Advertisement

Sirsi; ಎಲ್ಲರ ಚಿತ್ತವೂ ಸ್ವರ್ಣವಲ್ಲೀಯತ್ತ; ಶಿಷ್ಯ ಭಕ್ತರಿಗೆ ಮಾತೃ ಭೋಜನ ಭಾಗ್ಯ!

06:27 PM Feb 20, 2024 | Team Udayavani |

ಶಿರಸಿ: ಸ್ವರ್ಣವಲ್ಲೀ‌ ಮಹಾ ಸಂಸ್ಥಾನದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಶಿಷ್ಯ ಸ್ವೀಕಾರ ಮಹೋತ್ಸವ ಕಣ್ತುಂಬಿಕೊಳ್ಳಲು ಶಿಷ್ಯ ಭಕ್ತರು ತಂಡೋಪತಂಡವಾಗಿ ಆಗಮಿಸಿ ಕೃತಾರ್ಥರಾಗುತ್ತಿದ್ದಾರೆ. ಮಾತೆಯರು, ಯುವಕರು, ಹಿರಿಯರು ಈ ಮಹಾ ಕಾರ್ಯದಲ್ಲಿ ಸೇವಾ ಮನೋಭಾವದಲ್ಲಿ ಭಾಗವಹಿಸುತ್ತಿರುವದು ವಿಶೇಷವಾಗಿದೆ.

Advertisement

ಶಿರಸಿ, ಸಿದ್ದಾಪುರ, ಯಲ್ಲಾಪುರ ತಾಲೂಕುಗಳಲ್ಲದೇ ದೂರದ ಬೆಂಗಳೂರು, ಮುಂಬಯಿ, ದೆಹಲಿ, ಮಂಗಳೂರು, ಬೆಳಗಾವಿ, ಕಂಚಿ ಪ್ರಾಂತದಿಂದಲೂ ಭಕ್ತರು ಆಗಮಿಸಿ ಸಂಭ್ರಮದ ಕಳೆ ಹೆಚ್ಚಿಸುತ್ತಿದ್ದಾರೆ. ಮಾತೆಯರು ಇಡೀ ದಿನ ಸೇವೆಯಲ್ಲಿ ಪಾಲ್ಗೊಳ್ಳಬೇಕು ಎಂದೇ ನೂರಾರು ಕಿಲೋಮೀಟರ್ ದೂರದಿಂದ ಮುಂಜಾನೆಯೇ ಮಠಕ್ಕೆ ಆಗಮಿಸಿದ್ದಾರೆ.

ಮಾತೃ ಭೋಜನ ವಿಶೇಷ:
ಮಂಗಳವಾರ ಆಗಮಿಸಿದ ಆರೇಳು ಸಾವಿರಕ್ಕೂ ಅಧಿಕ ಶಿಷ್ಯ ಭಕ್ತರಿಗೆ ಮಾತೃ ಭೋಜನ ವ್ಯವಸ್ಥೆ ಮಾಡಿದ್ದು ವಿಶೇಷವಾಗಿತ್ತು. ಪುರುಷ ಸ್ವಯಂ ಸೇವಕರು ಮಾತೆಯರಿಗೆ ಅನ್ನ ಸಂಬಾರ ಇತ್ಯಾದಿಗಳನ್ನು ತಂದು ಕೊಡುವುದರ ಮೂಲಕ ಸಹಾಯ ಮಾಡಿದರು.

content-img

ಒಂದೂವರೆ ಸಾವಿರಕ್ಕೂ ಅಧಿಕ‌ ಮಾತೆಯರು ಪ್ರಸಾದ ಭೋಜನ ಬಡಿಸುವುದರ ಮೂಲಕ ಅನ್ನಪೂರ್ಣೇಶ್ವರಿಯಾಗಿ ಸೇವೆ ಸಲ್ಲಿಸಿದರು. ಮಕ್ಕಳಿಗೆ ಬಡಿಸಿದಂತೆ ಊಟ ಬಡಿಸಿ ಮಾತೃ ಭೋಜನದ ಅರ್ಥ ಪೂರ್ಣತೆ ಹೆಚ್ಚಿಸಿದರು.ಏರ್ಪಡಿಸಿದ್ದ ಭವಾನಿ, ಲಲಿತಾಂಭ, ರಾಜೇಶ್ವರಿ, ಗಂಗಾ, ಗೌರಿ, ಸರಸ್ವತೀ ಸೇರಿದಂತೆ ಹತ್ತು ಕೌಂಟರಿನಲ್ಲಿ‌ ತಲಾ‌ 20 ಕ್ಕೂ ಹೆಚ್ಚು ಮಾತೆಯರಿಂದ ಅನ್ನ ಯಜ್ಞ ನಡೆಯಿತು.

