Advertisement
ಮಂಜುನಾಥ್ ಅವರು ನಿಮ್ಮ ಬಾಲ್ಯ ಸ್ನೇಹಿತ ಎಂದು ಹೇಳಿದಿರಿ. ನಿಮ್ಮ ಸ್ನೇಹ ಶುರುವಾಗಿದ್ದು ಹೇಗೆ?ನಾವು ಚಿಕ್ಕವರಿದ್ದಾಗ “ಮಾಲ್ಗುಡಿ ಡೇಸ್’ ಧಾರಾವಾಹಿಯನ್ನು ಒಂದು ದಿನವೂ ತಪ್ಪಿಸದೇ ನೋಡುತ್ತಿದ್ದೆವು. ಆಗೆಲ್ಲಾ ಮಂಜು ನನ್ನ ಫೇವರಿಟ್ ಬಾಲ್ಯ ನಟ. ನಮ್ಮ ಮನೆ ಮತ್ತೀಕೆರೆಯಲ್ಲಿತ್ತು. ಮಂಜು ಮನೆ ಯಶವಂತಪುರದಲ್ಲಿತ್ತು. ಅವರು ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಳ್ಳುತ್ತಿದ್ದರು. “ಓಹ್ ಮಂಜು ಅಲ್ವಾ?’ ಅಂತ ದೂರದಿಂದಲೇ ನೋಡಿ ಖುಷಿ ಪಡುತ್ತಿದ್ದೆ. ಅವನು ನನಗೆ ಪರಿಚಯವಾಗುತ್ತಾನೆ, ಸಂಗಾತಿಯಾಗುತ್ತಾನೆ ಅಂತ ಕಲ್ಪನೆಯೂ ಇರಲಿಲ್ಲ. ನಾನು ಕೂಚುಪುಡಿ ಕಲಿಯಲು ನೃತ್ಯ ಶಾಲೆಗೆ ಸೇರಿದ್ದೆ. ಮಂಜು ಭರತನಾಟ್ಯ ಕಲಿಯಲು ಅಲ್ಲಿಗೆ ಬರುತ್ತಿದ್ದರು. ಆಗ ನಮ್ಮಿಬ್ಬರ ಪರಿಚಯವಾಯಿತು. ನಾನು ಅಥ್ಲೀಟ್ ಆಗಿದ್ದೆ. ಮೈದಾನಕ್ಕೆ ತಾಲೀಮು ನಡೆಸಲು ಹೋಗುತ್ತಿದ್ದೆ. ಮಂಜು ಕೂಡ ಅಲ್ಲಿಗೆ ಬರುತ್ತಿದ್ದರು. ಹೀಗೆ ಒಂದಲ್ಲಾ ಒಂದು ಕಡೆ ಇಬ್ಬರೂ ಪ್ರತಿದಿನ ಭೇಟಿ ಮಾಡುತ್ತಿದ್ದುದರಿಂದ ಸ್ನೇಹಿತರಾದೆವು. ಆಗ ನಾವು 9ನೇ ತರಗತಿಯಲ್ಲಿದ್ದೆವು. ನಾನು ಸೆಕೆಂಡ್ ಪಿಯುಸಿಯಲ್ಲಿದ್ದಾಗ ನಾವಿಬ್ಬರೂ ಬರೀ ಸ್ನೇಹಿತರಲ್ಲ, ಪ್ರೇಮಿಗಳು ಎಂದು ತಿಳಿಯಿತು.
– ಅಷ್ಟು ಚಿಕ್ಕ ವಯಸ್ಸಿಗೇ ಮದುವೆಯಾಗಲು ಕಾರಣ?
ನಾವಿಬ್ಬರೂ ಪ್ರೀತಿಸುತ್ತಿರುವ ವಿಷಯ ಮನೆಯಲ್ಲಿ ತಿಳಿಯಿತು. ಮನೆಯವರನ್ನು ಮದುವೆಗೆ ಒಪ್ಪಿಸಿದೆವು. ನಾನು, ಮಂಜು ಹೊರಗಡೆ ಭೇಟಿಯಾಗುವುದು, ಓಡಾಡುವುದು ಎಲ್ಲವೂ ಮನೆಯಲ್ಲಿ ತಿಳಿದಿತ್ತು. ನೀವಿಬ್ಬರೂ ಪ್ರೀತಿಸುತ್ತಿರುವುದು, ಹೊರಗೆ ಸುತ್ತಾಡುವುದು ಜನರಿಗೆ ಗೊತ್ತಾಗಿ ಅವರು ತಲೆಗೊಂದು ಮಾತಾಡುವ ಮೊದಲು ಮದುವೆಯಾಗಿ ಎಂದು ಒತ್ತಡ ಹೇರಿದರು. ಹೀಗಾಗಿ ಬೇಗ ಮದುವೆಯಾದೆವು. ನಾವು 1999ರಲ್ಲಿ ಮದುವೆಯಗಿದ್ದು. ಅದಕ್ಕೂ ಮೊದಲು 8 ವರ್ಷ ಸ್ನೇಹಿತರಾಗಿದ್ದೆವು. 27 ವರ್ಷಗಳಾಯಿತು ನಮ್ಮಿಬ್ಬರ ಸ್ನೇಹ ಸಂಬಂಧಕ್ಕೆ.
