Advertisement

ಆ ರೋಹಿ ಹೀ ರೋಯಿನ್‌

06:00 AM Aug 19, 2018 | Team Udayavani |

ರವಿಚಂದ್ರನ್‌ ಅಭಿನಯದ ದೃಶ್ಯ ಚಿತ್ರ ಅದು. ನಾಲ್ಕು ವರ್ಷಗಳ ಹಿಂದೆ ಬಿಡುಗಡೆಯಾದ ಈ ಚಿತ್ರದಲ್ಲಿ ರವಿಚಂದ್ರನ್‌ ಅವರ ಮಗಳ ಪಾತ್ರದಲ್ಲಿ ಹೊಸ ಹುಡುಗಿಯೊಬ್ಬಳನ್ನು ಪರಿಚಯಿಸಲಾಗಿತ್ತು. ಆಕೆಯೇ ಸ್ವರೂಪಿಣಿ ನಾರಾಯಣ್‌. ಚಿತ್ರ ಬಿಡುಗಡೆಯಾಯಿತು. ಸ್ವರೂಪಿಣಿ ಅಭಿನಯದ ಬಗ್ಗೆ ಮೆಚ್ಚುಗೆಯೂ ವ್ಯಕ್ತವಾಯಿತು. ಆದರೆ, ಅದಾದ ನಂತರ ಸ್ವರೂಪಿಣಿ ಎಲ್ಲೂ ಹೆಚ್ಚು ಕಾಣಿಸಿಕೊಳ್ಳಲಿಲ್ಲ. ಇತ್ತೀಚೆಗೆ ಬಿಡುಗಡೆಯಾದ ಮಸ್ತ್ ಖಲಂದರ್‌ ಚಿತ್ರದ ಮೂಲಕ ಸ್ವರೂಪಿಣಿ ವಾಪಸು ಬಂದರಾದರೂ, ಬರುವ ಹೊತ್ತಿಗೆ ಅವರ ಹೆಸರು ಬದಲಾಗಿತ್ತು. ಈ ಎರಡು ವರ್ಷಗಳ ಗ್ಯಾಪ್‌ನಲ್ಲಿ ಸ್ವರೂಪಿಣಿ, ಆರೋಹಿ ನಾರಾಯಣ್‌ ಆಗಿ ಬದಲಾಗಿದ್ದರು. ಈಗ್ಯಾಕೆ ಆರೋಹಿ ಕುರಿತ ಮಾತು ಎಂದರೆ, ಆರೋಹಿ ಇದೀಗ ಸದ್ದಿಲ್ಲದೆ, ಭೀಮಸೇನ ನಳಮಹಾರಾಜ ಚಿತ್ರದಲ್ಲಿ ನಟಿಸಿದ್ದು, ಆ ಚಿತ್ರ ಮುಂದಿನ ತಿಂಗಳು ಬಿಡುಗಡೆಯಾಗುತ್ತಿದೆ.

Advertisement

ದೃಶ್ಯ ಚಿತ್ರದ ನಂತರ ಆರೋಹಿ ಎರಡು ಚಿತ್ರಗಳನ್ನು ಒಪ್ಪಿಕೊಂಡಿದ್ದರು. ಒಂದು ಮಸ್ತ್ ಖಲಂದರ್‌ , ಇನ್ನೊಂದು ಪ್ಲೇಯರ್. ಮೊದಲನೆಯದು ಎರಡು ವರ್ಷ ತಡವಾಗಿ ಬಿಡುಗಡೆಯಾದರೆ, ಎರಡನೆಯ ಚಿತ್ರ ಕಾರಣಾಂತರಗಳಿಂದ ಬಿಡುಗಡೆಯಾಗಲೇ ಇಲ್ಲ. ಈ ಮಧ್ಯೆ ಅವಕಾಶಗಳು ಬರುತ್ತಿದ್ದವಂತೆ. ಆದರೆ, ಒಂದು ಚಿತ್ರ ಒಪ್ಪಿಕೊಂಡರೆ, ಅದು ಸರಿಯಾಗಿ ಬಿಡುಗಡೆಯಾಗಬೇಕು ಎಂಬ ಕಾರಣಕ್ಕೆ ಎಂದು ಸೂಕ್ತ ಅವಕಾಶಗಳಿಗಾಗಿ ಕಾದಿದ್ದಾರೆ. ಹಾಗಿರುವಾಗಲೇ ಅವರಿಗೆ ಸಿಕ್ಕಿದ್ದು, ಭೀಮಸೇನ ನಳಮಹಾರಾಜ. ಹೇಳಿಕೇಳಿ ರಕ್ಷಿತ್‌ ಮತ್ತು ಪುಷ್ಕರ್‌ ಜಂಟಿಯಾಗಿ ನಿರ್ಮಿಸುತ್ತಿರುವ ಚಿತ್ರ ಅದು. ಜೊತೆಗೆ ಕಥೆ ಮತ್ತು ಪಾತ್ರವೂ ಇಷ್ಟವಾಗಿದೆ. ತತ್‌ಕ್ಷಣವೇ ಆರೋಹಿ ಗ್ರೀನ್‌ ಸಿಗ್ನಲ್‌ ಕೊಟ್ಟು, ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದಾರೆ.

