Advertisement

ಕಾಪಿ ಏಟು ಮತ್ತು ಹಿಟ್ಲರ್‌ ಮೇಷ್ಟ್ರು…

09:30 PM Apr 29, 2019 | Hari Prasad |

ಉತ್ತರಪತ್ರಿಕೆಯನ್ನು ನನಗೆ ಕಾಣುವಂತೆ ಹಿಡಿದುಕೊಂಡೇ ಆಕೆ ಬರೆಯುತ್ತಿದ್ದಳು. ನಾನು ಕದ್ದು ನೋಡಿ ಬರೆಯಲು ಆರಂಭಿಸಿದೆ. ನನ್ನ ಈ ಘನಕಾರ್ಯವನ್ನು ಅದೆಷ್ಟು ಹೊತ್ತಿನಿಂದ ನೋಡುತ್ತಿದ್ದರೊ ಏನೋ ನಮ್ಮ ಮುಖ್ಯ ಶಿಕ್ಷಕರು… ಹತ್ತಿರ ಬಂದವರೇ, “ಏಳು ಮೇಲೆ’ ಅಂದ್ರು. ನಾನು ಏಳುವುದಕ್ಕೂ, ನನ್ನ ಕೆನ್ನೆಯ ಮೇಲೆ ಅವರ ಹಸ್ತದ ಅಷ್ಟೂ ಬೆರಳುಗಳು ಮೂಡುವುದಕ್ಕೂ ಸರಿ ಹೋಯಿತು!

Advertisement

ಬಾಲ್ಯದಲ್ಲಿ ಬೇಜವಾಬ್ದಾರಿ ಮತ್ತು ಉಡಾಫೆ ಒಟ್ಟಾಗಿಯೇ ಮೈಗೂಡಿರುತ್ತವೆ. ಈ ದುರ್ಗುಣಗಳ ಕಾರಣದಿಂದಲೇ ಕೆಲವೊಮ್ಮೆ ತಿಳಿದೂ ತಿಳಿದೂ ತಪ್ಪು ಮಾಡುವುದುಂಟು. ಇಂಥ ತಪ್ಪಿಗೆ ಶಿಕ್ಷೆಯಾಗುತ್ತದಲ್ಲ. ಆನಂತರದಲ್ಲಿ ಜ್ಞಾನೋದಯವಾಗಿ, ಮತ್ತೆಂದೂ ಇಂಥ ತಪ್ಪು ಮಾಡಬಾರದು ಎಂಬ ಗಟ್ಟಿ ನಿರ್ಧಾರವೂ ಜೊತೆಯಾಗುವುದುಂಟು. ಅಂಥದೊಂದು ಸಂದರ್ಭದ ಆಪ್ತ ವಿವರಣೆ ಇಲ್ಲಿದೆ.

ಹಳ್ಳಿಯ ಮಕ್ಕಳಿಗೆ ಇಂದಿಗೂ ಎರಡೆರಡು ಕಬ್ಬಿಣದ ಕಡ್ಲೆಗಳಿವೆ. ಒಂದು ಗಣಿತವಾದರೆ ಮತ್ತೂಂದು ಇಂಗ್ಲಿಷ್‌. ಆ ಎರಡು ಪರೀಕ್ಷೆಗಳ ದಿನವಂತೂ ವಿದ್ಯಾರ್ಥಿ ಗಳು ದೀಪಕ್ಕೆ ಸಿಕ್ಕ ಚಿಟ್ಟೆಯಂತೆ ಪತರುಗುಟ್ಟಿ ಹೋಗುವುದು ಸಾಮಾನ್ಯ.

ಆಗ ನಾನು ಏಳನೇ ಕ್ಲಾಸಿನಲ್ಲಿ ಓದುತ್ತಿದ್ದೆ. ಅವತ್ತು ಇಂಗ್ಲಿಷ್‌ ಪರೀಕ್ಷೆ ನಡೆಯುತ್ತಿತ್ತು. ಏನೆಂದರೆ ಏನೂ ಅರ್ಥವಾಗದ ಇಂಗ್ಲಿಷ್‌ ಪ್ರಶ್ನೆ ಪತ್ರಿಕೆ ಕೈಯಲಿತ್ತು. ನಾನು ಈ ಕಾಲದ ವಿದ್ಯಾರ್ಥಿಗಳ ಹಾಗೆ ಆ ವಯಸ್ಸಿಗೆ “ಚೀಟಿ’ ವ್ಯವಹಾರ ನಡೆಸುವಷ್ಟು ಫಾಸ್ಟ್ ಇರಲಿಲ್ಲ. ನನ್ನ ಮುಂದೆ ನನ್ನದೇ ಕ್ಲಾಸಿನ ಅನು ಇದ್ದಳು. ಚೆನ್ನಾಗಿ ಓದೋ ಹುಡುಗಿ ಅವಳು. ಅವಳ ಅಪ್ಪ ಮೇಷ್ಟ್ರಾಗಿದ್ದರಿಂದ ಅವಳ ಇಂಗ್ಲಿಷ್‌ ತಕ್ಕ ಮಟ್ಟಿಗೆ ಚೆನ್ನಾಗಿಯೇ ಇತ್ತು. ಐದನೇ, ಆರನೇ ಕ್ಲಾಸಿನ ಇಂಗ್ಲಿಷ್‌ ಪರೀಕ್ಷೆಯಲ್ಲಿ, ನಾನು ಅವಳ ದಯೆಯಿಂದಲೇ ಪಾಸ್‌ ಆಗಿದ್ದು.

