Advertisement

ಸ್ವಚ್ಛ ಭಾರತ್‌: 3 ತಿಂಗಳ ಗಡುವು

12:18 PM Jul 08, 2017 | |

ರಾಯಚೂರು: ಜಿಲ್ಲೆಯಲ್ಲಿ ಇನ್ನೂ ಮೂರು ತಿಂಗಳೊಳಗೆ ವೈಯಕ್ತಿಕ ಶೌಚಗೃಹ ನಿರ್ಮಾಣ ಗುರಿ ತಲುಪಬೇಕು ಎಂದು ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆ ನಿರ್ದೇಶಕ ಎಂ. ರವಿ ಸೂಚಿಸಿದರು.

Advertisement

ಜಿಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಸ್ವಚ್ಛ ಭಾರತ್‌ ಮಿಶನ್‌ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.
ಗ್ರಾಮೀಣಾಭಿವೃದ್ಧಿ ಖಾತೆ ಸಚಿವರು 2018 ಅಕ್ಟೋಬರ್‌ 2ರ ವೇಳೆಗೆ ರಾಜ್ಯವನ್ನು ಬಯಲು ಶೌಚ ಮುಕ್ತ ಮಾಡುವ ಪಣ ಹೊಂದಿದ್ದರು. ಆದರೆ, ಈಗ ಅದನ್ನು 2017ರ ಅಕ್ಟೋಬರ್‌ ಒಳಗಾಗಿ ಮುಗಿಸಬೇಕು ಎಂದು ಗಡುವು ನೀಡಿದ್ದಾರೆ. ಹೀಗಾಗಿ ಉಳಿದ ಮೂರು ತಿಂಗಳೊಳಗೆ ನೀವು ಏನು ಮಾಡುತ್ತೀರೋ ಗೊತ್ತಿಲ್ಲ. ಆದರೆ, ಯಾವ ಗ್ರಾಮದಲ್ಲೂ ಬಯಲು ಶೌಚ ಪದ್ಧತಿ ಕಾಣಿಸಬಾರದು ಎಂದು ಹೇಳಿದರು. ಮುಖ್ಯವಾಗಿ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತರು ಸೇರಿ ಸರ್ಕಾರಿ ನೌಕರರು ಯೋಜನೆ ಗುರಿ ತಲುಪಲು
ಸಹಕರಿಸಬೇಕು ಎಂದು ಮನವಿ ಮಾಡಿದರು. ಸಿಇಒ ಎಂ.ಕೂರ್ಮಾರಾವ ಮಾತನಾಡಿ, ಜಿಲ್ಲೆಯಲ್ಲಿ 2012ರ ವೇಳೆಗೆ 2.60 ಲಕ್ಷ ಮನೆಗಳಲ್ಲಿ ಶೌಚಗೃಹ ನಿರ್ಮಾಣ ಗುರಿ ಹೊಂದಲಾಗಿತ್ತು. ಆದರೆ, 2016ರ ವೇಳೆಗೆ 70 ಸಾವಿರ ಶೌಚಗೃಹ ಮಾತ್ರ ನಿರ್ಮಿಸಲಾಗಿದೆ. ಹೀಗಾಗಿ ಸ್ಪಷ್ಟ ಮಾಹಿತಿ ಸಂಗ್ರಹಿಸಲು ಮರು ಸಮೀಕ್ಷೆ ನಡೆಸಲಾಗುತ್ತಿದೆ. ಈಗಾಗಲೇ 220 ಹಳ್ಳಿಗಳಲ್ಲಿ ಕಾಮಗಾರಿ ಶುರುವಾಗಿದೆ. ಈಗ ಕಾಮಗಾರಿ ಮುಗಿದ ಶೌಚಗೃಹಗಳಿಗೆ ಜುಲೈ ಒಳಗಾಗಿ ನೀರಿನ ಸಂಪರ್ಕ ಕಲ್ಪಿಸಬೇಕು. ಬಹುತೇಕ ಕಡೆ ಗುಂಡಿ ಅಗೆಯದೆ ಕಟ್ಟಡ ನಿರ್ಮಿಸಲಾಗಿದೆ. ಅಂಥ ಕಡೆ ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದರು.

ನಿರೀಕ್ಷಿತ ಗುರಿ ತಲುಪಲು ಪಂಚಾಯತ ಅಧಿಕಾರಿಗಳು, ಜನಪ್ರತಿನಿಧಿಗಳು ಕೈ ಜೋಡಿಸಬೇಕು. ಇದು ಯಶಸ್ಸು ಕಾಣಬೇಕಾದರೆ ನಮ್ಮಿಂದಲೇ ಅಭಿಯಾನ ಶುರುವಾಗಬೇಕು. ಗ್ರಾಪಂ ಸದಸ್ಯರು, ಶಿಕ್ಷಕರು, ಆಶಾ, ಅಂಗನವಾಡಿ ಕಾರ್ಯಕರ್ತರು ಮನೆಯಲ್ಲಿ ಶೌಚಗೃಹ ಹೊಂದುವುದು ಕಡ್ಡಾಯ. ಮುಖ್ಯವಾಗಿ ಕಚೇರಿಗಳಲ್ಲಿ ಶೌಚಗೃಹ ಇರಲೇಬೇಕು. ಅಂದಾಗ ಮಾತ್ರ ಬೇರೆಯವರಿಗೆ ನಾವು ತಿಳಿ ಹೇಳಬಹುದು ಎಂದು ಹೇಳಿದರು.