ನಾವು ಬಾಲ್ಯ ಸ್ನೇಹಿತರಲ್ವಾ, ಅದಕ್ಕೇ ಈಗಲೂ ಹಾಗೆಯೇ ಇದ್ದೇವೆ. ಈಗ ನನಗೆ 40 ವರ್ಷ, ಮಂಜುವಿಗೆ 41 ವರ್ಷ. ನಮಗೆ ವಯಸ್ಸು ಕೇವಲ ನಂಬರ್ ಮಾತ್ರ. ಈಗಲೂ ಚಿಕ್ಕ ಮಕ್ಕಳಂತೆಯೇ ಇದ್ದೇವೆ. ಮಕ್ಕಳಂತೆಯೇ ಖುಷಿ ಪಡುತ್ತೇವೆ. ಅಪಾರ್ಟ್‌ಮೆಂಟ್‌ನಲ್ಲಿ ಮಕ್ಕಳು ಆಟವಾಡುತ್ತಿದ್ದರೆ, ಮೊದಲು ಮಂಜು ಹೋಗಿ ಅವರ ಜೊತೆ ಸೇರಿ ಆಡಲು ಆರಂಭಿಸುತ್ತಾರೆ. ಬಳಿಕ ನಾನು ಸೇರಿಕೊಳ್ಳುತ್ತೇನೆ. ನಮ್ಮ ಬಾಲ್ಯ, ಯೌವನವನ್ನು ನಾವು ಈಗಲೂ ಹಾಗೆಯೇ ಉಳಿಸಿಕೊಂಡಿದ್ದೇವೆ. -ತೆರೆಯ ಮೇಲೆ ಮಂಜುನಾಥ್ ಅವರನ್ನು ಪುನಃ ನೋಡುವುದು ಯಾವಾಗ?
ನನಗೆ ಅವನನ್ನು ತೆರೆ ಮೇಲೆ ನೋಡಲು ಬಹಳ ಇಷ್ಟ. ಪುನಃ ನಟನೆ ಆರಂಭಿಸುವಂತೆ ನಾನು ಹಲವಾರು ಬಾರಿ ಅವನಿಗೆ ಹೇಳಿದ್ದೇನೆ. ಅವನ ಸ್ನೇಹಿತರಿಂದಲೂ ಹೇಳಿಸಿದ್ದೇನೆ. ಆದರೆ, ಅವನಿಗೆ ಅದರಲ್ಲಿ ಆಸಕ್ತಿ ಇಲ್ಲ. ತೆರೆಹಿಂದೆ ಕೆಲಸ ಮಾಡಲು ಇಷ್ಟ ಇದೆ. ಸದ್ಯದಲ್ಲೇ ನಿರ್ದೇಶನಕ್ಕೆ ಇಳಿಯಲಿದ್ದಾನೆ. ಸ್ಕ್ರಿಪ್ಟ್, ಸಿನಿಮಾ ಮೇಕಿಂಗ್ ಬಗ್ಗೆ ಸಾಕಷ್ಟು ಐಡಿಯಾ ಇವೆ.
Related Articles
ಮಗ ವೇದಾಂತ್‌ಗೆ ಈಗ 8 ವರ್ಷ. ಅವನ ಆಸಕ್ತಿ ಏನು ಎಂದು ನಿರ್ದಿಷ್ಟವಾಗಿ ಇನ್ನೂ ತಿಳಿದಿಲ್ಲ. ಕ್ರೀಡೆಯಲ್ಲಿ ತುಂಬಾ ಆಸಕ್ತಿ ಇದೆ. ಅಥ್ಲೆಟಿಕ್ಸ್‌ನಲ್ಲಿ ಮುಂದಿದ್ದಾನೆ. ಅದಕ್ಕೆ ತರಬೇತಿ ಕೊಡಿಸುತ್ತಿದ್ದೇವೆ. ನಟನೆಯಲ್ಲಿ ಆಸಕ್ತಿ ತೋರಿದರೆ ಅದನ್ನೂ ಪ್ರಯತ್ನಿಸುವ ಆಸೆ ನನಗಿದೆ.
