತಿವೆ. ಇನ್ನು, ಆ್ಯಪ್ ಆಧಾರಿತ ಸಿಹಿ ತಿನಿಸುಗಳ ಮಾರಾಟದಲ್ಲೂ ಏರಿಕೆ ಕಂಡುಬಂದಿದ್ದು, ಬಿಗ್ ಬ್ಯಾಸ್ಕೆಟ್ ಡಾಟ್ ಕಾಂ, ಝೊಮ್ಯಾಟೋ ಈ ಸೇವೆಯನ್ನು ನೀಡುವ ಪ್ರಮುಖವಾದವು. ಕರ್ನಾಟಕದ ಸ್ವೀಟು ರೆಡಿಯಾಗೋದು ಚೆನ್ನೈನಲ್ಲಿ!
ದೀಪಾವಳಿ ಸೇರಿದಂತೆ ಹಲವಾರು ಹಬ್ಬಗಳ ವೇಳೆ ಮಾರಾಟವಾಗುವ ಬಹುತೇಕ ಸಿಹಿ ತಿನಿಸುಗಳೂ ಚೆನ್ನೈನಿಂದಲೇ ತಯಾರಾಗಿ ಬರುತ್ತವೆ. ಬೆಂಗಳೂರಿನಲ್ಲಿ ಹೆಚ್ಚು ಮಾರಾಟವಾಗುವ ಕರ್ನಾಟಕದ ಮೈಸೂರು ಪಾಕ್ ತಯಾರಾಗುವುದು ಕೂಡ ಚೆನ್ನೈನಲ್ಲೇ! ಪೇಡಾ, ಬರ್ಫಿ, ಜಹಾಂಗೀರ್, ಬಾದುಷಾದಂಥ ಸ್ವೀಟ್‌ಗಳು ತಯಾರಾದ ದಿನದಿಂದ 8 ದಿನಗಳವರೆಗೆ ಹಾಳಾಗುವುದಿಲ್ಲ. ಈ ಸ್ವೀಟ್ಸ್‌ಗಳನ್ನು ಚೆನ್ನೈನಲ್ಲಿ ತರಿಸಲಾಗುತ್ತದೆ. ಆದರೆ ಬಂಗಾಳಿ ಸ್ವೀಟ್ಸ್ ಸೆರಿ ಕೆಲವು ಉತ್ತರ ಭಾರತೀಯ ಸ್ವೀಟ್‌ಗಳ ಶೆಲ್ಫ್ ಲೈಫ್ ಕೇವಲ 1ರಿಂದ 2 ದಿನ. ಹೀಗಾಗಿ ಇವುಗಳನ್ನು ಇಲ್ಲಿಯೇ ತಯಾರಿಸಿ ಸ್ವೀಟ್ ಸ್ಟಾಲ್‌ಗಳಿಗೆ ಪೂರೈಕೆ ಮಾಡಲಾಗುತ್ತದೆ. ಇವೂ ನಮ್ಮವೇ: ದೀಪಾವಳಿಯ ಪ್ರಮುಖ ಸ್ವೀಟ್‌ಗಳು ಮತ್ತು ವೈಶಿಷ್ಟ
-ಕಾಜು ಬರ್ಫಿ: ಗೋಡಂಬಿಯಲ್ಲಿ ತಯಾರಿಸುವ ಕಾಜು ಬರ್ಫಿಯ ಮೂಲ: ಮಹಾರಾಷ್ಟ್ರ -ಗುಲಾಬ್ ಜಾಮೂನ್: ಭಾರತದ ಪ್ರಸಿದ್ಧ ಸಿಹಿ ತಿನಿಸುಗಳಲ್ಲಿ ಮುಂಚೂಣಿಯಲ್ಲಿರುವುದೇ ಗುಲಾಬ್ ಜಮಾನ್. ಇದರ ಮೂಲ ಪರ್ಷಿಯಾ ಎಂಬ ಉಲ್ಲೇಖ ಇದೆ -ಜಿಲೇಬಿ: ಬೆಳಕಿನ ಹಬ್ಬದಲ್ಲೂ ಪ್ರಮುಖವಾಗಿ ತಯಾರಿಸುವ ಈ ಸಿಹಿ ತಿಂಡಿಯ ಮೂಲ ಸಿರಿಯಾ ಎನ್ನಲಾಗಿದೆ. -ರವೆಲಾಡು: ಹಬ್ಬಗಳು ಹಾಗೂ ಕಡಿಮೆ ಅವಧಿಯಲ್ಲಿ ತಯಾರಿಸಬಹುದಾದ ರವೆ ಲಾಡು ಮಕ್ಕಳಿಗೆ ಪ್ರಿಯ. ಇದರ ಮೂಲ ರಾಜ ಸ್ಥಾ ನ -ರಸಗುಲ್ಲಾ: ಪಶ್ಚಿಮ ಬಂಗಾಳದ ಪ್ರಸಿದ್ಧ ಸಿಹಿ ಖಾದ್ಯ ರಸಗುಲ್ಲಾ. ದೀಪಾವಳಿ ವೇಳೆ ತಯಾರಿಸುವ ವಿಶೇಷ ತಿಂಡಿಗಳಲ್ಲಿ ಪ್ರಮುಖ. -ರಸ ಮಲೈ: ಉತ್ತರ ಭಾರತದ ಪ್ರಮುಖ ಸಿಹಿ ಖಾದ್ಯವಾಗಿರುವ ರಸ ಮಲೈ, ಹಾಲಿನ ಕೆನೆಯಲ್ಲಿ ತಯಾರಿಸುವ ಸಿಹಿ ತಿಂಡಿ. ಇದು ದೀಪಾವಳಿಯ ಪ್ರಮುಖ ಪದಾರ್ಥ. -ಖಾಜಾ: ಸಕ್ಕರೆಯಲ್ಲಿ ಅದ್ದಿದ ಈ ಸಿಹಿ ತಿಂಡಿ ಮೂಲ ಬಿಹಾರ -ಬಾಸುಂಡಿ: ಕೇಸರಿ, ಹಾಲು, ಡ್ರೈ ಫೂಟ್‌ಗಳಿಂದ ಸಿದ್ಧಪಡಿಸುವ ಇದರ ಮೂಲ ಗುಜರಾತ್ -ಬಾದುಷಾ: ಉತ್ತರ ಪ್ರದೇಶದ್ದು ಎನ್ನಲಾದ ಸಕ್ಕರೆ ಪಾಕದಲ್ಲಿ ಅದ್ದಿದ ಬಾದುಷಾ ದೀಪಾವಳಿ ವೇಳೆ ಫೇಮಸ್ಸು -ಮಾವಾ ಬತಿ: ಗುಲಾಬ್ ಜಾಮೂನ್ ಮಾದರಿಯಲ್ಲಿ ಇರುವ ಈ ಸಿಹಿ ತಿನಿಸು ಮಧ್ಯಪ್ರದೇಶದಿಂದ ಬಂದಿದ್ದು -ಪೇಡ, ಮೈಸೂರು ಪಾಕ್: ಕರ್ನಾಟಕದ ಜನಪ್ರಿಯ ತಿನಿಸುಗಳು ಕರ್ನಾಟಕದ ಸಾಂಪ್ರದಾಯಕ ಸಿಹಿ ತಿನಿಸುಗಳು ಬೆಂಗಳೂರಿನಲ್ಲಿ ಮಾತ್ರವಲ್ಲ ರಾಜ್ಯದ ಬೇರೆ ಭಾಗಗಳಲ್ಲೂ ಕಣ್ಮರೆಯಾಗುತ್ತಿದೆ. ಇದಕ್ಕೆಲ್ಲ ಪ್ರಮುಖ ಕಾರಣ ಯಾಂತ್ರೀಕರಣ. ಯಂತ್ರ ಬಳಸಿ ತಯಾರಿಸಲು ಸಾಧ್ಯವಾಗುವ ಸಿಹಿತಿನಿಸುಗಳು ಈಗಲೂ ಮೊದಲಿನಷ್ಟೇ ಪ್ರಸಿದ್ಧಿ ಉಳಿಸಿಕೊಂಡಿವೆ. ಯಂತ್ರಕ್ಕೆ ಒಗ್ಗದ ತಿನಿಸುಗಳು ಕ್ರಮೇಣವಾಗಿ ಕಣ್ಮರೆಯಾಗುತ್ತಿವೆ. ಚಿರೋಟಿಯಂಥ ಅಪ್ಪಟ ಕರ್ನಾಟಕ ಸಿಹಿ ತಿಂಡಿ ಈಗ ಕೇವಲ ಮದುವೆ ಮನೆಗೆ ಸೀಮಿತವಾಗಿದೆ.
ಕೆ.ಸಿ.ರಘು, ಆಹಾರ ತಜ್ಞರು * ಚೇತನಾ ಜೆ.ಕೆ.