Advertisement

ತಾಲೂಕುಗಳಲ್ಲಿ ಸ್ವೀಪ್‌ ಕಾರ್ಯಕ್ರಮ

12:26 PM Apr 14, 2018 | |

ಕಲಬುರಗಿ: ಜಿಲ್ಲೆಯ ಎಲ್ಲ ತಾಲೂಕು ಮಟ್ಟದಲ್ಲಿ ಸ್ವೀಪ್‌ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಪ್ರತಿ ತಾಲೂಕಿಗೆ 50 ಸಾವಿರ ರೂ. ನೀಡಲಾಗುತ್ತಿದ್ದು, ಸ್ವೀಪ್‌ ಕಾರ್ಯಕ್ರಮಕ್ಕೆ ಅವಶ್ಯಕವಿರುವ ಸಾಮಗ್ರಿ ಮತ್ತು ಪರಿಕರಗಳನ್ನು ಖರೀದಿಸಬೇಕೆಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷೆ ಹೆಪ್ಸಿಬಾರಾಣಿ ಕೋರ್ಲಪಾಟಿ ತಿಳಿಸಿದರು.

Advertisement

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸ್ವೀಪ್‌ ಸಮಿತಿ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿ, ತಾಲೂಕು ಮಟ್ಟದಲ್ಲಿ ಸೈಕಲ್‌, ಬೈಕ್‌ ರ್ಯಾಲಿ, ಕ್ಯಾಂಡಲ್‌ ಮಾರ್ಚ್‌ ಹಾಗೂ ಮ್ಯಾರಾಥಾನ್‌ ಗಳಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮತದಾರರಲ್ಲಿ ಜಾಗೃತಿ ಮೂಡಿಸಬೇಕು ಎಂದರು. 

ಎಲ್ಲ ಮತಗಟ್ಟೆಗಳಲ್ಲಿ ವಿವಿ ಪ್ಯಾಟ್‌ ಕುರಿತು ಮಾಹಿತಿ ನೀಡಲು ಪೋಸ್ಟರ್‌, ಬ್ಯಾಡ್ಜ್, ಕ್ಯಾಪ್‌ ಗಳ ವ್ಯವಸ್ಥೆ ಮಾಡಲಾಗಿದೆ. ಅವುಗಳನ್ನು ಎಲ್ಲ ತಾಲೂಕುಗಳಿಗೂ ವಿತರಿಸಲಾಗುವುದು. 

ಉದ್ಯೋಗ ಖಾತ್ರಿ ಕೆಲಸಗಳನ್ನು ಎಲ್ಲ ಗ್ರಾಪಂಗಳಲ್ಲಿ ಪ್ರಾರಂಭಿಸಿ ಉದ್ಯೋಗ ಖಾತ್ರಿ ನಡೆಯುವ ಸ್ಥಳಗಳಲ್ಲಿ ಕೂಲಿ ಕಾರ್ಮಿಕರಿಗೆ ಮತದಾನದ ಜಾಗೃತಿ ಮೂಡಿಸಬೇಕು. ಪ್ರತಿ ವಾರ ಕನಿಷ್ಠ ಐದು ಗ್ರಾಪಂಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಹೇಳಿದರು. ಕಳೆದ ಚುನಾವಣೆಗಳಲ್ಲಿ ಕಡಿಮೆ ಮತದಾನವಾಗಿರುವ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಅಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸ್ವೀಪ್‌ ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂದು ತಿಳಿಸಿದರು.

ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಹೋಬಳಿ ಮಟ್ಟದಲ್ಲಿ ಜರುಗುವ ಸಂತೆ, ಜಾತ್ರೆಗಳಲ್ಲಿ ವಿನೂತನವಾಗಿ ಸ್ವೀಪ್‌ ಕಾರ್ಯಕ್ರಮ ರೂಪಿಸಬೇಕು. ಚಿತ್ತಾಪುರ, ಸೇಡಂ ತಾಲೂಕುಗಳಲ್ಲಿ ಕಾರ್ಖಾನೆಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಕಾರ್ಖಾನೆ ಕಾರ್ಮಿಕರಿಗೆ ಕಡ್ಡಾಯವಾಗಿ ಮತದಾನ ಮಾಡಲು ಜಾಗೃತಿ ಮೂಡಿಸಬೇಕು. ಅಂಗವಿಕಲ ಮತದಾರರಿಗಾಗಿಯೇ ವಿಶೇಷವಾಗಿ ಸ್ವೀಪ್‌ ಕಾರ್ಯಕ್ರಮ ರೂಪಿಸಬೇಕು. ಏ. 16ರಿಂದ ಎಲ್ಲ ಮತಗಟ್ಟೆಗಳಲ್ಲಿಯೂ ವಿವಿ ಪ್ಯಾಟ್‌ ಮತ್ತು ಇಲೆಕ್ಟ್ರಾನಿಕ್‌ ಮತಯಂತ್ರದ ಬಗ್ಗೆ ಜಾಗೃತಿ ಮೂಡಿಸಲು ತರಬೇತಿ ಹಮ್ಮಿಕೊಳ್ಳಬೇಕು. ಈ ಸಂದರ್ಭದಲ್ಲಿ ಸಹಿ ಸಂಗ್ರಹ, ಮತದಾನದ ಪ್ರತಿಜ್ಞಾ ವಿಧಿ, ಪೋಸ್ಟರ್‌ಗಳ ಪ್ರದರ್ಶನ, ಯಾವುದಾದರೂ ಒಂದು ಸ್ಪರ್ಧೆ ಹಮ್ಮಿಕೊಳ್ಳಬೇಕು. ವಿವಿ ಪ್ಯಾಟ್‌ ತರಬೇತಿ ಕುರಿತು ಮುಂಚಿತವಾಗಿಯೇ ಗ್ರಾಮದಲ್ಲಿ ಡಂಗುರ ಹೊರಡಿಸಬೇಕು ಎಂದರು.

Advertisement

ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಶೇ. 64ರಷ್ಟು ಮತದಾನವಾಗಿತ್ತು. ಈ ಬಾರಿ ಕನಿಷ್ಠ ಶೇ. 80ರಷ್ಟು ಮತದಾನವಾಗುವಂತೆ ಸ್ವೀಪ್‌ ಕಾರ್ಯಕ್ರಮದ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸಬೇಕು. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಹಾಡುಗಾರಿಕೆ ಸ್ಪರ್ಧೆಗಳನ್ನು ಏರ್ಪಡಿಸಬೇಕು. ಇದಕ್ಕಾಗಿ ಮೊದಲಿನ 25 ಪ್ರವೇಶಗಳನ್ನು ಪರಿಗಣಿಸಿ ಸ್ಪರ್ಧೆ ಏರ್ಪಡಿಸಬೇಕು. ಇವುಗಳಲ್ಲಿ ವಿಜೇತರಿಗೆ ಜಿಲ್ಲಾ ಮಟ್ಟದಲ್ಲಿ ಸ್ಪರ್ಧೆ ಏರ್ಪಡಿಸಿ ಮಾದರಿ ಹಾಡುಗಾರರನ್ನು ಗುರುತಿಸಬೇಕು ಎಂದು ಸಲಹೆ ನೀಡಿದರು.

ಜಿಪಂ ಉಪ ಕಾರ್ಯದರ್ಶಿ ಮಹ್ಮದ್‌ ಯುಸೂಫ್‌, ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಾಂತಗೌಡ ಪಾಟೀಲ, ಎಲ್ಲ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next