Advertisement
ಸಿರಿಧಾನ್ಯಗಳ ಅಬ್ಬರಕಲ್ಲಪ್ಪ ಪಂಡಿತಪ್ಪ ನೇಗಿನಹಾಳ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿ ಗ್ರಾಮದವರು. ಇವರದು ಹನ್ನೊಂದು ಎಕರೆ ಜಮೀನು. ಮೂರು ಎಕರೆ ಸೋಯಾಬಿನ್, ಐದು ಎಕರೆ ಶೇಂಗಾ, ಒಂದು ಎಕರೆಯಲ್ಲಿ ಸಿರಿಧಾನ್ಯಗಳು, ಎರಡು ಎಕರೆಯಲ್ಲಿ ಹತ್ತಿ ಕೃಷಿ ಮಾಡಿದ್ದಾರೆ. ಸಿರಿಧಾನ್ಯಗಳು ಶಿಸ್ತುಬದ್ದವಾಗಿ ಗುಂಟೆ ಲೆಕ್ಕದಲ್ಲಿ ಸ್ಥಾನ ಪಡೆದಿವೆ. ಐದು ಗುಂಟೆ ರಾಗಿ, ಹತ್ತು ಗುಂಟೆ ಬರಗು, ಹತ್ತು ಗುಂಟೆ ನವಣೆ, ಹತ್ತು ಗುಂಟೆ ಕೊರಲೆ, ಹತ್ತು ಗುಂಟೆ ಹಾರಕ, ಐದು ಗುಂಟೆ ಊದಲು, ಹದಿನೈದು ಗುಂಟೆ ಸಾಮೆ ಬೆಳೆದಿದ್ದಾರೆ. ಮೂರು ಎಕರೆ ಸೋಯಾಬಿನ್ ಬೆಳೆಯ ನಡುವೆ ಅಲ್ಲಲ್ಲಿ ಜವಾರಿ ತಳಿಯ ಊಬನವಣೆ ಬಿತ್ತಿದ್ದಾರೆ.
Related Articles
ಈ ಬಾರಿಯ ಮುಂಗಾರಿನಲ್ಲಿ ಐದು ಎಕರೆಯಲ್ಲಿ ಶೇಂಗಾ ಬಿತ್ತಿದ್ದರು. ಕೊಯ್ಲು ಮುಗಿದು ಭರ್ತಿ ಇಳುವರಿ ಕೈ ಸೇರಿದೆ. ನಾಲ್ಕು ವಿಧದ ದೇಶೀಯ ಬೀಜಗಳನ್ನು ಬಿತ್ತಿದ್ದರು. ಮೂರುವರೆ ಎಕರೆಯಲ್ಲಿ ‘ಧನಲಕ್ಷಿ$¾’ ತಳಿಯ ಶೇಂಗಾ ಬಿತ್ತನೆ ಕೈಗೊಂಡಿದ್ದರು. ಹಸಿಕಾಯಿಯಾಗಿ ಬೇಯಿಸಿ ತಿನ್ನಲು ಈ ತಳಿಯ ಶೇಂಗಾ ಬಲು ರುಚಿ. ಐದು ಕಾಳುಗಳನ್ನು ಹೊಂದಿದ್ದು ಕುದಿಸಿ ತಿಂದರೆ ಮತ್ತೆ ಮತ್ತೆ ತಿನ್ನಬೇಕೆನ್ನುವ ಬಯಕೆ ಹುಟ್ಟುಹಾಕುವ ತಾಕತ್ತು ಇದರದು.
Advertisement
ಅರ್ಧ ಎಕರೆಯಲ್ಲಿ “ಕಾಳಾಬಾಳು ಕೆಂಪು ಶೇಂಗಾ’ ಬಿತ್ತಿದ್ದರು. ಎರಡು ಕಾಳು ಹೊಂದಿರುವ ಇದು ಎಣ್ಣೆ ತಯಾರಿಗೆ ಉತ್ತಮವಾದುದು. ಹದಿನೈದು ಗುಂಟೆಯಲ್ಲಿ ಬಿತ್ತಿದ “ಬಾದಾಮ್ ಶೇಂಗಾ’ ಹುರಿದು ತಿನ್ನಲು ಬಲು ರುಚಿ. ಹದಿನೈದು ಗುಂಟೆಯಲ್ಲಿನ “ಗೆಜ್ಜೆ ಶೇಂಗಾ’ ಎಣ್ಣೆ ತಯಾರಿ ಹಾಗೂ ತಿನ್ನಲು ಬಳಕೆ ಮಾಡಬಹುದು. 80 ಕ್ವಿಂಟಾಲ್ ಶೇಂಗಾ ಇಳುವರಿ ಪಡೆದಿದ್ದಾರೆ. ಬೀಜಕ್ಕಾಗಿ ಐದು ಕ್ವಿಂಟಾಲ್ ಉಳಿಸಿಕೊಂಡು ಉಳಿದಿದ್ದನ್ನು ಮಾರಿದ್ದಾರೆ. ಸ್ವಂತ ಬೋರ್‌ವೆಲ್ ಒಳಗೊಂಡಿರುವ ಇವರ ಎರಡು ಎಕರೆ ಜಮೀನು ಇನ್ನೊಂದು ಭಾಗದಲ್ಲಿದೆ. ಅದರಲ್ಲಿ ಒಂದೆಕರೆ ತರಕಾರಿ ಕೃಷಿ ಮಾಡಿದ್ದಾರೆ. ಟೊಮೆಟೋ, ಬದನೆ, ಸೌತೆ ಬೆಳೆದಿದ್ದಾರೆ. ಸೌತೆ ಕಟಾವಾಗಿದ್ದು 50,000 ರೂಪಾಯಿ ಆದಾಯ ಗಳಿಸಿಕೊಟ್ಟಿದೆ. ಜಮೀನಿನ ಸುತ್ತಲೂ ಜಾನುವಾರುಗಳ ಮೇವಿಗೆಂದು ಜೋಳ ಬಿತ್ತಿದ್ದಾರೆ.