ಭೀಮಸೇನ ನಳಮಹಾರಾಜ ಚಿತ್ರದಲ್ಲಿ ನಟಿಸಿದ್ದು ಆರೋಹಿ ಪಾಲಿಗೆ ಮರೆಯಲಾಗದ ಅನುಭವ. ಅಷ್ಟೇ ಅಲ್ಲ, ಚಿತ್ರದ ಬಗ್ಗೆ ಸಿಕ್ಕಾಪಟ್ಟೆ ನಿರೀಕ್ಷೆ ಇದೆ. ಅದಕ್ಕೆ ಕಾರಣ ಪಾತ್ರ ಹಾಗೂ ತಂಡ. ಪರಂವಾ ಹಾಗೂ ಪುಷ್ಕರ್‌ ಬ್ಯಾನರ್‌ ಒಳ್ಳೆಯ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದು, ಆ ತರಹದ ಸಿನಿಮಾದಲ್ಲಿ ತಾನೂ ಒಂದು ಭಾಗವಾಗಿದ್ದೇನೆಂಬ ಖುಷಿ ಆರೋಹಿಗಿದೆ. ಜೊತೆಗೆ ಈ ಚಿತ್ರದಲ್ಲಿ ಆರೋಹಿಗೆ ನಟನೆಗೆ ಹೆಚ್ಚು ಅವಕಾಶವಿರುವ ಪಾತ್ರ ಸಿಕ್ಕಿದೆಯಂತೆ. ದೃಶ್ಯ ಚಿತ್ರದಲ್ಲಿ ನೋಡಿದ ಆರೋಹಿಗೂ ಭೀಮಸೇನ ಚಿತ್ರದ ಆರೋಹಿಗೂ ಅಜಗಜಾಂತರ ವ್ಯತ್ಯಾಸವಿದೆಯಂತೆ. ಅವರಿಗಿಲ್ಲಿ ಇಲ್ಲಿ ಟಾಮ್‌ಬಾಯ್‌ ತರಹದ ಪಾತ್ರ ಸಿಕ್ಕಿದೆಯಂತೆ. ಮೊಂಡುತನವಿರುವ ಗಾರ್ಮೆಂಟ್‌ ಹುಡುಗಿಯಾಗಿ ಕಾಣಿಸಿಕೊಂಡಿರುವ ಅವರಿಗೆ ಚಿತ್ರೀಕರಣ ಮುಗಿದ ನಂತರ ಪಾತ್ರದಿಂದ ಹೊರಬರಲು ತುಂಬಾ ಕಷ್ಟವಾಗುತ್ತಿತಂತೆ. ಅದಕ್ಕೆ ಕಾರಣ ಅಷ್ಟೊಂದು ಇಂಟೆನ್ಸ್‌ ಪಾತ್ರ ಎನ್ನುವುದು ಆರೋಹಿ ಮಾತು. ಇನ್ನು, ಆರೋಹಿ ಪಾತ್ರದ ಸುತ್ತ ಕೂಡ ಒಂದು ವಿಷಯ ಸಾಗುವ ಮೂಲಕ ಸಿನೆಮಾ ಮತ್ತಷ್ಟು ಸೀರಿಯಸ್‌ ಆಗುತ್ತ ಹೋಗುತ್ತದೆಯಂತೆ. 

ಭೀಮಸೇನ ನಳಮಹಾರಾಜ ಮುಗಿಸಿ, ಅದರ ಬಿಡುಗಡೆಗೆ ಕಾದಿರುವ ಆರೋಹಿ, ಈ ಮಧ್ಯೆ ಒಂದಿಷ್ಟು ಕಥೆಗಳನ್ನು ಕೇಳಿದ್ದಾರೆ. ಅದರಲ್ಲಿ ಅವರು ಯಾವ ಚಿತ್ರದ ಮೂಲಕ ತಮ್ಮ ಚಿತ್ರಪಯಣವನ್ನು ಮುಂದುವರೆಸುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದೆ.

Advertisement

Udayavani is now on Telegram. Click here to join our channel and stay updated with the latest news.

Next