Advertisement

ಸ್ವಸಹಾಯ ಸಂಘದವರ ಬಳಿಗೆ ಬರಲಿದ್ದಾರೆ ಸಖೀಯರು!

02:07 AM Feb 15, 2021 | Team Udayavani |

ಕುಂದಾಪುರ: ಬ್ಯಾಂಕ್‌ ಸಾಲ ಬೇಕೇ, ಸಾಲ ಮರುಪಾವತಿಸಬೇಕೇ? ಸಹಾಯ ಮಾಡಲಿದ್ದಾಳೆ ಬ್ಯಾಂಕ್‌ ಸಖೀ. ಹೈನುಗಾರಿಕೆ ಮಾಹಿತಿ, ಮಾರ್ಗದರ್ಶನ ಅಗತ್ಯವಿದೆಯೇ? ಒದಗಿಸಿಕೊಡಲಿದ್ದಾಳೆ ಪಶು ಸಖೀ. ಮತ್ಸ್ಯಸಾಕಣೆ ಕುರಿತು ವಿವರಿಸಲಿದ್ದಾಳೆ ಮತ್ಸ್ಯಸಖೀ. ಅರಣ್ಯ ಇಲಾಖೆಯ ಯೋಜನೆ ಕುರಿತು ಉತ್ತರಿಸಲಿದ್ದಾಳೆ ವನಸಖೀ. ಇಲಾಖೆಗಳ ಮಾಹಿತಿಯನ್ನು ಸ್ವಸಹಾಯ ಸಂಘಗಳ ಸದಸ್ಯೆಯರಿಗೆ ಒದಗಿಸಲು ಮಹಿಳೆಯರನ್ನೇ ನೇಮಿಸಿಕೊಳ್ಳಲಾಗುತ್ತಿದೆ.

Advertisement

ಸಂಜೀವಿನಿ :

ಕೇಂದ್ರ ಸರಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯ 2010-11ನೇ ಸಾಲಿನಲ್ಲಿ ಸ್ವರ್ಣಜಯಂತಿ ಸ್ವರೋಜ್‌ಗಾರ್‌ ಯೋಜನೆಯನ್ನು ಹೊಸದಾಗಿ ರಚಿಸಿ ದೀನ್‌ದಯಾಳ್‌ ಅಂತ್ಯೋದಯ ಯೋಜನೆ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನವಾಗಿ ಜಾರಿಗೆ ತಂದಿದೆ. ರಾಜ್ಯದಲ್ಲಿ  ಇದು ಸಂಜೀವಿನಿ. 2014-15ರಿಂದ ಪ್ರತೀ ಪಂಚಾಯತ್‌ ಮಟ್ಟದಲ್ಲಿ ಮಹಿಳೆಯರ ಸ್ವಸಹಾಯ ಸಂಘಗಳನ್ನು ಒಗ್ಗೂಡಿಸಿ ಸಂಜೀವಿನಿ ಒಕ್ಕೂಟ ರಚಿಸಲಾಗಿದೆ.

ರಾಜ್ಯ, ಕೇಂದ್ರ ಅನುದಾನದಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ (ಕೆಎಸ್‌ಆರ್‌ಎಲ್‌ಪಿಎಸ್‌) ಮೂಲಕ ಸಂಜೀವಿನಿ ಯೋಜನೆ ನಡೆಯುತ್ತಿದೆ. ಪ್ರತೀ ಸ್ವಸಹಾಯ ಸಂಘದ ಮೂವರು ಮಹಿಳೆಯರನ್ನು ಆಯ್ಕೆ ಮಾಡಿ ವಾರ್ಡ್‌ ಒಕ್ಕೂಟ, ಪ್ರತೀ ವಾರ್ಡ್‌ ಒಕ್ಕೂಟದಿಂದ ಮೂವರಿದ್ದು ಪಂಚಾಯತ್‌ ಮಟ್ಟದ ಸಂಜೀವಿನಿ ಒಕ್ಕೂಟ ರಚಿಸಲಾಗುತ್ತದೆ. ಯಾವುದೇ ಸ್ವಯಂ ಸೇವಾ ಸಂಸ್ಥೆಗಳ ಸ್ವಸಹಾಯ ಸಂಘಗಳಲ್ಲಿ ಈಗಾಗಲೇ ಇರುವವರು ಸಂಜೀವಿನಿ ಒಕ್ಕೂಟದ ಅಡಿ ನೋಂದಾಯಿಸಿಕೊಳ್ಳಬಹುದು. ಸರಕಾರಿ, ಸಾಲ ಸೌಲಭ್ಯ ಪಡೆಯಬಹುದು.

ಸಿಬಂದಿ :

Advertisement

ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್‌ಆರ್‌ಎಲ್‌ಎಂ) ಮೂಲಕ ಪ್ರತಿ ಒಕ್ಕೂಟಕ್ಕೆ ಆರ್ಥಿಕ ಚಟುವಟಿಕೆಗೆ 10 ಲಕ್ಷ ರೂ., ಸ್ವಂತ ಕಟ್ಟಡ ರಚನೆಗೆ 13.5 ಲಕ್ಷ ರೂ. ಅನುದಾನ ದೊರೆಯುತ್ತದೆ. ಪರಿಶಿಷ್ಟ ಜಾತಿ/ಪಂಗಡ, ಅಂಗವಿಕಲರ ಸ್ವಸಹಾಯ ಗುಂಪುಗಳಿಗೆ ಪ್ರತಿ ಗುಂಪಿಗೆ 1.25 ಲಕ್ಷ ರೂ., ಇತರ ಗುಂಪುಗಳಿಗೆ 75 ಸಾವಿರ ರೂ. ಸಾಲವಾಗಿ ನೀಡಲಾಗುತ್ತದೆ.