ಇವರ ಹೊಲದ ಸುತ್ತಮುತ್ತಲೂ ಇತರರ ವಿಸ್ತಾರವಾದ ಕೃಷಿ ಭೂಮಿ ಇದೆ. ಆದರೆ ಕಾಳು ಕಡ್ಡಿಗಳನ್ನು ಬೆಳೆದ ಹೊಲ ಹತ್ತಿರದಲ್ಲೆಲ್ಲೂ ಕಾಣಸಿಗುವುದಿಲ್ಲ. ಹಾಗಾಗಿ ಪಕ್ಷಿಗಳ ದಂಡು ಇವರ ಹೊಲಕ್ಕೆ ದಾಂಗುಡಿಯಿಡುತ್ತವೆ. ಈ ಬಗ್ಗೆ ಇವರಿಗೆ ಬೇಸರಲ್ಲ. ಪಕ್ಷಿ$ಗಳು ತಿಂದುಳಿದ ಬೆಳೆ ನನಗಿರಲಿ ಎನ್ನುವ ಸಹೃದಯ ಮನೋಭಾವ ಇವರದು.
ಶೇಂಗಾ ಹೊಟ್ಟು, ಕಸಕಡ್ಡಿ ಮತ್ತಿತರ ಕೃಷಿ ತ್ಯಾಜ್ಯಗಳನ್ನು ಮಣ್ಣಿನಲ್ಲಿಯೇ ಒಂದುಗೂಡಿಸುತ್ತಾರೆ. ವರ್ಷಕ್ಕೊಮ್ಮೆ ಕುರಿ ತರುಬಿಸುತ್ತಾರೆ. ಎರೆಗೊಬ್ಬರ, ಕಾಂಪೋಸ್ಟ್ ಗೊಬ್ಬರ ಯತೇತ್ಛವಾಗಿ ಬಳಸುತ್ತಾರೆ. ರೋಗ ಕೀಟಗಳ ಬಾಧೆ. ಇವರ ಹೊಲದ ಬೆಳೆಗಳಿಗಿಲ್ಲ. ಅಲ್ಪ ಸ್ವಲ್ಪ ತಟ್ಟಿದರೂ ಸೊಪ್ಪಿನ ಕಷಾಯದಿಂದಲೇ ನಿಯಂತ್ರಿಸುವ ಕೌಶಲ್ಯ ರೂಢಿಸಿಕೊಂಡಿದ್ದಾರೆ.
ನೀರು ಇಂಗಿಸುವ ಜಾಣ್ಮೆ ಇವರಲ್ಲಿದೆ. ಜಮೀನಿನ ತಗ್ಗಿನಲ್ಲಿ ಕೃಷಿ ಹೊಂಡ ರಚಿಸಿಕೊಂಡಿದ್ದಾರೆ. ಪ್ರಸ್ತುತ ಹಿಂಗಾರಿನಲ್ಲಿ ಬಿತ್ತಬೇಕಾದ ಬೆಳೆಯ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಮೂರು ಎಕರೆ ತರಕಾರಿ ಬೆಳೆಯುವ ಎಂಟು ಎಕರೆಯಲ್ಲಿ ಜವಾರಿ ತಳಿಯ ಜೋಳ ಕೃಷಿ ಮಾಡುವ ಆಲೋಚನೆಯಲ್ಲಿದ್ದಾರೆ. ಹಿಂಗಾರು ಬೆಳೆಗೆ ಪೂರಕವಾಗಿರುವ ವಾತಾವರಣವಿದ್ದು ಗೆಲ್ಲುವ ತುಡಿತದಲ್ಲಿದ್ದಾರೆ.
ಕೋಡಕಣಿ ಜೈವಂತ ಪಟಗಾರ