ಮುಂಬಯಿ: ಹಲವು ವಿಳಂಬದ ಬಳಿಕ ಬಿಡುಗಡೆಗೆ ಸಿದ್ಧವಾಗಿರುವ ʼಎಮರ್ಜೆನ್ಸಿʼ (Emergency Movie) ಚಿತ್ರದ ಹೊಸ ಟ್ರೇಲರ್ ರಿಲೀಸ್ ಆಗಿದೆ.
ನಟಿ ಕಂಗನಾ ರಣಾವತ್ (Kangana ranaut) ನಟಿಸಿ, ನಿರ್ದೇಶಿಸಿರುವ ʼಎಮರ್ಜೆನ್ಸಿʼ ಸಿನಿಮಾ ಥಿಯೇಟರ್‌ಗೆ ಲಗ್ಗೆಯಿಡಲು ಸಿದ್ಧವಾಗಿದೆ. ಭಾರತದ ಮೊದಲ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಅವರ ರಾಜಕೀಯ ಜೀವನದ ಸುತ್ತ ಸಾಗುವ ʼಎಮರ್ಜೆನ್ಸಿʼ ಕುರಿತು ಬಾಲಿವುಡ್‌ನಲ್ಲಿ ದೊಡ್ಡ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ.
ಭಾರತದ ತುರ್ತು ಪರಿಸ್ಥಿತಿಯ ಕಥೆಯನ್ನೊಳಗೊಂಡಿರುವ ʼಎಮರ್ಜೆನ್ಸಿʼ ಸಿನಿಮಾದಲ್ಲಿ ನಟಿ ಕಂಗನಾ ಭಾರತದ ಮೊದಲ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ(Indira Gandhi) ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ 2024ರ ಸೆ.6 ರಂದೇ ಚಿತ್ರ ರಿಲೀಸ್ ಆಗಬೇಕಿತ್ತು. ಆದರೆ ಸೆನ್ಸಾರ್ ಬೋರ್ಡ್ ವಿವಾದ ಹಾಗೂ ಶಿರೋಮಣಿ ಅಕಾಲಿದಳದ ವಿರೋಧದಿಂದ ಚಿತ್ರದ ರಿಲೀಸ್ ಡೇಟ್ ನಿರಂತರವಾಗಿ ಮುಂದೂಡಿಕೆ ಆಗುತ್ತಲೇ ಬಂದಿತ್ತು.
ಕೊನೆಗೂ ಜನವರಿ 17ರಂದು ಸಿನಿಮಾ ರಿಲೀಸ್ ಆಗಲಿದೆ. ಆ ನಿಟ್ಟಿನಲ್ಲಿ ಚಿತ್ರ ಹೊಸ ಟ್ರೇಲರ್ ರಿಲೀಸ್ ಆಗಿದೆ.
ಅನುಪಮ್ ಖೇರ್ ಅವರ ಪಾತ್ರ ಜಯಪ್ರಕಾಶ್ ನಾರಾಯಣ್ ಅವರು ಇಂದಿರ ಗಾಂಧಿ ಅವರಿಗೆ ಪತ್ರ ಬರೆಯುವ ದೃಶ್ಯವನ್ನು ಟ್ರೇಲರ್‌ನ ಆರಂಭದಲ್ಲಿ ತೋರಿಸಲಾಗಿದೆ. ʼಎಮರ್ಜೆನ್ಸಿ ಘೋಷಣೆ ಮಾಡಲು ಸಂಪೂರ್ಣ ಕ್ಯಾಬಿನೆಟ್‌ನ ಸಮ್ಮತಿ ಬೇಕಾಗುತ್ತದೆ ಎನ್ನುವಾಗ ಇಂದಿರಾ ಅವರು ನಾನೇ ಕ್ಯಾಬಿನೆಟ್ ಎಂದು ಹೇಳಿ ದೇಶದಲ್ಲಿ ʼಎಮರ್ಜೆನ್ಸಿʼ ಘೋಷಣೆ ಮಾಡುವುದನ್ನು ತೋರಿಸಲಾಗಿದೆ.
ಇದಾದ ಬಳಿಕ ಸಾಮಾನ್ಯ ಜನರ ಮೇಲೆ ಹಾಗೂ ರಾಜಕೀಯ ಸ್ಥಿತಿಗತಿ ಮೇಲೆ ತುರ್ತು ಪರಿಸ್ಥಿತಿ ಯಾವ ರೀತಿಯ ಪರಿಣಾಮ ಬೀರಲಿದೆ ಎನ್ನುವುದನ್ನು ತೋರಿಸಲಾಗಿದೆ. ಇಂದಿರಾ ಗಾಂಧಿ ಆ ಕಾಲದಲ್ಲಿ ಹೇಗೆ ಅಧಿಕಾರವನ್ನು ಬಳಸಿ ದೇಶವನ್ನು ಆಳಿದ್ದರು ಎನ್ನುವ ಸನ್ನಿವೇಶವನ್ನು ದೃಶ್ಯದ ಮೂಲಕ ತೋರಿಸಲಾಗಿದೆ.
ʼಇಂದಿರಾವೇ ಇಂಡಿಯಾ” ಎಂದು ಮತ್ತೊಬ್ಬರು ಹೇಳಿ ರಾಜಕೀಯ ಸನ್ನಿವೇಶಗಳನ್ನು ಟ್ರೇಲರ್‌ನಲ್ಲಿ ತೋರಿಸಲಾಗಿದೆ.
ಅನುಪಮ್ ಖೇರ್, ಶ್ರೇಯಸ್ ತಲ್ಪಾಡೆ, ಮಿಲಿಂದ್ ಸೋಮನ್, ಮಹಿಮಾ ಚೌಧರಿ ಚಿತ್ರದಲ್ಲಿ ಮುಂತಾದವರು ನಟಿಸಿದ್ದಾರೆ.