Advertisement
-ವರ್ಕಿಂಗ್ ವುಮನ್ ಆಗಿರುವ ನಿಮ್ಮ ಇಷ್ಟ, ಕಷ್ಟಗಳೇನು?ಉದ್ಯೋಗಸ್ಥ ಮಹಿಳೆಗೆ ಒಂದು ರೀತಿಯ ಕಷ್ಟಗಳಿದ್ದರೆ, ಗೃಹಿಣಿಯರಿಗೆ ಬೇರೆಯದೇ ರೀತಿಯ ಕಷ್ಟಗಳಿರುತ್ತವೆ. ಸಾಫ್ಟ್ವೇರ್ ವೃತ್ತಿಯಲ್ಲಿ ಇರುವುದರಿಂದ ನನಗಾಗಿ ನನಗೆ ಸಮಯ ಸಿಗುವುದೇ ಇಲ್ಲ. ಇರುವ ಸಮಯವೆಲ್ಲಾ ಮಗನಿಗೇ ಮೀಸಲು. ವಾರಾಂತ್ಯದಲ್ಲಿ ಸ್ವಲ್ಪ ನಿದ್ದೆ ಮಾಡಲು ಪುರುಸೊತ್ತು ಕೊಡಿ ಎಂದು ಕೂಗುವಂತಾಗುತ್ತದೆ. ಮನೆಕೆಲಸಕ್ಕೆ, ಅಡುಗೆಗೆ ಸಹಾಯಕರು ಇದ್ದಾರೆ. ಆದರೂ ಮಗನನ್ನು ಸಂಭಾಳಿಸುವುದು, ಮನೆಯ ಬೇಕು ಬೇಡಗಳನ್ನು ನೋಡುವುದೇ ಆಗುತ್ತದೆ. ಏನೇ ಕಷ್ಟಗಳಿದ್ದರೂ ಮಹಿಳೆಯರು ಹೊರಗಡೆ ಹೋಗಿ ದುಡಿಯಬೇಕು ಎಂದೇ ನಾನು ಹೇಳುತ್ತೇನೆ. ಪ್ರತಿ ದಿನ ಹೊರಹೋಗುವುದರಿಂದ ನಮ್ಮ ಜ್ಞಾನ ವೃದ್ಧಿಯಾಗುತ್ತದೆ. ಕೌಟುಂಬಿಕ ಜೀವನದ ಜೊತೆ ಸಾಮಾಜಿಕ ಜೀವನದ ಖುಷಿಯೂ ಸಿಗುತ್ತದೆ. -ಮಂಜು ಅವರಿಂದ ಯಾವೆಲ್ಲಾ ಹವ್ಯಾಸಗಳು ನಿಮಗೆ ಬಂದಿವೆ?
ಮಂಜು ಬಾಲ್ಯದಲ್ಲಿ ಶಂಕರ್ ನಾಗ್ ಅವರ ಜೊತೆ ಹೆಚ್ಚು ಸಮಯ ಕಳೆದಿದ್ದಾನೆ. ಅವರಿಂದ ಅವನಿಗೆ ಓದಿನ ಗೀಳು ಅಂಟಿಕೊಂಡಿತು. ಆತ ಒಂದು ಪುಸ್ತಕ ಹಿಡಿದ ಎಂದರೆ ಹಗಲು ರಾತ್ರಿ ಕುಳಿತು ಅದನ್ನು ಓದಿ ಮುಗಿಸುತ್ತಾನೆ. ಓದುವ ಅಭ್ಯಾಸ ನನಗೆ ಅವನಿಂದಲೇ ಬಂದಿದ್ದು. ನಮ್ಮಿಬ್ಬರಿಗೂ ಪ್ರವಾಸ ಎಂದರೆ ತುಂಬಾ ಇಷ್ಟ. ವರ್ಷಕ್ಕೆ 2 ಬಾರಿಯಾದರೂ ಲಾಂಗ್ ಟ್ರಿಪ್ ಹೋಗುತ್ತೇವೆ. 1 ವಿದೇಶ ಪ್ರವಾಸ ಕೂಡ ಮಾಡುತ್ತೇವೆ. -ನಿಮ್ಮ ಶಾಪಿಂಗ್ ತಮಾಷೆಗಳ ಬಗ್ಗೆ ಹೇಳಿ?