ಮಾತೃಕಾ ಭೋಜ‌ನದಲ್ಲಿ ಗೋವೆಕಾಯಿ ಪಾಯಸ, ಕೇಸರಿ ಪ್ರಸಾದ, ಅನ್ನ, ಸಾಂಬಾರ,‌ ಗೆಣಸಿನ ಹಸಿ, ಕ್ಯಾಬೇಜ್ ಪಲ್ಯ, ಅಪ್ಪೆಹುಳಿ, ಮೊಸರು ಇರುವುದು ವಿಶೇಷ. ಸಂಪೇಸರ ರಾಮಚಂದ್ರ ಜೋಶಿ ಹಾಗೂ ಆನಂದ ಭಟ್ಟ ಬಾರೆ ತಂಡದವರು ಅತ್ಯಂತ ಶುಚಿ ಹಾಗು ರುಚಿಯಾದ ಊಟೋಪಚಾರ ವ್ಯವಸ್ಥೆ ಮಾಡುತ್ತಿದ್ದಾರೆ. ಈ ಮಹೋತ್ಸವದಲ್ಲಿ ಅನ್ನಪ್ರಸಾದ ಸಮಿತಿಯ ಎಲ್ಲಾ ಸದಸ್ಯರು, ಸ್ವಯಂ ಸೇವಕರು, ಮತ್ತು ಅನೇಕ ಕಾರ್ಮಿಕರು ಭಕ್ತಿ ಶ್ರದ್ಧೆಯಿಂದ ರಾತ್ರಿ ಹಗಲೆನ್ನದೇ ಶ್ರಮಿಸುತ್ತಿದ್ದಾರೆ. ಆಗಮಿಸಿದ ಎಲ್ಲ ಶಿಷ್ಯ ಭಕ್ತರಿಗೆಕುಡಿಯುವ ನೀರೂ ಸಂಸ್ಕರಿಸಿದ್ದನ್ನೇ ನೀಡಲಾಗುತ್ತಿದೆ. ಸಂಜೆ ಮಹಿಳೆಯರು 10 ಸಾವಿರಕ್ಕೂ ಹೆಚ್ಚು ಲಾಡು ಪ್ರಸಾದವನ್ನೂ ಕಟ್ಟಿದರು.

Advertisement

ಅಷ್ಟಶ್ರಾದ್ಧ, ಲಕ್ಷ್ಮೀ ನರಸಿಂಹ ಜಪ!
ಶಿಷ್ಯ ಸ್ವೀಕಾರ ಮಹೋತ್ಸವ ಹಿನ್ನಲೆಯಲ್ಲಿ ಮೂರನೇ ದಿ‌ನ ಮಂಗಳವಾರ ಸ್ವರ್ಣವಲ್ಲೀ ಶ್ರೀಗಂಗಾಧರೇಂದ್ರ‌ ಸರಸ್ವತೀ ಮಹಾ ಸ್ವಾಮೀಜಿಗಳ‌ ಸಾನ್ನಿಧ್ಯದಲ್ಲಿ ಒಂದು ಸಾವಿರ ಗಣಪತ್ಯಥರ್ವಶೀರ್ಷ ಜಪ, ಹವನದ ಪೂರ್ಣಾಹುತಿ, ಬ್ರಹ್ಮಚಾರಿ ನಾಗರಾಜ ಭಟ್ಟರಿಂದ ಅಷ್ಟಶ್ರಾದ್ಧ ನೆರವೇರಿತು.ಮಧ್ಯಾಹ್ನೋತ್ತರ ವೈದಿಕರಿಂದ ಲಕ್ಷ್ಮೀನೃಸಿಂಹ ಜಪ ನಡೆಯಿತು.

ಸಂಜೆ‌ ಶ್ರೀಮಠದ ಇತಿಹಾಸದ ಕುರಿತು ಡಾ. ಲಕ್ಷ್ಮೀಶ ಸೋಂದಾ ಉಪನ್ಯಾಸ, ಮಾತೆಯರಿಂದ ಭಜನೆ, ಶಂಕರ ಭಟ್ಟ ಉಂಚಳ್ಳಿ ಅವರ ಕೀರ್ತನೆ ಜರುಗಿದವು.