ಇಒಗಳಿಗೆ ತರಾಟೆ: ಶೌಚಗೃಹ ನಿರ್ಮಾಣದಲ್ಲಿ ನಿರೀಕ್ಷಿತ ಗುರಿ ತಲುಪದ ತಾಪಂ ಇಒಗಳನ್ನು ಸಿಇಒ ತರಾಟೆಗೆ ತೆಗೆದುಕೊಂಡರು. ಸಿಂಧನೂರು ಇಒ ಬಸಣ್ಣ ಮಾತನಾಡಿ, ತಾಲೂಕಿನಲ್ಲಿ 1706 ಶೌಚಗೃಹ ನಿರ್ಮಿಸಲಾಗಿದೆ ಎನ್ನುತ್ತಿದ್ದಂತೆ ಸಿಇಒ
ಸಿಡಿಮಿಡಿಗೊಂಡರು. ನಿಮ್ಮ ತಾಲೂಕಿನಲ್ಲಿ 36 ಪಂಚಾಯತಗಳಿವೆ. ಎಲ್ಲವನ್ನು ವಿಭಾಗಿಸಿದರೆ ಕನಿಷ್ಠ ಪ್ರತಿ ಪಂಚಾಯತಗೆ ನೂರು ಶೌಚಗೃಹ ಕೂಡ ನಿರ್ಮಿಸಿಲ್ಲ. ಇದು ನಿಮಗೇ ಸರಿ ಎನಿಸುತ್ತಿದೆಯಾ ಎಂದು ಪ್ರಶ್ನಿಸಿದರು.

ಮಾನ್ವಿ ಇಒ ಮಾತನಾಡಿ, ತಾಲೂಕಿನಲ್ಲಿ 40 ಸಾವಿರ ಶೌಚಗೃಹ ನಿರ್ಮಾಣ ಗುರಿಯಿದೆ. ಆರು ಸಾವಿರ ಶೌಚಗೃಹಗಳಿಗೆ ವರ್ಕ್‌ ಆರ್ಡರ್‌ ನೀಡಬೇಕು ಎಂದು ವಿವರಣೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ, ನಿಮಗೆ ಕೇವಲ ಮೂರು ವಾರ ಕಾಲಾವಕಾಶ ನೀಡಲಾಗುವುದು. ಅಷ್ಟರೊಳಗೆ ಹಂತ ಹಂತವಾಗಿ ಪಂಚಾಯತಗಳನ್ನು ಆಯ್ಕೆ ಮಾಡಿಕೊಂಡು ಗುರಿ ತಲುಬೇಕು. ವರ್ಕ ಆರ್ಡರ್‌
ನೀಡುವುದು, ಯೋಜನೆ ರೂಪಿಸುವುದು ಎಂದೆಲ್ಲ ನೆಪ ಬೇಡ. ನೇರವಾಗಿ ಕೆಲಸ ಶುರು ಮಾಡಿಸಿ ಎಂದು ಸಿಇಒ ಸೂಚಿಸಿದರು.

Advertisement

15 ದಿನದೊಳಗೆ ಅನುದಾನ
ಬಿಡುಗಡೆ ಮಾಡಬೇಕು ಎಂದು ಸಿಇಒ ಸೂಚಿಸಿದರು. ಸ್ವತ್ಛ ಭಾರತ್‌ ಮಿಶನ್‌ಗೆ ಯಾವುದೇ ಅನುದಾನ ಸಮಸ್ಯೆಯಿಲ್ಲ. ಅದಕ್ಕೆ ವಿಶೇಷ ಯೋಜನೆ, ಪರವಾನಗಿ ಕೂಡ ಬೇಕಿಲ್ಲ. ಪ್ರತಿ ಶನಿವಾರ ಸ್ವತ್ಛತಾ ದಿನವಾಗಿ ಆಚರಿಸುತ್ತಿದ್ದು, ಶಿಕ್ಷಕರು, ಆಶಾ, ಅಂಗನವಾಡಿ
ಕಾರ್ಯಕರ್ತರು. ಪಿಡಿಒಗಳು ಬೆಳಗಿನ ಜಾವ ಮನೆ ಮನೆಗಳಿಗೆ ತೆರಳಿ ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದರು.
ಜಿಪಂ ಕಾರ್ಯದರ್ಶಿ ಮಹ್ಮದ್‌ ಯೂಸೂಫ್‌ ಖಾನ್‌ ಮಾತನಾಡಿ, ಈ ಯೋಜನೆಯಲ್ಲಿ ಪಿಡಿಒಗಳ ಶ್ರಮ ಹೆಚ್ಚಾಗಿದೆ ಎಂದು ಹೇಳಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮೆಹಬೂಬ್‌ ಪಾಷಾ, ಪೌಢಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಸೈಯ್ಯದ್‌ ಸಿರಾಜ್‌ ಸೇನ್‌, ವೀರಭದ್ರಪ್ಪ, ಪಿಡಿಒಗಳು, ಶಿಕ್ಷಕರು ಸೇರಿ ಇತರರು ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next