ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನ ದ್ವಿತೀಯ ವಿಜ್ಞಾನ ವಿಭಾಗದ ಸ್ವಸ್ತಿಕ್ ಪದ್ಮ ಅವರ ಹೆಸರನ್ನು ಪುಟ್ಟ ಗ್ರಹವೊಂದಕ್ಕೆ (ಮೈನರ್ ಪ್ಲಾನೆಟ್) ಇಡಲಾಗಿದೆ. ಅಂತಾರಾಷ್ಟ್ರೀಯ ಮಟ್ಟದ ಐಎಸ್ ಇಎಫ್-2018 (ಇಂಟರ್‌ನ್ಯಾಶ ನಲ್ ಸೈನ್ಸ್ ಆ್ಯಂಡ್ ಎಂಜಿನಿಯರಿಂಗ್ ಫೇರ್- 2018) ರಲ್ಲಿ ಅವರು ಮಾಡಿದ ಸಾಧನೆಯನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ.
ಮೆಸಾಚ್ಯುಸೆಟ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಲಿಂಕನ್ ಲ್ಯಾಬೋರೇಟರಿ ಆ್ಯಂಡ್ ಇಂಟರ್‌ನ್ಯಾಶನಲ್ ಆಸ್ಟ್ರೋನಾಮಿಕಲ್ ಯೂನಿಯನ್ ಈ ಗೌರವ ಪ್ರದಾನ ಮಾಡಿದೆ. ಈ ಮೂಲಕ ಸ್ವಸ್ತಿಕ್ ಪದ್ಮ ಅವರು 2019ರ ಮೇ ತಿಂಗಳಲ್ಲಿ ನಡೆಯುವ ಗೂಗಲ್ ಸೈನ್ಸ್ ಫೇರ್‌ನಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ. ಇದರಲ್ಲಿ “ಡೆಸಾಲ್: ಡೆವಲಪ್‌ಮೆಂಟ್ ಆಫ್ ಎ ನೋವೆಲ್ ಆ್ಯಂಡ್ ಫೀಸಿಬಲ್ ಡೆಸಾಲಿನೇಶನ್ ಡಿವೈಸ್’ ಎಂಬ ಸಂಶೋಧನ ಪ್ರಬಂಧ ಮಂಡಿಸಲಿದ್ದಾರೆ.
ಈ ಹಿಂದೆ ಎರಡು ಬಾರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ ಹೆಗ್ಗಳಿಕೆ ಇವರದ್ದು. 2017ರಲ್ಲಿ ಇಂಟರ್‌ನ್ಯಾಶನಲ್ ಸೈನ್ಸ್ ಆ್ಯಂಡ್ ಎಂಜಿನಿಯರಿಂಗ್ ಫೇರ್‌ನಲ್ಲಿ ಪುನರ್ಬಳಕೆ ಆಗದ ಪ್ಲಾಸ್ಟಿಕ್‌ಗೆ ಸ್ಲಾÂಗ್ ಬಳಸಿ ವಸ್ತುವೊಂದನ್ನು ತಯಾರಿಸಿದ್ದರು.
ಇದು ಕಬ್ಬಿಣಕ್ಕಿಂತಲೂ 24 ಪಟ್ಟು ಬಲಶಾಲಿ. ಇದರಲ್ಲಿ ವಿಶೇಷ ಪ್ರಶಸ್ತಿ ಪಡೆದಿದ್ದರು. 2018ರಲ್ಲಿ ಮಕ್ಕಳ ಅಪೌಷ್ಟಿಕತೆಯನ್ನು 6 ತಿಂಗಳು ಮೊದಲೆ ಕಂಡುಹಿಡಿಯುವ ಪೇಪರ್ ಸ್ಲಿಪ್ ಅನ್ವೇಷಿಸಿದ್ದರು. ಬಾಯಿ ಕ್ಯಾನ್ಸರನ್ನು ಬೇಗನೆ ಪತ್ತೆ ಹಚ್ಚುವ ಪೇಪರ್ ಸ್ಲಿಪ್ ಸಂಶೋಧಿಸಿದ್ದರು. ಈ ಸಾಧನೆಗಾಗಿ 2018ರ ಅಂತಾರಾಷ್ಟ್ರೀಯ ಸೈನ್ಸ್ ಆ್ಯಂಡ್ ಎಂಜಿನಿಯರಿಂಗ್ ಫೇರ್‌ನಲ್ಲಿ ಸೆಕೆಂಡ್ ಗ್ರ್ಯಾಂಡ್ ಅವಾರ್ಡ್ ಪಡೆದಿದ್ದರು. 2017ರ ನ.14ರಂದು ಭಾರತದ ರಾಷ್ಟ್ರಪತಿ ಅವರಿಂದ ಬಾಲ ಪುರಸ್ಕಾರ ಪಡೆದುಕೊಂಡಿದ್ದರು.
ಎನ್‌ಸಿಎಸ್‌ಸಿ ಯುವ ವಿಜ್ಞಾನಿ ಪ್ರಶಸ್ತಿ, ಅಹ್ಮದಾಬಾದ್‌ನಲ್ಲಿ ನಡೆದ ಪ್ಲಾಸ್ಟಿಕ್ ಎಕ್ಸಿಬಿಷನ್‌ನಲ್ಲಿ ಅಂ.ರಾ. ಪ್ಲಾಸ್ಟ್ ಐಕಾನ್ ಅವಾರ್ಡ್ ಪಡೆದಿದ್ದಾರೆ. ಸ್ವಸ್ತಿಕ್ ಪದ್ಮ ಅವರು ಬಂಟ್ವಾಳ ತಾಃ ಕೆದಿಲ ಮುರ್ಗಜೆ ಶ್ರೀರಾಮ ಭಟ್ ಎಂ. ಮತ್ತು ಮಲ್ಲಿಕಾ ದಂಪತಿ ಪುತ್ರ.
85 ದೇಶಗಳ 2,450 ವಿದ್ಯಾರ್ಥಿಗಳು ಈ ಅಂತಾರಾಷ್ಟ್ರೀಯ ಫೇರ್‌ನಲ್ಲಿ ಭಾಗವಹಿಸುತ್ತಾರೆ. ಇಲ್ಲಿ ಭಾಗವಹಿಸುವಾಗ ಮೊದಲು ನಮ್ಮ ದೇಶದ ಹೆಸರನ್ನೇ ಪ್ರಸ್ತಾಪಿಸುತ್ತಾರೆ. ಆದ್ದರಿಂದ ಈ ಗೌರವ ದೇಶಕ್ಕೆ ಸಲ್ಲಬೇಕು. ಇದುವೇ ಒಂದು ಹೆಮ್ಮೆಯ ವಿಷಯ. ಪುಟ್ಟಗ್ರಹಕ್ಕೆ ನನ್ನ ಹೆಸರು ಇಡುತ್ತಾರೆ. ಆದರೆ ಅವರ ಗುಣಮಟ್ಟಕ್ಕೆ ತಕ್ಕಂತೆ ಕೆಲ ಮಾರ್ಪಾಡು ಮಾಡಲಾಗುತ್ತದೆ.
-ಸ್ವಸ್ತಿಕ್ ಪದ್ಮ, ವಿಜ್ಞಾನ ಸಾಧಕ