2 ತಿಂಗಳ ಶ್ರಮ ಸಂಭ್ರಮದಲ್ಲಿ ಕಾಣಬೇಕಿದೆ
ಬುಧವಾರ ಶಿಷ್ಯ ಸ್ವೀಕಾರದ ಪೂರ್ವಾಂಗದ ಕಾರ್ಯಕ್ರಮಗಳು ಇರುವುದರಿಂದ ಹತ್ತರಿಂದ ಹನ್ನೆರಡು ಸಾವಿರಕ್ಕೂ ಅಧಿಕ ಭಕ್ತರು ಸೇರುವ ನಿರೀಕ್ಷೆ ಇದೆ. ಇದಕ್ಕೆ ಸಂಬಂಧಿಸಿ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಉಪಾಹಾರದ ಕೌಂಟರ್ ಮತ್ತುಬೆಳಿಗ್ಗೆಯಿಂದ ಸಂಜೆ ತನಕ ಎಳ್ಳಿನ ನೀರಿನ ವ್ಯವಸ್ಥೆ, ಚಹಾ, ಕಷಾಯ, ತಿಂಡಿ ಇಡಲಾಗಿದೆ. ಎರಡು‌ ತಿಂಗಳ‌ ಶ್ರಮ ಐದು ದಿನಗಳಲ್ಲಿ ಸಂಭ್ರಮವಾಗಿ‌ ಕಾಣಬೇಕಿದೆ.
-ಅನಂತ ಭಟ್ಟ, ಹುಳಗೋಳ,
ಸಂಚಾಲಕ
ಅನ್ನ ಪ್ರಸಾದ ಸಮಿತಿ

ಫೆ.22ರಂದು ಇದೊಂದು ಅವಕಾಶ!
ಪೂರ್ಣ ಕುಂಭ ಸ್ವಾಗತಕ್ಕೆ ಬನ್ನಿ ಹೀಗೆಂದು ಶ್ರೀಮಠದ ಕೇಂದ್ರ ಮಾತೃ‌ ಮಂಡಳಿ‌ ಮನವಿ ಮಾಡಿಕೊಂಡಿದೆ.

ಫೆ.22ರಂದು ಶಿಷ್ಯ ಸ್ವೀಕಾರ ಮಹೋತ್ಸವಕ್ಕೆ ಆಗಮಿಸುವ ಯತಿಗಳನ್ನು, ಸ್ವರ್ಣವಲ್ಲೀ ಶ್ರೀಗಳನ್ನು, ಸನ್ಯಾಸ‌ ಸ್ವೀಕಾರದ ನೂತನ ಶ್ರೀಗಳನ್ನೂ ಮಾತೆಯರು ಪೂರ್ಣಕುಂಭ ದೊಂದಿಗೆ ಸ್ವಾಗತಿಸಲಾಗುತ್ತಿದ್ದು, ಬೆಳಿಗ್ಗೆ 8:3೦ರೊಳಗೆ‌ ಸ್ವರ್ಣವಲ್ಲೀ ಮಠದಲ್ಲಿ‌ ಇರಬೇಕಿದೆ.
-ಗೀತಾ ಹೆಗಡೆ, ಶೀಗೇಮನೆ, ಅಧ್ಯಕ್ಷರು, ಕೇಂದ್ರ ಮಾತೃ ಮಂಡಳಿ

1:15 ನಿಮಿಷ ಸಂಚಾರ‌ ನಿರ್ಬಂಧ
ಫೆ.22ರ ಬೆಳಿಗ್ಗೆ 9ರಿಂದ 10:15ರ ತನಕ ಸನ್ಯಾಸ ಸ್ವೀಕಾರ ಕಾರ್ಯಕ್ರಮ ಶಾಲ್ಮಲಾ ನದಿಯ ನಡುವಿನಲ್ಲಿ ಆಗಲಿದ್ದು, ಮಠಕ್ಕೆ ಬರುವ ಮಾರ್ಗವೂ ಅದರ ದಡದಲ್ಲಿಯೆ ಇರುವುದರಿಂದ ಒಂದು ಕಾಲು ತಾಸು ಈ‌ ಮಾರ್ಗದಲ್ಲಿ ವಾಹನ ಸಂಚಾರ ನಿರ್ಭಂಧ‌ ಇರಲಿದೆ. ಈ ಅವಧಿ ಹೊರತು ಪಡಿಸಿ‌ ಶ್ರೀಮಠಕ್ಕೆ ಪ್ರವೇಶಿಸಬೇಕಾಗಿದೆ.
-ಜಿ.ವಿ.ಹೆಗಡೆ ಗೊಡವೆಮನೆ ಕಾರ್ಯದರ್ಶಿ, ಮಠದ ಆಡಳಿತ‌ ಮಂಡಳಿ