ನನಗೆ ಶಾಪಿಂಗ್ ಎಂದರೆ ತುಂಬಾ ಇಷ್ಟ. ಶಾಪಿಂಗ್ ಹೋದರೆ ದಿನವಿಡೀ ಅದರಲ್ಲೇ ಕಳೆಯುತ್ತೇನೆ. ಮೊದಲೆಲ್ಲಾ ಮಂಜುವನ್ನೂ ಶಾಪಿಂಗ್‌ಗೆ ಕರೆದುಕೊಂಡು ಹೋಗುತ್ತಿದ್ದೆ. 2 ಡ್ರೆಸ್ ತೋರಿಸಿ ಒಂದನ್ನು ಆರಿಸಲು ಹೇಳುತ್ತಿದ್ದೆ. ಮಂಜು ಯಾವುದನ್ನು ಬೇಡ ಎನ್ನುತ್ತಿದ್ದನೋ, ಅದನ್ನೇ ನಾನು ಕೊಳ್ಳುತ್ತಿದ್ದೆ. ಮಂಜುಗೆ ಕೋಪ ಬರುತ್ತಿತ್ತು. ಅವನು ಅರ್ಧ ಗಂಟೆ ಒಳಗೆ ಶಾಪಿಂಗ್ ಮುಗಿಸಿ, “ನಿಂದು ಇನ್ನೂ ಮುಗಿದಿಲ್ವಾ?’ ಅಂತ ಕಿರಿಕಿರಿ ಶುರು ಮಾಡುತ್ತಿದ್ದ. ಅವನಿಗೆ ಕಿರಿಕಿರಿಯಾಗುವುದನ್ನು ತಪ್ಪಿಸಲು ನಾನೊಬ್ಬಳೇ ಶಾಪಿಂಗ್ ಹೋಗಲು ಶುರು ಮಾಡಿದೆ. ಈಗ ಮಗನಿಗಾಗಿ ಶಾಪಿಂಗ್ ಮಾಡಲು ಒಟ್ಟಿಗೇ ಹೋದಾಗ, ಮಾಲ್‌ಗಳಲ್ಲಿ ಗಂಡಂದಿರು ಹೆಂಡತಿ ಟ್ರಯಲ್ ರೂಮಿನಿಂದ ಹೊರಬರುವುದನ್ನು ಕಾಯುತ್ತಾ ನಿಂತಿರುವುದನ್ನು ನೋಡಿ, “ಸದ್ಯ ನನಗೆ ಈ ಶಿಕ್ಷೆಯಿಂದ ನೀನು ಮುಕ್ತಿ ಕೊಟ್ಟೆ’ ಎಂದು ನಗುತ್ತಾನೆ. “ಸ್ವಾಮಿ’ಯ ಮದುವೆ
ಮದುವೆಯಾದಾಗ ನನಗೆ 21 ವರ್ಷ, ಮಂಜುವಿಗೆ 22 ವರ್ಷ ವಯಸ್ಸು. ಇಬ್ಬರೂ ನೋಡಲು ಚಿಕ್ಕ ಮಕ್ಕಳಂತೆ ಕಾಣುತ್ತಿದ್ದೆವು. ನೆಂಟರಿಷ್ಟರೆಲ್ಲಾ, ಬಾಲ್ಯವಿವಾಹ ನಡೆಯುತ್ತಿದೆಯಾ? ಎಂದು ಗೇಲಿ ಮಾಡುತ್ತಿದ್ದರು. ಮಂಜು ಕಚ್ಚೆಪಂಚೆ, ಶಲ್ಯ ಹಾಕಿಕೊಂಡು ಇಡೀ ಮದುವೆ ಮಂಟಪದ ತುಂಬೆಲ್ಲಾ ಓಡಾಡುತ್ತಿದ್ದ. ತಾನೇ ಮದುಮಗ, ತನ್ನದೇ ಮದುವೆ ನಡೆಯುತ್ತಿರುವುದು ಎಂಬುದನ್ನೇ ಮರೆತು ನೆಂಟರಿಷ್ಟರನ್ನೆಲ್ಲಾ ಮಾತಾಡಿಸಿಕೊಂಡು, ತಮಾಷೆ ಮಾಡಿಕೊಂಡು ಓಡಾಡುತ್ತಿದ್ದ. ಅವನು ನನ್ನ ಕಣ್ಣಿಗೆ ಥೇಟ್ ಮಾಲ್ಗುಡಿ ಡೇಸ್‌ನ “ಸ್ವಾಮಿ’ ಹಾಗೆಯೇ ಕಾಣುತ್ತಿದ್ದ. ಅವನನ್ನು ನೋಡಿ ನನಗೆ ಒಳಗೊಳಗೆ ನಗು ಬಂದಿತ್ತು. ಮಗ “ನಾನೇ ಅವನು’ ಅಂತಿದ್ದ!