ಪಾಪ, ಆಕೆ ದಯಾಳು. ಉತ್ತರಪತ್ರಿಕೆಯನ್ನು ನನಗೆ ಕಾಣುವಂತೆ ಹಿಡಿದುಕೊಂಡು ಬರೆಯುತ್ತಿದ್ದಳು. ನಾನು ಕದ್ದು ನೋಡಿ ಬರೆಯಲು ಆರಂಭಿಸಿದೆ. ನನ್ನ ಈ ಘನಕಾರ್ಯವನ್ನು ಅದೆಷ್ಟು ಹೊತ್ತಿನಿಂದ ನೋಡುತ್ತಿದ್ದರೊ ಏನೋ ನಮ್ಮ ಮುಖ್ಯ ಶಿಕ್ಷಕರು. ಹತ್ತಿರ ಬಂದವರೇ, “ಏಳು ಮೇಲೆ’ ಅಂದ್ರು. ಇವರ್ಯಾಕೆ ಹೀಗೆ ನನ್ನನ್ನು ಎಬ್ಬಿಸುತ್ತಿದ್ದಾರೆ ಅಂದುಕೊಂಡು ಎದ್ದು ನಿಂತೆ. ನಾನು ಏಳುವುದಕ್ಕೂ, ನನ್ನ ಕೆನ್ನೆಯ ಮೇಲೆ ಅವರ ಹಸ್ತದ ಅಷ್ಟೂ ಬೆರಳುಗಳು ಮೂಡುವುದಕ್ಕೂ ಸರಿ ಹೋಯಿತು!

Advertisement

ಆ ಏಟು ಹೇಗಿತ್ತು ಅಂದ್ರೆ, ರೂಮಿನೊಳಗೆ ಅನುರಣಿಸಿದ ಶಬ್ದ ಹೊರಗಿನವರಿಗೂ ಕೇಳಿಸಿತ್ತು. ಕ್ಲಾಸ್‌ರೂಮಿನಲ್ಲಿ ಬಿಗುವಿನ ವಾತಾವರಣ. ಎಲ್ಲರ ಎದೆಯಲ್ಲೂ ಭಯ, ನನ್ನ ಕಣ್ಣಲ್ಲಿ ಬಳ ಬಳ ನೀರು. “ಇನ್ನೊಂದ್ಸಾರಿ ಕದ್ದು ಬರೆದರೆ ಚರ್ಮ ಸುಲಿತೀನಿ ಭಡವ’ ಅಂದು, ಅನುಗೂ ವಾರ್ನಿಂಗ್‌ ಕೊಟ್ಟು ಹೊರಟು ಹೋದರು.

ಅವಮಾನ, ಊದಿಕೊಂಡ ಕೆನ್ನೆ, ಚುರು ಚುರು ಅನ್ನುತ್ತಿದ್ದ ಏಟಿನ ನೋವು ನನ್ನೊಳಗಿನ ಕಾಪಿ ಸಂಪ್ರದಾಯವನ್ನು ಕರಗಿಸಿದವು. ಬಹುಶಃ ಅವತ್ತೇ ಕೊನೆ ಅನಿಸುತ್ತೆ, ಮುಂದೆಂದಿಗೂ ಕಾಪಿ ಹೊಡೆಯಲಿಲ್ಲ. ನಾನು ಕೂಡ ಯಾರಿಗೂ ಹೇಳಿಕೊಟ್ಟಿಲ್ಲ. ನಾನು ಮೇಷ್ಟ್ರಾದ ಮೇಲೂ ಕೂಡ, ಮಕ್ಕಳಿಗೆ ಕಾಪಿ ಮಾಡಿ ಬರೆಯಲು ಕೂಡ ಬಿಟ್ಟಿಲ್ಲ.

ಪರೀಕ್ಷೆ ಹಾಲ್‌ನಲ್ಲಿ ನಾನು ಥೇಟ್‌ ದೂರ್ವಾಸ ಮುನಿ. ನಮ್ಮ ಹೆಡ್ಮಾಸ್ಟರು ಏಟಿನೊಂದಿಗೆ ಕಲಿಸಿದ ಪಾಠ ನನ್ನ ಬದುಕಿನಲ್ಲಿ ಅದ್ಭುತ ಬದಲಾವಣೆಯನ್ನು ತಂದಿತು. ಶ್ರಮದ ಓದು, ಪ್ರಾಮಾಣಿಕವಾಗಿ ಪರೀಕ್ಷೆ ಬರೆಯುವುದನ್ನು ಕಲಿಸಿತು. ಮೊನ್ನೆ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆದಾಗ, “ನಂ ರೂಮಿಗೆ ಹಿಟ್ಲರ್‌ ಮೇಷ್ಟ್ರು ಬರೋದು ಬೇಡಪ್ಪ’ ಅಂತ ವಿದ್ಯಾರ್ಥಿಗಳು ಬೇಡಿಕೊಳ್ಳುತ್ತಿದ್ದುದು ಕಿವಿಗೆ ಬಿದ್ದಾಗ ನೆನಪಾಗಿದ್ದು ಈ ಕಾಪಿ ಏಟಿನ ಪ್ರಕರಣ.

– ಸದಾಶಿವ್‌ ಸೊರಟೂರು

Advertisement

Udayavani is now on Telegram. Click here to join our channel and stay updated with the latest news.

Next