ಪರಿಸರ ಪ್ರಿಯ ವ್ಯವಸ್ಥೆ
ಮಠದಲ್ಲಿ ದಿನದಿಂದ‌ ದಿನಕ್ಕೆ ಶಿಷ್ಯರ ಆಗಮನದ ಸಂಖ್ಯೆ ಹೆಚ್ಚುತ್ತಿದೆ. ಪರಿಸರ ಪ್ರಿಯ ಮಹೋತ್ಸವವಾಗಿ ನಡೆಸಲಾಗುತ್ತಿದೆ. ಊಟಕ್ಕೆ ಅಡಿಕೆ ಹಾಳೆ, ಕಾಗದದ ಲೋಟ, ತಿಂಡಿಗೂ ಕಾಗದದ ತಟ್ಟೆ ಬಳಸಲಾಗಿದೆ. ಕಸ ಎತ್ತಲೂ ನಿರಂತರ ವ್ಯವಸ್ಥೆ ಮಾಡಲಾಗಿದೆ.

ಫೆ.21 ರಂದು ಸ್ವರ್ಣವಲ್ಲೀ ಮಠದಲ್ಲಿ
ಶ್ರೀಸ್ವರ್ಣವಲ್ಲೀ‌ ಮಠದಲ್ಲಿ ಬುಧವಾರ ಬೆಳಿಗ್ಗೆ ಸನ್ಯಾಸಗ್ರಹಣ ಸಂಕಲ್ಪ, ಗಣಪತಿ ಪೂಜೆ, ಪುಣ್ಯಾಹ, ನಾಂದಿ‌, ಶ್ರಾದ್ಧ, ಮಾತೃಕಾ ಪೂಜಾ, ಸಾವಿತ್ರೀ ಪ್ರವೇಶ, ಶತಚಂಡಿ‌ಹವನ, ಮಧ್ಯಾಹ್ನೋತ್ತರ ಬ್ರಹ್ಮಾನ್ವಾಧಾನ, ಪ್ರಾಣಾದಿ ಹೋಮ, ಪುರುಷ ಸೂಕ್ತ ಹವನ, ವಿರಾಜ ಹೋಮ,ಲಕ್ಷ್ಮೀನೃಸಿಂಹ‌ ಜಪ,ನಡೆಯಲಿದೆ.

ಮಧ್ಯಾಹ್ನ 3ಕ್ಕೆ ಸರ್ವಜ್ಞೇಂದ್ರ ಸರಸ್ವತೀ ವೇದಿಕೆಯಲ್ಲಿ ಧರ್ಮ ಸಭೆ‌ ನಡೆಯಲಿದ್ದು, ಸಾನ್ನಿಧ್ಯವನ್ನು ಶ್ರೀಮಜ್ಜಗದ್ಗುರು ಶಂಜರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ‌ಮಹಾ ಸ್ವಾಮೀಜಿ ಜೊತೆಗೆಕೂಡಲಿ ಶೃಂಗೇರಿ ಶ್ರೀ, ಶಿರಳಗಿ‌ ಮಹಾ ಸ್ವಾಮೀಜಿ, ಹೊಳೆ ನರಸಿಪುರ‌ ಮಹಾ ಸ್ವಾಮೀಜಿ ಸಾನ್ನಿಧ್ಯ ನೀಡುವರು. ಇದೇ ವೇಳೆ ಆಲೋಕಯಾಂಬ ಲಲಿತೇ ಗ್ರಂಥ ಬಿಡುಗಡೆ ಆಗಲಿದೆ. ಯೋಗಾಚಾರ್ಯ ಶಂಕರನಾರಾಯಣ ಜೋಯಿಸರಿಂದ ವಿಶೇಷ ಉಪನ್ಯಾಸ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.