ನಮ್ಮ ಮಗ ಚಿಕ್ಕವನಿದ್ದಾಗ ಅವನಿಗೆ ಮಂಜು ಚಿತ್ರಗಳನ್ನು ತೋರಿಸಿ, “ಆ ಹುಡುಗ ಯಾರು?’ ಎಂದು ಕೇಳಿದರೆ ಅದು ನಾನೇ ಅನ್ನುತ್ತಿದ್ದ. ಅವನು ಅಪ್ಪನ ಪಡಿಯಚ್ಚು. ಸ್ವಲ್ಪ ಬೆಳೆದ ಮೇಲೆ, ಅದು ನೀನಲ್ಲ, ಅಪ್ಪ ಎಂದು ಹೇಳಿದರೆ, “ಅಪ್ಪ ಹೇಗೆ ಚಿಕ್ಕವನಾದ?’ ಎಂದು ಪ್ರಶ್ನೆ ಮಾಡುತ್ತಿದ್ದ. ಈಗ, ತನ್ನ ಅಪ್ಪ ಜನಪ್ರಿಯ ಬಾಲ್ಯನಟರಾಗಿದ್ದವರು ಎಂದು ಅವನಿಗೆ ತಿಳಿದಿದೆ. ಅಪ್ಪನ ಸಿನಿಮಾಗಳನ್ನು ಖುಷಿಯಿಂದ ನೋಡುತ್ತಾನೆ. ವಿವಿಧತೆಯಲ್ಲಿ ಏಕತೆ
ಮಂಜು ಅಪ್ಪ ಮಂಗಳೂರಿನವರು. ಅಮ್ಮ ತಮಿಳಿಯನ್. ಅವರ ಮನೆಯಲ್ಲಿ ತಮಿಳು ಶೈಲಿಯ ಆಹಾರವನ್ನೇ ಹೆಚ್ಚು ಮಾಡುತ್ತಿದ್ದದ್ದು. ನನಗೆ ಮನೆಯಲ್ಲಿ ಉಡುಪಿ ಶೈಲಿಯ ಆಹಾರ ತಿಂದು ಬೇಸರವಾಗಿತ್ತು. ತಮಿಳು ಶೈಲಿ ಊಟ ನನಗೆ ಬೇಗ ಇಷ್ಟವಾಯಿತು. ಈಗಲೂ ಮನೆಯಲ್ಲಿ ತಮಿಳು ಶೈಲಿಯ ಅಡುಗೆಯವರನ್ನೇ ನೇಮಿಸಿಕೊಂಡಿದ್ದೇವೆ. ಮಂಜುವಿಗೆ ಕರಾವಳಿ ಶೈಲಿಯ ಚಿಕನ್ ಸುಕ್ಕಾ, ಫಿಶ್ ಕರಿ ಇಷ್ಟ. ಅವುಗಳನ್ನು ನಾನೇ ಖುದ್ದಾಗಿ ತಯಾರಿಸುತ್ತೇನೆ. ಭಾಷೆ ವಿಷಯದಲ್ಲೂ ನಮ್ಮ ಮನೆಯಲ್ಲಿ ವೈವಿಧ್ಯತೆ ಇದೆ. ನನ್ನ ಮಾತೃಭಾಷೆ ತುಳು. ಮಂಜುವಿನ ಮನೆಯಲ್ಲಿ ಹೆಚ್ಚಾಗಿ ತಮಿಳು ಮಾತನಾಡುತ್ತಾರೆ. ನಮ್ಮ ಮನೆಯಲ್ಲಿ ನಾವಿಬ್ಬರೂ ಕನ್ನಡ ಮಾತಾಡುತ್ತೇವೆ. ಮಗನಿಗೂ ಕನ್ನಡ ಕಲಿಸಿದ್ದೇವೆ. ಅವರ ಕುಟುಂಬದವರ ಜೊತೆ ವ್ಯವಹರಿಸಲು ನಾನು ತಮಿಳು ಕಲಿತಿದ್ದೇನೆ. ಮಂಜು ನಮ್ಮ ಮನೆಯವರಿಗಾಗಿ ತುಳು ಕಲಿತಿದ್ದಾನೆ. ಸದ್ಯ ಮಗನಿಗೆ ತುಳು, ತಮಿಳು ಕಲಿಸುತ್ತಿದ್ದೇವೆ. ಚೇತನ ಜೆ.ಕೆ.