ಹೊಸದಿಲ್ಲಿ:ಎಎಪಿಯ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಆಕೆಯ ಮಾಜಿ ಪತಿ ನವೀನ್ ಜೈಹಿಂದ್ ಪ್ರತಿಕ್ರಿಯೆ ನೀಡಿದ್ದು, “ಅರವಿಂದ್ ಕೇಜ್ರಿವಾಲ್ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಏಕೆಂದರೆ ಅವರ ಮನೆಯಲ್ಲಿ ಘಟನೆ ನಡೆದಿದೆ. ಸಂಜಯ್ ಸಿಂಗ್ ಅರವಿಂದ್ ಕೇಜ್ರಿವಾಲ್ ಸಾಕಿದ ಗಿಳಿ. ಘಟನೆ ನಡೆಯುತ್ತದೆ ಎಂದು ಸಿಂಗ್ ಅವರಿಗೆ ತಿಳಿದಿತ್ತು, ಏನಾಯಿತು ಎಂದೂ ಅವರಿಗೆ ತಿಳಿದಿದೆ” ಎಂದು ಹೇಳಿದ್ದಾರೆ.
“ನೀವು ಆ ಸಿಎಂ ಭವನ ಎಂದು ಕರೆಯಿರಿ, ಅದು ನಿಜವಾಗಿಯೂ ಗಟಾರ. ಇದೊಂದು ಅಪಾಯಕಾರಿ ಘಟನೆ. ಇದೊಂದು ದೊಡ್ಡ ಹಗರಣ. ಸ್ವಾತಿ ಪ್ರಾಣಕ್ಕೆ ಅಪಾಯವಿದೆ, ಬೆದರಿಕೆ ಹಾಕಲಾಗಿದೆ, ಇಲ್ಲದಿದ್ದರೆ ಯಾರೂ ಹಾಗೆ ಪೊಲೀಸರಿಗೆ ಕರೆ ಮಾಡುವುದಿಲ್ಲ ಅಥವಾ ಪೊಲೀಸ್ ಠಾಣೆಯಿಂದ ಹಿಂತಿರುಗಿದ ಬಳಿಕ ಆಕೆಯನ್ನು ಇನ್ನಷ್ಟು ಮೌನಗೊಳಿಸಲಾಗುತ್ತಿದೆ” ಎಂದು ನವೀನ್ ಮಾಧ್ಯಮ ಹೇಳಿಕೆ ನೀಡಿದ್ದಾರೆ.
”ಇದು ನನ್ನ ವೈಯಕ್ತಿಕ ವಿಚಾರವಲ್ಲ. ಗೃಹ ಸಚಿವಾಲಯ, ದೆಹಲಿ ಪೋಲೀಸ್ ಮತ್ತು ರಾಷ್ಟ್ರೀಯ ಮಹಿಳಾ ಆಯೋಗದ ಮೌನದ ಬಗ್ಗೆ ನನಗೆ ಅರ್ಥವಾಗುತ್ತಿಲ್ಲ. ಆಕೆಯ ಜೀವಕ್ಕೆ ಬೆದರಿಕೆ ಇದ್ದು, ಕ್ರಮ ಕೈಗೊಳ್ಳಲೇಬೇಕು. ಸ್ವಾತಿ ಹೊರಗೆ ಬರಬೇಕು.ಅವಳು ಮೌನವಾಗಿರಲು ಸಾಧ್ಯವಿಲ್ಲ, ಆಕೆಯ ಮೇಲೆ ಯಾವ ಒತ್ತಡ ಹೇರಲಾಗಿದೆ ಎಂದು ನನಗೆ ತಿಳಿದಿಲ್ಲ.ದೆಹಲಿ ಪೊಲೀಸರು ಗಮನಹರಿಸಬೇಕು. ನನ್ನ ಸಹಾಯವನ್ನು ಕೇಳಿದರೆ, ನಾನು ಖಂಡಿತವಾಗಿಯೂ ಸಹಾಯ ಮಾಡುತ್ತೇನೆ. ಜನರೂ ಸಿದ್ಧರಾಗಿದ್ದಾರೆ” ಎಂದು ಹೇಳಿಕೆ ನೀಡಿದ್ದಾರೆ.
ಕೇಜ್ರಿವಾಲ್ ಆಪ್ತ ಕಾರ್ಯದರ್ಶಿಯಾಗಿರುವ ಬಿಭವ್ ಕುಮಾರ್ ಅವರು ಮುಖ್ಯಮಂತ್ರಿಗಳ ನಿವಾಸದಲ್ಲೇ ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
2020 ರಲ್ಲಿ ವಿಚ್ಛೇದನ
2012 ರಲ್ಲಿ ಸ್ವಾತಿ ಅವರನ್ನು ನವೀನ್ ಜೈಹಿಂದ್ ವಿವಾಹವಾಗಿದ್ದರು. ಇಬ್ಬರೂ ಜೈಹಿಂದ್ ಜನಲೋಕಪಾಲ್ ಮತ್ತು ಆರ್ ಟಿ ಐ ಚಳುವಳಿಯ ಆರಂಭಿಕ ದಿನಗಳಲ್ಲಿ ಭೇಟಿಯಾಗಿದ್ದರು. ಅಣ್ಣಾ ಹಜಾರೆ ಹೋರಾಟ ತಂಡದ ಪ್ರಮುಖ ಭಾಗವಾಗಿದ್ದರು. ನವೀನ್ ರೋಹ್ಟಕ್ ಲೋಕಸಭೆಗೆ ಆಪ್ ಅಭ್ಯರ್ಥಿಯಾಗಿದ್ದರು.ಫೆಬ್ರವರಿ 2020 ರಲ್ಲಿ ದಂಪತಿಗಳು ವಿಚ್ಛೇದನ ಪಡೆದಿದ್ದರು.