ಒಕ್ಕೂಟ :

ದ.ಕ. ಜಿಲ್ಲೆಯಲ್ಲಿ  4,717 ಸ್ವಸಹಾಯ ಸಂಘಗಳಿದ್ದು 169 ಸಂಜೀವಿನಿ ಒಕ್ಕೂಟಗಳಿವೆ. ಜಿಲ್ಲೆಯಲ್ಲಿ ಈಗಾಗಲೇ 25 ಮಂದಿಗೆ ಉದ್ಯೋಗ ಸಖೀಯಾಗಿ 37 ಮಂದಿಗೆ ಬ್ಯಾಂಕ್‌ ಸಖೀಯಾಗಿ ತರಬೇತಿ ನೀಡಲಾಗಿದೆ. ದ.ಕ.ದಲ್ಲಿ ಒಕ್ಕೂಟಗಳಿಗೆ ಆರ್ಥಿಕ ಸ್ವಾವಲಂಬನೆಗೆ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು ತಾಲೂಕಿನಲ್ಲಿ ಉತ್ಪನ್ನ ತಯಾರಿ, ಆನ್‌ಲೈನ್‌ ಮಾರಾಟ ಸೇರಿದಂತೆ ದೊಡ್ಡಮಟ್ಟದ ಯೋಜನೆಗಳ ತಯಾರಿ ನಡೆಯುತ್ತಿದೆ.

ಉಡುಪಿ ಜಿಲ್ಲೆಯಲ್ಲಿ 125 ಒಕ್ಕೂಟಗಳಿದ್ದು 4,200 ಸ್ವಸಹಾಯ ಸಂಘಗಳಿವೆ. ಮಾರ್ಚ್‌ ಒಳಗೆ ಇನ್ನಷ್ಟು ಒಕ್ಕೂಟಗಳ ರಚನೆಯಾಗಲಿವೆ. 10 ಲಕ್ಷ ರೂ.ಗಳ ಸಮುದಾಯ ಬಂಡವಾಳ ನಿಧಿ ವಿನಿಯೋಗವಾಗಿರುವುದು ಕಾರ್ಕಳ ತಾಲೂಕಿನಲ್ಲಿ ಮಾತ್ರ. ಆದ್ದರಿಂದ ಕಾರ್ಕಳ ತಾಲೂಕಿನ 10 ಪಂಚಾಯತ್‌ಗಳಲ್ಲಿ ಮಾತ್ರ ಬ್ಯಾಂಕ್‌ ಸಖೀಯರ ನೇಮಕ ನಡೆಯಲಿದೆ.

ಬ್ಯಾಂಕ್‌ ಸಖೀಯರ ನೇಮಕಕ್ಕೆ ಆದೇಶ ಬಂದಿದ್ದು ಸ್ವಸಹಾಯ ಸಂಘದಲ್ಲಿ ಸಕ್ರಿಯರಾಗಿರುವವರಲ್ಲೇ ಆಯ್ಕೆ ಮಾಡಿ ತರಬೇತಿ ನೀಡಿ ಪರೀಕ್ಷೆ ನಡೆಸಿ ಆಯ್ಕೆಗೆ ಪರಿಗಣಿಸಲಾಗುತ್ತದೆ. ದ.ಕ., ಉಡುಪಿಯಲ್ಲಿ ತರಬೇತಿಯಷ್ಟೇ ಆಗಿದ್ದು ನೇಮಕಾತಿ ನಡೆದಿಲ್ಲ. ಉದ್ಯೋಗ ಸಖೀಯು ಉದ್ಯೋಗ ಖಾತ್ರಿಯಲ್ಲಿ 100 ದಿನಗಳ ಕೆಲಸ ಮುಗಿಸಿದವರಿಗೆ ಹೆಚ್ಚಿನ ಕೌಶಲ, ತರಬೇತಿಯ ಅವಶ್ಯವಿದ್ದರೆ ಏರ್ಪಾಟು ಮಾಡಬೇಕು. ಈಗಾಗಲೇ ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿ (ಎಲ್‌ಸಿಆರ್‌ಪಿ) ಆಗಿರುವವರಿಗೆ ಹೆಚ್ಚುವರಿ ಭತ್ತೆ ನೀಡಿ ನೇಮಿಸಲಾಗುತ್ತದೆ. ಇತರ ಸಖೀಯರ ನೇಮಕಕ್ಕೆ ಇನ್ನೂ ಆದೇಶ ಬಂದಿಲ್ಲ. ಎಲ್ಲ ತಾಲೂಕುಗಳಲ್ಲಿ ಒಕ್ಕೂಟಗಳ ರಚನೆಗೆ ಆದ್ಯತೆ ನೀಡಲಾಗುತ್ತಿದೆ. – ಗುರುದತ್‌ ಯೋಜನ ನಿರ್ದೇಶಕರು, ಉಡುಪಿ ಜಿ.ಪಂ.

 

 ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next