ಪುಂಜಾಲಕಟ್ಟೆ : ಇಲ್ಲಿನ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‌ನ ವತಿಯಿಂದ ಮಾ. 5ರಂದು ನಡೆಯಲಿರುವ 9ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದ ಪ್ರಯುಕ್ತ ವಧೂ-ವರರ ನಿಶ್ಚಿತಾರ್ಥ ಕಾರ್ಯಕ್ರಮ ರವಿವಾರ ಪುಂಜಾಲಕಟ್ಟೆ ಬಂಗ್ಲೆ ಮೈದಾನ ಸಭಾಂಗಣದಲ್ಲಿ ಜರಗಿತು.
ಉದ್ಯಮಿ ಓಂಪ್ರಸಾದ್ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಕ್ಲಬ್ ಸ್ಥಾಪಕಾಧ್ಯಕ್ಷ ಎಂ. ತುಂಗಪ್ಪ ಬಂಗೇರ ಪ್ರಾಸ್ತಾವಿಕವಾಗಿ ಮಾತನಾಡಿ ಬಡವರೂ ಅದ್ದೂರಿಯ ವಿವಾಹ ನೆರವೇರಿಸಲು ಸಾಮೂಹಿಕ ವಿವಾಹ ವೇದಿಕೆಯಾಗಿದ್ದು ಸ್ವಸ್ತಿಕ್ ಕ್ಲಬ್ ವತಿಯಿಂದ ವಿಜೃಂಭಣೆಯಿಂದ ನಡೆಯಲಿದೆ.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು, ರಾಜಕೀಯ, ಧಾರ್ಮಿಕ ಮುಖಂಡರು ಭಾಗವಹಿಸಲಿದ್ದು ನಿಶ್ಚಿತಾರ್ಥ,ದಿಬ್ಬಣಗಳಿಂದ ಸಾಮೂಹಿಕ ವಿವಾಹ ರಾಜ್ಯದಲ್ಲಿಯೇ ವಿಶಿಷ್ಟವಾಗಿದೆ ಎಂದು ಹೇಳಿದರು.
ಇದೇ ವೇಳೆ ವಧೂ-ವರರಿಗೆ ಮಂಗಳವಸ್ತ್ರ ವಿತರಿಸಲಾಯಿತು. ಸಾಮಾಜಿಕ ಕಾರ್ಯಕರ್ತ ದೇವಪ್ಪ ಶೆಟ್ಟಿ ಕುಂಟಜಾಲು, ರಂಗ ಕಲಾವಿದ ಎಚ್.ಕೆ. ನಯನಾಡು, ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಅಧ್ಯಕ್ಷ ಮೋಹನ ಸಾಲ್ಯಾನ್, ಅಣ್ಣಳಿಕೆ ಫ್ರೆಂಡ್ಸ್ ಸಂಚಾಲಕ ರಾಮಚಂದ್ರ ಶೆಟ್ಟಿಗಾರ್, ಗ್ರಾ.ಪಂ. ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಬಡಗಕಜೆಕಾರು ಗ್ರಾ.ಪಂ. ಸದಸ್ಯ ಗಂಗಾಧರ ಪೂಜಾರಿ, ಮಡಂತ್ಯಾರು ಗ್ರಾ.ಪಂ. ಮಾಜಿ ಅಧ್ಯಕ್ಷ ವಿಶ್ವನಾಥ ಪೂಜಾರಿ, ಮುಖ್ಯ ಶಿಕ್ಷಕ ರಾಮ ಪಿ. ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
ಕ್ಲಬ್ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಗೌರವಾಧ್ಯಕ್ಷ ಅಬ್ದುಲ್ಲಾ ಪಿ., ಕಾರ್ಯದರ್ಶಿ ಜಯರಾಜ ಅತ್ತಾಜೆ, ಕೋಶಾಧಿಕಾರಿ ರಾಜೇಶ್ ಬಂಗೇರ ಪುಳಿಮಜಲು ಮತ್ತಿತರ ಸದಸ್ಯರು ಭಾಗವಹಿಸಿದ್ದರು.
ಸಾಮೂಹಿಕ ವಿವಾಹ ಸಮಿತಿಯ ದೇವಪ್ಪ ಶೆಟ್ಟಿ ಕುಂಟಜಾಲು ಅವರ ಮುಂದಾಳತ್ವದಲ್ಲಿ ವರನ ಕಡೆಯಿಂದ ಸಂಜೀವ ಶೆಟ್ಟಿ ಮೊಗೆರೋಡಿ ಅವರು ಹಾಗೂ ವಧುವಿನ ಕಡೆಯಿಂದ ಪ್ರಶಾಂತ್ ಪೂಜಾರಿ ಗುರಿಕಾರರಾಗಿ ಭಾಗವಹಿಸಿ ನಿಶ್ಚಯ ತಾಂಬೂಲ ನೆರವೇರಿಸಿದರು. ಗುರಿಕಾರರು ತುಳುನಾಡಿನ ಸಂಪ್ರದಾಯ ಪ್ರಕಾರ ವೀಳೆÂದೆಲೆ, ಅಡಿಕೆ, ಮಲ್ಲಿಗೆ ಹೂವು ಇರಿಸಿದ ಹರಿವಾಣವನ್ನು ಹಿಡಿದು ಮೂರು ಬಾರಿ ಪರಸ್ಪರ ಬದಲಾಯಿಸಿಕೊಂಡರು. ವಧೂ-ವರರು ಉಂಗುರ ವಿನಿಮಯ ಮಾಡಿಕೊಂಡರು. 20ಜೋಡಿ ವಧೂ-ವರರು ಸೇರಿದಂತೆ ಅವರವರ ಕುಟುಂಬಸ್ಥರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕ್ಲಬ್‌ನ ಮಾಜಿ ಅಧ್ಯಕ್ಷ ಪ್ರಭಾಕರ ಪಿ.ಎಂ. ಸ್ವಾಗತಿಸಿದರು.ಭರತ್‌ರಾಜ್ ಜೈನ್ ಕಾರ್ಯಕ್ರಮ ನಿರೂಪಿಸಿದರು.